ಯುಐ ಸಿನಿಮಾ ಫಸ್ಟ್ ಲುಕ್ ಅಪ್ಡೇಟ್; ವಿಡಿಯೋ ಮೂಲಕ ಮತ್ತೆ ತಲೆಗೆ ಹುಳು ಬಿಟ್ಟ ಉಪೇಂದ್ರ
ಎಂದಿನಂತೆ ಉಪ್ಪಿ ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಉಪೇಂದ್ರ, ಚಿತ್ರದ ನಿರ್ಮಾಪಕರಾದ ಶ್ರೀಕಾಂತ್ ಹಾಗೂ ನವೀನ್ ಮನೋಹರನ್ ಜೊತೆ 1:44 ನಿಮಿಷದ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಯಾವಾಗಲೂ ಡಿಫರೆಂಟ್ ಅನ್ನೋದನ್ನು ಮತ್ತೆ ಮತ್ತೆ ಹೇಳಬೇಕಿಲ್ಲ. ಉಪ್ಪಿ ಸದ್ಯಕ್ಕೆ ರಾಜಕೀಯ ಸಿನಿಮಾ ಎರಡನ್ನೂ ಸಮನಾಗಿ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಬಹಳ ದಿನಗಳ ನಂತರ ಉಪೇಂದ್ರ ಮತ್ತೆ ನಿರ್ದೇಶನಕ್ಕೆ ವಾಪಸ್ ಆಗಿದ್ದು ಅಭಿಮಾನಿಗಳು 'UI'ಚಿತ್ರದ ಅಪ್ಡೇಟ್ಗಾಗಿ ಕಾಯುತ್ತಿದ್ದಾರೆ.
ವಿಭಿನ್ನ ವಿಡಿಯೋ ಹಂಚಿಕೊಂಡ ಉಪೇಂದ್ರ
UI ಸಿನಿಮಾ ಅನೌನ್ಸ್ ಆಗಿ ಬಹಳದ ದಿನಗಳು ಕಳೆದರೂ ಒಂದೆರಡು ಪೋಸ್ಟರ್ ಬಿಟ್ಟರೆ ಚಿತ್ರತಂಡ ಹೊಸ ಅಪ್ಡೇಟ್ ಹಂಚಿಕೊಂಡಿಲ್ಲ. ಸೋಮವಾರ ಬೆಳಗ್ಗೆ UI ಚಿತ್ರದ ಫಸ್ಟ್ ಲುಕ್ ಅಪ್ಡೇಟ್ ನೀಡುವುದಾಗಿ ಉಪೇಂದ್ರ ಹೇಳಿಕೊಂಡಿದ್ದರು. ಅದರಂತೆ ರಿಯಲ್ ಸ್ಟಾರ್ ಫಸ್ಟ್ ಲುಕ್ ಅಪ್ಡೇಟ್ ಹಂಚಿಕೊಂಡಿದ್ದಾರೆ. ಆದರೆ ಎಂದಿನಂತೆ ಉಪ್ಪಿ ಇಲ್ಲೂ ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಉಪೇಂದ್ರ, ಚಿತ್ರದ ನಿರ್ಮಾಪಕರಾದ ಶ್ರೀಕಾಂತ್ ಹಾಗೂ ನವೀನ್ ಮನೋಹರನ್ ಜೊತೆ 1:44 ನಿಮಿಷದ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ವಿಡಿಯೋದಲ್ಲಿ ಈ ಮೂವರ ಮಾತುಕತೆ ಫನ್ನಿ ಆಗಿದೆ. ''ನವೀನ್ ಅವರೇ ಬನ್ನಿ, ಎಂತೆಂತದ್ದು ಮಾಡಿದಿವಿ ಗಾಂಧಿನಗರದಲ್ಲಿ ಇದ್ಯಾವ ದೊಡ್ಡ ವಿಷಯ, ಮಾತಾಡೋಣ ಬನ್ನಿ ಎಂದು ಶ್ರೀಕಾಂತ್ ಹಾಗೂ ನವೀನ್ ಮಾತನಾಡುತ್ತಾ ಕಾರಿನಿಂದ ಇಳಿದು ಉಪೇಂದ್ರ ಆಫೀಸ್ ಕಡೆ ಹೋಗುತ್ತಾರೆ. ಅಲ್ಲಿ ಉಪ್ಪಿ UI ಚಿತ್ರದ ಕೆಲಸದಲ್ಲಿ ತೊಡಗಿರುತ್ತಾರೆ. ನಿಮ್ಮೊಂದಿಗೆ ಮಾತನಾಡಬೇಕಿತ್ತು ಎಂದು ಉಪ್ಪಿಯನ್ನು ಹೊರ ಕರೆದು ಮೂವರೂ ಮಾತಿಗೆ ಕೂರುತ್ತಾರೆ.
