ದರ್ಶನ್ ಸಿನಿಮಾ ಪ್ರೊಡ್ಯೂಸ್ ಮಾಡ್ತಿನಿ ಅಂದಾಗ, ನೀನು ಮುಳುಗಿ ಹೋಗ್ತಿಯಾ ಎಂದು ಹೆದರಿಸಿದವರೇ ಹೆಚ್ಚು; ಬಿ ಸುರೇಶ್
ನಟ ದರ್ಶನ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದ್ರೆ, ನೀನು ಮುಳುಗಿಯೇ ಬಿಡ್ತಿಯಾ, ಮನೆ ಮಠ ಮಾಡಿಕೊಳ್ಳುತ್ತೀಯಾ ಎಂದು ಹೆದರಿಸಿದವರೇ ಹೆಚ್ಚು ಎಂದು ಕೆಲ ವರ್ಷಗಳ ಹಿಂದಿನ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ ನಿರ್ದೇಶಕ ಹಾಗೂ ನಿರ್ಮಾಪಕ ಬಿ ಸುರೇಶ್.
Darshan: ನಟ ದರ್ಶನ್ ಸ್ಯಾಂಡಲ್‌ವುಡ್‌ನ ಬಹು ಬೇಡಿಕೆಯ ನಟ. ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಸ್ಟಾರ್ ಹೀರೋ. ವರ್ಷಕ್ಕೊಂದರಂತೆ ಸಿನಿಮಾ ನೀಡುತ್ತ ಎಲ್ಲರನ್ನು ರಂಜಿಸುವ ದರ್ಶನ್, ಕಳೆದ ವರ್ಷವಷ್ಟೇ ಕಾಟೇರ ಸಿನಿಮಾ ಮೂಲಕ ಅಬ್ಬರಿಸಿ ಬೊಬ್ಬಿರಿದಿದ್ದರು. ಶತದಿನೋತ್ಸವ ಆಚರಿಸಿಕೊಂಡ ಕಾಟೇರ ಸಿನಿಮಾ, ಗಳಿಕೆ ವಿಚಾರದಲ್ಲೂ ದಾಖಲೆ ಬರೆದಿತ್ತು. ತಮ್ಮ ಸಿನಿಮಾ ಕೆರಿಯರ್‌ನಲ್ಲೂ ಕಾಟೇರ ಚಿತ್ರ ಹೊಸ ರೆಕಾರ್ಡ್ ಸೃಷ್ಟಿಸಿತು. ಇದೀಗ ಡೆವಿಲ್ ಸಿನಿಮಾ ಒಪ್ಪಿಕೊಂಡು ಅದರ ಕೆಲಸದಲ್ಲಿಯೇ ಬಿಜಿಯಾಗಿದ್ದಾರೆ.
ಈ ಹಿಂದೆ ದರ್ಶನ್ ಅವರಿಗೆ ತಾರಕ್ ಸಿನಿಮಾ ನಿರ್ದೇಶಿಸಿದ್ದ ಮಿಲನಾ ಪ್ರಕಾಶ್, ಡೆವಿಲ್ ಮೂಲಕ ಎರಡನೇ ಬಾರಿ ಕೈ ಜೋಡಿಸಿದ್ದಾರೆ. ಇದು ಮುಗಿದ ಬಳಿಕ ಯಜಮಾನ ಮತ್ತು ಕ್ರಾಂತಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಮೀಡಿಯಾ ಹೌಸ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಮೂರನೇ ಸಿನಿಮಾಕ್ಕೂ ದರ್ಶನ್ ಡೇಟ್ಸ್ ನೀಡಿದ್ದಾರೆ. ಶೈಲಜಾ ನಾಗ್ ಮತ್ತು ಬಿ ಸುರೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಈಗ ದರ್ಶನ್ ಅವರ ಜತೆಗಿನ ಒಡನಾಟದ ಬಗ್ಗೆ ನಟ, ನಿರ್ದೇಶಕ, ನಿರ್ಮಾಪಕ ಬಿ ಸುರೇಶ್ ಮಾತನಾಡಿದ್ದಾರೆ.
