ಕರ್ನಾಟಕದಲ್ಲಿ ನಡೆಯದ ‘ದೇವರ’ ಆಟ; ಚಿತ್ರಮಂದಿರದತ್ತ ‘ಭೈರಾದೇವಿ’ಯ ಆಗಮನ, ಇನ್ಯಾವ ಚಿತ್ರಗಳು ಈ ವಾರ ರಿಲೀಸ್?
ಕರ್ನಾಟಕದಲ್ಲಿ ಈ ವಾರ (ಅಕ್ಟೋಬರ್ 4) ಬೇರೆ ಬೇರೆ ಭಾಷೆಯ ಹತ್ತು ಹಲವು ಸಿನಿಮಾಗಳು ಬಿಡುಗಡೆ ಆಗಲು ಸಜ್ಜಾಗಿವೆ. ಆ ಪೈಕಿ ರಾಧಿಕಾ ಕುಮಾರಸ್ವಾಮಿ ನಟನೆಯ ಭೈರಾದೇವಿ ಸಹ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ.
Friday Movies: ಟಾಲಿವುಡ್‌ನಲ್ಲಿ ಸದ್ದು ಮಾಡಿದ್ದ ಜೂನಿಯರ್ ಎನ್‌ಟಿಆರ್ ನಟನೆಯ ದೇವರ ಸಿನಿಮಾದ ಗಳಿಕೆಯಲ್ಲಿ ಕುಸಿತ ಕಂಡಿದೆ. ಆರಂಭದಲ್ಲಿದ್ದ ಹೈಪ್ ಸಹಜವಾಗಿ ಎರಡನೇ ವಾರಕ್ಕೂ ಮುಂದುವರಿಯಬೇಕಿತ್ತು. ಆದರೆ, ಅದ್ಯಾಕೋ ದೇವರ ಆಟ ನಡೆಯುತ್ತಿಲ್ಲ. ಹಾಗಂತ ಈ ಸಿನಿಮಾ ಗಳಿಕೆ ಕಂಡಿಲ್ಲ ಅಂತಲ್ಲ. ಬಿಡುಗಡೆಯಾದ 6 ದಿನಕ್ಕೆ ವಿಶ್ವದಾದ್ಯಂತ ಈ ಸಿನಿಮಾ ಬರೋಬ್ಬರಿ 350 ಕೋಟಿ ಬಾಚಿಕೊಂಡಿದೆ. ಈ ನಡುವೆ ಕರ್ನಾಟಕದಲ್ಲಿ ದೇವರ ಚಿತ್ರದ ಎರಡನೇ ವಾರದ ಆ ಅಬ್ಬರ ಕೊಂಚ ಕಡಿಮೆಯಾದಂತಿದೆ. ಜತೆಗೆ ಹೊಸ ಸಿನಿಮಾಗಳ ಆಗಮನವೂ ಆಗುತ್ತಿದೆ. ಹಾಗಾದರೆ ಈ ವಾರ ಕನ್ನಡ ಸೇರಿ ಬೇರೆ ಬೇರೆ ಭಾಷೆಗಳ ಯಾವೆಲ್ಲ ಸಿನಿಮಾಗಳು ತೆರೆಗೆ ಬರುತ್ತಿವೆ.
ಭೈರಾದೇವಿಯ ಆಗಮನ
ಶಮಿಕ ಎಂಟರ್ ಪ್ರೈಸಸ್ ಬ್ಯಾನರ್‌ನಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿರುವ ಈ ಸಿನಿಮಾ ಅಕ್ಟೋಬರ್ 3ರಂದು ರಿಲೀಸ್ ಆಗಲಿದೆ. ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸುವುದರ ಜತೆಗೆ ನಿರ್ಮಾಣ ಮಾಡಿರುವ ಚಿತ್ರ ಭೈರಾದೇವಿ. ಶ್ರೀಜೈ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಹತ್ತು ಹಲವು ಕಾರಣಕ್ಕೆ ಕುತೂಹಲ ಮೂಡಿಸಿದೆ. ರಾಧಿಕಾ ಕುಮಾರಸ್ವಾಮಿ ಜತೆಗೆ ರಮೇಶ್ ಅರವಿಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಮೊದಲು ಕನ್ನಡದಲ್ಲಿ ಮಾತ್ರ ಸುಮಾರು 180 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಜೆ.ಎಸ್. ವಾಲಿ ಛಾಯಾಗ್ರಹಣ, ಕೆ.ಕೆ. ಸೆಂಥಿಲ್ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರವಿಚಂದ್ರನ್ ಅವರ ಸಂಕಲನ ಭೈರಾದೇವಿ ಚಿತ್ರಕ್ಕಿದೆ.
