Rakshit Shetty: ಒಂದು ತಂಡವಾಗಿ ಬನ್ನಿ ಸಿನಿಮಾ ಮಾಡೋಣ; ಉತ್ತರ ಕರ್ನಾಟಕದ ಹುಡುಗ್ರುಗೆ ರಕ್ಷಿತ್ ಶೆಟ್ಟಿ ಕಡೆಯಿಂದ ಬುಲಾವ್
ನಟ ರಕ್ಷಿತ್ ಶೆಟ್ಟಿ ಕನ್ನಡ ಚಿತ್ರೋದ್ಯಮ ಬೆಳವಣಿಗೆ ಹೇಗೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಟೋಬಿ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಪ್ರತಿಭಾವಂತ ತಂಡ ಬಂದರೆ, ಆ ಭಾಷೆಯ ಸೊಗಡಿನಲ್ಲಿಯೇ ನಾನು ಸಿನಿಮಾ ಮಾಡಲು ರೆಡಿ ಎಂದಿದ್ದಾರೆ.
Rakshit Shetty: ನಟ, ನಿರ್ದೇಶಕ, ನಿರ್ಮಾಪಕ ಹೀಗೆ ಸಿನಿಮಾದ ಬಹುತೇಕ ಎಲ್ಲ ವಿಭಾಗಗಳಲ್ಲಿಯೂ ತೊಡಗಿಸಿಕೊಂಡಿರುವ ರಕ್ಷಿತ್ ಶೆಟ್ಟಿ, ಸದ್ಯ ಕನ್ನಡದ ಭರವಸೆಯ ನಟ. ಸಿನಿಮಾ ವಿಚಾರದಲ್ಲಿ ಹಲವು ಪ್ರಯತ್ನ ಮತ್ತು ಪ್ರಯೋಗ ಮಾಡುವ ಒಂದು ದೊಡ್ಡ ತಂಡವನ್ನೇ ಜತೆಗಿಟ್ಟುಕೊಂಡು, ಆ ತಂಡಕ್ಕೆ ಏನೆಲ್ಲ ಬೇಕೋ ಅದೆಲ್ಲವನ್ನು ಪೂರೈಕೆ ಮಾಡಿ, ಕಂಟೆಂಟ್ ತೆಗೆಸುತ್ತಿದ್ದಾರೆ. ಈ ನಡುವೆ ಇದೇ ರಕ್ಷಿತ್ ಶೆಟ್ಟಿ ಉತ್ತರ ಕರ್ನಾಟಕ ಭಾಗದ ಯುವಕರಿಗೆ ಬುಲಾವ್ ನೀಡಿದ್ದಾರೆ.
ರಾಜ್ ಶೆಟ್ಟಿ ನಟನೆಯ ಟೋಬಿ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಶುಕ್ರವಾರವಷ್ಟೇ ನೆರವೇರಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಹತ್ತಾರು ವಿಚಾರಗಳು ಎಲ್ಲರ ನಡುವೆ ವಿನಿಮಯವಾದವು. ಮುಂದಿನ ಸಿನಿಮಾಗಳು, ಕನ್ನಡದ ಸಿನಿಮಾಗಳು, ಪ್ಯಾನ್ ಇಂಡಿಯಾ ಪರಿಕಲ್ಪನೆ.. ಹೀಗೆ ಈ ನಡುವೆ ಕರ್ನಾಟಕದ ಚಿತ್ರೋದ್ಯಮ ಮುಂದುವರಿಯಬೇಕಾದರೆ ಏನೆಲ್ಲ ಮಾಡಬೇಕು ಎಂಬ ಬಗ್ಗೆ ರಕ್ಷಿತ್ ಶೆಟ್ಟಿ ಸಹ ಹೇಳಿಕೊಂಡರು.
ರಕ್ಷಿತ್ ಹೇಳಿದ್ದೇನು?
"ಇಂಡಸ್ಟ್ರಿ ಬೆಳೆದರೆ ಮಾತ್ರ ನಾವೆಲ್ಲರೂ ಬೆಳೆಯಲು ಸಾಧ್ಯ. ನಾವು ಯಾವ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇವೆ? ಆ ಇಂಡಸ್ಟ್ರಿ ಎಷ್ಟು ದೊಡ್ಡದು? ಅಷ್ಟೇ ನಾವು ಬೆಳೆಯೋಕಾಗುತ್ತೆ. ಆದರೆ ಈಗ ಪ್ಯಾನ್ ಇಂಡಿಯಾ ಆಗಿಬಿಟ್ಟಿದೆ. ಆದರೆ ವೇದಿಕೆ ಕೊಟ್ಟಿದ್ದು ಈ ಇಂಡಸ್ಟ್ರಿ. ಈ ಚಿತ್ರೋದ್ಯಮದಲ್ಲಿ ಮಿನಿಮಮ್ 10ರಿಂದ 15 ನಾಯಕ ನಟರು, 10ರಿಂದ 15 ನಿರ್ದೇಶಕರು ಬರಬೇಕು. ಹೀಗೆ ಆಗಬೇಕು ಎಂದರೆ ಒಬ್ಬರನ್ನೊಬ್ಬರು ಸಪೋರ್ಟ್ ಮಾಡಬೇಕು. ಆಗ ಒಳ್ಳೊಳ್ಳೆ ಸಿನಿಮಾಗಳೂ ಬರುತ್ತವೆ. ಆ ಮಾತಿಗೆ ತಕ್ಕಂತೆ ರಾಜ್ ಶೆಟ್ಟಿ ತಮ್ಮದೇ ಆದ ತಂಡ ಕಟ್ಟಿಕೊಂಡು ಸಿನಿಮಾ ಮಾಡಿದ್ದಾರೆ.
ಈ ಥರ ಕರ್ನಾಟಕದ ಮೂಲೆ ಮೂಲೆಯಿಂದಲೂ ಒಂದೊಂದು ಟೀಮ್ ಬರಬೇಕು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ತಂಡದವರೂ ಅದೇ ರೀತಿ ಮಾಡಿದ್ರು. ತಮ್ಮದೇ ಒಂದು ತಂಡ ಕಟ್ಟಿಕೊಂಡು ಗಾಡ್ ಫಾದರ್ ಇಲ್ಲದೆ ಸಿನಿಮಾ ಮಾಡಿ ಗೆದ್ದರು. ಹೊಸ ಹೊಸ ತಂಡಗಳು ಕನ್ನಡದಲ್ಲಿ ಸೃಷ್ಟಿಯಾಗಬೇಕು. ಅದೇ ರೀತಿ ನಮಗೆ ಸಾಕಷ್ಟು ಪ್ರಶ್ನೆಗಳು ಬರುತ್ತಲೇ ಇರುತ್ತವೆ. ಏಕೆ ಉತ್ತರ ಕರ್ನಾಟಕದ ಸಿನಿಮಾ ಮಾಡಲ್ಲ? ಎಂದು. ಮಾಡೋಕೆ ತುಂಬ ಇಷ್ಟ ಇದೆ. ಆದರೆ ಅಲ್ಲಿಂದ ಒಂದು ತಂಡ ಬರಬೇಕು. ನಾನು ಉತ್ತರ ಕರ್ನಾಟಕದ ಸಿನಿಮಾ ಮಾಡಬೇಕು ಅಂದರೆ ಒಂದು ವರ್ಷವಾದರೂ ನಾನು ಅಲ್ಲಿದ್ದು ಬರಬೇಕು.
ನಾನು ಅಲ್ಲಿ ಹೋದರೆ ಎಲ್ಲವನ್ನೂ ಮೊದಲಿನಿಂದ ಕಲಿಯಬೇಕಾಗುತ್ತದೆ. ಆದರೆ, ಅಲ್ಲಿನ ಒಂದು ತಂಡ, ಅಲ್ಲಿ ಹುಟ್ಟಿ ಬೆಳೆದ ತಂಡ ಬಂದರೆ, ಅದ್ಭುತವಾದ ಸಿನಿಮಾ ಮಾಡಬಹುದು. ಆ ಭಾಗದ ಬ್ಯಾಕ್‌ಡ್ರಾಪ್ ಅದ್ಭುತ. ಆ ಭಾಗದ ಸಂಸ್ಕೃತಿ ಎಲ್ಲವೂ ಸೂಪರ್. ಹಾಗಾಗಿ ಅಲ್ಲಿನ ತಂಡ ಬರುವುದಾದರೆ ನಾನು ಸಿನಿಮಾ ಮಾಡಲು ಸಿದ್ಧ. ಕರ್ನಾಟಕದ ಮೂಲೆ ಮೂಲೆಯಿಂದ ನಿರ್ದೇಶಕರು, ನಟರು ಬರಬೇಕು. ಆಗ ಮಾತ್ರ ಒಂದು ಇಂಡಸ್ಟ್ರಿ ಬೆಳೆಯಲು ಸಾಧ್ಯ" ಎಂದಿದ್ದಾರೆ ರಕ್ಷಿತ್ ಶೆಟ್ಟಿ.
ಮನರಂಜನೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಭಾಗ