ದರ್ಶನ್ ಹೊರ ಬರೋವರೆಗೂ ಅವ್ರ ಫ್ಯಾನ್ಸ್ ಯಾವುದೇ ನಟರ ಸಿನಿಮಾ ನೋಡಲ್ವಂತೆ; ಧ್ರುವ ಸರ್ಜಾ ನೀಡಿದ್ರು ಮಾರ್ಮಿಕ ಉತ್ತರ
ನಟ ದರ್ಶನ್ ಮತ್ತು ಧ್ರುವ ಸರ್ಜಾ ನಡುವೆ ಯಾವುದೂ ಸರಿಯಿಲ್ಲ ಎಂಬುದು ಈಗಾಗಲೇ ಹರಿದಾಡುತ್ತಿರುವ ಸುದ್ದಿ. ಇದೀಗ ಇದೇ ದರ್ಶನ್ ಬಂಧನದ ಬಗ್ಗೆ ಧ್ರುವ ಸರ್ಜಾ ಮಾತನಾಡಿದ್ದಾರೆ.
Dhruva Sarja on Darshan: ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿಗೆ ಹೋದ ಬಳಿಕ, ಇತ್ತ ಅವರ ಫ್ಯಾನ್ಸ್ ದೇವರ ಮೊರೆ ಹೋಗಿದ್ದಾರೆ. ಹರಕೆ ಹೊತ್ತು ಪೂಜೆ ಸಲ್ಲಿಸುತ್ತಿದ್ದಾರೆ. ಇದಷ್ಟೇ ಅಲ್ಲ, ನಮ್ಮ ಬಾಸ್ ಜೈಲಿನಿಂದ ಆಚೆ ಬರೋವರೆಗೂ ಬೇರಾವ ಕನ್ನಡ ಸಿನಿಮಾ ನೋಡುವುದಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಈ ಹಿಂದೆ ಅದನ್ನೇ ದೊಡ್ಡದಾಗಿ ಸೋಷಿಯಲ್ ಮೀಡಿಯಾದಲ್ಲಿಯೂ ಟ್ರೆಂಡ್ ಮಾಡಿದ್ದರು ದರ್ಶನ್ ಅಭಿಮಾನಿಗಳು. ಇದೀಗ ಇದೇ ಪ್ರಶ್ನೆಯ ಬಗ್ಗೆ ನಟ ಧ್ರುವ ಸರ್ಜಾ ಉತ್ತರ ನೀಡಿದ್ದಾರೆ. ಅದೂ ಮಾರ್ಮಿಕವಾಗಿ.
ನಟ ದರ್ಶನ್ ಮತ್ತು ಧ್ರುವ ಸರ್ಜಾ ನಡುವೆ ಯಾವುದೂ ಸರಿಯಿಲ್ಲ ಎಂಬುದು ಈಗಾಗಲೇ ಹರಿದಾಡುತ್ತಿರುವ ಸುದ್ದಿ. ಈ ಮೊದಲು ಒಟ್ಟಿಗೆ ಪ್ರೇಮ ಬರಹ ಚಿತ್ರದ ಹಾಡಿನಲ್ಲಿ ಕುಣಿದಿದ್ದ ಧ್ರುವ ಸರ್ಜಾ ಮತ್ತು ದರ್ಶನ್, ಅದಾದ ಬಳಿಕ ಇಬ್ಬರ ನಡುವೆ ಒಂದಷ್ಟು ವಿಚಾರಕ್ಕೆ ಮುನಿಸು ಮನೆ ಮಾಡಿತ್ತು. ಕಳೆದ ವರ್ಷ ಕಾವೇರಿ ಹೋರಾಟದ ಸಂದರ್ಭದಲ್ಲಿ ಒಂದೇ ವೇದಿಕೆ ಮೇಲಿದ್ದರೂ ಪರಸ್ಪರ ಎದುರುಬದುರಾದರೂ ಈ ಇಬ್ಬರು ಮಾತನಾಡಿರಲಿಲ್ಲ. ಇದೀಗ ಇದೇ ದರ್ಶನ್ ಬಂಧನದ ಬಗ್ಗೆ ಧ್ರುವ ಸರ್ಜಾ ಮಾತನಾಡಿದ್ದಾರೆ.
"ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ, ಮೊದಲು ನಿರ್ಧಾರವಾಗಲಿ. ನಾವು ಏನೇನೋ ಮಾತನಾಡುವುದು ಬೇಡ. ಯಾರೋ ಒಬ್ಬರು ನೋವಲ್ಲಿದ್ದಾರೆ. ಯಾರೋ ಕುಗ್ಗಿದ್ದಾರೆ ಎಂದಾಗ ನಾವು ಅನಿಸಿದ್ದನ್ನು ಮಾತನಾಡಲು ಆಗಲ್ಲ. ನಂದು ಒಂದಿರಲಿ ಅಂತ ನಾನೇನೇನೋ ಮಾತನಾಡಲ್ಲ. ದರ್ಶನ್ ಸರ್‌ಗೂ ಒಬ್ಬ ಮಗ ಇದ್ದಾನೆ, ಅವರಿಗೂ ಒಂದು ಫ್ಯಾಮಿಲಿ ಇದೆ. ಅದೇ ರೀತಿ ರೇಣುಕಾ ಸ್ವಾಮಿ ಅವರಿಗೂ ಒಂದು ಕುಟುಂಬ ಇದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ" ಎಂದಿದ್ದಾರೆ.