ಸುಳ್ಳಿಗೆ ಹೈಪ್ ಬೇಕು, ಸತ್ಯಕ್ಕಲ್ಲ
''ಸಿನಿಮಾ ಶುರುವಾಗಿ ಒಂದು ವರ್ಷ ಆಯ್ತು, ಇದುವರೆಗೂ ಒಂದು ಫಸ್ಟ್ ಲುಕ್ ಇಲ್ಲ, ಟೀಸರ್ ಇಲ್ಲ ಜನರು ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾರೆ, ಟೀಸರ್ ಬಿಡದಿದ್ದರೆ ಪಬ್ಲಿಸಿಟಿ ಮಾಡೋದು ಹೇಗೆ? ಬಹಳ ವರ್ಷಗಳ ನಂತರ ನೀವು ಡೈರೆಕ್ಷನ್ಗೆ ಬಂದಿದ್ದೀರಿ, ಚಿತ್ರದ ಅಪ್ಡೇಟ್ಗೆ ಜನರು ಕಾಯುತ್ತಿದ್ದಾರೆ'' ಎಂದು ಶ್ರೀಕಾಂತ್, ನವೀನ್ ಇಬ್ಬರೂ ಉಪೇಂದ್ರ ಬಳಿ ತಮ್ಮ ಬೇಸರ ಹೊರ ಹಾಕುತ್ತಾರೆ, ಸಾಲು ಸಾಲು ಪ್ರಶ್ನೆಗಳಿಗೆ ಉಪೇಂದ್ರ ನೀಡುವ ಉತ್ತರ ಕೇಳಿ ಇಬ್ಬರೂ ಶಾಕ್ ಆಗುತ್ತಾರೆ. 'ಸುಳ್ಳಿಗೆ ಹೈಪ್ ತರಬೇಕು ಆದರೆ ಸತ್ಯಕ್ಕೆ ತಾನಾಗಿಯೇ ಹೈಪ್ ಸಿಗುತ್ತೇ ಡೋಂಟ್ ವರಿ' ಎಂದು ಉಪೇಂದ್ರ ಹೇಳುತ್ತಾರೆ. ಗೋಡೆ ಮೇಲಿನ UI ಚಿತ್ರದ ಪೋಸ್ಟರ್, To be continued ಅಕ್ಷರಗಳ ಮೂಲಕ ವಿಡಿಯೋ ಕೊನೆ ಆಗುತ್ತದೆ.
ಲಹರಿ ಫಿಲ್ಮ್ಸ್, ಈ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಹಂಚಿಕೊಂಡಿದೆ. ಉಪ್ಪಿ ಬುದ್ಧಿವಂತಿಕೆಗೆ ಜನರು ಮತ್ತೆ ತಲೆತೂಗಿದ್ಧಾರೆ. ಪ್ರಪಂಚದ ಏಕೈಕ ಬುದ್ದಿವಂತ ನಿರ್ದೇಶಕ ನಮ್ಮ ಉಪ್ಪಿ ಬಾಸ್, ತಲೆಗೆ ಹುಳ ಬಿಟ್ಟ ನಮ್ಮ ಉಪೇಂದ್ರ ಸರ್, ಬಾಸ್ ನೀವು ಈ ರೀತಿ ನಮ್ಮನ್ನು ಕಾಯಿಸಬಾರದು, ನಾವು ಕಾಯ್ತಾ ಇದೀವಿ ಸಿನಿಮಾದ ಅಪ್ಡೇಟ್ ಕೊಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಲಹರಿ ಫಿಲ್ಮ್ಸ್, ವೀನಸ್ ಎಂಟರ್ಟೈನರ್ಸ್ ಬ್ಯಾನರ್ ಅಡಿ ಜಿ ಮನೋಹರನ್ ಹಾಗೂ ಕೆಪಿ ಶ್ರೀಕಾಂತ್ UI ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಉಪ್ಪಿಗೆ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಹುಕೋಟಿ ವೆಚ್ಚದ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಸಿನಿಮಾ ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿವೆ.