Anjani Putra: ಪುನೀತ್ ರಾಜ್‌ಕುಮಾರ್- ರಶ್ಮಿಕಾ ಮಂದಣ್ಣ ನಟನೆಯ ಅಂಜನಿಪುತ್ರ ಮತ್ತೆ ರಿಲೀಸ್; ಮೇ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ
ದಿವಂಗತ ಪುನೀತ್ ರಾಜ್‌ಕುಮಾರ್ ಮತ್ತು ಟಾಲಿವುಡ್ ನಟಿ ರಶ್ಮಿಕಾ ಮಂದಣ್ಣ ನಟನೆಯ ಅಂಜನಿ ಪುತ್ರ ಸಿನಿಮಾ ಮೇ 10ರಂದು ಮತ್ತೆ ಬಿಡುಗಡೆಯಾಗಲಿದೆ. ಸ್ಯಾಂಡಲ್‌ವುಡ್‌ನಲ್ಲಿ ಚುನಾವಣಾ ಸಮಯದಲ್ಲಿ ಹೊಸ ಸಿನಿಮಾಗಳು ಕಡಿಮೆ ಸಂಖ್ಯೆಯಲ್ಲಿ ಬಿಡುಗಡೆಯಾಗುತ್ತಿವೆ. ಈ ಸಮಯದಲ್ಲಿ ಅಪ್ಪು ಸಿನಿಮಾವನ್ನು ಮರುಬಿಡುಗಡೆ ಮಾಡಲಾಗುತ್ತಿದೆ.

ಬೆಂಗಳೂರು: ಈ ಚುನಾವಣಾ ಸಮಯದಲ್ಲಿ ಹೊಸ ಸಿನಿಮಾಗಳ ಬಿಡುಗಡೆಗೆ ಸಿನಿಮಾ ತಯಾರಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಇದೇ ಸಮಯದಲ್ಲಿ ಅಪ್ಪು ಸಿನಿಮಾವೊಂದನ್ನು ಮರುಬಿಡುಗಡೆ ಮಾಡಲಾಗುತ್ತಿದೆ. ಇದೇ ಮೇ 10ರಂದು ಪುನೀತ್ ರಾಜ್‌ಕುಮಾರ್ ನಟನೆಯ ಅಂಜನಿಪುತ್ರ ಸಿನಿಮಾ ಮರುಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಮೂಲದ ಟಾಲಿವುಡ್ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ನಟನೆಯ ಈ ಚಿತ್ರ 2017ರ ಡಿಸೆಂಬರ್ 21ರಂದು ರಿಲೀಸ್ ಆಗಿತ್ತು. ಸುಮಾರು ಏಳು ವರ್ಷಗಳ ಬಳಿಕ ಈ ಚಿತ್ರವನ್ನು ಮತ್ತೆ ಬಿಡುಗಡೆ ಮಾಡಲಾಗುತ್ತಿದೆ. ಈ ಮೂಲಕ ಪುನೀತ್ ಅಭಿಮಾನಿಗಳಿಗೆ ಚಿತ್ರತಂಡ ಸಿಹಿಸುದ್ದಿ ನೀಡಿದೆ. ಎಂಎನ್‌ಕೆ ಮೂವಿಸ್ ಮೂಲಕ ಎಂಎನ್ ಕುಮಾರ್ ಅಂಜನಿಪುತ್ರ ಸಿನಿಮಾ ನಿರ್ಮಿಸಿದ್ದಾರೆ.
ಈ ಹಿಂದೆಯೂ ಅಪ್ಪು ಅಭಿನಯದ ಹಲವು ಸಿನಿಮಾಗಳು ಮರುಬಿಡುಗಡೆಯಾಗಿದ್ದವು. ಪುನೀತ್ ಅಭಿನಯದ ಜಾಕಿ ಸಿನಿಮಾ ಮರುಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದೀಗ ಅಂಜನಿಪುತ್ರದ ಸರದಿ. ಮೇ 10ರಂದು ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಅಂಜನಿಪುತ್ರವನ್ನು ರಿರಿಲೀಸ್ ಮಾಡಲಾಗುವುದು ಎಂದು ಅಂಜನಿಪುತ್ರ ನಿರ್ಮಾಪಕರಾದ ಎಂಎನ್ ಕುಮಾರ್ ತಿಳಿಸಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಶ್ಮಿಕಾ ಸಿನಿಜಗತ್ತಿಗೆ ಎಂಟ್ರಿ ನೀಡಿದ್ದರು. ಇದಾದ ಬಳಿಕ ಕೆಲವು ಕನ್ನಡ ಸಿನಿಮಾಗಳಲ್ಲಿ ತಮ್ಮ ಅದೃಷ್ಟಪರೀಕ್ಷೆ ಮಾಡಿದ್ದರು. ಅಪ್ಪು ಜತೆ ಅಂಜನಿಪುತ್ರ ಸಿನಿಮಾದಲ್ಲಿ ನಟಿಸಿದ್ದರು. ಇದಾದ ಬಳಿಕ ಟಾಲಿವುಡ್‌ನಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದ ರಶ್ಮಿಕಾ ಅಲ್ಲಿಯೇ ಗಟ್ಟಿಯಾಗಿ ನೆಲೆಯೂರಿದರು.
