ರಕ್ಷಿತ್ ಶೆಟ್ಟಿ ನಿರ್ಮಾಣದ ಇಬ್ಬನಿ ತಬ್ಬಿದ ಇಳೆಯಲಿ ಒಟಿಟಿಗೆ ಬರೋದು ಯಾವಾಗ? ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿದೆ?
ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ ಚಂದ್ರಜಿತ್ ಬೆಳ್ಳಿಯಪ್ಪ ಆಕ್ಷನ್ ಕಟ್ ಹೇಳಿದ್ದ ಇಬ್ಬನಿ ತಬ್ಬಿದ ಇಳೆಯಲಿ ಸೆಪ್ಟೆಂಬರ್ 5 ರಂದು ಚಿತ್ರಮಂದಿಗಳಲ್ಲಿ ತೆರೆ ಕಂಡಿತ್ತು. ಇದೀಗ ಈ ಸಿನಿಮಾ ಒಟಿಟಿ ಎಂಟ್ರಿ ಯಾವಾಗ ಎಂಬ ಕುತೂಹಲ ಸಿನಿಪ್ರಿಯರಿಗೆ ಕಾಡುತ್ತಿದೆ. ಸಿನಿಮಾ ಅಕ್ಟೋಬರ್ ಎರಡನೇ ವಾರದಲ್ಲಿ ಒಟಿಟಿಯಲ್ಲಿ ಪ್ರಸಾರವಾಗಬಹುದು ಎಂಬ ಮಾತು ಕೇಳಿಬರುತ್ತಿದೆ.
ಈಗ ಒಟಿಟಿ ಜಮಾನ, ಚಿತ್ರಮಂದಿರಕ್ಕೆ ಬಂದ ಸಿನಿಮಾಗಳು ಕೆಲವೇ ದಿನಗಳಲ್ಲಿ ಒಟಿಟಿಗೆ ಬರುತ್ತಿವೆ. ಇದೇ ಕಾರಣಕ್ಕೆ ಬಹಳ ಮಂದಿ ಚಿತ್ರಮಂದಿರದ ಕಡೆ ಸುಳಿಯುತ್ತಲೇ ಇಲ್ಲ. ಹೇಗಿದ್ದರೂ ಇನ್ನು ಒಂದು ತಿಂಗಳಲ್ಲೇ ಸಿನಿಮಾವನ್ನು ಒಟಿಟಿಯಲ್ಲಿ ಕುಟುಂಬದೊಂದಿಗೆ ಕುಳಿತು ನೋಡಬಹುದು ಅನ್ನೋದು ಕೆಲವರ ಅಭಿಪ್ರಾಯ. ಇದೀಗ ಕಳೆದ ತಿಂಗಳು ಬಿಡುಗಡೆಯಾದ ಮತ್ತೊಂದು ಕನ್ನಡ ಸಿನಿಮಾ ಒಟಿಟಿಗೆ ಯಾವಾಗ ಬರುತ್ತಿದೆ ಎಂಬ ಕುತೂಹಲ ಕಾಡುತ್ತಿದೆ.
ಸೆಪ್ಟೆಂಬರ್ 5 ರಂದು ತೆರೆ ಕಂಡಿದ್ದ ಚಿತ್ರ
ಇಬ್ಬನಿ ತಬ್ಬಿದ ಇಳೆಯಲಿ, ನವಿರಾದ ಪ್ರೇಮ ಕಾವ್ಯ ಸೆಪ್ಟೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ಸಿನಿಮಾಭಿಮಾನಿಗಳು ಈ ಲವ್ ಸ್ಟೋರಿ ನೋಡಿ ಖುಷಿ ಪಟ್ಟಿದ್ದರು. ಸಿನಿಮಾ ಬಿಡುಗಡೆಗೂ ಮುನ್ನ ಚಿತ್ರತಂಡ ಪೇಯ್ಡ್ ಪ್ರೀಮಿಯರ್ ಶೋ ಕೂಡಾ ಆಯೋಜಿಸಿತ್ತು. ಸಿನಿಮಾ ನೋಡಿದವರು ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಸುಮಾರು 9 ವರ್ಷಗಳ ಹಿಂದಿನ ಪ್ರಾಜೆಕ್ಟ್ ಇದು. ಅಂದು ನಿರ್ದೇಶಕ ಚಂದ್ರಜಿತ್ ರಕ್ಷಿತ್ ಶೆಟ್ಟಿ ಅವರಿಗೆ ಬ್ಲಾಗ್‌ನಲ್ಲಿ ಮೆಸೇಜ್ ಮಾಡಿ ತಮ್ಮ ಕಥೆಯನ್ನು ಕಳಿಸಿದ್ದರು. ಅದನ್ನು ಓದಿದ ರಕ್ಷಿತ್ ಶೆಟ್ಟಿ ಆಗಲೇ ಇಂಪ್ರೆಸ್ ಆಗಿದ್ದರು. ನಂತರ ಚಂದ್ರಜಿತ್ ಅವರನ್ನು ಭೇಟಿ ಮಾಡಿ ಈ ಸಿನಿಮಾ ಬಗ್ಗೆ ಚರ್ಚಿಸಿದ್ದೆ ಎಂದು ನಿರ್ಮಾಪಕ ರಕ್ಷಿತ್ ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ಹೇಳಿಕೊಂಡಿದ್ದರು.
ಅಕ್ಟೋಬರ್ ವೇಳೆಗೆ ಒಟಿಟಿ ಎಂಟ್ರಿ
ಸ್ವತ: ರಕ್ಷಿತ್ ಶೆಟ್ಟಿ ಕೂಡಾ ಸಿನಿಮಾ ನೋಡಿ ಬಹಳ ಮೆಚ್ಚಿದ್ದರು. ನಾನು ಮೂರು ಬಾರಿ ಸಿನಿಮಾ ನೋಡಿದ್ದೇನೆ. ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ವಿಹಾನ್, ಅಂಕಿತಾ ಇಬ್ಬರಿಗೂ ಖಂಡಿತ ಪ್ರಶಸ್ತಿ ಬರುತ್ತದೆ. ಇಬ್ಬರೂ ಅಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ ಎಂದು ಹೇಳಿದ್ದರು. ಸಿನಿಮಾ ಬಿಡುಗಡೆ ಆದಾಗ ಸಿನಿಪ್ರಿಯರು ಕೂಡಾ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದರು. ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡವರು ಈ ಸಿನಿಮಾ ಯಾವಾಗ ಒಟಿಟಿಗೆ ಬರಬಹುದು ಎಂದು ಕಾಯುತ್ತಿದ್ದಾರೆ. ಬಹುಶಃ ಅಕ್ಟೋಬರ್ ವೇಳೆಗೆ ಇಬ್ಬನಿ ತಬ್ಬಿದ ಇಳೆಯಲಿ ಒಟಿಟಿಗೆ ಬರಬಹುದು. ಸಿನಿಮಾ ಖರೀದಿಗೆ ಅಮೆಜಾನ್ ಪ್ರೈಂ , ಜೀ 5 ಪ್ರಯತ್ನಿಸುತ್ತಿದ್ದು ಕೆಲವೇ ದಿನಗಳಲ್ಲಿ ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ಪ್ರಸಾರವಾಗಬಹುದು ಎಂದು ತಿಳಿಯಲಿದೆ.
ರಕ್ಷಿತ್ ಶೆಟ್ಟಿ ನಿರ್ಮಾಣದ ಇಬ್ಬನಿ ತಬ್ಬಿದ ಇಳೆಯಲಿ
ಇಬ್ಬನಿ ತಬ್ಬಿದ ಇಳೆಯಲಿ ಚಿತ್ರವನ್ನು ಪರಮ್ವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಜಿಎಸ್ ಗುಪ್ತಾ ಜೊತೆ ಸೇರಿ ನಿರ್ಮಿಸಿದ್ದಾರೆ. ಚಂದ್ರಜಿತ್ ಬೆಳ್ಳಿಯಪ್ಪ, ಈ ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಗಗನ್ ಬಡೇರಿಯಾ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಪಂಚತಂತ್ರ ಖ್ಯಾತಿಯ ವಿಹಾನ್ ಗೌಡ ನಾಯಕನಾಗಿ ನಟಿಸಿದ್ದಾರೆ. ಇವರೊಂದಿಗೆ ಅಂಕಿತಾ ಅಮರ್, ಮಯೂರಿ ನಟರಾಜ್, ಗಿರಿಜಾ ಶೆಟ್ಟರ್, ಕಿರಣ್ ರಾಜ್, ಚಂದ್ರಜಿತ್ ಬೆಳ್ಳಿಯಪ್ಪ, ವಿಕಿಪಿಡಿಯಾ ಹಾಗೂ ಇನ್ನಿತರರು ನಟಿಸಿದ್ದಾರೆ.