ಪುನೀತ್ ರಾಜ್‌ಕುಮಾರ್ ಆಪ್ತರಿಂದ ರತ್ನ ಚಿತ್ರದ ಹಾಡುಗಳು ಬಿಡುಗಡೆ; ಸಿನಿಮಾದ ಕಥೆಯೊಳಗೂ ಅಪ್ಪು ಅಭಿಮಾನ
ರತ್ನ ಸಿನಿಮಾದ ಹಾಡುಗಳನ್ನು ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಆಪ್ತರು ಬಿಡುಗಡೆ ಮಾಡಿದ್ದಾರೆ. "ಅಪ್ಪು" ವೆಂಕಟೇಶ್, ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು, ಪುನೀತ್ ಅವರ ಅಂಗರಕ್ಷಕರಾಗಿದ್ದ ಚಲಪತಿ, ಹುಬ್ಳಳಿಯ ರಘುಪತಿ ಹಾಗೂ ಮಾರುತಿ ಅವರು "ರತ್ನ" ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ರತ್ನ ಸಿನಿಮಾ ಏಪ್ರಿಲ್ 19ರಂದು ಬಿಡುಗಡೆಯಾಗಲಿದೆ.
ಬೆಂಗಳೂರು: ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ "ರತ್ನ" ಚಿತ್ರದ ಹಾಡುಗಳು ಆನಂದ್ ಆಡಿಯೋ ಮೂಲಕ ಇತ್ತೀಚಿಗೆ ಬಿಡುಗಡೆಯಾಯಿತು. ರತ್ನ ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿವೆ. ಈ ಐದು ಹಾಡುಗಳಲ್ಲಿ ಒಂದೊಂದನ್ನು ದಿವಂಗತ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು, ಹತ್ತಿರದ ಒಡನಾಡಿಗಳು ರಿಲೀಸ್ ಮಾಡಿದ್ದಾರೆ. "ಅಪ್ಪು" ವೆಂಕಟೇಶ್, ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು, ಪುನೀತ್ ಅವರ ಅಂಗರಕ್ಷಕರಾಗಿದ್ದ ಚಲಪತಿ, ಹುಬ್ಬಳ್ಳಿ ರಘುಪತಿ ಹಾಗೂ ಮಾರುತಿ ಹಾಡುಗಳನ್ನು ರಿಲೀಸ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳು, ಒಡನಾಡಿಗಳು ದಿವಂಗತ ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡು ಭಾವುಕರಾದರು. ಪುನೀತ್ ರಾಜ್‌ಕುಮಾರ್ ಅಭಿಮಾನದ ಕಥೆಯಿರುವ ಈ ಸಿನಿಮಾವನ್ನು ತಪ್ಪದೇ ನೋಡಿ ಎಂದು ಅವರೆಲ್ಲರೂ ವಿನಂತಿಸಿದ್ದಾರೆ.
ಏಪ್ರಿಲ್ 19ರಂದು ರತ್ನ ಸಿನಿಮಾ ಬಿಡುಗಡೆ
"ದಿವಂಗತ ಪುನೀತ್ ರಾಜಕುಮಾರ್ ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಈ ಸಿನಿಮಾ ಮಾಡಲು ಅಪ್ಪು ಅವರ ಒಳ್ಳೆಯ ಗುಣಗಳೇ ನಮಗೆ ಸ್ಪೂರ್ತಿ. ಜನರು ಅವರನ್ನು ಎಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ಈ ಸಿನಿಮಾ ನೋಡಬೇಕು. ಇದು ಅಪ್ಪು ಅಭಿಮಾನಿಗೆ ಸಂಬಂಧಪಟ್ಟ ಕಥೆಯಿರುವ ಸಿನಿಮಾ. ಈ ಚಿತ್ರದ ಹಾಡುಗಳನ್ನು ಅಪ್ಪು ಒಡನಾಡಿಗಳ ಕೈಯಲ್ಲಿ ಬಿಡುಗಡೆ ಮಾಡಬೇಕೆಂಬ ಹಂಬಲ ನನಗಿತ್ತು. ಈ ಹಾಡುಗಳನ್ನು ರಿಲೀಸ್ ಮಾಡಿದ್ದಕ್ಕೆ ನಿಮಗೆ ಧನ್ಯವಾದ. ಈ ಹಾಡುಗಳಿಗೆ ಸತೀಶ್ ಬಾಬು ಸಂಗೀತ ನಿರ್ದೇಶನವಿದೆ. ರತ್ನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ನೋಡಿ ಪ್ರೋತ್ಸಾಹಿಸಿ" ಎಂದು ರತ್ನ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕ ಬಸವರಾಜ್ ಬಳ್ಳಾರಿ ಹೇಳಿದ್ದಾರೆ.
ರತ್ನ ಸಿನಿಮಾದಲ್ಲಿ ನಾಯಕನಾಗಿ ವರ್ಧನ್ ನಟಿಸಿದ್ದಾರೆ. ನಾಗೇಂದ್ರ ಅರಸ್, ನಟ ಅಮಿತ್ ರಾವ್, ವಿತರಕ ವಿಜಯ್ ಕುಮಾರ್ ಹಾಗೂ ಸಹ ನಿರ್ಮಾಪಕರಾದ ಮಂಜುನಾಥ್,ಕಲ್ಕೆರೆ ರಾಘವೇಂದ್ರ ಕರೂರ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ಹರ್ಷಲ ಹನಿವರ್ಧನ್, ಆನಂದ್ ಅಪ್ಪು, ಬಾಲರಾಜ್ ಒಡೆಯರ್, ನಾಗೇಂದ್ರ ಅರಸ್, ಅಮಿತ್ ರಾವ್,ವಿಜಯ್ ಚಂಡೂರ್ ಮುಂತಾದವರು ನಟಿಸಿದ್ದಾರೆ. ತಾರಬಳಗದಲ್ಲಿ ಮಹೇಶ್ ಬಾಬು, ಸಾರಿಕಮ್ಮ, ರಾಣಿ ಬಸವರಾಜ್, ಸುಚಿತ್ ಚೌವ್ಹಾಣ್, ರಾಮು ಕರೂರ್, ಮಂಜು ದೈವಜ್ಞ, ಜಗದೀಶ್ ಕೊಪ್ಪ ಮುಂತಾದವರು ಇದ್ದಾರೆ.