ಮುಡಾ ಆಪ್ತರ ಐ ಆ್ಯಮ್ ಗಾಡ್ ಚಿತ್ರದ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
ಐ ಆ್ಯಮ್ ಗಾಡ್ ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆ ಪೋಸ್ಟರ್ ಅನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ. ರವಿ ಗೌಡ ಈ ಚಿತ್ರದಲ್ಲಿ ನಾಯಕರಾಗಿ ನಟಿಸುವುದರ ಜತೆಗೆ, ನಿರ್ದೇಶನ ಮತ್ತು ನಿರ್ಮಾಣವನ್ನೂ ಮಾಡುತ್ತಿದ್ದಾರೆ.

I Am God: ಕನ್ನಡ ಚಿತ್ರರಂಗ ಮತ್ತು ರಾಜ್ಯ ಸರ್ಕಾರದ ನಡುವಿನ ನಂಟು ಈಗಿನದಲ್ಲ. ಅದು ದಶಕಗಳಿಂದಲೂ ಒಟ್ಟಿಗೆ ನಡೆದು ಬಂದಿದೆ. ಸಿನಿಮಾ ಸಂಬಂಧಿ ಕಾರ್ಯಕ್ರಮಗಳಿಗೆ ಸಚಿವರು, ಶಾಸಕರಷ್ಟೇ ಅಲ್ಲ ಸಿಎಂ ಸಹ ಬಂದ ಸಾಕಷ್ಟು ಉದಾಹರಣಗಳಿವೆ. ಇದೀಗ ತಮ್ಮ ನಿತ್ಯದ ಕೆಲಸಗಳ ನಡುವೆ ಮುಖ್ಯಮಂತ್ರಿ ಸಿದ್ಧರಾಮಯ್ಯ 'ಐ ಆ್ಯಮ್ ಗಾಡ್' ಎಂದಿದ್ದಾರೆ. ಅಂದರೆ, 'ಐ ಆ್ಯಮ್ ಗಾಡ್' ಹೆಸರಿನ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಸಿಎಂ ಬಿಡುಗಡೆ ಮಾಡಿದ್ದಾರೆ.
ರಾಜಕೀಯ ಜಂಜಡಗಳ ನಡುವೆ ಸಿಎಂ ಸಿದ್ದರಾಮಯ್ಯ ಆಗೊಂದು ಈಗೊಂಡು ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಅದರಂತೆ ಇತ್ತೀಚೆಗಷ್ಟೇ ತಮ್ಮ ಆತ್ಮೀಯ ಗೆಳೆಯ ಮುಡಾ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಅವರ ಮಗನ ಹೊಸ ಸಿನಿಮಾ ಪಯಣಕ್ಕೆ ಶುಭಾಶಯ ಕೋರಿದ್ದಾರೆ. ಧ್ವಜ ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದ ರವಿ ಗೌಡ, ಈಗ I'm god ಸಿನಿಮಾ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣ ಮಾಡಿ ಶುಭಕೋರಿದ್ದಾರೆ.
ಈ ಚಿತ್ರದಲ್ಲಿ ನಾಯಕನಾಗಿ, ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ರವಿ ಗೌಡ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆಪ್ತಮ ಮಗನ ಸಿನಿಮಾ ಸಾಹಸ ಬಗ್ಗೆ ಮಾತನಾಡಿದ ಸಿಎಂ, ಸಿ ಬಸವೇಗೌಡ್ರು ಮಗ ರವಿ ಗೌಡ ಮಗ ಹುಟ್ಟುವ ಮುಂಚೆಯೇ ಬಸವೇಗೌಡ ನನಗೆ ಪರಿಚಯ. ಬಸವೇಗೌಡರ ಮಗ ಸಿನಿಮಾದಲ್ಲಿ ನಟಿಸುತ್ತಾನೆ, ನಿರ್ಮಾಪಕ ಆಗುತ್ತಾನೆ, ನಿರ್ದೇಶಕನಾಗುತ್ತಾನೆ ಎಂದುಕೊಂಡಿರಲಿಲ್ಲ. ಸಿನಿಮಾ ಕ್ಷೇತ್ರಗಳಲ್ಲಿ ಒಳ್ಳೆ ನಟನಾಗಿ, ನಿರ್ದೇಶಕನಾಗಿ ಬೆಳೆಯಲಿ. ದುಡ್ಡಿದ್ರೆ ಯಾರು ಬೇಕಾದರೂ ನಿರ್ಮಾಪಕರು ಆಗಬಹುದು. ಆದರೆ ನಟನೆ, ನಿರ್ದೇಶಕರಾಗುವುದು ರಕ್ತದಲ್ಲಿ ಬಂದಾಗ ಮಾತ್ರ ಸಾಧ್ಯವಾಗುವುದು. ಬಸವೇಗೌಡ ಮಗ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿರುವುದು ಸಂತಸ. ಈ ಕ್ಷೇತ್ರದಲ್ಲಿ ಪ್ರಬುದ್ಧವಾಗಿ ಬೆಳೆಯಬೇಕು ಎಂದು ಆಶಿಸುತ್ತೇನೆ ಎಂದರು.
ಅಜನೀಶ್ ಲೋಕನಾಥ್ ಸಂಗೀತ
I'm god ರೋಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಈಗಾಗಲೇ ಚಿತ್ರೀಕರಣ ಮುಕ್ತಾಯಗೊಂಡಿದೆ. ಬೆಂಗಳೂರು ಹಾಗೂ ಕೇರಳದಲ್ಲಿ ಶೂಟಿಂಗ್ ನಡೆಸಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ಸಿಬಿಜಿ ಪ್ರೊಡಕ್ಷನ್ಸ್ ನಡಿ ಮೂಡಿ ಬರುತ್ತಿರುವ I'm god ಚಿತ್ರಕ್ಕೆ ಕಾಂತಾರ ಮ್ಯೂಸಿಕ್ ಮಾಂತ್ರಿಕ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ರವಿ ವರ್ಮಾ ಸಾಹಸ ನಿರ್ದೇಶನ ಹಾಗೂ ಜಿತಿನ್ ದಾಸ್ ಕ್ಯಾಮೆರಾ ಕೆಲಸ, ಸುರೇಶ್ ಅರುಮುಗಂ ಸಂಕಲನ ಚಿತ್ರಕ್ಕಿರಲಿದೆ.
