ಕಲಾವಿದರ ಸಿನಿಮಾಗಳಿಗಿಂತ ಕಲಾವಿದರ ಪರ್ಸನಲ್ ಲೈಫ್ ಅನ್ನೇ ಜನ ಎಂಜಾಯ್‌ ಮಾಡ್ತಿದ್ದಾರೆ; ವಸಿಷ್ಠ ಸಿಂಹ ಬೇಸರ
ಕನ್ನಡ ಸುದ್ದಿ  /  ಮನರಂಜನೆ  /  ಕಲಾವಿದರ ಸಿನಿಮಾಗಳಿಗಿಂತ ಕಲಾವಿದರ ಪರ್ಸನಲ್ ಲೈಫ್ ಅನ್ನೇ ಜನ ಎಂಜಾಯ್‌ ಮಾಡ್ತಿದ್ದಾರೆ; ವಸಿಷ್ಠ ಸಿಂಹ ಬೇಸರ

ಕಲಾವಿದರ ಸಿನಿಮಾಗಳಿಗಿಂತ ಕಲಾವಿದರ ಪರ್ಸನಲ್ ಲೈಫ್ ಅನ್ನೇ ಜನ ಎಂಜಾಯ್‌ ಮಾಡ್ತಿದ್ದಾರೆ; ವಸಿಷ್ಠ ಸಿಂಹ ಬೇಸರ

ವಸಿಷ್ಠ ಸಿಂಹ ನಟನೆಯ ಲವ್‌ ಲೀ ಸಿನಿಮಾ ಚಿತ್ರಮಂದಿರಗಳಲ್ಲಿ 25 ದಿನ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ನಿರ್ಮಾಪಕರ ಕಡೆಯಿಂದ ನೆನಪಿನ ಕಾಣಿಕೆ ಸಂದಾಯವಾಗಿದೆ. ಈ ಸಂದರ್ಭದಲ್ಲಿ ನಟ ವಸಿಷ್ಠ, ತಮ್ಮೊಳಗಿನ ಬೇಸರವನ್ನು ಹೊರಹಾಕಿದ್ದಾರೆ.

ಕಲಾವಿದರ ಸಿನಿಮಾಗಳಿಗಿಂತ ಕಲಾವಿದರ ಪರ್ಸನಲ್ ಲೈಫ್ ಅನ್ನೇ ಜನ ಎಂಜಾಯ್‌ ಮಾಡ್ತಿದ್ದಾರೆ; ವಸಿಷ್ಠ ಸಿಂಹ ಬೇಸರ
ಕಲಾವಿದರ ಸಿನಿಮಾಗಳಿಗಿಂತ ಕಲಾವಿದರ ಪರ್ಸನಲ್ ಲೈಫ್ ಅನ್ನೇ ಜನ ಎಂಜಾಯ್‌ ಮಾಡ್ತಿದ್ದಾರೆ; ವಸಿಷ್ಠ ಸಿಂಹ ಬೇಸರ

Vasishta Simha: ವಸಿಷ್ಠ ಸಿಂಹ ನಾಯಕರಾಗಿ ನಟಿಸಿರುವ "Love ಲಿ" ಚಿತ್ರ ಬಿಡುಗಡೆಯಾಗಿ 25 ದಿನಗಳಾಗಿದೆ. ಪ್ರಸ್ತುತ ಕರ್ನಾಟಕದ ಮೂವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ‌. ಅಭುವನಸ ಕ್ರಿಯೇಷನ್ಸ್ ಲಾಂಛನದಲ್ಲಿ ರವೀಂದ್ರ ಕುಮಾರ್ ನಿರ್ಮಿಸಿರುವ ಈ ಚಿತ್ರವನ್ನು ಚೇತನ್ ಕೇಶವ್ ನಿರ್ದೇಶನ ಮಾಡಿದ್ದಾರೆ. ಇದೀಗ 25 ದಿನ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರತಂಡದ ಸದಸ್ಯರಿಗೆ ನಿರ್ಮಾಪಕರಿಂದ ನೆನಪಿನ ಕಾಣಿಕೆ ಸಂದಾಯವಾಗಿದೆ. ಈ ವೇಳೆ ಚಿತ್ರದ ಬಗ್ಗೆ ಇಡೀ ತಂಡ ಮಾತನಾಡಿದೆ.

ವಸಿಷ್ಠ ಸಿಂಹ ಹೇಳಿದ್ದೇನು?

