Puneeth Rajkumar: ಮಗಳಿಂದ ಅಪ್ಪುಗೆ ಪ್ರಿಯವಾದ ಅಡುಗೆಯ ನೈವೇದ್ಯ; ರಾಜ್ ಕುಟುಂಬದಿಂದ ಸಮಾಧಿಗೆ ವಿಶೇಷ ಪೂಜೆ
Puneeth Rajkumar Death Anniversary: ಕಂಠೀರವ ಸ್ಟುಡಿಯೋದಲ್ಲಿ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯದ ರೂಪದಲ್ಲಿ ಖಾದ್ಯಗಳನ್ನು ಅರ್ಪಿಸಿದರು. ಇತ್ತ ನೆಚ್ಚಿನ ನಟನ ಸಮಾಧಿ ವೀಕ್ಷಣೆಗೆ ರಾಜ್ಯದ ಹಲವು ಕಡೆಗಳಿಂದ ಸಾವಿರಾರು ಅಭಿಮಾನಿಗಳೂ ಆಗಮಿಸಿದ್ದರು.
Puneeth Rajkumar: ಇಂದು ಅ. 29. ಕರುನಾಡಿನ ಕರ್ನಾಟಕ ರತ್ನ, ಡಾ. ಪುನೀತ್ ರಾಜ್‌ಕುಮಾರ್ ಅವರ ಎರಡನೇ ಪುಣ್ಯ ಸ್ಮರಣೆ. ಈ ನಿಮಿತ್ತ, ಕಂಠೀರವ ಸ್ಟುಡಿಯೋದಲ್ಲಿನ ಪುನೀತ್ ಅವರ ಸಮಾಧಿ ಬಳಿ ಅವರ ಅಪಾರ ಅಭಿಮಾನಿ ಬಳಗವೇ ನೆರೆದಿದೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಸಮಾಧಿಗೆ ನಮಸ್ಕರಿಸಿ, ನೆಚ್ಚಿನ ನಟನಿಗೆ ನಮಿಸುತ್ತಿದ್ದಾರೆ.
ಬೆಳಗಿನಿಂದಲೇ ಸ್ಮಾರಕದ ಕಡೆಗೆ ಆಗಮಿಸಿದ ಸಾವಿರಾರು ಅಭಿಮಾನಿಗಳು ಸರತಿಯಲ್ಲಿ ಆಗಮಿಸಿ ಸಮಾಧಿಯ ದರ್ಶನ ಮಾಡಿದರು. ಇತ್ತ ಡಾ. ರಾಜ್‌ಕುಮಾರ್ ಕುಟುಂಬದವರೂ ಪುನೀತ್ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಗಳು ಧೃತಿ ಅಪ್ಪ ಪುನೀತ್‌ಗೆ ಇಷ್ಟವಾದ ಸಸ್ಯಾಹಾರದ ಜತೆಗೆ ಮಾಂಸಾಹಾರ ಖಾದ್ಯಗಳನ್ನು ನೈವೇದ್ಯದ ರೂಪದಲ್ಲಿ ಇಟ್ಟು ನಮಸ್ಕರಿಸಿದರು.
ರಾಘವೇಂದ್ರ ರಾಜ್‌ಕುಮಾರ್, ಪುತ್ರರಾದ ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್, ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಕ್ಕಳಾದ ವಂದಿತಾ ಮತ್ತು ಧೃತಿ ಅಪ್ಪನ ಎರಡನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದರು.
