ನಟ ದರ್ಶನ್‌ಗೆ ನಾನು ಏಕೈಕ ಪತ್ನಿ, ಪವಿತ್ರಾ ಗೌಡ ಅಲ್ಲ; ತಪ್ಪು ಸರಿಪಡಿಸಿ ಎಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದ ವಿಜಯಲಕ್ಷ್ಮಿ
ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಬಂಧನಕ್ಕೆ ಒಳಗಾಗಿರುವ ಎ1 ಆರೋಪಿ ಶ್ರೀಮತಿ ಪವಿತ್ರಾ ಗೌಡ ದರ್ಶನ್ ಪತ್ನಿ ಅಲ್ಲ. ನಾನು ಕಾನೂನು ಪ್ರಕಾರ ವಿವಾಹವಾದ ಪತ್ನಿ. ಇದನ್ನು ಪೊಲೀಸ್ ಕಡತಗಳಲ್ಲಿ ಸರಿಪಡಿಸಿ ಎಂದು ವಿಜಯಲಕ್ಷ್ಮಿ ಅವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು: ನಟ ದರ್ಶನ್ ಪತ್ನಿ ಕುರಿತು ಪೊಲೀಸ್ ದಾಖಲೆಗಳಲ್ಲಿ ಸರಿಯಾದ ಮಾಹಿತಿ ದಾಖಲಿಸುವಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ದಯಾನಂದ್ ಅವರಿಗೆ ಪತ್ರ ಬರೆದಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಶ್ರೀಮತಿ ಪವಿತ್ರಾ ಗೌಡ ಬಗ್ಗೆ ದಾಖಲೆಗಳಲ್ಲಿ ಸರಿಯಾದ ಮಾಹಿತಿ ಉಲ್ಲೇಖಿಸುವಂತೆ ಮನವಿ ಮಾಡಿದ್ದಾರೆ.
ವಿಜಯಲಕ್ಷ್ಮಿ ಬರೆದ ಪತ್ರದಲ್ಲೇನಿದೆ?
ಶ್ರೀ ದಯಾನಂದ್
ದಿ ಕಮಿಷನರ್ ಆಫ್ ಪೊಲೀಸ್
ಕಮಿಷನರೇಟ್ ರಸ್ತೆ, ಬೆಂಗಳೂರು ನಗರ
ವಿಷಯ: ರೇಣುಕಾ ಸ್ವಾಮಿ ಮರ್ಡರ್ ಕೇಸ್‌ನಲ್ಲಿ ಶ್ರೀಮತಿ ಪವಿತ್ರಾ ಗೌಡರ ಕುರಿತು ಸರಿಯಾದ ವಿವರ ನಮೂದಿಸುವಂತೆ ಮನವಿ
ಡಿಯರ್ ಸರ್,
ನಿಮ್ಮ ಇಲಾಖೆಯು ನನ್ನ ಪತಿ ದರ್ಶನ್ ಮತ್ತು ಇನ್ನು ಕೆಲವರನ್ನು ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಬಂಧಿಸಿ ಎರಡು ವಾರ ಕಳೆದಿದೆ.
ನನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣ ನಂಬಿಕೆ ಇದೆ. ಕಾನೂನು ತನ್ನ ಹಾದಿ ಹಿಡಿಯುತ್ತದೆ ಎನ್ನುವುದು ನನಗೆ ಗೊತ್ತು. ಹೀಗಿದ್ದರೂ, ಈ ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಮತ್ತು ಎ1 ಆರೋಪಿಯಾಗಿರುವ ಶ್ರೀಮತಿ ಪವಿತ್ರಾ ಗೌಡರ ಮಾಹಿತಿಗಳನ್ನು ಪೊಲೀಸ್ ದಾಖಲೆಗಳಲ್ಲಿ ಸರಿಯಾಗಿ ನಮೂದಿಸುವಂತೆ ನಾನು ಈ ಮೂಲಕ ವಿನಂತಿ ಮಾಡುತ್ತೇನೆ. ಅವರು ನನ್ನ ಪತಿ ಶ್ರೀ ದರ್ಶನ್ ಶ್ರೀನಿವಾಸ್ ಅವರ ಗೆಳೆಯ ಎನ್ನುವುದು ನಿಜ, ಆದರೆ, ದಯವಿಟ್ಟು ನೀವು ಗಮನಿಸಿ, ಆಕೆ ದರ್ಶನ್ ಅವರ ಪತ್ನಿ ಅಲ್ಲ. ನಾನು ಮಾತ್ರ ದರ್ಶನ್ ಅವರನ್ನು ಕಾನೂನು ಪ್ರಕಾರ ಮದುವೆಯಾದ ಪತ್ನಿ. ನಮ್ಮ ವಿವಾಹ ಧರ್ಮಸ್ಥಳದಲ್ಲಿ 19.05.2003ರಂದು ಜರುಗಿತ್ತು.