ನಮ್ಮ ಚಿತ್ರವನ್ನು ಮೊದಲಿನಿಂದಲೂ ಪ್ರೋತ್ಸಾಹಿಸುತ್ತಾ ಬಂದಿರುವ ಮಾಧ್ಯಮದವರಿಗೆ ಹಾಗೂ ಚಿತ್ರ ನೋಡಿ ಹಾರೈಸುತ್ತಿರುವ ಪ್ರೇಕ್ಷಕರಿಗೆ ಧನ್ಯವಾದ ಎಂದು ಮಾತನಾಡಿದ ನಾಯಕ ವಸಿಷ್ಠ ಸಿಂಹ, "ಜೂನ್ ತಿಂಗಳು ನಮಗೆ ಮಾರಕವಾಯಿತು ಎಂದರೆ ತಪ್ಪಾಗಲಾರದು. ನಮ್ಮ ಚಿತ್ರ ಬಿಡುಗಡೆ ಸಮಯದಲ್ಲಿ ಒಂದಲ್ಲಾ ಒಂದು ಸಮಸ್ಯೆ ಎದುರಾಯಿತು. ಆ ಸಮಸ್ಯೆಗಳ ನಡುವೆ ನಮ್ಮ ಚಿತ್ರ ತೆರೆಕಂಡಿತ್ತು. ಚೇತನ್ ಕೇಶವ ಅವರ ಮೊದಲ ನಿರ್ದೇಶನದಲ್ಲೇ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಚಿತ್ರ ನೋಡಿದವರು ಕಥೆಯನ್ನು ಮೆಚ್ಚಿಕೊಂಡಿದ್ದಾರೆ‌. ಇಷ್ಟೆಲ್ಲದರ ನಡುವೆ ನಾವು ನಿರೀಕ್ಷಿಸಿದಷ್ಟು ಜನ ಬರುತ್ತಿಲ್ಲ ಎಂಬ ಬೇಸರ ಚಿತ್ರತಂಡಕ್ಕಿದೆ‌. ದಯವಿಟ್ಟು ಕನ್ನಡ ಚಿತ್ರಗಳನ್ನು ಹೆಚ್ಚು ಪ್ರೋತ್ಸಾಹಿಸಿ. ಈಗಾಗಲೇ ಚಿತ್ರ ನೋಡಿರುವವರಿಗೆ ಧನ್ಯವಾದ. ನೋಡದೇ ಇರುವವರು ಈಗಲೇ ನೋಡಿ ಎಂದರು‌‌.

"ಸಿನಿಮಾಗಳು ಇಲ್ಲದೇ ಇದ್ದಾಗ, ನಮ್ಮ ಸಿನಿಮಾ ಲವ್‌ಲೀ ಆಗಲಿ, ಕೋಟಿ ಆಗಲಿ, ಚೆಫ್ ಚಿದಂಬರ ಆಗಲಿ, ಶಿವಮ್ಮ ಸಿನಿಮಾಗಳು ತೆರೆಗೆ ಬಂದವು. ಇಂತಹ ಸಂದರ್ಭಗಳಲ್ಲಿ 70 ಚಿತ್ರಮಂದಿರಗಳು ಓಪನ್ ಆದವು. ಇದರ ಬಗ್ಗೆ ಯಾರೂ ಈ ವರೆಗೂ ಮಾತನಾಡಿಲ್ಲ. ನಮ್ಮ ಸಿನಿಮಾ ಬಿಡುಗಡೆ ಸಮಯದಲ್ಲಿಯೇ ಒಂದಷ್ಟು ಘಟನೆಗಳು ನಡೆದವು. ಅದರಿಂದಲೂ ಒಂದಷ್ಟು ಸಮಸ್ಯೆ ಆಯ್ತು. ಇಲ್ಲಿ ಇಂಡಸ್ಟ್ರಿ ಕಟ್ಟುವ ಕೆಲಸ ನಾಲ್ಕು ಜನ ಹೀರೊಗಳಿಂದ ಆಗಲ್ಲ. ನಾಲ್ಕು ಜನ ನಿರ್ದೇಶಕರಿಂಲೂ ಆಗಲ್ಲ. ಎಲ್ಲರೂ ಒಮ್ಮತದಿಂದ ಕೆಲಸ ಮಾಡಿದಾಗ ಮಾತ್ರ ಚಿತ್ರೋದ್ಯಮ ಏಳಿಗೆಯತ್ತ ಸಾಗುತ್ತೆ" ಎಂದರು.

"ಪಕ್ಕದ ತೆಲುಗು ಚಿತ್ರಗಳಿಗೆ ಬೆಳಗಿನ ಜಾವದ ಶೋ ನೋಡಿ ವಿಮರ್ಶೆ ಬರೆಯುತ್ತಾರೆ. ಅದೇ ರೀತಿ ಅವರು ಕನ್ನಡ ಸಿನಿಮಾಗಳಿಗೆ ಯಾಕೆ ಮಾಡಲ್ಲ? ಅವರು ಯಾರೂ ಇಲ್ಲಿ ಸಿಗಲ್ಲ. ಅಲ್ಲಿ ಗಾಸಿಪ್ ಮಾಡುವುದಕ್ಕೆ ಅವಕಾಶವಿಲ್ಲ. ಯಾರೂ ಒಂದು ಸಂದರ್ಶನ ಕೂಡ ಕೊಡಲ್ಲ. ಅವರು ಕೇವಲ ಕಲಾವಿದರಾಗಿಯೇ ಕಾಣಿಸುತ್ತಾರೆ. ಅವರ ಸಿನಿಮಾ ನೋಡುವುದೇ ಮನರಂಜನೆಗಾಗಿ. ಆದರೆ, ನಮ್ಮಲ್ಲಿ ಹಾಗಲ್ಲ. ಕಲಾವಿದರ ಸಿನಿಮಾಗಳಿಗಿಂತ ಕಲಾವಿದರ ಪರ್ಸನಲ್ ಲೈಫ್ ಅನ್ನೇ ಜನ ಎಂಟರ್‌ಟೈನ್ ಮಾಡುತ್ತಿದ್ದಾರೆ" ಎಂದು ನಟ ವಸಿಷ್ಠ ಸಿಂಹ ಬೇಸರ ವ್ಯಕ್ತಪಡಿಸಿದ್ದಾರೆ.