ನಟ ದರ್ಶನ್ ಅವರ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಮಾತುಗಳು ಕೇಳಿಬರುತ್ತವೆ. ಅವ್ರೊಂದು ಥರ ಬಿಳಿ ಆನೆ ಇದ್ದಂತೆ, ಸಾಕೋದು ಕಷ್ಟ ಎಂದು ಹೇಳಿದವರೂ ಇದ್ದಾರೆ. ಈ ಮಾತನ್ನು ಯಜಮಾನ ಸಿನಿಮಾ ನಿರ್ಮಾಣ ಮಾಡುವ ವೇಳೆ ನಿರ್ಮಾಪಕ ಬಿ ಸುರೇಶ್ ಅವರಿಗೂ ಸಾಕಷ್ಟು ಮಂದಿ ಹೇಳಿದ್ದರಂತೆ. ಅದಕ್ಕೆ ಅಷ್ಟೇ ನಯವಾಗಿಯೇ ಸಿನಿಮಾ ಮೂಲಕ ತಿರುಗೇಟು ನೀಡಿದ್ದರು ಬಿ ಸುರೇಶ್. ದರ್ಶನ್ ಬಗ್ಗೆ ಸ್ವತಃ ಬಿ ಸುರೇಶ್ ಸ್ಪೀಡ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನೆಲ್‌ಗೆ ಆಡಿದ ಮಾತುಗಳು ಹೀಗಿವೆ.
ನಿರ್ಮಾಪಕರ ಉಳಿವಿಗೆ ಹೋರಾಡ್ತಾರೆ
"ನಮ್ಮ ಬ್ಯಾನರ್‌ನಿಂದ ಒಟ್ಟು ಆರು ಸಿನಿಮಾಗಳು ಲೈನಪ್ ಆಗಿವೆ. ನಾನೂ ನಿರ್ದೇಶನ ಮಾಡಲಿದ್ದೇನೆ. ಅದರಲ್ಲಿ ದರ್ಶನ್ ಅವರ D 59 ಸಿನಿಮಾವನ್ನೂ ಮಾಡಲಿದ್ದೇವೆ. 2025ರಲ್ಲಿ ಶುರುವಾಗಲಿದೆ. 2026ರಲ್ಲಿ ಸಿನಿಮಾ ನೋಡಬಹುದು. ದರ್ಶನ್ ತುಂಬ ಒಳ್ಳೆಯ ಹುಡುಗ. ನೀನಾಸಂನಲ್ಲಿ ಟ್ರೇನ್ ಆದವರು. ರಂಗಭೂಮಿಯಿಂದ ಬಂದವರು. ಅಲ್ಲಿನವರೆಂದರೆ ನನಗೆ ಇಷ್ಟ. ರಂಗಭೂಮಿ ಯಾವುದೋ ವ್ಯಕ್ತಿಗೂ ಮನುಷ್ಯ ಆಗೋದನ್ನು ಕಲಿಸುತ್ತೆ. ರಂಗಭೂಮಿಯ ಅನುಭವದಿಂದ ಬಂದ ವ್ಯಕ್ತಿ ಎಲ್ಲರನ್ನೂ ಸಮಾನವಾಗಿ ನೋಡ್ತಾನೆ. ದರ್ಶನ್ ಸಹ ಹಾಗೇ. ನಾವು ಕರೆದ ಟೈಮ್‌ಗೆ ಬರ್ತಾರೆ. ಮೈಕೈ ನೋವು ಇದ್ದಾಗ ಹೆಚ್ಚು ಕಡಿಮೆ ಆಗುತ್ತೆ. ಸಿಕ್ಕಾಪಟ್ಟೆ ಕೋ ಆಪರೇಟಿವ್. ನಿರ್ಮಾಪಕರನ್ನು ಹೇಗಾದ್ರೂ ಮಾಡಿ ಉಳಿಸಬೇಕು ಅಂತ ಹೋರಾಡ್ತಾರೆ. ನಿರಂತರ ಪ್ರಯತ್ನ ಮಾಡ್ತಾರೆ. ಪ್ರೀತಿಯಿಂದ ನಡೆದುಕೊಳ್ತಾರೆ. ಸ್ಟಾರ್‌ಗಿರಿ ಇಲ್ಲ"ಎನ್ನುತ್ತಾರೆ ಸುರೇಶ್.
