ಇದೇ 15ರಂದು ಬರ್ತಿರೋ ನಮ್ಮ ಸಿನಿಮಾ ‘ಫೋಟೋ’ಕ್ಕೆ ಮಲ್ಟಿಫ್ಲೆಕ್ಸ್‌ಗಳಲ್ಲೂ ಬರೀ 150 ರೂಪಾಯಿ ಟಿಕೆಟ್; ಪ್ರಕಾಶ್ ರಾಜ್
ಲಾಕ್‌ಡೌನ್‌ನ ಪರಿಣಾಮ ವಲಸೆ ಕಾರ್ಮಿಕರು ಅನುಭವಿಸಿದ ಕಷ್ಟಗಳನ್ನು ಬಿಚ್ಚಿಡುವ ‘ಫೋಟೋ’ ಸಿನಿಮಾ ಇದೇ 15ರಂದು ಚಿತ್ರಮಂದಿರದತ್ತ ಬರ್ತಿದೆ. ಈ ನಡುವೆ ಚಿತ್ರತಂಡದಿಂದ ನಿಮ್ಮ ಸಂಗ ಎಂಬ ಹೊಸ ಹಾಡೂ ಇತ್ತೀಚೆಗಷ್ಟೇ ಅನಾವರಣವಾಗಿದೆ.
Photo Movie release Update: ಕೇಂದ್ರ ಸರ್ಕಾರವು ಘೋಷಿಸಿದ ಲಾಕ್‌ಡೌನ್‌ನ ಪರಿಣಾಮ ವಲಸೆ ಕಾರ್ಮಿಕರು ಅನುಭವಿಸಿದ ಕಷ್ಟಗಳನ್ನು ಬಿಚ್ಚಿಡುವ ‘ಫೋಟೋ’ ಸಿನಿಮಾ ಮಾರ್ಚ್ 15ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೇಲರ್ ಮೂಲಕ ಆಮಂತ್ರಣ ಕೊಟ್ಟಿರುವ ಚಿತ್ರತಂಡ ಇದೀಗ ಹಾಡೊಂದನ್ನು ಹಿಡಿದು ತಂದಿದೆ. ನಿಮ್ಮ ಸಂಗ ಎಂಬ ಸಾಹಿತ್ಯವಿರುವ ಹಾಡು, ಮಸಾರಿ ಟಾಕೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.
ಈಗಾಗಲೇ ಫೋಟೋ ಸಿನಿಮಾವನ್ನು ನೋಡುಗನ ಮುಂದಿರಿಸುವ ಕೆಲಸ ಮಾಡುತ್ತಿರುವ ನಟ ಪ್ರಕಾಶ್ ರಾಜ್, ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಹೇಳಿದ್ದಾರೆ. ಇದೀಗ ಅದನ್ನು ನಾಡಿನ ಪ್ರೇಕ್ಷಕರ ಮುಂದೆ ತೆರೆದಿಡುವ ಪ್ರಯತ್ನಕ್ಕಿಳಿದಿದ್ದಾರೆ. ಅದರಂತೆ ಚಿತ್ರದ ಮೊದಲ ಹಾಡನ್ನು ಸ್ವತಃ ಅವರೇ ಬಿಡುಗಡೆ ಮಾಡಿದ್ದಾರೆ.
ಹಾಡು ಬಿಡುಗಡೆ ಮಾಡಿ ಮಾತನಾಡಿದ ಪ್ರಕಾಶ್ ರಾಜ್, ಈ ಸಿನಿಮಾ ಸಲುವಾಗಿ ನಾನು ದೊಡ್ಡ ಕೆಲಸವನೇನೂ ಮಾಡಿಲ್ಲ. ಈ ತರ ಕೆಲಸ ಮಾಡಿಸಿಕೊಳ್ಳುವ, ಈ ತರ ಸಾಥ್ ಕೊಡುವ ಅರ್ಹತೆ ಆ ಸಿನಿಮಾಗೆ ಇದೆ. ನಾನು ಸಿನಿಮಾ ನೋಡಿದೆ. ಬಹಳ ದಿನಗಳಿಂದ ನೋಡಬೇಕಿತ್ತು. ಹಲವಾರು ಕಾರಣಗಳಿಂದ ನೋಡಲು ಆಗಿರಲಿಲ್ಲ. ಉತ್ಸವ್ ಹಾಗೂ ಅವರ ತಂಡದವರು ಪ್ರಕಾಶ್ ರೈಗೆ ತೋರಿಸಬೇಕು ಅಂದಾಗ. ನಮಗೆ ಸಾರ್ಥಕ ಅನಿಸುತ್ತದೆ. ಸಿನಿಮಾ ನೋಡಿದ ಬಳಿಕ ಹದಿನೈದು ನಿಮಿಷ ಮಾತು ಬರಲಿಲ್ಲ. ಕೆಲವೊಮ್ಮೆ ಯಾಕೆ ಅಳುತ್ತೇವೆ ಅಂತಾ ಗೊತ್ತಿಲ್ಲ. ಪ್ರಾಮಾಣಿಕ ಪ್ರಯತ್ನಕ್ಕೆ ಹೇಗೆ ರಿಯಾಕ್ಟ್ ಮಾಡಬೇಕು ಅನ್ನುವುದು ಗೊತ್ತಿರಲಿಲ್ಲ" ಎಂದಿದ್ದಾರೆ ಪ್ರಕಾಶ್ ರಾಜ್.