ನೀವು ಆರಂಭದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡುವಾಗ ಶ್ರೀಮತಿ ಪವಿತ್ರ ಗೌಡರನ್ನು ದರ್ಶನ್ ಶ್ರೀನಿವಾಸ್ ಅವರ ಪತ್ನಿ ಎಂದು ಸಂಬೋಧಿಸಿದ್ದೀರಿ. ಇದರ ಫಲಿತಾಂಶವಾಗಿ ಕರ್ನಾಟಕದ ಮಾನ್ಯ ಗೃಹ ಸಚಿವರು ಇದೇ ರೀತಿ ಪ್ರಕಟಿಸಿರುತ್ತಾರೆ, ರಾಷ್ಟ್ರೀಯ ಮಾಧ್ಯಮಗಳು ಮಿಸ್ಟರ್ ಮತ್ತು ಮಿಸೆಸ್ ದರ್ಶನ್ ಶ್ರೀನಿವಾಸ್ ಅವರು ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಬಂಧನವಾಗಿದ್ದಾರೆ ಎಂದು ಪ್ರಕಟಿಸಿವೆ. ನಾನು ಮಾತ್ರ ದರ್ಶನ್ ಅವರನ್ನು ಕಾನೂನು ಪ್ರಕಾರವಾಗಿ ಮದುವೆಯಾಗಿರುವ ಪತ್ನಿ. ನನಗೆ ಮತ್ತು ನನ್ನ ಮಗನಿಗೆ ಭವಿಷ್ಯದಲ್ಲಿ ಈ ವಿಚಾರದಲ್ಲಿ ಯಾವುದೇ ತೊಂದರೆಗಳು ಆಗಬಾರದು. ಶ್ರೀಮತಿ ಪವಿತ್ರಾ ಗೌಡ ಅವರು ಶ್ರೀ ಸಂಜಯ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಮಗಳಿದ್ದಾಳೆ. ಎಲ್ಲಾ ಪೊಲೀಸ್ ಫೈಲ್‌ಗಳಲ್ಲಿ ಈ ಮಾಹಿತಿಯನ್ನು ಸರಿಪಡಿಸುವಂತೆ ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಭವಿಷ್ಯದಲ್ಲಿ ನನಗೆ ಪವಿತ್ರಾ ಗೌಡರನ್ನು ತಪ್ಪಾಗಿ ಪತ್ನಿ ಎಂದು ನಮೂದಿಸಿರುವ ವಿಚಾರದಲ್ಲಿ ಯಾವುದೇ ತೊಂದರೆಯಾಗಬಾರದು.
ಧನ್ಯವಾದಗಳು, ನೀವು ನನ್ನ ಮನವಿ ಪರಿಗಣಿಸುವಿರಿ ಮತ್ತು ಸೂಕ್ತ ಕ್ರಮ ಕೈಗೊಳ್ಳುವಿರಿ ಎಂಬ ಭರವಸೆಯೊಂದಿಗೆ- ವಿಜಯಲಕ್ಷ್ಮಿ ದರ್ಶನ್" ಎಂದು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕನ್ನಡ ನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರರನ್ನು ಪೊಲೀಸರು ಎರಡು ವಾರಗಳ ಹಿಂದೆ ಬಂಧಿಸಿದ್ದರು. ಇದೀಗ ಈ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ.