ಬಂದ ಅಭಿಮಾನಿಗಳಿಗೆ ಊಟದ ವ್ಯವಸ್ಥೆ
ಕಂಠೀರವ ಸ್ಟುಡಿಯೋಕ್ಕೆ ಪುನೀತ್ ಸಮಾಧಿ ವೀಕ್ಷಣೆಗೆ ಆಗಮಿಸುವ ಅಭಿಮಾನಿಗಳಿಗಾಗಿಯೇ ಊಟದ ವ್ಯವಸ್ಥೆ ಮಾಡಲಾಗಿದೆ. ಸರಿಸುಮಾರು, ಇಂದು ರಾಜ್ಯದ ಬೇರೆ ಬೇರೆ ಮೂಲೆಯಿಂದ ಒಂದು ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ಹಿನ್ನೆಲೆಯಲ್ಲಿ ಬಂದ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೆಳಗಿನ ಉಪಹಾರಕ್ಕೆ ಪಲಾವ್, ಕೇಸರಿಬಾತ್ ಮಾಡಲಾಗಿದೆ. ಮಧ್ಯಾಹ್ನಕ್ಕೂ ಪಲಾವ್ ಇರಲಿದೆ.
ಅಪ್ಪು ನೆನಪಲ್ಲಿ ವಿವಿಧ ಕಾರ್ಯಕ್ರಮ
ಪುನೀತ್ ಎರಡನೇ ಪುಣ್ಯ ಸ್ಮರಣೆ ಪ್ರಯುಕ್ತ ಬೆಂಗಳೂರಿನ ರಾಜಾಜಿನಗರದಲ್ಲಿ ಕ್ಯಾಡ್‌ನೆಸ್ಟ್ ಎಂಬ ಸಂಸ್ಥೆಯೊಂದು ಬೃಹತ್ ಉದ್ಯೋಗಮೇಳ ಆಯೋಜಿಸಿದೆ. ಕ್ಯಾಡ್‌ನೆಸ್ಟ್ ರಾಜಾಜಿನಗರ ಶಾಖೆಯಲ್ಲಿ ಪವರ್‌ಸ್ಟಾರ್ ಉದ್ಯೋಗಮೇಳ ನಡೆಯಲಿದೆ. ಕಳೆದ ವರ್ಷವೂ ಈ ಸಂಸ್ಥೆ ಉದ್ಯೋಗ ಮೇಳ ಆಯೋಜಿಸಿತ್ತು. ಇದೇ ರೀತಿ, ಕರ್ನಾಟಕದ ವಿವಿಧೆಡೆ ಅಪ್ಪು ನೆನಪಲ್ಲಿ ರಕ್ತದಾನ, ಅನ್ನದಾನ, ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಅಪ್ಪು ಅಭಿಮಾನಿಗಳು ಆಯೋಜಿಸಿದ್ದಾರೆ.
ಜೀ ಕನ್ನಡದಲ್ಲಿ ಗಂಧದ ಗುಡಿ
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಪುನೀತ್ ಆಗಿಯೇ ಕಾಣಿಸಿಕೊಂಡ, ಮೊದಲ ಸಾಕ್ಷ್ಯಚಿತ್ರ ‘ಗಂಧದ ಗುಡಿ’̤ ಕಳೆದ ವರ್ಷದ ಅಕ್ಟೋಬರ್ 28ರಂದು ಅಂದರೆ, ಪುನೀತ್ ಮೊದಲ ಪುಣ್ಯಸ್ಮರಣೆ ನಿಮಿತ್ತ ಈ ಚಿತ್ರ ಬಿಡುಗಡೆ ಆಗಿತ್ತು. ನಿರ್ದೇಶಕ ಅಮೋಘ ವರ್ಷ ಅವರ ನಿರ್ದೇಶನಕ್ಕೂ ಮೆಚ್ಚುಗೆ ಸಿಕ್ಕಿತ್ತು. ಅದಾದ ಬಳಿಕ ಅಮೆಜಾನ್ ಪ್ರೈಂ ಒಟಿಟಿಯಲ್ಲಿಯೂ ಸ್ಟ್ರೀಮ್ ಆಗಿ ಯಶಸ್ಸು ಪಡೆದುಕೊಂಡಿತ್ತು. ಇದೀಗ ಇದೇ ಸಾಕ್ಷ್ಯಚಿತ್ರ ಜೀ ಕನ್ನಡದಲ್ಲಿ ಇಂದು ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ.