Puneeth Spandana Death: ರಾಜ್ ಕುಟುಂಬವನ್ನು ಅಲುಗಾಡಿಸಿದ ಅಕಾಲಿಕ ಸಾವುಗಳು; ಕೇರಳ ತಂತ್ರಿಗಳ ಬಳಿ ಅಷ್ಟಮಂಗಲ ಪ್ರಶ್ನೆಗೆ ನಿರ್ಧಾರ
ರಾಜ್ ಕುಟುಂಬದಲ್ಲಿನ ಅಕಾಲಿಕ ಸಾವುಗಳ ಹಿನ್ನೆಲೆಯಲ್ಲಿ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಕೇರಳದ ತಂತ್ರಿಗಳ ಮೊರೆ ಹೋಗಲು ನಿರ್ಧರಿಸಿದ್ದಾರೆ. ಅಷ್ಟಮಂಗಳ ಪ್ರಶ್ನೆಯನ್ನು ಮುಂದಿಟ್ಟು ಪರಿಹಾರ ಕೇಳಲಿದ್ದಾರೆ.
Spandana Vijay Death: ಡಾ. ರಾಜ್ ಕುಟುಂಬದಲ್ಲಿನ ಇತ್ತೀಚಿನ ಕೆಲ ವರ್ಷಗಳಲ್ಲಿ ಘಟಿಸಿದ ಘಟನೆಗಳು ರಾಜ್ಯದ ಜನತೆಯ ಮನ ನೋಯಿಸಿವೆ. ಡಾ. ರಾಜ್‌ಕುಮಾರ್ ಕುಟುಂಬದಲ್ಲಿ ಪುನೀತ್ ರಾಜ್‌ಕುಮಾರ್ ಅಕಾಲಿಕ ಸಾವನ್ನಪ್ಪಿ ದೊಡ್ಡ ನೋವನ್ನೇ ಬಿಟ್ಟು ಹೋಗಿದ್ದರು. ಇದೀಗ ಇದೇ ಕುಟುಂಬದಲ್ಲಿ ಸ್ಪಂದನಾ ವಿಜಯ್ ರಾಘವೇಂದ್ರ ಸಹ ಹೃದಯಾಘಾತದಿಂದ ಅಕಾಲಿಕ ಸಾವನ್ನಪ್ಪಿದ್ದಾರೆ. ರಾಜ್ ಕುಟುಂಬಕ್ಕೇ ಏನೀ ಶಿಕ್ಷೆ? ಎಂಬಂತಹ ಪ್ರಶ್ನೆಗಳೂ ಇದೀಗ ಎಲ್ಲೆಡೆ ಕೇಳಲಾರಂಭಿಸಿವೆ. ಇದೀಗ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಈ ಬಗ್ಗೆ ಮೌನ ಮುರಿದಿದ್ದಾರೆ.
ಡಾ. ರಾಜ್‌ಕುಮಾರ್ ಈಡಿಗ ಸಮುದಾಯಕ್ಕೆ ಸೇರಿದವರು. ಈಡಿಗ ಸಂಪ್ರದಾಯದಂತೆಯೇ ಸ್ಪಂದನಾ ವಿಜಯ್ ರಾಘವೇಂದ್ರ ಅವರ ಅಂತ್ಯ ಸಂಸ್ಕಾರವೂ (ಆ 09) ಬುಧವಾರ ನೆರವೇರಿದೆ. ಈಗ ರಾಜ್ ಕುಟುಂಬದಲ್ಲಿ ಘಟಿಸುತ್ತಿರುವ ಈ ಅಕಾಲಿಕ ಸಾವು ನೋವುಗಳ ಬಗ್ಗೆ ಕೇರಳ ತಂತ್ರಿಗಳ ಬಳಿ ಪ್ರಶ್ನೆಯನ್ನು ಮುಂದಿಡಲು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಮುಂದಡಿಯಿಟ್ಟಿದ್ದಾರೆ. ಈ ಬಗ್ಗೆ ಈಗಾಗಲೇ ಶಿವರಾಜ್‌ಕುಮಾರ್ ಅವರ ಬಳಿಯೂ ಮಾತನಾಡಿದ್ದು, ಪರಿಹಾರಕ್ಕೆ ಅಷ್ಟಮಂಗಲ ಪ್ರಶ್ನೆಯ ಮೊರೆಹೋಗಲು ನಿರ್ಧರಿಸಿದ್ದಾರೆ.
