ಜೈಲಿನಲ್ಲಿ ದರ್ಶನ್ ಭೇಟಿ ಮಾಡಿ, ಧ್ಯಾನ ಹೇಳಿಕೊಟ್ಟೆ ಎಂದು ಪುಂಗಿ ಬಿಟ್ನಾ ಸಿದ್ಧಾರೂಢ? ಪೊಲೀಸ್ ಇಲಾಖೆಯಿಂದ ನೋಟೀಸ್
ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿ ಧ್ಯಾನ ಹೇಳಿಕೊಟ್ಟೆ, ಅವರ ಜತೆ ಒಂದಷ್ಟು ಸಮಯ ಕಳೆದ ಎಂದೆಲ್ಲ ಹೇಳಿಕೆ ನೀಡಿದ್ದ ಸನ್ನಡತೆ ಆಧಾರದ ಮೇಲೆ ಜೈಲಿಂದ ರಿಲೀಸ್ ಆಗಿದ್ದ ತುರುವನೂರು ಸಿದ್ಧಾರೂಢನಿಗೆ ಪೊಲೀಸ್ ಇಲಾಖೆಯಿಂದ ನೋಟೀಸ್ ರವಾನೆಯಾಗಿದೆ.
Darshan thoogudeepa: ಕಳೆದ 22 ವರ್ಷಗಳಿಂದ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ತುರುವನೂರು ಸಿದ್ಧಾರೂಢ, ಇತ್ತೀಚೆಗಷ್ಟೇ ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಬಿಡುಗಡೆ ಆಗಿದ್ದರು. ರಿಲೀಸ್ ಆಗುವುದಕ್ಕೂ ಮುನ್ನ ನಟ ದರ್ಶನ್ ತೂಗುದೀಪ ಸಹ ಜೈಲಿನಲ್ಲಿರುವ ವಿಚಾರ ತಿಳಿದಿತ್ತು. ಸಿದ್ಧಾರೂಢ ಬಿಡುಗಡೆಗೂ ಎರಡು ದಿನಗಳ ಮುನ್ನ, ಕೋರಿಕೆಯ ಮೇರೆಗೆ, ನಾನೂ ದರ್ಶನ್ ಅವರ ಅಭಿಮಾನಿ ಎಂದು ಹೇಳಿ ಅವರನ್ನು ಭೇಟಿ ಮಾಡುವ ಅವಕಾಶ ಪಡೆದಿದ್ದರು. ಜತೆಗೆ ದರ್ಶನ್ ಅವರ ಜತೆಗೆ ಒಂದಷ್ಟು ಸಮಯ ಕಳೆದಿದ್ದೆ, ಅವರಿಗೆ ಧ್ಯಾನ ಹೇಳಿಕೊಟ್ಟೆ, ವಿಐಪಿ ಸೆಲ್ ಹೇಗಿರುತ್ತದೆ ಎಂದೂ ವಿವರವಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಇದೀಗ ಹೀಗೆ ಹೇಳಿಕೊಂಡಿದ್ದೇ ಸಿದ್ಧಾರೂಢನಿಗೆ ಸಂಕಷ್ಟ ಎದುರಾಗಿದೆ!
ಮಾಧ್ಯಮಗಳ ಮುಂದೆ ದರ್ಶನ್ ಅವರನ್ನು ಭೇಟಿಯಾದ ಬಗ್ಗೆ, ಅವರ ಜತೆಗೆ ಸಮಯ ಕಳೆದ ಬಗ್ಗೆ ಸೇರಿ ಹತ್ತು ಹಲವು ವಿಚಾರಗಳನ್ನು ಮಾಧ್ಯಮಗಳ ಮುಂದೆ, ಯೂಟ್ಯೂಬ್‌ಗಳಲ್ಲಿ ಗಂಟೆಗಟ್ಟಲೆ ಕುಳಿತು ಮಾಹಿತಿ ಹಂಚಿಕೊಂಡಿದ್ದರು ತುರುವನೂರು ಸಿದ್ಧಾರೂಢ. ಇದೀಗ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ ಸಿದ್ಧಾರೂಢನ ಮಾತುಗಳನ್ನು ಅಲ್ಲಗೆಳೆದಿದ್ದು, ಅಂಥ ಸನ್ನಿವೇಷವೇ ಘಟಿಸಿಲ್ಲ. ದರ್ಶನ್‌ರನ್ನು ಭೇಟಿಯೇ ಮಾಡಿಲ್ಲ ಎಂದಿದ್ದು, ಸಿದ್ಧಾರೂಢನಿಗೆ ಪೊಲೀಸ್ ಇಲಾಖೆಯಿಂದ ನೋಟೀಸ್ ಸಹ ರವಾನೆಯಾಗಿದೆ. ತಕ್ಷಣ ಉತ್ತರ ನೀಡುವಂತೆ ತಾಕೀತು ಮಾಡಲಾಗಿದೆ.