ಗೋಪಿಲೋಲನಿಗೆ ಸಿಕ್ತು ಧರ್ಮಾಧಿಕಾರಿಗಳ ಆಶೀರ್ವಾದ
ಸುಕೃತಿ ಚಿತ್ರಾಲಯ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಗೋಪಿಲೋಲ ಸಿನಿಮಾ ಈ ಶುಕ್ರವಾರ (ಅ. 4) ತೆರೆಗೆ ಬರುತ್ತಿದೆ. ಬಿಡುಗಡೆಗೂ ಮುನ್ನ ಚಿತ್ರತಂಡದ ಸದಸ್ಯರು ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀಮಂಜನಾಥಸ್ವಾಮಿ ದರ್ಶನ ಪಡೆದಿದ್ದಾರೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಂದ ಗೋಪಿಲೋಲ ಚಿತ್ರದ ಪೋಸ್ಟರ್ ಹಾಗೂ ಹಾಡೊಂದನ್ನು ಬಿಡುಗಡೆ ಮಾಡಿಸಿದೆ ಚಿತ್ರತಂಡ. ನೈಸರ್ಗಿಕ ಕೃಷಿಯೇ ಶ್ರೇಷ್ಠ ಎಂಬ ಕಥೆಯನ್ನು ಈ ಚಿತ್ರದಲ್ಲಿ ಹೇಳಿದ್ದಾರೆ ನಿರ್ದೇಶಕರು. ಸನತ್ ಕುಮಾರ್ ಕಥೆ ಬರೆದರೆ, ಚಿತ್ರಕಥೆ ಹಾಗೂ ಸಂಭಾಷಣೆ ಕೇಶವಚಂದ್ರ ಅವರದ್ದು. ಸೂರ್ಯಕಾಂತ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಮಿಥುನ್ ಅಶೋಕನ್ ಚೆನ್ನೈ ಸಂಗೀತ ನೀಡಿದ್ದಾರೆ. ಸಹ ನಿರ್ಮಾಪಕ ಮಂಜುನಾಥ್ ನಾಯಕರಾಗಿ ನಟಿಸಿದ್ದು, ನಾಯಕಿಯಾಗಿ ನಿಮಿಷ ಕೆ ಚಂದ್ರ ಅಭಿನಯಿಸಿದ್ದಾರೆ.
ಡಾ. ರಾಜ್ ಕುಟುಂಬದ ಕುಡಿಯ ಮಿಂಚುಹುಳು
ಡಾ. ರಾಜ್ ಕುಮಾರ್ ಕುಟುಂಬದ ಮೂರನೇ ಕುಡಿ, ಅಣ್ಣಾವ್ರ ಸಹೋದರ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್ ಅಭಿನಯದ ಚೊಚ್ಚಲ ಚಿತ್ರ ಮಿಂಚುಹುಳು ಅಕ್ಟೊಬರ್ 4 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಮಹೇಶ್ ಕುಮಾರ್ ಅವರ ಕಥೆ, ಚಿತ್ರಕಥೆ, ನಿರ್ದೇಶನವಿದೆ. ಬಾಲನಟ ಪ್ರೀತಂ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದರ ಜತೆಗೆ ಕನ್ನಡದಲ್ಲಿ ಜನಕ ಹೆಸರಿನ ಸಿನಿಮಾ ಸಹ ಈ ವಾರ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಮನು ನಾಯಕನಾಗಿ ನಟಿಸಿದ್ದಾರೆ. ಸಂಜು ಶೀರ್ಷಿಕೆಯ ಸಿನಿಮಾ ಸಹ ಈ ವರ್ಷ ಬಿಡುಗಡೆ ಆಗುತ್ತಿದೆ.
ತೆಲುಗಲ್ಲಿ ಒಂದು ತಮಿಳಲ್ಲಿಒಂದು
ಈ ವಾರ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಕೇವಲ ಒಂದೊಂದೆ ಸಿನಿಮಾಗಳು ತೆರೆಗೆ ಬರುತ್ತಿವೆ. ಆ ಪೈಕಿ ತೆಲುಗಿನಲ್ಲಿ ಸ್ವ್ಯಾಗ್, ತಮಿಳಿನಲ್ಲಿ ಆರಗನ್ ಸಿನಿಮಾ ರಿಲೀಸ್ ಆಗಲಿವೆ. ಮಲಯಾಳಂನಲ್ಲಿ ಪುಷ್ಪಕ ವಿಮಾನಂ ಮತ್ತು ತೆಕ್ಕು ವಡೆಕ್ಕು ಸಿನಿಮಾಗಳು ರಿಲೀಸ್ ಆಗಲಿವೆ.