ಹೊಸ ಹುಡುಗರು ಸಿನಿಮಾಕ್ಕೆ ಬರಬೇಕು, ಹೊಸ ಕಥೆಗಳನ್ನು ತರಬೇಕು. ಅಂಥ ಹುಡುಗರು ಬೆಳೀಬೇಕು. ವರ್ಲ್ಡ್ ಸಿನಿಮಾದಲ್ಲಿ ಕಂಟೆಂಟ್ ಮುಖ್ಯವಾಗಿದೆ. ಸಿನಿಮಾ ಇದೇ 15ಕ್ಕೆ ಬಿಡುಗಡೆಯಾಗುತ್ತಿದೆ. ಸಿಂಗಲ್ ಚಿತ್ರಮಂದಿರಗಳ ಬದಲು, ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರ ಸಿನಿಮಾ ಬಿಡುಗಡೆ ಮಾಡುತ್ತೇವೆ. ಮಾರ್ಚ್ 22ರ ಬಳಿಕ ಉತ್ತರ ಕರ್ನಾಟಕ ಭಾಗದ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುತ್ತೇವೆ. ಈ ಸಿನಿಮಾ ಎಲ್ಲರನ್ನು ತಲುಪಲಿ ಎಂಬ ಉದ್ದೇಶಕ್ಕೆ ಕೇವಲ 150ರೂ ಟಿಕೆಟ್ ಮೊತ್ತವನ್ನು ನಿಗದಿಪಡಿಸಿದ್ದೇವೆ ಎಂದರು ಪ್ರಕಾಶ್ ರಾಜ್.
"ಫೋಟೋ ಸಿನಿಮಾ ರಿಲೀಸ್ ಮಾಡುವುದು ಹೇಗೆ ಎಂಬ ಪ್ರಶ್ನೆ ಇತ್ತು. ಪ್ರಕಾಶ್ ಸರ್ ಬಂದಿದ್ದು ನಮಗೆ ದೊಡ್ಡ ಶಕ್ತಿ. ಬರೀ ನನಗಷ್ಟೇ ಶಕ್ತಿ ಆಗಲ್ಲ. ನನ್ನ ತರ ಸಿನಿಮಾ ಕ್ಷೇತ್ರಕ್ಕೆ ಬರುವವರಿಗೆ ನಂಬಿಕೆ ಆಗುತ್ತಾರೆ. ಮುಂದಿನ ಸಿನಿಮಾ ಮಾಡಲು ಪ್ರಕಾಶ್ ಸರ್ ಧೈರ್ಯ ಕೊಟ್ಟಿದ್ದಾರೆ ಎಂಬ ಬಗ್ಗೆಯೂ ಉತ್ಸವ್ ಗೋನಾವರ ತಿಳಿಸಿದರು.
ಇದೀಗ ನಿಮ್ಮ ಸಂಗ ಎಂಬ ಜನಪದ ಶೈಲಿಯ ಹಾಡು ಬಿಡುಗಡೆ ಆಗಿದೆ. ನಿರ್ದೇಶಕ ಉತ್ಸವ್ ಸಾಹಿತ್ಯ ಬರೆದಿರುವ ಹಾಡಿಗೆ ಶಿಲ್ಪಾ ಮುಡ್ಬಿ ಧ್ವನಿ ನೀಡಿದ್ದಾರೆ.
150 ರೂಪಾಯಿಗೆ ಸಿಗಲಿದೆ ಫೋಟೋ ಟಿಕೆಟ್
ಈ ಸಿನಿಮಾ ಎಲ್ಲರನ್ನು ತಲುಪಬೇಕು ಎಂಬ ಕಾರಣಕ್ಕೆ ಚಿತ್ರದ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಮಲ್ಟಿಪ್ಲೆಕ್ಸ್‌ನಲ್ಲಿ ಹಾಯಾಗಿ ಸಿನಿಮಾ ನೋಡಬೇಕು ಎಂಬ ಪ್ರೇಕ್ಷಕರಿಗೂ 150 ರೂಪಾಯಿ ಹೊರೆಯಾಗುವುದಿಲ್ಲ. ಕುಟುಂಬ ಸಮೇತರಾಗಿ ಸಿನಿಮಾ ನೋಡಲು ಹೋದರೆ ಜೇಬಿಗೆ ಹೊರೆಯಾಗುತ್ತದೆ ಎನ್ನುವವರಿಗೆ ಪೋಟೋ ತಂಡ ಸಿಹಿ ಸುದ್ದಿ ನೀಡಿದೆ. ಒಂದು ಟಿಕೆಟ್‌ಗೆ ಕೇವಲ 150 ರೂಪಾಯಿ ಫಿಕ್ಬೆಸ್ಲೆ ಮಾಡಿದೆ.
ಫೋಟೋ ಸಿನಿಮಾವನ್ನು 'ನಿರ್ದಿಗಂತ'ದ ಮೂಲಕ ಪ್ರಕಾಶ್ ರಾಜ್ ಅರ್ಪಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಉತ್ಸವ್ ಗೋನವಾರ ಚೊಚ್ಚಲ ನಿರ್ದೇಶನಕ್ಕಿಳಿಸಿದ್ದಾರೆ. ‘ಮಸಾರಿ ಟಾಕೀಸ್’ ಬ್ಯಾನರ್ ಅಡಿಯಲ್ಲಿ ಫೋಟೋ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ಜಹಾಂಗೀರ್, ಸಂಧ್ಯಾ ಅರಕೆರೆ, ಮಹಾದೇವ ಹಡಪದ್, ವೀರೇಶ್ ಗೊನ್ವಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ದಿನೇಶ್ ದಿವಾಕರನ್ ಛಾಯಾಗ್ರಹಣ, ಶಿವರಾಜ್ ಮೆಹೂ ಸಂಕಲನ ಸಿನಿಮಾಕ್ಕಿದೆ.