ಸಿದ್ಧಾರೂಢನಿಗೆ ನೋಟೀಸ್
ಸೋಷಿಯಲ್ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಸಿದ್ಧಾರೂಢ ಹೇಳಿದ ಮಾತುಗಳೆಲ್ಲವೂ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ಬಂದಿದೆ. ತಕ್ಷಣ ಈ ಬಗ್ಗೆ ಮಾಹಿತಿ ನೀಡುವಂತೆ ಪರಪ್ಪನ ಅಗ್ರಹಾರ ಜೈಲಿನ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದರ್ಶನ್ ಅವರಿರುವ VIP ಸೆಲ್‌ನೊಳಗೆ ಬೇರೆಯವರಿಗೆ ಪ್ರವೇಶ ನೀಡಲಾಗಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಜೈಲು ಸಿಬ್ಬಂದಿ, ಅಂಥ ಯಾವುದೇ ಘಟನೆ ನಡೆದಿಲ್ಲ. ಬೇರೆ ಕೈದಿಗಳಿಗೆ ದರ್ಶನ್ ಅವರಿರುವ VIP ಸೆಲ್‌ಗೆ ಪ್ರವೇಶ ನೀಡಿಲ್ಲ ಎಂದು ಉತ್ತರ ನೀಡಿದೆ. ಜತೆಗೆ ಸಿದ್ಧಾರೂಢನಿಗೆ ನೋಟೀಸ್ ನೀಡಿ ವಿಚಾರಣೆಗೂ ಹಾಜರಾಗುವಂತೆ ಕಟ್ಟಪ್ಪಣೆ ಹೊರಡಿಸಿದೆ.
ಮಾಧ್ಯಮಗಳ ಮುಂದೆ ಸಿದ್ಧಾರೂಢ ಹೇಳಿದ್ದೇನು?
"ದರ್ಶನ್ ಸರ್ ಅವರಿಗೆ ವಿಐಪಿ ಸೆಲ್‌ನಲ್ಲಿ ಇರಿಸಲಾಗಿದೆ. ಸಾಮಾನ್ಯ ಕೈದಿಗಳಿಗಿಂತ ವಿಐಪಿ ಸೆಲ್‌ನಲ್ಲಿ ಸೌಕರ್ಯ ಜಾಸ್ತಿ. ಹಾಸಿಗೆ, ಸೊಳ್ಳೆ ಪರದೆ, ಎರಡು ಚೇರ್, 20 ಲೀಟರ್ ಕುಡಿಯುವ ನೀರಿನ ಕ್ಯಾನ್ ವ್ಯವಸ್ಥೆ ಇರುತ್ತದೆ. ಟಿವಿ ವೀಕ್ಷಿಸಬಹುದು. ಓದಲು ದಿನ ಪತ್ರಿಕೆ ಮತ್ತು ಪುಸ್ತಕಗಳನ್ನೂ ನೀಡಲಾಗುತ್ತದೆ. ವಿಐಪಿ ಸೆಲ್‌ಗೆ ಊಟ ತಂದು ಕೊಡುತ್ತಾರೆ. ದರ್ಶನ್ ಅವ್ರೂ ಜೈಲೂಟ ಮಾಡುತ್ತಿದ್ದಾರೆ. ದರ್ಶನ್ ಅವರಿಗೆ ಯಾವುದೇ ರೀತಿಯ ವಿಶೇಷ ಸೌಲಭ್ಯ ಕೊಟ್ಟಿಲ್ಲ. ಅದು ಹೆಸರಿಗಷ್ಟೇ ವಿಐಪಿ ಸೆಲ್ ಆದರೂ ಕೂಡ ಅಲ್ಲಿ ಇದಕ್ಕಿತ ಹೆಚ್ಚಿನ ಯಾವುದೇ ಸೌಲಭ್ಯ ಇರುವುದಿಲ್ಲ. ಕಾಮನ್ ಸೆಲ್‌ನಲ್ಲಿ ಎಲ್ಲರೂ ಇರುತ್ತಾರೆ, ಮಾತಾಡಿಕೊಂಡು ಹೇಗೋ ಸಮಯ ಕಳೆಯಬಹುದು. ಸಿಂಗಲ್ ಸೆಲ್‌ನಲ್ಲಿ ಒಬ್ಬರೇ ಇರೋದು ಸಿಕ್ಕಾಪಟ್ಟೆ ನರಕ"
"ವಿಐಪಿ ಎಂದ ಮಾತ್ರಕ್ಕೆ ಬೇರೆ ಕೈದಿಗಳನ್ನು ಭೇಟಿ ಮಾಡುವ ಯಾವ ಅವಕಾಶವೂ ಇರಲ್ಲ. ದರ್ಶನ್ ಅವರನ್ನು ಯಾರನ್ನಾದರೂ ಭೇಟಿ ಮಾಡಲು ತೆರಳುತ್ತಿದ್ದಾಗ, ಉಳಿದ ಸೆಲ್‌ನಲ್ಲಿದ್ದವರು ಅವರನ್ನು ನೋಡಬಹುದು. ಮುಖತಃ ಭೇಟಿ ಕಷ್ಟ. ಬಿಡುಗಡೆ ಆಗ್ತಿದ್ದೇನೆ. ಒಂದೇ ಒಂದು ಸಲ ದರ್ಶನ್ ಅವರ ಭೇಟಿಗೆ ಅವಕಾಶ ಕೋರಿದ್ದೆ. ತಕ್ಷಣ ಕೊಟ್ಟರು."
