ವಿಚ್ಛೇದಿತ ನಿರ್ಮಾಪಕನನ್ನು ವರಿಸಲಿದ್ದಾರೆ ‘ರಣವಿಕ್ರಮ’ ನಟಿ ಅಂಜಲಿ!; ಟಾಲಿವುಡ್ ಅಂಗಳದಲ್ಲಿ ಹೀಗೊಂದು ಗುಸು ಗುಸು
ಬಹುಭಾಷಾ ನಟಿ ಅಂಜಲಿ ತಮ್ಮ ಸಿನಿಮಾ ಜೀವನದ ಜತೆಗೆ ವೈಯಕ್ತಿಕ ವಿಚಾರವಾಗಿಯೂ ಆಗಾಗ ಸುದ್ದಿಯ ಮುನ್ನೆಲೆಗೆ ಬರುತ್ತಿರುತ್ತಾರೆ. ಈಗ ಮದುವೆ ಬಗ್ಗೆ ಮತ್ತೊಂದು ಹೊಸ ಗಾಸಿಪ್ ಸೌತ್ ಸಿನಿದುನಿಯಾದಲ್ಲಿ ಹರಿದಾಡುತ್ತಿದೆ.
Actress Anjali: ಸೆಲೆಬ್ರಿಟಿ ವಲಯದಲ್ಲಿನ ಸಣ್ಣ ಸಣ್ಣ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತವೆ. ಅದರಲ್ಲೂ ಕಾಂಟ್ರವರ್ಸಿ, ಪ್ರೀತಿ- ಪ್ರೇಮ, ಸಂಬಂಧಗಳ ಕುರಿತ ವಿಚಾರಗಳು ಹೆಚ್ಚು ಮೈಲೇಜ್ ಪಡೆದುಕೊಳ್ಳುತ್ತವೆ. ಸೌತ್ ಸಿನಿ ದುನಿಯಾದಲ್ಲಿ ತಮ್ಮ ನಟನೆ ಮೂಲಕವೇ ಎಲ್ಲರ ಗಮನ ಸೆಳೆದಿರುವ ನಟಿ ಅಂಜಲಿ, ಈಗ ಮದುವೆ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಇದೇ ವಿಚಾರಕ್ಕೆ ಸದ್ದು ಮಾಡಿದ್ದ ನಟಿಯ ಹೆಸರೀಗ ಮತ್ತೊಬ್ಬರ ಜತೆಗೆ ತಳುಕು ಹಾಕಿಕೊಂಡಿದೆ. ಈ ಸಲ ವಿಚ್ಛೇದಿತ ನಿರ್ಮಾಪಕರ ಜತೆಗೆ ಅಂಜಲಿ ಮದುವೆ ಆಗಲಿದ್ದಾರಂತೆ!
ತೆಲುಗು ಸಿನಿಮಾಗಳಲ್ಲಿ ನಟಿಸಿ, ತಮಿಳು ಚಿತ್ರರಂಗದಲ್ಲೂ ಸದ್ಯ ಸಕ್ರಿಯರಾಗಿದ್ದಾರೆ ನಟಿ ಅಂಜಲಿ. ತಮಿಳಿನಲ್ಲಿ ಅಂಗಡಿ ತೇರು, ತೂಂಗಾ ಸಿಟಿ, ವಟ್ಟಿಕುಚ್ಚಿ, ಎಂಗೆಯುಂ ಎಪೋಡುಮಿ, ಇರೈವಿ ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ಅಂಜಲಿ ನಟಿಸಿ ಗೆಲುವಿನ ಸಿಹಿಯುಂಡರು. ಈ ನಡುವೆ ಕನ್ನಡದಲ್ಲೂ ರಣವಿಕ್ರಮ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ ನಟಿಸಿ ಕರುನಾಡ ಸಿನಿಪ್ರೇಮಿಗಳ ಅಚ್ಚು ಮೆಚ್ಚಾಗಿದ್ದರು. ಸದ್ಯ ರಾಮ್ ಚರಣ್ ಜತೆಗೆ ತೆಲುಗಿನ ಗೇಮ್ ಚೇಂಜರ್ ಸಿನಿಮಾದಲ್ಲೂ ಅಂಜಲಿ ನಟಿಸುತ್ತಿದ್ದಾರೆ.