‘ಏಷ್ಯಾನೆಟ್ ಸುವರ್ಣ’ ಸುದ್ದಿವಾಹಿನಿ ವರದಿಯ ಪ್ರಕಾರ, ಕೇರಳದ ತಂತ್ರಿಗಳ ಬಳಿ ಈ ಅಕಾಲಿಕ ಸಾವಿನ ಬಗ್ಗೆ ಅಷ್ಟಮಂಗಲ ಪ್ರಶ್ನೆಯನ್ನು ಹಾಕಲಿದ್ದಾರಂತೆ ಪ್ರಣವಾನಂದ ಸ್ವಾಮೀಜಿ. ಈ ಕುರಿತು ಶಿವರಾಜ್‌ಕುಮಾರ್ ಅವರ ಗಮನಕ್ಕೂ ತಂದಿದ್ದೂ, ಸದ್ಯ ಸ್ಪಂದನಾ ಅವರ 11 ದಿನದ ತಿಥಿ ಕಾರ್ಯ ಮುಗಿದ ಬಳಿಕ ಒಂದು ಹಂತದ ಚರ್ಚೆ ಮಾಡಲಿದ್ದಾರೆ. ಅದಾದ 41ದಿನಕ್ಕೆ ಕೇರಳದ ಉನ್ನತ ತಂತ್ರಿಗಳನ್ನು ಸಂಪರ್ಕಿಸಿ ರಾಜ್ ಕುಟುಂಬದಲ್ಲಿ ಸಂಭವಿಸುತ್ತಿರುವ ಈ ಅಕಾಲಿಕ ಸಾವು ನೋವಿನ ಬಗ್ಗೆ ಪ್ರಶ್ನೆಯಿಡಲಿದ್ದಾರೆ. ಅದರ ಮುಂದಾಳತ್ವವನ್ನು ತಾವೇ ವಹಿಸಿಕೊಳ್ಳುವುದಾಗಿಯೂ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.
ಪತ್ನಿಗೆ ಮತ್ತೆ ಮುತ್ತೈದೆ ಭಾಗ್ಯ ನೀಡಿದ ವಿಜಯ್
ಈಡಿಗ ಸಂಪ್ರದಾಯದಂತೆ ಬುಧವಾರ ಸ್ಪಂದನಾ ವಿಜಯ್ ರಾಘವೇಂದ್ರ ಅವರ ಅಂತ್ಯ ಸಂಸ್ಕಾರ ಬೆಂಗಳೂರಿನ ಶ್ರೀರಾಮ್‌ಪುರದ ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿದೆ. ಸ್ಪಂದನಾ ಅವರದ್ದು ಮುತ್ತೈದೆ ಸಾವಾದ ಹಿನ್ನೆಲೆಯಲ್ಲಿ, ಪತಿ ವಿಜಯ್ ರಾಘವೇಂದ್ರ ಅವರಿಂದ ಮತ್ತೊಮ್ಮೆ ತಾಳಿ ಕಟ್ಟಿಸಿ ಕೊನೆಯದಾಗಿ ಮುಖ ನೋಡಲು ಅವಕಾಶ ಮಾಡಿಕೊಟ್ಟು, ಅಗ್ನಿ ಸ್ಪರ್ಶ ಮಾಡಲಾಯಿತು. ಪುತ್ರ ಶೌರ್ಯ ಅಮ್ಮನ ಕೊನೇ ಕಾರ್ಯಗಳನ್ನು ನೆರವೇರಿಸಿದ.
ಹೃದಯ ಗೆದ್ದ ಕುಟುಂಬಕ್ಕೆ ಹೃದಯವೇ ವೈರಿ..
ರಾಜ್‌ಕುಮಾರ್ ಕುಟುಂಬಕ್ಕೆ ಜೆನಿಟಿಕಲ್ ಆಗಿ ಹೃದಯ ಸಮಸ್ಯೆ ಇದೆ. 2006ರಲ್ಲಿ ಡಾ. ರಾಜ್‌ಕುಮಾರ್ ಸಹ ಏಪ್ರಿಲ್ 12ರಂದು ಹೃದಯಾಘಾತದಿಂದಲೇ ನಿಧನರಾಗಿದ್ದರು. ಅಣ್ಣಾವ್ರ ಮೂವರು ಮಕ್ಕಳಿಗೂ ಇದೇ ಹೃದಯದ ಕಾಯಿಲೆಯಿತ್ತು. ಕೇವಲ 27ನೇ ವಯಸ್ಸಿನಲ್ಲಿಯೇ ರಾಘಣ್ಣ ಆ್ಯಂಜಿಯೋಪ್ಲಾಸ್ಟಿ ಟ್ರೀಟ್‌ಮೆಂಟ್ ಪಡೆದಿದ್ದರು. ಅದಾದ ಬಳಿಕ ಶಿವರಾಜ್‌ಕುಮಾರ್ ಸಹ ಲಘು ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ಸುಧಾರಿಸಿಕೊಂಡಿದ್ದಾರೆ. 2015ರಲ್ಲಿ ಶಿವಣ್ಣನಿಗೂ ಮೈಲ್ಡ್ ಹಾರ್ಟ್ ಅಟ್ಯಾಕ್ ಆಗಿತ್ತು. ಚಿಕಿತ್ಸೆ ಬಳಿಕ ಶಿವಣ್ಣ ಸುಧಾರಿಸಿಕೊಂಡರು. ವಿದೇಶದಲ್ಲಿಯೂ ಟ್ರೀಟ್‌ಮೆಂಟ್ ತೆಗೆದುಕೊಂಡು ಚೇತರಿಸಿಕೊಂಡರು.
ಮನರಂಜನೆ ಕುರಿತ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಭಾಗ