ಕನ್ನಡ ಸುದ್ದಿ  /  ಮನರಂಜನೆ  /  ಪ್ರಮೋದ್ ನಾರಾಯಣ್ ನಿರ್ಮಾಣದ ನೂತನ ಚಿತ್ರದ ನಾಯಕರಾಗಿ ‌ರಿಷಿ; ಸದ್ಯದಲ್ಲಿಯೇ ಶೀರ್ಷಿಕೆ ಬಿಡುಗಡೆ

ಪ್ರಮೋದ್ ನಾರಾಯಣ್ ನಿರ್ಮಾಣದ ನೂತನ ಚಿತ್ರದ ನಾಯಕರಾಗಿ ‌ರಿಷಿ; ಸದ್ಯದಲ್ಲಿಯೇ ಶೀರ್ಷಿಕೆ ಬಿಡುಗಡೆ

ಕನ್ನಡ ನಟ ರಿಷಿ ನಟನೆಯ ನೂತನ ಸಿನಿಮಾವೊಂದು ಸದ್ಯದಲ್ಲಿಯೇ ಸೆಟ್ಟೇರಲಿದೆ. ಈ ಸಿನಿಮಾದ ಶೀರ್ಷಿಕೆ ಬಿಡುಗಡೆ ಶೀಘ್ರದಲ್ಲಿ ನಡೆಯಲಿದೆ. ಈ ಚಿತ್ರಕ್ಕೆ "ಸಂಜು ವೆಡ್ಸ್ ಗೀತಾ", " ಹಾಗೆ ಸುಮ್ಮನೆ" ಚಿತ್ರಗಳನ್ನು ನೀಡಿರುವ ಪ್ರಮೋದ್ ನಾರಾಯಣ್ ನಿರ್ಮಾಪಕರಾಗಿರಲಿದ್ದಾರೆ.

ಪ್ರಮೋದ್ ನಾರಾಯಣ್ ನಿರ್ಮಾಣದ ನೂತನ ಚಿತ್ರದ ನಾಯಕರಾಗಿ ‌ರಿಷಿ
ಪ್ರಮೋದ್ ನಾರಾಯಣ್ ನಿರ್ಮಾಣದ ನೂತನ ಚಿತ್ರದ ನಾಯಕರಾಗಿ ‌ರಿಷಿ

ಬೆಂಗಳೂರು: ಕನ್ನಡ ಚಿತ್ರರಂಗದ ಸೂಪರ್ ಹಿಟ್ ಚಿತ್ರ "ಸಂಜು ವೆಡ್ಸ್ ಗೀತಾ", " ಹಾಗೆ ಸುಮ್ಮನೆ" ಚಿತ್ರಗಳ ನಿರ್ಮಾಪಕರಾದ ಪ್ರಮೋದ್ ನಾರಾಯಣ್ ಅವರ ನಿರ್ಮಾಣದಲ್ಲಿ ನೂತನ ಚಿತ್ರವೊಂದು ಆರಂಭವಾಗಲಿದೆ. "ಕವಲುದಾರಿ", " ಆಪರೇಷನ್ ಅಲುಮೇಲಮ್ಮ" ಚಿತ್ರಗಳ ಮೂಲಕ ಜನಪ್ರಿಯರಾಗಿ ತಮ್ಮದೇ ಆದ ಅಭಿಮಾನಿ ವಲಯ ಹೊಂದಿರುವ ರಿಷಿ ಈ ಚಿತ್ರದ ನಾಯಕರಾಗಿ ಅಭಿನಯಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರಾಕಡ್ ಫಿಲಂಸ್ ಮುಂಬೈ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಜೊಯ್ ದೀಪ್ ಬಿಸ್ವಾಸ್ ಹಾಗೂ ಸೋನಾಲಿ ಬಿಸ್ವಾಸ್ ನಿರ್ಮಾಣಕ್ಕೆ ಸಾಥ್ ನೀಡುತ್ತಿದ್ದಾರೆ. ವಸಂತ್ ಹಂಗೆ ಮತ್ತು ಕೆ.ಸಿ.ಶಿವಾನಂದ್ ಈ ನೂತನ ಚಿತ್ರದ ಸಹ ನಿರ್ಮಾಪಕರು. ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ, ಮೂಲತಃ ಕನ್ನಡಿಗರೆ ಆಗಿರುವ ಕಿಶೋರ್ ಭಾರ್ಗವ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಈಗಾಗಲೇ ತೆಲುಗು ಚಿತ್ರವೊಂದನ್ನು ನಿರ್ದೇಶಿಸಿರುವ ಕಿಶೋರ್ ಭಾರ್ಗವ್ ಅವರಿಗೆ ಕನ್ನಡದಲ್ಲಿ ಇದು ಮೊದಲ ಚಿತ್ರ. ಮುಂಗಾರು ಕಳೆದ ಮೇಲೆ ಆಗಸ್ಟ್ ನಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ತಿಳಿಸಿರುವ ನಿರ್ಮಾಪಕ ಪ್ರಮೋದ್ ನಾರಾಯಣ್, ಸದ್ಯದಲ್ಲೇ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ನಿರ್ಮಾಣದ "ಸೈತಾನ್" ವೆಬ್ ಸಿರೀಸ್ ಮೂಲಕ ರಿಷಿ ತೆಲುಗಿನಲ್ಲೂ ಹೆಸರು ಮಾಡಿದ್ದಾರೆ.

ತಮಿಳುನಾಡಿನಲ್ಲೂ ರಿಷಿ ಜನಪ್ರಿಯ. ಎಲ್ಲಾ ಭಾಷೆಗಳ ಅಭಿಮಾನಿಗಳಿಗೂ ಪ್ರಿಯವಾಗುವಂತಹ ಕಥೆ ನಮ್ಮ ಚಿತ್ರದಲ್ಲಿರುತ್ತದೆ ಎನ್ನುತ್ತಾರೆ ನಿರ್ಮಾಪಕ ಪ್ರಮೋದ್ ನಾರಾಯಣ್.

ಕನ್ನಡ ನಟ ರಿಷಿ ಬಗ್ಗೆ

ಸ್ಯಾಂಡಲ್‌ವುಡ್‌ ನಟ ರಿಷಿ ಮೂಲತಃ ಮೈಸೂರಿನವರು. ಎಸ್‌ಜೆಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕಾಲೇಜು ದಿನಗಳಲ್ಲಿಯೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ರೇಡಿಯೋ ಜಾಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಶಿಕ್ಷಣ ಮುಗಿಸಿದ ಬಳಿಕ ಕೆಲವು ವರ್ಷ ಕಾರ್ಪೊರೇಟ್‌ ಕಂಪನಿಗಳಲ್ಲಿ ಉದ್ಯೋಗ ಮಾಡಿದ್ದಾರೆ. ಬಳಿಕ ಇವರು ಪೂರ್ಣ ಪ್ರಮಾಣದಲ್ಲಿ ನಟನೆಯಲ್ಲಿ ತೊಡಗಿಕೊಂಡರು. ಟಿಎನ್‌ ಸೀತಾರಾಮ್‌ ನಿರ್ದೇಶಣದ ಮಹಾಪರ್ವ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದರು. ಇದಾದ ಬಳಿಕ ಅನುರೂಪ ಸೀರಿಯಲ್‌ನಲ್ಲಿ ನಟಿಸಿ ಜನಪ್ರಿಯತೆ ಹೆಚ್ಚಿಸಿಕೊಂಡರು. ಇವರು ನಾಯಕನಾಗಿ ನಟಿಸಿದ ಮೊದಲ ಚಿತ್ರ ಆಪರೇಷನ್ ಅಲಮೇಲಮ್ಮ. ಇದಾದ ಬಳಿಕ ಕವಲುದಾರಿ ಸಿನಿಮಾದಲ್ಲಿ ನಟಿಸಿದ್ದಾರೆ.

ಟಿ20 ವರ್ಲ್ಡ್‌ಕಪ್ 2024