ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಪೃಥ್ವಿ ಅಂಬಾರ್ ನಟನೆಯ ಚೌಕಿದಾರ್ ಸಿನಿಮಾಗೆ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಚಿತ್ರೀಕರಣ
ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಚೌಕಿದಾರ್ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. ಚಿತ್ರದಲ್ಲಿ ಪೃಥ್ವಿ ಅಂಬಾರ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು ಇತ್ತೀಚೆಗೆ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಚಿತ್ರತಂಡ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸಾಗಿದೆ.
ಪೃಥ್ವಿ ಅಂಬಾರ್ ನಟನೆಯ ಚೌಕಿದಾರ್ ಸಿನಿಮಾ ಟೈಟಲ್‌ನಿಂದಲೇ ಗಾಂಧಿ ನಗರದ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿಸಿದೆ. 'ರಥಾವರ' ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರತಂಡ ಈ ಸಿನಿಮಾ ಸಂಬಂಧ ಹೊಸ ಅಪ್‌ಡೇಟ್ ನೀಡಿದೆ. ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ.
ಚೌಕಿದಾರ್ ಮೊದಲ ಹಂತದ ಚಿತ್ರೀಕರಣ ಮುಕ್ತಾಯ
ಚೌಕಿದಾರ್ ಚಿತ್ರಕ್ಕೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತ್ತು. ಚಿತ್ರತಂಡ 53 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ನೈಸರ್ಗಿಕ ಸೌಂದರ್ಯಕ್ಕೆ ಖ್ಯಾತಿ ಪಡೆದಿರುವ ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಚೌಕಿದಾರ್ ಸಿನಿಮಾವನ್ನು 10 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಚೌಕಿದಾರ್ ಸಿನಿಮಾವನ್ನು ಅಷ್ಟೇ ಅದ್ಧೂರಿಯಾಗಿ ಹಾಗೂ ಸೊಗಸಾಗಿ ನಿರ್ಮಿಸಲಾಗುತ್ತಿದೆ. ಅದರಂತೆ ಚಿತ್ರತಂಡ ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಚಿತ್ರೀಕರಣ ನಡೆಸಿದೆ. ಶಿವ ರಾಜ್‌ಕುಮಾರ್ ನಟನೆಯ ಅಂಡಮಾನ್ ಸಿನಿಮಾದ ಶೂಟಿಂಗ್ ಈ ಜಾಗದಲ್ಲಿ ಆಗಿತ್ತು. ಈ ಸಿನಿಮಾ ನಂತರ ಬೇರೆ ಯಾವುದೇ ಸಿನಿಮಾ ಚಿತ್ರೀಕರಣ ಇಲ್ಲಿ ನಡೆದಿದರಲಿಲ್ಲ. ಇದೀಗ ಚೌಕಿದಾರ್ ಚಿತ್ರತಂಡ ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಸುಮಾರು 10 ದಿನಗಳ ಕಾಲ ಹಾಡು ಹಾಗೂ ಚಿತ್ರದ ಕೆಲ ದೃಶ್ಯಗಳನ್ನು ಇಲ್ಲಿ ಸೆರೆ ಹಿಡಿದಿದೆ. ಒಟ್ಟಾರೆ 53 ದಿನಗಳ ಕಾಲ ಚೌಕಿದಾರ್ ಸಿನಿಮಾದ ಮೊದಲ ಹಂತದ ಚಿತ್ರೀಕರಣ ನಡೆದಿದೆ.
ಅಂಡಮಾನ್ ನಂತರ ಈ ದ್ವೀಪದಲ್ಲಿ ಚಿತ್ರೀಕರಣವಾದ 2ನೇ ಕನ್ನಡ ಸಿನಿಮಾ
ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ನಡೆದ ಚಿತ್ರೀಕರಣದಲ್ಲಿ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ, ನಾಯಕ ಪೃಥ್ವಿ ಅಂಬಾರ್, ನಾಯಕಿ ಧನ್ಯಾ ರಾಮ್ ಕುಮಾರ್, ಹಿರಿಯ ಕಲಾವಿದರಾದ ಸಾಯಿಕುಮಾರ್, ನೃತ್ಯ ಸಂಯೋಜಕ ಮುರಳಿ ಮಾಸ್ಟರ್ ಹಾಗೂ ದಕ್ಷಿಣ ಭಾರತದ ಕೆಲವು ಟೆಕ್ನಿಷಿಯನ್‌ಗಳು ಭಾಗಿಯಾಗಿದ್ದರು. ಪೃಥ್ವಿ ಅಂಬಾರ್ ಇದುವರೆಗೂ ಲವರ್ ಬಾಯ್ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಈ ಚಿತ್ರದಲ್ಲಿ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಪೃಥ್ವಿ ಅಂಬಾರ್ ಅವರನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಆದ್ದರಿಂದ ಚೌಕಿದಾರ್ ಚಿತ್ರದಲ್ಲಿ ಪೃಥ್ವಿ ಅಂಬಾರ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಕಥಾಹಂದರವನ್ನು ಪೃಥ್ವಿ ಆಯ್ಕೆ ಮಾಡಿಕೊಂಡಿದ್ದು, ಹೊಸ ರೂಪದಲ್ಲಿ ಸಿನಿಮಾಭಿಮಾನಿಗಳ ಮುಂದೆ ಬರಲಿದ್ದಾರೆ.
'ಚೌಕಿದಾರ್' ಚಿತ್ರಕ್ಕೆ ಕಲ್ಲಹಳ್ಳಿ ಚಂದ್ರಶೇಖರ್ ಬಂಡವಾಳ ಹೂಡಿದ್ದಾರೆ. ಚಿತ್ರದ ಹಾಡುಗಳಿಗೆ ಸಚಿನ್ ಬಸ್ರೂರು ಸಂಗೀತವಿದ್ರೆ. ವಿ. ನಾಗೇಂದ್ರ ಪ್ರಸಾದ್ ಹಾಗೂ ಸಿಂಗಾರ ಸಿರಿಯೇ ಖ್ಯಾತಿಯ ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ. ಎಲ್ಲವೂ ಅಂದುಕೊಂಡಂತೆ ಚಿತ್ರೀಕರಣ ಮುಗಿದರೆ ಈ ಡಿಸೆಂಬರ್‌ನಲ್ಲಿ ಸಿನಿಮಾ ತೆರೆ ಕಾಣುವ ಸಾಧ್ಯತೆ ಇದೆ. ಈ ಸಿನಿಮಾ ಹೊರತುಪಡಿಸಿ ಪೃಥ್ವಿ ಅಂಬಾರ್ ಭುವನಮ್ ಗಗನಮ್ ಹಾಗೂ ಲೈಫ್ ಇಸ್ ಬ್ಯೂಟಿಫುಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.