ದರ್ಶನ್ ಫ್ಯಾನ್ಸ್ ಬಗ್ಗೆ ಧ್ರುವ ಸರ್ಜಾ ಮಾತು..
ಇನ್ನೇನು ಧ್ರುವ ಸರ್ಜಾ ಅವರ ಮಾರ್ಟಿನ್ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲಿದೆ. ಈ ಸಿನಿಮಾದ ಪ್ರಚಾರ ಕೆಲವೂ ಈಗಾಗಲೇ ನಡೆಯುತ್ತಿದೆ. ಈ ನಡುವೆ "ದರ್ಶನ್ ಜೈಲಿಂದ ಆಚೆ ಬರುವವರೆಗೂ, ಕನ್ನಡದ ಯಾವುದೇ ಸಿನಿಮಾ ನೋಡುವುದಿಲ್ಲ ಎಂದು ಅವರ ಫ್ಯಾನ್ಸ್ ಹೇಳುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?" ಎಂದು ಖಾಸಗಿ ಸುದ್ದಿವಾಹಿನಿಯ ವರದಿಗಾರರೊಬ್ಬರು ಧ್ರುವ ಬಳಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಏನೂ ಉತ್ತರ ಕೊಡದೇ ಮಾರ್ಮಿಕವಾಗಿ ನಕ್ಕು, ಅಲ್ಲಿಂದ ತೆರಳಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜೈಲಿಗೆ ಸೆಲೆಬ್ರಿಟಿಗಳ ಆಗಮನ..
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಒಟ್ಟು 17 ಮಂದಿ ಸದ್ಯ ಜೈಲಿನಲ್ಲಿದ್ದಾರೆ. ಒಂದಷ್ಟು ಮಂದಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದರೆ, ಇನ್ನು ಕೆಲವರು ತುಮಕೂರು ಜೈಲಿನಲ್ಲಿದ್ದಾರೆ. ದರ್ಶನ್ ಹೀಗೆ ಜೈಲು ಸೇರುತ್ತಿದ್ದಂತೆ, ಸ್ಯಾಂಡಲ್‌ವುಡ್‌ನ ಸಾಕಷ್ಟು ಸಿನಿಮಾ ಸೆಲೆಬ್ರಿಟಿಗಳು ಜೈಲಿಗೆ ಬಂದು ದರ್ಶನ್ ಅವರನ್ನು ಮಾತನಾಡಿಸಿಕೊಂಡು ಹೋಗ್ತಿದ್ದಾರೆ. ಇನ್ನು ಕೆಲವರು ಪದೇ ಪದೆ ಆಗಮಿಸುತ್ತಿದ್ದಾರೆ. ಇತ್ತೀಚೆಗಷ್ಟೇ ನಟ ವಿನೋದ್ ರಾಜ್ ಸಹ ಜೈಲಿಗೆ ತೆರಳಿ ಭೇಟಿ ಮಾಡಿ ಬಂದಿದ್ದರು.
ನೋವಲ್ಲೂ ನಗ್ತಿದ್ರು; ವಿನೋದ್ ರಾಜ್
ವಿನೋದ್ ರಾಜ್ ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. "ಪಾಪ ತಬ್ಬಿಕೊಂಡು, ಚೆನ್ನಾಗಿದ್ದೀನಿ ಅಣ್ಣ ಅಳಬೇಡಿ, ಅಳಬೇಡಿ ಅಂದ್ರು. ಕಷ್ಟ ಆಗುತ್ತೆ. ಈ 33 ದಿನ ಕೆಲಸ ಇಲ್ಲದೇ ಆ ಮನುಷ್ಯ ಎಷ್ಟು ಯೋಚನೆ ಮಾಡಿರಬಹುದು. ಎಷ್ಟು ಸೊರಗಿರಬಹುದು ಎಂಬುದನ್ನು ನೆನಪಿಸಿಕೊಂಡರೆ ಮನಸಿಗೆ ನೋವಾಗುತ್ತದೆ. ಏನ್ ಪರಿಸ್ಥಿತಿ ಆಯ್ತಲ್ಲ ಅಪ್ಪಾಜಿ ಅಂತ ಕೇಳಿದೆ, ಇಲ್ಲಣ್ಣ, ಏನ್ಮಾಡೋಕೆ ಆಗುತ್ತೆ ಅಂತ ಅಂದ್ರು. ಆಗೋದಮೇಲೆ ಏನೂ ಮಾಡೋಕೆ ಆಗಲ್ಲ ಎಂದೆ. ಏನ್ಮಾಡಬೇಕು, ಏನಾಗುತ್ತೆ ಅನ್ನೋದು ಕಾಲಕ್ಕೂ, ವಿಧಿಗೂ ಮಾತ್ರ ಗೊತ್ತಿರುತ್ತೆ." ಎಂದಿದ್ದಾರೆ.
ವಿಭಾಗ