ಸಿನಿಮಾಗಳ ಜತೆಗೆ ವೈಯಕ್ತಿಕ ಜೀವನದ ಬಗ್ಗೆಯೂ ಅಂಜಲಿ ಆಗಾಗ ಸೋಷಿಯಲ್ ಮೀಡಿಯಾ ಅಂಗಳಕ್ಕೆ ಆಗಮಿಸುತ್ತಿರುತ್ತಾರೆ. ಅದರಲ್ಲೂ ಅವರ ಮದುವೆಯ ವಿಚಾರವೇ ಹೆಚ್ಚು ಪ್ರಸ್ತಾಪವಾಗಿದ್ದುಂಟು. ಈ ಹಿಂದೆ ಉದ್ಯಮಿ ಜತೆಗೆ ಮದುವೆಯಾಗಿ ವಿದೇಶದಲ್ಲೇ ನೆಲೆಸಿದ್ದಾರೆ ಎಂಬ ಸುದ್ದಿಯೂ ದೊಡ್ಡ ಸದ್ದು ಮಾಡಿತ್ತು. ಆದರೆ, ಈ ಸುದ್ದಿ ಸುಳ್ಳು ಎಂಬುದನ್ನು ಸ್ವತಃ ಅಂಜಲಿ ಸ್ಪಷ್ಟಪಡಿಸಿದ್ದರು. ಅದಾದ ಬಳಿಕ ಎಂಗೆಯುಂ ಕಣ್ಹಿಂ, ಎನಕ್ಕು ವಯ್‌ದತ್ತ ಅಡಗಲ್, ಬಲೂನ್ ಸಿನಿಮಾದಲ್ಲಿ ನಟಿಸುತ್ತಿದ್ದಾಗ ನಟ ಜೈ ಜತೆಗೂ ಪ್ರೀತಿಯಲ್ಲಿದ್ದಾರೆ ಎಂಬ ಪುಕಾರು ಗುಲ್ಲೆದ್ದಿತ್ತು. ಅದೂ ನಿಜವಾಗಲಿಲ್ಲ. ಈಗ ವಿಚ್ಛೇದಿತ ಸ್ಟಾರ್ ನಿರ್ಮಾಪಕರ ಜತೆಗೆ ಅಂಜಲಿ ಹೆಸರು ಕೇಳಿಬಂದಿದೆ.
ವಿಚ್ಛೇದಿತ ನಿರ್ಮಾಪಕರ ಜತೆಗೆ ಮದುವೆ?
ಸೋಷಿಯಲ್ ಮೀಡಿಯಾದಲ್ಲಿ ನಟಿ ಅಂಜಲಿ ಮದುವೆ ವಿಚಾರ ಗುಸು ಗುಸು ಜೋರಾಗುತ್ತಿದೆ. ಕಳೆದ ಒಂದು ವರ್ಷದಿಂದ ವಿಚ್ಛೇದಿತ ತೆಲುಗು ನಿರ್ಮಾಪಕರ ಜತೆ ಅಂಜಲಿ ಡೇಟಿಂಗ್ ಮಾಡುತ್ತಿದ್ದು, ಇನ್ನೇನು ಶೀಘ್ರದಲ್ಲೇ ಮದುವೆಯೂ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಯಾರು ನಿರ್ಮಾಪಕ? ಸದ್ಯಕ್ಕೆ ಆ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಈ ಮೊದಲಿನಂತೆಯೇ ಅಂಜಲಿ ವಿಚಾರದಲ್ಲಿ ಇದು ಕೂಡ ವದಂತಿಯೇ? ಅಥವಾ ಇದು ನಿಜವೇ? ಈ ಬಗ್ಗೆ ನಟಿಯಿಂದಲೇ ಸ್ಪಷ್ಟನೆ ಸಿಗಬೇಕಿದೆ.
ಆತನಿಂದ ಸಿನಿಮಾ ಕಡೆ ಗಮನಹರಿಸಲು ಆಗ್ತಿಲ್ಲ..
ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ಅಂಜಲಿ, “ಚಿತ್ರರಂಗದಲ್ಲಿ ವ್ಯಕ್ತಿಯೊಬ್ಬರಿಂದಾಗಿ ನನ್ನ ಸಿನಿಮಾ ವೃತ್ತಿಯತ್ತ ಗಮನ ಹರಿಸಲು ಸಾಧ್ಯವಾಗ್ತಿಲ್ಲ. ನನ್ನ ವೃತ್ತಿಗೆ ಅಡ್ಡಿಬರುವ ಸಂಬಂಧವೇ ನನಗೆ ಬೇಡ. ನನ್ನ ವೃತ್ತಿ ಜೀವನವೇ ಮುಖ್ಯ” ಎಂದು ಹೇಳಿಕೊಂಡಿದ್ದರು ಅಂಜಲಿ. ಅದರಂತೆ, ಸದ್ಯ ಹಲವು ಸಿನಿಮಾಗಳನ್ನು ಒಪ್ಪಿಕೊಂಡು, ಅತ್ತ ಕಡೆಗೇ ಹೆಚ್ಚು ದೃಷ್ಟಿಹಾಯಿಸಿದ್ದಾರೆ ಅಂಜಲಿ.