‘ಹೀರೋಗಳು ಕೋಟಿ ಕೋಟಿ ದುಡ್ಡು ಮಾಡ್ತಾವ್ರಷ್ಟೇ, ಕನ್ನಡಕ್ಕೆ ಅವರ ಕೊಡುಗೆ ಶೂನ್ಯ!’ ಕರವೇ ಕೆಂಡ
ಕನ್ನಡದಿಂದಲೇ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿರುವ ಕನ್ನಡದ ನಟರು ಒಬ್ಬರಾದರೂ ಈ ಹೋರಾಟಕ್ಕೆ ಕೈ ಜೋಡಿಸಿದ್ರಾ? ಇಲ್ಲ ಎಂದು ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ. ಎ. ನಾರಾಯಣ ಗೌಡ ಕನ್ನಡ ನಟರ ವಿರುದ್ಧ ಕಿಡಿ ಕಾರಿದ್ದಾರೆ.
Sandalwood News: ಬೆಂಗಳೂರಿನಲ್ಲಿ ಇಂಗ್ಲಿಷ್ ನಾಮಫಲಕ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಸೇರಿ ಹಲವು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಒಗ್ಗಟ್ಟಾಗಿ ಪ್ರತಿಭಟನೆಗಿಳಿದಿದ್ದಾರೆ. ಬೆಂಗಳೂರಿನ ವಾಣಿಜ್ಯ ಮಳಿಗೆಗಳಲ್ಲಿ ಹೆಚ್ಚಿರುವ ಆಂಗ್ಲ ಫಲಕಗಳ ಅಬ್ಬರದ ವಿರುದ್ದ ತೀವ್ರ ಹೋರಾಟ ನಡೆಸಿರುವ ಕರ್ನಾಟಕ ರಕ್ಷಣಾ ವೇದಿಕೆ ಹಲವು ಕಡೆ ಫಲಕಗಳನ್ನು ಧ್ವಂಸಗೊಳಿಸಿ, ಎಚ್ಚರಿಕೆಯ ಸಂದೇಶ ರವಾನಿಸಿತ್ತು.
ಇದೀಗ ಇದೇ ಪ್ರತಿಭಟನೆಯಲ್ಲಿ ಕನ್ನಡ ಕಲಾವಿದರ ಪಾಲ್ಗೊಳ್ಳುವಿಕೆ ಇಲ್ಲದಿರುವುದೂ ಕರವೇ ಸಂಘಟನೆಯ ಕಣ್ಣು ಕೆಂಪಾಗಿಸಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಟಿ ಪ್ರತಿಭಟನೆಗೆ ಸ್ಯಾಂಡಲ್‌ವುಡ್ ಚಿತ್ರರಂಗದ ಬೆಂಬಲ ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಲ್ಲದೆ, ನಮಗೆ ಅವರ ಬೆಂಬಲ ಬೇಕಾಗಿಲ್ಲ ಎಂದಿದ್ದಾರೆ ನಾರಾಯಣ ಗೌಡ.
ರಾಜ್‌ಕುಮಾರ್ ಕಾಲಕ್ಕೆ ಅದೆಲ್ಲ ಹೋಯಿತು..
"ಯಾವತ್ತು ಕೊಟ್ಟಿದ್ದಾರೆ ಬೆಂಬಲ? ಯಾವತ್ತೂ ಕೊಟ್ಟಿಲ್ಲ. ಯಾವಾಗ ಡಾ. ರಾಜ್‌ಕುಮಾರ್ ಇದ್ರೋ, ಸಾಹಸಸಿಂಹ ವಿಷ್ಣುವರ್ಧನ್ ಇದ್ರೋ, ಯಾವಾಗ ರೆಬೆಲ್ ಸ್ಟಾರ್ ಅಂಬರೀಶ್ ಇದ್ರೋ, ಅವರ ಕಾಲಕ್ಕೇ ಅದು ಹೋಯಿತು. ಈಗ ಇವರೇನಿದ್ರೂ ಕೋಟಿ ಕೋಟಿ ಕನ್ನಡದ ಹೆಸರಿನಲ್ಲಿ, ಸಿನಿಮಾದ ಹೆಸರಿನಲ್ಲಿ ಕನ್ನಡಿಗರ ದುಡ್ಡನ್ನು ವಸೂಲಿ ಮಾಡಿಕೊಳ್ಳುತ್ತಿದ್ದಾರೆ ಹೊರತು ಇವರಿಗೆ ಕನ್ನಡ ಅಭಿಮಾನ ಇಲ್ಲ. ಕನ್ನಡದ ಪ್ರೀತಿ ಇಲ್ಲ, ಕಳಕಳಿ ಇಲ್ಲ"
ಕ್ರಿಕೆಟ್ ಆಡ್ತಾ ಮೋಜು ಮಾಡ್ತಿದ್ದಾರೆ...
“ನಾವಿಲ್ಲಿ ಕಳೆದ 15 ದಿನಗಳಿಂದ ನಾವಿಲ್ಲಿ ಕನ್ನಡ ಕನ್ನಡ ಅಂತ ಬೀದಿಗಿಳಿದು ಕ್ರಿಕೆಟ್ ಆಡ್ತಿದ್ರೆ, ಅವ್ರು ಕ್ರಿಕೆಟ್ ಆಡ್ತಾ ಮೋಜು ಮಸ್ತಿ ಮಾಡ್ತಿದ್ದಾರೆ. ಇದು ಅವರ ಕನ್ನಡದ ಪ್ರೇಮ. ಒಬ್ಬೊಬ್ಬರು ಹತ್ತು ಕೋಟಿ ಇಪತ್ತು ಕೋಟಿ ಸಂಭಾವನೆ ತೆಗೋಳ್ತಿರಿ. ಕನ್ನಡಕ್ಕೆ ಏನು ಮಾಡಿದ್ದೀರಿ? ಕನ್ನಡಿಗರಿಗೆ ಏನು ಮಾಡಿದ್ದೀರಿ? ಒಂದು ಆಸ್ಪತ್ರೆ ಕಟ್ಟಿದ್ದೀರಾ, ಇಲ್ಲ ಒಂದು ಛತ್ರ ಕಟ್ಟಿದ್ದೀರಾ, ಕನ್ನಡ ಭವನ ಕಟ್ಟಿದ್ದೀರಾ ಇಲ್ಲ.. ಕನ್ನಡಕ್ಕೆ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನೆ ಮಾಡಿದ್ರೆ ಉತ್ತರ ಜೀರೋ!”
ನಾವು ಇವರನ್ನು ನಂಬಿ ಕೂತಿಲ್ಲ..
“ಹಾಗಾಗಿ ಕನ್ನಡ ಚಿತ್ರರಂಗದವರನ್ನು ನಾನೂ ಕೇಳಿಕೊಂಡೆ, ಮಾಧ್ಯಮದ ಮುಖಾಂತರ ಕೇಳಿಕೊಂಡೆ. ಒಬ್ಬರೂ ಕೈ ಜೋಡಿಸಲಿಲ್ಲ. ಹಾಗಂತ ನಾವು ಅವರನ್ನು ನಂಬಿ ಕೂತಿಲ್ಲ. ನಮ್ಮ ಹೋರಾಟ ಏನಿದಿಯೋ ಅದು ಮುಂದುವರಿಯಲಿದೆ” ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಕನ್ನಡ ಚಿತ್ರರಂಗದ ಕಲಾವಿದರನ್ನು ಈ ವಿಚಾರವಾಗಿ ಪ್ರಶ್ನೆ ಮಾಡಿದ್ದಾರೆ.