Dil Kush Song: ತ್ರಿವಳಿ ನಿರ್ದೇಶಕರಿಂದ ಬಿಡುಗಡೆಯಾಯ್ತು ದಿಲ್ ಖುಷ್ ಚಿತ್ರದ ನೀನೇ ನೀನೇ ಹಾಡು
ದಿಲ್ ಖುಷ್ ಸಿನಿಮಾ ಬಿಡುಗಡೆಗೆ ಹತ್ತಿರ ಬಂದಿದೆ. ಪ್ರಚಾರ ಕಾರ್ಯಕ್ಕಿಳಿದಿರುವ ಈ ಸಿನಿಮಾ ತಂಡ, ಇದೀಗ ಹಾಡುಗಳ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ಪತ್ರಿಕೆ ನೀಡಿದೆ. ಅಂದರೆ, ಚಿತ್ರದ ನೀನೇ ನೀನೇ ಹಾಡನ್ನು ಸ್ಯಾಂಡಲ್‌ವುಡ್‌ನ ತ್ರಿವಳಿ ನಿರ್ದೇಶಕರು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.
Dil Kush Song: ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ "ದಿಲ್ ಖುಷ್" ಚಿತ್ರಕ್ಕಾಗಿ ಗೌಸ್ ಫಿರ್ ಅವರು ಬರೆದಿರುವ "ನೀನೇ ನೀನೇ" ಎಂಬ ಸುಮಧುರ ಹಾಡು ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ ಹಾಗೂ ಬಹದ್ದೂರ್ ಚೇತನ್ ಕುಮಾರ್ ಈ ಹಾಡನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭಕೋರಿದ್ದಾರೆ. ಸರಿಗಮಪ ಖ್ಯಾತಿಯ ನಿಹಾಲ್ ತೌರೊ ಹಾಗೂ ಆರತಿ ಅಶ್ವಿನ್ ಈ ಹಾಡಿಗೆ ಧ್ವನಿಯಾಗಿದ್ದು ಪ್ರಸಾದ್ ಕೆ ಶೆಟ್ಟಿ ಸಂಗೀತ ನೀಡಿದ್ದಾರೆ.
ಚಿತ್ರದ ಹಾಡುಗಳು ಹಾಗೂ ಟೀಸರ್ ತುಂಬಾ ಚೆನ್ನಾಗಿದೆ. ಪ್ರಮೋದ್ ಜಯ್ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಅನುಭವ ಹೊಂದಿದ್ದಾರೆ. ಹಾಡುಗಳು ಹಾಗೂ ಟೀಸರ್ ಮೂಲಕ ಪ್ರಮೋದ್ ಜಯ ಭರವಸೆ ಮೂಡಿಸಿದ್ದಾರೆ. ಚಿತ್ರ ಕೂಡ ಚೆನ್ನಾಗಿ ಮೂಡಿಬಂದಿರುವ ವಿಶ್ವಾಸ ನಮಗಿದೆ. ಉತ್ತಮ ಕಥೆಗಳಿರುವ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಬರುತ್ತಿವೆ. ದಯವಿಟ್ಟು ಕುಟುಂಬ ಸಮೇತ ಚಿತ್ರಮಂದಿರಗಳಿಗೆ ಬನ್ನಿ. ಆಗ ಮಾತ್ರ ಚಿತ್ರಗಳು ಯಶಸ್ಸಿಯಾಗಲು ಸಾಧ್ಯ ಎಂದರು ಅತಿಥಿಗಳಾಗಿ ಆಗಮಿಸಿದ್ದ ಪವನ್ ಒಡೆಯರ್, ಸಿಂಪಲ್ ಸುನಿ ಹಾಗು ಬಹದ್ದೂರ್ ಚೇತನ್ ಕುಮಾರ್.
ನಾನು ಸಿಂಪಲ್ ಸುನಿ ಅವರ ಹತ್ತಿರ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಸಾಕಷ್ಟು ಕೆಲಸ ಕಲಿತ್ತಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ. ಹಾಡು ಬಿಡುಗಡೆ ಮಾಡಿಕೊಟ್ಟ ಮೂರು ಜನ ನಿರ್ದೇಶಕರಿಗೆ ಧನ್ಯವಾದ. ಚಿತ್ರ ತೆರೆಗೆ ಬರಲು ಅಣಿಯಾಗಿದೆ. ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡುವುದಾಗಿ ನಿರ್ದೇಶಕ ಪ್ರಮೋದ್ ಜಯ ತಿಳಿಸಿದರು.
ಈ ಚಿತ್ರದಲ್ಲಿ ಖುಷ್ ನನ್ನ ಹೆಸರು. ಲವಲವಿಕೆ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ ಎಂದರು ನಾಯಕ ರಂಜಿತ್. ದಿಲ್ಮಯ ನನ್ನ ಪಾತ್ರದ ಹೆಸರು. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಾಯಕಿ ಸ್ಪಂದನ ಸೋಮಣ್ಣ. ನಟರಾದ ಧರ್ಮಣ್ಣ, ರಘು ರಾಮನಕೊಪ್ಪ ಮುಂತಾದ ಕಲಾವಿದರು ಹಾಗೂ ಚಿತ್ರತಂಡದ ಸದಸ್ಯರು "ದಿಲ್ ಖುಷ್" ಚಿತ್ರದ ಬಗ್ಗೆ ಮಾತನಾಡಿದರು. ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭ ಶೇಖರ್ "ದಿಲ್ ಖುಷ್" ಚಿತ್ರವನ್ನು ನಿರ್ಮಿಸಿದ್ದಾರೆ.