ನಿರ್ದೇಶಕರ ಮಾತು

"ಮಫ್ತಿ" ಚಿತ್ರದ ನಿರ್ದೇಶಕ ನರ್ತನ್, ಪ್ರಶಾಂತ್ ನೀಲ್ ಅಂತಹವರ ಬಳಿ ಕೆಲಸ ಮಾಡಿ ಬಂದಿರುವ ನನಗೆ ಇದು ಮೊದಲ ನಿರ್ದೇಶನ ಚಿತ್ರ. ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಚಿತ್ರ ನಿರ್ದೇಶಿಸಬೇಕೆಂಬ ಆಸೆಯಿತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ‌. ಜನ ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳಾಡುತ್ತಿರುವುದಕ್ಕೆ ಖುಷಿಯಿದೆ‌. ಆದರೆ ಎಲ್ಲರೂ ಹೇಳಿದಂತೆ ನಿರೀಕ್ಷಿಸಿದಷ್ಟು ಜನರು ಚಿತ್ರ ನೋಡಿಲ್ಲ ಎಂಬ ಬೇಸರ ನನಗೂ ಇದೆ. ನಮ್ಮ ಚಿತ್ರವನ್ನು ಹೆಚ್ಚಿನ ಜನರು ನೋಡಿ ಎಂದರು ನಿರ್ದೇಶಕ ಚೇತನ್ ಕೇಶವ್.

ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ನೀಡಿ

ಮೊದಲು ನಮ್ಮ ಚಿತ್ರ ಇಪ್ಪತ್ತೈದು ದಿನ ಪೂರೈಸಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ. ನಮ್ಮ ಚಿತ್ರ ನೋಡಿದವರಿಗೆ ತುಂಬಾ ಇಷ್ಟವಾಗಿದೆ‌. ಆದರೆ ಇಲ್ಲಿನ ಜನ ಬೇರೆ ಭಾಷೆಗಳ ಚಿತ್ರಗಳಿಗೆ ನೀಡುವ ಪ್ರೋತ್ಸಾಹವನ್ನು ನಮ್ಮ ಕನ್ನಡ ಚಿತ್ರಗಳಿಗೆ ನೀಡುವುದಿಲ್ಲ ಎಂಬ ಬೇಸರ ಬಹಳ ಇದೆ. ದಯಮಾಡಿ ಕರ್ನಾಟಕದ ಜನರು ಕನ್ನಡ ಚಿತ್ರಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ. ಒಬ್ಬ ನಿರ್ಮಾಪಕ ಗೆದ್ದರೆ, ಅದರಿಂದ ಬಂದ ಹಣವನ್ನು ಮತ್ತೊಂದು ಚಿತ್ರಕ್ಕೆ ಹಾಕುತ್ತಾನೆ. ಅದರಿಂದ ಸಾಕಷ್ಟು ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಕಾರ್ಯಕಾರಿ ನಿರ್ಮಾಪಕರಾದ ಬಾಲಕೃಷ್ಣ ಹಾಗೂ ಕೃಷ್ಣ ತಿಳಿಸಿದರು.

ನಾಯಕಿ ಸ್ಟೆಫಿ ಪಟೇಲ್ ಕನ್ನಡದಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸಿದರು. ಚಿತ್ರದಲ್ಲಿ ನಟಿಸಿರುವ ಹಿರಿಯ ನಟ ದತ್ತಣ್ಣ, ಕಾಕ್ರೋಜ್ ಸುಧೀ, ಶೇಖರ್, ವರ್ಧನ್, ಬೇಬಿ ವಂಶಿಕ, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಹಾಡು ಬರೆದಿರುವ ಪ್ರಮೋದ್ ಮರವಂತೆ, ಛಾಯಾಗ್ರಾಹಕ ಅಶ್ವಿನ ಕೆನ್ನೆಡಿ ಹಾಗೂ ಸಂಕಲನಕಾರ ಹರೀಶ್ ಕೊಮ್ಮೆ, ಸೌಂಡ್ ಡಿಸೈನರ್ ಅಭಿನಂದನ್ ಸೇರಿದಂತೆ ಅನೇಕರು ಚಿತ್ರದ ಕುರಿತು ಮಾತನಾಡಿದರು. ನಿರ್ದೇಶಕ ಮಹೇಶ್ ಕುಮಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Whats_app_banner