Sampathige Savaal: ಡಾ ರಾಜ್‌ಕುಮಾರ್ ಕುಳಿತಿದ್ದ ಎಮ್ಮೆಯನ್ನು ಹಾಡಿನ ಚಿತ್ರೀಕರಣದ ಅರ್ಧದಲ್ಲೇ ಮಾರಿದ್ದ ಮಾಲೀಕ; ಮುಂದಾಗಿದ್ದು ತಮಾಷೆ
ಶೂಟಿಂಗ್ ಆರಂಭವಾದಾಗ ಡಾ. ರಾಜ್‌ಕುಮಾರ್, ಎಮ್ಮೆಯ ಮೇಲೆ ಹತ್ತಿ ಕುಳಿತಿದ್ದಾರೆ. ಆದರೆ ಅವರಿಗೆ ಹಿಂದಿನ ದಿನದಂತೆ ಕಂಫರ್ಟ್ ಎನಿಸಿಲ್ಲ. ಮಲ್ಲೇಶ್ ಅವರನ್ನು ಹತ್ತಿರ ಕರೆದು, ಇದು ನಿನ್ನೆ ಕರೆ ತಂದಿದ್ದ ಎಮ್ಮೆಯೇನಾ? ನನಗೆ ಇದರ ಕೂದಲು ಚುಚ್ಚುತ್ತಿದೆ, ನಿನ್ನೆ ಈ ರೀತಿ ಆಗಿರಲಿಲ್ಲ ಎಂದಿದ್ದಾರೆ.
ಯಾರೇ ಕೂಗಾಡಲಿ, ಊರೇ ಹೋರಾಡಲಿ, ನಿನ್ನ ನೆಮ್ಮದಿಗೆ ಭಂಗವಿಲ್ಲ... 'ಸಂಪತ್ತಿಗೆ ಸವಾಲ್' ಚಿತ್ರದ ಈ ಹಾಡು ಕನ್ನಡ ಚಿತ್ರಗೀತೆಗಳ ಎವರ್‌ಗ್ರೀನ್ ಹಾಡುಗಳಲ್ಲಿ ಒಂದು. ಈ ಸಿನಿಮಾ ಮೂಲಕ ಡಾ. ರಾಜ್‌ಕುಮಾರ್ ಮೊದಲ ಬಾರಿಗೆ ಗಾಯಕರಾಗಿ ಗುರುತಿಸಿಕೊಂಡರೆ, ಈ ಸಿನಿಮಾದ ಬಹುತೇಕ ಚಿತ್ರೀಕರಣ ಮಾಡಿದ್ದು ಡಾ. ರಾಜ್‌ಕುಮಾರ್ ಅವರ ಹುಟ್ಟೂರು ಗಾಜನೂರಿನಲ್ಲಿ ಎಂಬುದು ವಿಶೇಷ.
ಎವಿ ಶೇಷಗಿರಿ ರಾವ್ ನಿರ್ದೇಶನದ ಸಿನಿಮಾ
'ಸಂಪತ್ತಿಗೆ ಸವಾಲ್' ಚಿತ್ರವನ್ನು ಪದ್ಮಶ್ರೀ ಎಂಟರ್‌ಪ್ರೈಸಸ್ ಬ್ಯಾನರ್ ಅಡಿ ಎನ್ ಮೂರ್ತಿ ನಿರ್ಮಿಸಿದ್ದು ಎವಿ ಶೇಷಗಿರಿ ರಾವ್ ಆಕ್ಷನ್ ಕಟ್ ಹೇಳಿದ್ದರು. 1974ರಲ್ಲಿ ತೆರೆ ಕಂಡಿದ್ದ ಚಿತ್ರದಲ್ಲಿ ಅಣ್ಣಾವ್ರಿಗೆ ಮಂಜುಳಾ ನಾಯಕಿಯಾಗಿ ನಟಿಸಿದ್ದರು. ವಜ್ರಮುನಿ, ಬಾಲಕೃಷ್ಣ, ಎಂವಿ ರಾಜಮ್ಮ, ರಾಜಾ ಶಂಕರ್ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದರು. ಚಿ. ಉದಯಶಂಕರ್ ಅವರು ಸಾಹಿತ್ಯ ಬರೆದಿದ್ದ ಈ ಚಿತ್ರದ ನಗುವುದೊ ಅಳುವುದೋ, ರಾಜ ಮುದ್ದು ರಾಜ, ಅಂತಿಂಥ ಹೆಣ್ಣು ನಾನಲ್ಲ ಹಾಡುಗಳು ಕೂಡಾ ಇಂದಿಗೂ ಸಿನಿಪ್ರಿಯರ ಅಚ್ಚುಮೆಚ್ಚಿನ ಗೀತೆಗಳು.
