‘ಎಲ್ಲಿಂದಲೋ ಬಂದು ರಾಡಿ ಎಬ್ಬಿಸಿದ್ದ ಶ್ರುತಿ ಹರಿಹರನ್ ತಾನು ಪತಿವ್ರತೆ ಅಂತ ಪ್ರೂವ್ ಮಾಡೋಕೆ ಹೊರಟಿದ್ಳು!’ ಗುರುಪ್ರಸಾದ್ ಎಡವಟ್ ಹೇಳಿಕೆ
Director Guruprasad: ನಿರ್ದೇಶಕ ಗುರುಪ್ರಸಾದ್ ತಮ್ಮ ಹೇಳಿಕೆ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ನಿರ್ದೇಶನದ ರಂಗನಾಯಕ (Ranganayaka) ಸಿನಿಮಾ ಬಿಡುಗಡೆಯ ಬೆನ್ನಲ್ಲೇ ನಟಿ ಶ್ರುತಿ ಹರಿಹರನ್ (Sruthi Hariharan) ಬಗ್ಗೆ ಮಾತನಾಡಿದ್ದಾರೆ. ಎಡವಟ್ ಹೇಳಿಕೆಗಳ ಮೂಲಕ ಮತ್ತೆ ವಿವಾದದ ಮುನ್ನೆಲೆಗೆ ಬಂದಿದ್ದಾರೆ.

Director Guruprasad: ವಿವಾದಗಳಿಗೂ ಮತ್ತು ನಿರ್ದೇಶಕ ಗುರು ಪ್ರಸಾದ್‌ಗೂ ಅವಿನಾಭಾವ ಸಂಬಂಧ. ಅವರಾಡುವ ಪ್ರತಿ ಹೇಳಿಕೆಗಳೂ ಸ್ಯಾಂಡಲ್‌ವುಡ್‌ನಲ್ಲಿ ವಿವಾದದ ಸ್ವರೂಪ ಪಡೆದ ಉದಾಹರಣೆಗಳು ಸಾಕಷ್ಟಿವೆ. ಇದೀಗ ತಮ್ಮ ಸಿನಿಮಾ ಪ್ರಚಾರದ ಭರದಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ ಮಠ ಗುರುಪ್ರಸಾದ್.
ನವರಸ ನಾಯಕ ಜಗ್ಗೇಶ್ ನಾಯಕನಾಗಿ ನಟಿಸಿರುವ ರಂಗನಾಯಕ ಸಿನಿಮಾದ ಗಾಳಿ ತಂಗಾಳಿ ಹಾಡು ಈಗಾಗಲೇ ಬಿಡುಗಡೆ ಆಗಿ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ, ಈ ಹಿಂದಿನ ಮೀಟೂ ವಿಚಾರವನ್ನು ಮತ್ತೆ ಕೆದಕಿದ ಗುರುಪ್ರಸಾದ್, ನಟಿ ಶ್ರುತಿ ಹರಿಹರನ್ ವಿರುದ್ಧ ಮುಗಿಬಿದ್ದಿದ್ದಾರೆ. ಇದೀಗ ಅವರ ಹೇಳಿಕೆಗೂ ವಿರೋಧ ವ್ಯಕ್ತವಾಗುತ್ತಿದೆ.
ಗಾಳಿ ತಂಗಾಳಿ ಹಾಡಿನ ಸಾಹಿತ್ಯದಲ್ಲಿ ಮೀಟು ಶ್ರುತಿ, ಬಿಗ್ ಬಾಸ್ ಶ್ರುತಿ ಎಂಬ ಪದಗಳು ಸೇರಿವೆ. ಈ ಹಾಡು ವೈರಲ್ ಆಗುತ್ತಿದ್ದಂತೆ, ಹಾಡಿನ ಸಾಹಿತ್ಯದ ಬಗ್ಗೆ ಸೋಷಿಯಲ್ ಮೀಡಿಯಾ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಹಾಡಿನಲ್ಲಿ ನಟ ಜಗ್ಗೇಶ್ ಕತ್ತೆಗಳನ್ನು ಮೇಯಿಸುವ ವ್ಯಕ್ತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಹಾಡಿನ ಮೂಲಕ ಕನ್ನಡದ ನಟಿಯರನ್ನು ಕತ್ತೆಗಳಿಗೆ ಹೋಲಿಸಿದ್ರಾ ನಟ ಗುರುಪ್ರಸಾದ್? ಬಿಗ್ ಬಾಸ್ ಶ್ರುತಿ, ಮೀಟು ಶ್ರುತಿ ಯಾರು? ಹೀಗೆ ಮೂಡಿದ ಹಲವು ಪ್ರಶ್ನೆಗಳಿಗೆ ನಟ ಗುರುಪ್ರಸಾದ್ ಉತ್ತರ ನೀಡಿದ್ದಾರೆ.
ಸಂಗೀತ ಪ್ರಕಾರದ ಶ್ರುತಿ
"ಹಾಡಿನಲ್ಲಿ ನಾವು ಬಳಸಿದ್ದು ಸಂಗೀತದ ಶ್ರುತಿಯೇ ಹೊರತೂ ಬೇರಾವ ಶ್ರುತಿಯಲ್ಲ. ಜಗ್ಗೇಶ್ ಈ ಹಾಡಿನಲ್ಲಿ ಕತ್ತೆ ಮೇಯಿಸುವವನಾಗಿದ್ದಾರೆ. ಕತ್ತೆ ಮೇಯಿಸುವಾಗ ಕತ್ತೆಯೂ ಹಾಡುತ್ತೆ. ಅದು ಶ್ರುತಿಯನ್ನು ಬಿಟ್ಟು ಹಾಡುತ್ತದೆ. ನಾವು ಆ ಬಿಟ್ಟ ಶ್ರುತಿ ಬಗ್ಗೆ ಹೇಳಿದ್ದೇವೆ. ಇನ್ನು ಶ್ರುತಿ ಹರಿಹರನ್ ಬಗ್ಗೆ ಹೇಳಲೇಬೇಕು ನಾನು. ಆಕೆ ಮೂಲ ಕನ್ನಡ ಅಲ್ಲ. ಎಲ್ಲಿಂದಲೋ ಇಲ್ಲಿಗೆ ಬಂದಿದ್ದಾರೆ. ಕನ್ನಡದಲ್ಲಿ ರಾಡಿ ಎಬ್ಬಿಸಿದ್ರು. ಆವಾಗ ನಾನೇ ನಿಂತುಕೊಂಡೆ. ಯಾಕೆಂದ್ರೆ, ಸೀಕ್ರೆಟ್ ಗೊತ್ತಿತ್ತು. ಹಾಗಾಗಿ ನನಗೆ ಕೋಪ ಇತ್ತು. ಅದನ್ನು ತೀರಿಸಿಕೊಳ್ಳಲು ನನಗೆ ಒಂದು ಅವಕಾಶ ಬೇಕಿತ್ತು. ನನ್ನ ಮಾಧ್ಯಮ ಸಿನಿಮಾ. ಅಲ್ಲಿ ನಾನು ಹೇಳಲೇಬೇಕಿತ್ತು. ಆಕೆಯ ಧೋರಣೆಗೆ ಧಿಕ್ಕಾರ ಕೂಗಬೇಕಿತ್ತು. ಹಾಗಾಗಿ ಮೀಟು ಶ್ರುತಿ ಅಂತ ಬೇಕು ಅಂತಲೇ ಹಾಡಿನಲ್ಲಿ ತಂದಿರುವುದು" ಎಂದಿದ್ದಾರೆ.
ಮೀಟು ಬಗ್ಗೆ ಸುಪ್ರೀಂ ಕೋರ್ಟ್ ಒಪ್ಪಿದೆ..
“ಮೀಟು ಅನ್ನೋದು ಪ್ರಪಂಚದಲ್ಲಿ ಇಲ್ಲದೇ ಇರುವುದೇ? ಕನ್ನಡ ಚಿತ್ರರಂಗ ಮಾತ್ರ ಅಂತ ಅಲ್ಲ, ಕನ್ನಡ ಚಿತ್ರರಂಗದಲ್ಲಿ ಇಲ್ಲದೇ ಇರೋದಾ? ಗಂಡು ಹೆಣ್ಣು ಆತ್ಮೀಯವಾಗಿ ಒಪ್ಪಿಕೊಂಡು ಅವರಿಬ್ಬರು ಏನಾದರೂ ವ್ಯವಸ್ಥೆ ಮಾಡಿಕೊಂಡ್ರು ಅಂದ್ರೆ, ಮುಗೀತು. ಇದನ್ನು ಸುಪ್ರೀಂ ಕೋರ್ಟ್ ಸಹ ಓಕೆ ಮಾಡಿದೆ. ಸುಪ್ರೀಂ ಕೋರ್ಟ್‌ಗಿಂತ ದೊಡ್ಡವರು ಯಾರಿದ್ದಾರೆ? ಅಲ್ವಾ” ಎಂದಿದ್ದಾರೆ ನಿರ್ದೇಶಕರು.
ಪತಿವ್ರತೆ ಅಂತ ಪ್ರೂವ್ ಮಾಡೋಕೆ ಹೊರಟಿದ್ಲು?
"ಯಾವ ಮೀಟು? ಶ್ರುತಿ ಹರಿಹರನ್ ಗಲಾಟೆ ಮಾಡಿದ್ಲು ಹೌದಾ? ಉದಾಹರಣೆಗೆ, ಒಂದು ಹುಡುಗಿ ತನ್ನ ವ್ಯಾನಿಟಿ ಬ್ಯಾಗ್‌ಅನ್ನ ಯಾರಾದ್ರೂ ಕಿತ್ತುಕೊಂಡು ಹೋದರೆ, ಆಕೆ ಆ ಕ್ಷಣಕ್ಕೆ ಕೂಗುತ್ತಾಳಾ? ಅಥವಾ ಆರು ವರ್ಷ ಆದಮೇಲೆ ಕೂಗುತ್ತಾಳಾ? ನೀವೇ ನಿರ್ಧರಿಸಿ. ಏಕೆಂದರೆ ಇದು ಚೀಲದ ವಿಚಾರ ಅಲ್ಲ, ಶೀಲದ ವಿಚಾರ! ಹಾಗೆ ಮಾಡಿದ್ರು, ಹೀಗೆ ಮಾಡಿದ್ರು ಅನ್ನೋಕೆ ಅವಳೇನು ಪತಿವ್ರತೆ ಅಂತ ಪ್ರೂವ್ ಮಾಡೋಕೆ ಹೊರಟಿದ್ದಳಾ?" ಹೀಗೆ ಒಂದಷ್ಟು ತಮಗನಿಸಿದ ಮಾತುಗಳನ್ನು ಕನ್ನಡ ಪಿಚ್ಚರ್ ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಗುರುಪ್ರಸಾದ್. ಹೀಗೆ ಹೇಳಿಕೆ ನೀಡಿದ ಬೆನ್ನಲ್ಲೇ ಸೋಷಿಯಲ್ ಮೀಡಿಯಾ ವಲಯದಲ್ಲಿ ವ್ಯಾಪಕ ಟೀಕೆಗಳನ್ನು ಎದುರಿಸುತ್ತಿದ್ದಾರೆ ಗುರುಪ್ರಸಾದ್.