ದರ್ಶನ್‌ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ; ಮನೆಯೂಟ, ಪುಸ್ತಕ, ಹಾಸಿಗೆ ಬೇಡಿಕೆ ಕುರಿತ ಅರ್ಜಿ ಏನಾಯ್ತು?
ನಟ ದರ್ಶನ್‌ಗೆ ಸದ್ಯಕ್ಕೆ ಜಾಮೀನು ಸಿಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಈಗಾಗಲೇ ಕಳೆದ 14 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ಗೆ, ಆಗಸ್ಟ್ 1ರ ವರೆಗೂ ಜೈಲೇ ಗತಿ.
Darshan Arrest in murder case: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಹತ್ಯೆ ಮಾಡಿದ ಪ್ರಕರಣದ ವಿಚಾರಣೆ ಇಂದು (ಜುಲೈ 18) ಮತ್ತೆ ನಡೆಯಿತು. ಈಗಾಗಲೇ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್ ಸೇರಿ ಎಲ್ಲ 17 ಮಂದಿಗೂ ಮತ್ತೆ ಜೈಲೇ ಗತಿಯಾಗಿದೆ! ಅಂದರೆ, ಆಗಸ್ಟ್ 1ರ ತನಕ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ನಟ ದರ್ಶನ್ ಸೇರಿ ಕೊಲೆ ಪ್ರಕರಣದ ಎಲ್ಲ 17 ಆರೋಪಿಗಳು ಇಂದು ಕೋರ್ಟ್‌ಗೆ ಹಾಜರಾಗಬೇಕಿತ್ತು. ಭದ್ರತೆಯ ದೃಷ್ಟಿಯಿಂದ ಕೋರ್ಟ್‌ಗೆ ಕರೆತಂದು, ಮುಖಾಮುಖಿ ವಿಚಾರಣೆ ಬದಲು, ವಿಡಿಯೋ ಕಾನ್ಫರೆನ್ಸ್ ಮೂಲಕವೇ ಆರೋಪಿಗಳನ್ನು ಆರ್ಥಿಕಾಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿಶ್ವನಾಥ ಸಿ ಗೌಡರ್ ಮುಂದೆ ಕರೆ ತಂದು ವಿಚಾರಣೆ ನಡೆಸಲಾಯಿತು.
ಆಗಸ್ಟ್ 1ರ ವರಗೆ ನ್ಯಾಯಾಂಗ ಬಂಧನ
ಇನ್ನೇನು ಈ ಸಲವಾದ್ರೂ ನಟ ದರ್ಶನ್ ಸೇರಿ ಹಲವರಿಗೆ ಜಾಮೀನು ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ, ಕೊಲೆ ಪ್ರಕರಣವಾದ ಬೆನ್ನಲ್ಲೇ ಅಷ್ಟು ಸುಲಭಕ್ಕೆ ಜಾಮೀನು ಮಂಜೂರಾಗಿಲ್ಲ. ಈ ನಡುವೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುವಂತೆ ಎಸ್ಪಿಪಿ ರಿಮ್ಯಾಂಡ್ ಅರ್ಜಿ ಸಲ್ಲಿಕೆಯಾಗಿತ್ತು. ಬಳಿಕ ಸರ್ಕಾರಿ ವಕೀಲರು ಹಾಗೂ ನಟ ದರ್ಶನ್ ಪರ ವಕೀಲರ ವಾದ ಮತ್ತು ಪ್ರತಿವಾದಗಳನ್ನು ನ್ಯಾಯಾಧೀಶರು ಆಲಿಸಿದರು. ಬಳಿಕ ಆರೋಪಿಗಳ ಬಂಧನವನ್ನು ಆಗಸ್ಟ್ 1ರ ವರಗೆ ವಿಸ್ತರಿಸಿ ಆದೇಶ ಹೊರಡಿಸಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ
ಪರಪ್ಪನ ಅಗ್ರಹಾರದಲ್ಲಿ 13, ತುಮಕೂರಿನ ಜೈಲಿನಲ್ಲಿ 4 ಜನ ಆರೋಪಿಗಳನ್ನು ಇರಿಸಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಎರಡೂ ಜೈಲಿನಲ್ಲಿದ್ದ ಆರೋಪಿಗಳು ಜಡ್ಜ್ ಮುಂದೆ ಕರೆತಂದು ಒಂದಷ್ಟು ವಿಚಾರಣೆ ಬಳಿಕ, ಕೊನೆಯದಾಗಿ ಆಗಸ್ಟ್ 1ರ ವರೆಗೆ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಮನೆಯೂಟ ಅರ್ಜಿ ಮುಂದೂಡಿಕೆ..
ಕೊಲೆ ಆರೋಪದ ಮೇಲೆ ಈಗಾಗಲೇ ಜೈಲು ಪಾಲಾಗಿರುವ ನಟ ದರ್ಶನ್‌ಗೆ, ಜೈಲಿನಲ್ಲಿನ ಊಟ ಒಗ್ಗುತ್ತಿಲ್ಲ. ಈ ಕಾರಣಕ್ಕೆ ಮನೆಯೂಟಕ್ಕೆ ಅವರಿಂದ ಅರ್ಜಿ ಸಂದಾಯವಾಗಿತ್ತು. ಜತೆಗೆ ಪುಸ್ತಕ ಮತ್ತು ಹಾಸಿಗೆಯನ್ನೂ ನೀಡುವಂತೆ ಅರ್ಜಿಯಲ್ಲಿ ದರ್ಶನ್ ಕೋರಿದ್ದರು. ಇಂದು ನ್ಯಾಯಾದೀಶರ ಮುಂದೆ ಈ ಅರ್ಜಿಯ ವಿಚಾರಣೆ ಬಂದಾಗ, ಅದನ್ನು ಜುಲೈ 19ಕ್ಕೆ ಮುಂದೂಡಿಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಜೂನ್ 8ರಂದು ಅಪಹರಿಸಲಾಗಿತ್ತು. ಬಳಿಕ ಅದೇ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ನೀಡಿ ನಟ ದರ್ಶನ್ ಅಂಡ್ ಗ್ಯಾಂಗ್ ಹತ್ಯೆ ಮಾಡಿದೆ ಎಂಬ ಆರೋಪ ಕೇಳಿಬಂದಿತ್ತು. ಅದರ ಆಧಾರದ ಮೇಲೆ ಸದ್ಯ ಎಲ್ಲ 17 ಮಂದಿ ಸದ್ಯ ಜೈಲು ಸೇರಿದ್ದಾರೆ.
ವಿಭಾಗ