ಚಿತ್ರೀಕರಣಕ್ಕಾಗಿ ಕಷ್ಟಪಟ್ಟು ಎಮ್ಮೆಯನ್ನು ಹುಡುಕಿ ತಂದಿದ್ದ ಬಿ ಮಲ್ಲೇಶ್
ಯಾರೇ ಕೂಗಾಡಲಿ.. ಹಾಡು ಹೆಸರೇ ಸೂಚಿಸುವಂತೆ ಎಮ್ಮೆಯೊಂದರ ಮೇಲೆ ಚಿತ್ರೀಕರಣವಾದ ಹಾಡು. ಈ ಹಾಡಿನ ಚಿತ್ರೀಕರಣಕ್ಕಾಗಿ ನಿರ್ದೇಶಕ ಎವಿ ಶೇಷಗಿರಿ ರಾವ್ ಎಮ್ಮೆಯೊಂದನ್ನು ಹುಡುಕಿ ತರುವಂತೆ ತಮ್ಮ ಸಹಾಯಕ ನಿರ್ದೇಶಕ ಬಿ ಮಲ್ಲೇಶ್ ಅವರಿಗೆ ಹೇಳಿದ್ದಾರೆ. ಸುತ್ತ ಮುತ್ತ ಹಳ್ಳಿಗಳಲ್ಲಿ ಹುಡುಕಿ ಕೊನೆಗೆ ಮಲ್ಲೇಶ್ ಅವರು ಎಮ್ಮೆಯೊಂದನ್ನು ಹುಡುಕಿ ತಂದಿದ್ದಾರೆ. ಆ ಎಮ್ಮೆ ಕೂಡಾ ಏನೂ ತೊಂದರೆ ಮಾಡದೆ, ಭಯ ಬೀಳದೆ ಶೂಟಿಂಗ್‌ಗೆ ಸಹಕರಿಸಿದೆ. ಆದರೆ ಆ ದಿನ ಹಾಡಿನ ಶೂಟಿಂಗನ್ನು ಪೂರ್ತಿ ಮುಗಿಸಲು ಆಗಿಲ್ಲ, ಎಮ್ಮೆಯನ್ನು ಮಾಲೀಕರಿಗೆ ವಾಪಸ್ ನೀಡುವಾಗ, ನಾಳೆ ಕೂಡಾ ಶೂಟಿಂಗ್‌ಗೆ ಎಮ್ಮೆಯ ಅವಶ್ಯಕತೆ ಇದೆ ಎಂದು ಮಲ್ಲೇಶ್ ಹೇಳಿ ಬಂದಿದ್ದಾರೆ. ಎಮ್ಮೆಯ ಮಾಲೀಕ ಕೂಡಾ ಸರಿ ಎಂದು ತಲೆ ಆಡಿಸಿದ್ದಾರೆ.
ಹಣದ ಆಸೆಗೆ ಎಮ್ಮೆಯನ್ನು ಮಾರಿದ್ದ ಮಾಲೀಕ
ಆದರೆ ಮರುದಿನ ಮಲ್ಲೇಶ್ ಅವರಿಗೆ ಒಂದು ಶಾಕ್ ಕಾದಿತ್ತು. ಡಾ. ರಾಜ್‌ಕುಮಾರ್ ಜೊತೆಗೆ ನಟಿಸಿದ್ದ ಎಮ್ಮೆಗೆ ಭಾರೀ ಡಿಮ್ಯಾಂಡ್ ಇದ್ದಿದ್ದರಿಂದ ಅದನ್ನು ಮಾರಿಬಿಟ್ಟೆ ಎಂದಿದ್ದಾರೆ. ನಿನ್ನೆಯೇ ಹೇಳಿದ್ದೆ, ಶೂಟಿಂಗ್ ಪೂರ್ತಿ ಮುಗಿದಿಲ್ಲ, ಕಂಟಿನ್ಯುಟಿ ಸಮಸ್ಯೆ ಆಗುತ್ತೆ, ಅದೇ ಎಮ್ಮೆ ಇದ್ದಿದ್ದರೆ ಚೆನ್ನಾಗಿರ್ತಿತ್ತು, ನಿರ್ದೇಶಕರಿಗೆ ಏನು ಹೇಳೋದು ಎಂದು ಪ್ರಶ್ನಿಸಿದ್ದಾರೆ. ಶೂಟಿಂಗ್‌ಗೆ ಬೇರೆ ಯಾವುದಾದರೂ ಎಮ್ಮೆ ಕರೆದೊಯ್ಯಿರಿ ಎಂದು ಮಾಲೀಕ ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಸುಮ್ಮನಾಗಿದ್ದಾರೆ. ಮಲ್ಲೇಶ್ ಅವರಿಗೆ ದಿಕ್ಕು ತೋಚದಂತೆ ಆಗಿದೆ. ಕೊನೆಗೆ ಅಲ್ಲಿ ಇಲ್ಲಿ ಹುಡುಕಿ ಅದೇ ರೀತಿ ಎಮ್ಮೆಯನ್ನು ಹುಡುಕಿ ಶೂಟಿಂಗ್ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಕಷ್ಟವಾದರೂ ಇಷ್ಟಪಟ್ಟು ಶೂಟಿಂಗ್ ಮುಗಿಸಿದ ಅಣ್ಣಾವ್ರು
ಶೂಟಿಂಗ್ ಆರಂಭವಾದಾಗ ಡಾ. ರಾಜ್‌ಕುಮಾರ್, ಎಮ್ಮೆಯ ಮೇಲೆ ಹತ್ತಿ ಕುಳಿತಿದ್ದಾರೆ. ಆದರೆ ಅವರಿಗೆ ಹಿಂದಿನ ದಿನದಂತೆ ಕಂಫರ್ಟ್ ಎನಿಸಿಲ್ಲ. ಮಲ್ಲೇಶ್ ಅವರನ್ನು ಹತ್ತಿರ ಕರೆದು, ಇದು ನಿನ್ನೆ ಕರೆ ತಂದಿದ್ದ ಎಮ್ಮೆಯೇನಾ? ನನಗೆ ಇದರ ಕೂದಲು ಚುಚ್ಚುತ್ತಿದೆ, ನಿನ್ನೆ ಈ ರೀತಿ ಆಗಿರಲಿಲ್ಲ ಎಂದಿದ್ದಾರೆ. ಆಗ ಮಲ್ಲೇಶ್, ನಡೆದ ಘಟನೆಯನ್ನು ವಿವರಿಸಿ ಅಣ್ಣಾವ್ರೇ, ದಯವಿಟ್ಟು ನಿರ್ದೇಶಕರಿಗೆ ಹೇಳಬೇಡಿ. ಬೈಯ್ಯುತ್ತಾರೆ ಎಂದು ಮನವಿ ಮಾಡಿದ್ದಾರೆ. ಮಲ್ಲೇಶ್ ಅವರ ಮನವಿಗೆ ಸ್ಪಂದಿಸಿದ ಅಣ್ಣಾವ್ರು ಈ ವಿಚಾರದ ಬಗ್ಗೆ ಯಾರಲ್ಲಿಯೂ ಹೇಳದೆ, ತಮಗೆ ಆಗುತ್ತಿದ್ದ ಕಷ್ಟವನ್ನು ಸಹಿಸಿಕೊಂಡು ಶೂಟಿಂಗ್ ಮುಗಿಸಿದ್ದಾರೆ.
ಯಾರೇ ಕೂಗಾಡಲಿ.. ಹಾಡಿನಲ್ಲಿ ನೀವು ಸೂಷ್ಮವಾಗಿ ಗಮನಿಸಿದರೆ ಅಲ್ಲಿ ಎರಡು ಎಮ್ಮೆಗಳನ್ನು ಗುರುತಿಸಬಹುದು ಎಂದು ಬಿ ಮಲ್ಲೇಶ್, ಅಂದು ನಡೆದ ಘಟನೆಯನ್ನು ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಮುಂದೆ ಮಲ್ಲೇಶ್ ಅವರು ಸ್ವತಂತ್ಯ್ರವಾಗಿ ಒಲವು ಮೂಡಿದಾಗ, ರೂಪಾಯಿ ರಾಜ, ಕಲ್ಯಾಣ ಮಸ್ತು, ಗಿರಿಬಾಲೆ, ನೀನಂದ್ರೆ ಇಷ್ಟ ಸೇರಿ ಅನೇಕ ಸಿನಿಮಾಗಳನ್ನು ನಿರ್ಮಿಸಿದರು.