"ಅವರ ವಿಐಪಿ ಕೋಣೆಗೆ ಹೋಗ್ತಿದ್ದಂತೆ, ನನ್ನ ಕೈ ಕುಲುಕಿ ತಬ್ಬಿಕೊಂಡು ಮಾತನಾಡಿಸಿದರು. ಅವರ ಬಳಿಯಿದ್ದ ಬಿಸ್ಕಟ್ ನೀಡಿ ತುಂಬ ಆತ್ಮೀಯವಾಗಿ, ಹತ್ತಿರದವರೇನು ಅನ್ನುವ ರೀತಿಯಲ್ಲಿ ಮಾತನಾಡಿದರು. ನನ್ನ ಬಗ್ಗೆಯೂ ಕೇಳಿದರು. ಯಾವ ಕೇಸ್ ಮೇಲೆ ಬಂದಿದ್ದೀರಿ ಎಂದರು. ನನ್ನದೇನು ಬಿಡಿ, ನಿಮ್ಮದು ಹೇಳಿ ಅಣ್ಣ ಅಂದೆ. ನನ್ನದೇನಿದೆ? ಎಲ್ಲವೂ ಟಿವಿಯಲ್ಲಿ ಬರ್ತಾಯಿದೆಯಲ್ಲ ಅಂದ್ರು. ಆ ತಕ್ಷಣಕ್ಕೆ ಅವರ ಮನಸಿನ ದುಗುಡ ದೂರ ಮಾಡಲು, ಅವರಿಗೆ ಧ್ಯಾನ ಹೇಳಿಕೊಟ್ಟೆ. ಈ ಸಮಯದಲ್ಲಿ ಧ್ಯಾನ ಬಹಳ ಮುಖ್ಯ ಎಂದೆ"
ಧ್ಯಾನ ಹೇಳಿಕೊಟ್ಟಿದ್ದ ಸಿದ್ಧಾರೂಢ
"ನನ್ನ ಮಾತನ್ನು ಅಲ್ಲಗೆಳೆಯದೆ 10 ನಿಮಿಷಗಳ ಕಾಲ ಒಟ್ಟಿಗೆ ಧ್ಯಾನ ಮಾಡಿದೆವು. ಅವರೂ ಅಲ್ಲಿ ಒಂಟಿ. ಒಳಗಡೆಯೇ ಯಾರಾದರೂ ಮಾತನಾಡಿಸಲಿ ಎಂದು ಕಾಯುತ್ತಿರುತ್ತಾರೆ. ಯಾಕೋ ಅವರ ಮುಖದಲ್ಲಿ ಹಳೇ ಕಳೆ ಇಲ್ಲ. ಚೂರು ಡಲ್ ಆಗಿದ್ದಾರೆ. ತಪ್ಪು ಮಾಡಿದ್ದೇನೆ ಅನ್ನೋ ಪಾಪಪ್ರಜ್ಞೆ ಅವರನ್ನು ಕಾಡುತ್ತಿರಬಹುದು. ಸಾಧ್ಯವಾದ ಮಟ್ಟಿಗೆ ಪಾಸಿಟಿವ್ ಆಗಿರಿ. ಪುಸ್ತಕ ಓದಿ ಎಂದು ಹೇಳಿದ್ದೇನೆ" ಎಂದೆಲ್ಲ ಸಿದ್ಧಾರೂಢ ಹೇಳಿಕೊಂಡಿದ್ದರು.
ವಿಭಾಗ