ಅಂಜನಿಪುತ್ರ ಸಿನಿಮಾಕ್ಕೆ ಎ ಹರ್ಷ ಆಕ್ಷನ್‌ಕಟ್ ಹೇಳಿದ್ದಾರೆ. ಪುನೀತ್, ರಶ್ಮಿಕಾ ಮಾತ್ರವಲ್ಲದೆ ಪಿ. ರವಿಶಂಕರ್, ರಮ್ಯಾ ಕೃಷ್ಣನ್, ಮುಖೇಶ್ ತಿವಾರಿ ಮತ್ತು ಚಿಕ್ಕಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ರವಿಬಸ್ರೂರ್ ಸಂಗೀತ, ಸ್ವಾಮಿ ಜೆ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನವಿದೆ. ಇದು ತಮಿಳಿನ ಪೂಜಾಯಿ ಸಿನಿಮಾದ ರಿಮೇಕ್.
ಅಂಜನಿಪುತ್ರವು ಕೌಟುಂಬಿಕ ಚಲನಚಿತ್ರ. ತಂದೆ ಮೃತಪಟ್ಟ ಬಳಿಕ ನಾಯಕ ತಂದೆಯ ರಾಜ್‌ಗ್ರೂಪ್‌ಗೆ ಮಾಲೀಕರಾಗುತ್ತಾರೆ. ನಾಯಕ ಮನೆ ಬಿಟ್ಟು ಹೊರಕ್ಕೆ ಹೋಗಬೇಕಾಗುತ್ತದೆ. ಮನೆಯಿಂದ ಹೊರಕ್ಕೆ ಹಾಕಲ್ಪಟ್ಟ ನಾಯಕನ ರಾಜಮನೆತನದ ಹಿನ್ನಲೆ ನಾಯಕಿಗೆ ತಿಳಿದಿರುವುದಿಲ್ಲ. ಬಳಿಕ ತನ್ನ ಕುಟುಂಬದ ಪುನರ್‌ಮಿಲನ, ಪ್ರೇಮಕಥೆ ಇತ್ಯಾದಿಗಳು ಮೂಲಕ ಅಂಜನಿಪುತ್ರ ಪ್ರೇಕ್ಷಕರನ್ನು ಸೆಳೆದಿದೆ. ಈ ಸಿನಿಮಾದ ನಾಯಕ ವಿರಾಜ್ ಆಗಿ ಪುನೀತ್ ರಾಜ್‌ಕುಮಾರ್ ನಟಿಸಿದ್ದಾರೆ. ನಾಯಕನ ತಾಯಿ ಅಂಜನಾದೇವಿಯಾಗಿ ರಮ್ಯಾ ಕೃಷ್ಣನ್, ವಿರಾಜ್‌ನ ಪ್ರೇಮಿ ಗೀತಾಳ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.
ಅಂಜನಿಪುತ್ರ ಸಿನಿಮಾದ ಹಾಡುಗಳು
ದಿವಂಗತ ಪುನೀತ್ ರಾಜ್‌ಕುಮಾರ್ ನಟನೆಯ ಅಂಜನಿಪುತ್ರ ಸಿನಿಮಾದಲ್ಲಿ ಮಾಗರಿಯ, ಗೀತಾ, 2334 ಶಿಲ್ಲೆ ಹೊಡಿ, ಚಂದ ಚಂದ, ಸಾಹುಕಾರಾ ಮುಂತಾದ ಹಾಡುಗಳಿವೆ. ರವಿಬಸ್ರೂರು, ಸಚಿನ್ ಬಸ್ರೂರು, ವಿಜಯ್ ಪ್ರಕಾಶ್, ಪುನೀತ್ ರಾಜ್‌ಕುಮಾಆರ್, ಚಂದನ್‌ಶೆಟ್ಟಿ, ಅನುರಾಧ ಭಟ್ ಮುಂತಾದವರು ಅಂಜನಿಪುತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.