ನೀನು ಮುಳುಗಿ ಹೋಗ್ತಿಯಾ ಅಂದವರೇ ಹೆಚ್ಚು
"ದರ್ಶನ್ ಸಿನಿಮಾ ಮಾಡ್ತಿನಿ ಎಂದು ಹೊರಟಾಗ, ಎಷ್ಟೋ ಮಂದಿ ಹೆದರಿಸಿದ್ದರು. ನೀನು ಮುಳುಗಿ ಹೋಗ್ತಿಯಾ, ನಿಮ್ಮ ಮನೆ ಮಠ ಮಾರಿಕೊಂಡು ಬಿಡ್ತಿಯಾ ಎಂದವರೇ ಹೆಚ್ಚು. ಹಾಗಾಗಿದ್ದರೆ, ನಾನ್ಯಾಕೆ ಅವರ ಸಾಲು ಸಾಲು ಸಿನಿಮಾ ನಿರ್ಮಾಣ ಮಾಡಬೇಕಿತ್ತು? ಅಲ್ವಾ. ಪಕ್ಕದಲ್ಲಿ ಇದ್ದವನಿಗೆ ಏನಾದರೂ ಆದ್ರೆ, ಅವರೇ ಎತ್ತಿಕೊಂಡು ಆಸ್ಪತ್ರೆಗೆ ಓಡ್ತಾರೆ. ಆ ಥರಹದ ಮನುಷ್ಯ. ಅವರ ಜತೆಗೆ ಎರಡು ಸಿನಿಮಾ ಮಾಡಿದರೂ, ಆ ಎರಡರಲ್ಲೂ ಲಾಭವೇ ಸಿಕ್ಕಿದೆ. ಯಜಮಾನ ಸಿನಿಮಾದಲ್ಲಿ ಹಾಕಿದ ಬಂಡವಾಳಕ್ಕಿಂತ ಹೆಚ್ಚೇ ಸಿಕ್ಕಿತು. ಅದೇ ರೀತಿ ಕ್ರಾಂತಿ ಸಿನಿಮಾ ಒಳ್ಳೆಯ ಕಲೆಕ್ಷನ್ ಆಯ್ತು. ಕಮರ್ಷಿಯಲ್ ಸಿನಿಮಾಗಳ ಒಳಹೊರಗನ್ನೂ ಅವರಿಂದ ನಾವೂ ತಿಳಿದುಕೊಂಡೆವು. ಪುನೀತ್ ನಿಧನರಾದಾಗ, ಎರಡು ತಿಂಗಳು ಶೂಟಿಂಗ್ ಸ್ಥಗಿತಗೊಂಡ್ತು. ಬಾಡಿಗೆ, ಖರ್ಚು ಹೆಚ್ಚಾದಾಗ. ಆಗ ಜತೆ ನಿಂತವರು ದರ್ಶನ್" ಎಂದಿದ್ದಾರೆ.
ಜನ ಸುಳ್ಳು ಕಥೆ ಕಟ್ತಾರೆ..
"ನಿಮಗೆ ಏನೂ ಬೇಕೋ ಅದಕ್ಕಿಂತ ಹೆಚ್ಚಿನದನ್ನೇ ದರ್ಶನ್ ನೀಡ್ತಾರೆ. ನಮ್ಮಿಂದ ಹೆಚ್ಚೇನೂ ಅವರು ಕೇಳುವುದಿಲ್ಲ. ಬೆಳಗ್ಗೆ 5ರಿಂದ 8 ಜಿಮ್ ಮಾಡ್ತಾರೆ. ಸ್ನಾನ ಮುಗಿಸಿ ಸೆಟ್‌ಗೆ ಬಂದು ಮೇಕಪ್ ಹಾಕಿದ್ರೆ ಮುಗೀತು, ನಾವು ಬ್ರೇಕ್ ಅನ್ನೋವರೆಗೂ ಅವರು ಎಲ್ಲಿಯೂ ಕದಲುವುದಿಲ್ಲ. ಬ್ರೇಕ್ ಸಿಕ್ತು ಅಂತ ಕ್ಯಾರವಾನ್‌ನಲ್ಲಿ ಹೋಗಿ ಕೂರಲ್ಲ. ಕ್ಯಾಮರಾ ಪಕ್ಕದಲ್ಲಿಯೇ ಇರ್ತಾರೆ. ಅವರಿಗಿಂತ ಸೀನಿಯರ್ ಇದ್ರೆ, ಅವರೇ ಊಟ ಬಡಿಸ್ತಾರೆ. ಅಂಥವರ ಬಗ್ಗೆ ಜನ ಏನೆನೋ ಕಥೆ ಕಟ್ತಾರೆ ನೋಡಿ" ಎಂದಿದ್ದಾರೆ ಸುರೇಶ್.