ಕಾತರ ಹೆಚ್ಚಿಸಿದ ರಿಷಬ್ ಶೆಟ್ಟಿ ನಿರ್ದೇಶನದ ಪೂರ್ವ ಕಾಂತಾರ; ನವೆಂಬರ್ 27ರಂದು ಕಾಂತಾರ ಪ್ರಿಕ್ವೇಲ್‌ಗೆ ಮುಹೂರ್ತ, ಇಲ್ಲಿದೆ ಇನ್ನಷ್ಟು ವಿವರ
Kantara 2 Latest Updates: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಪ್ರೀಕ್ವೆಲ್ ಅಥವಾ ಪೂರ್ವ ಕಾಂತಾರ ಸಿನಿಮಾ ಶೂಟಿಂಗ್ ಲಾಂಚ್‌ಗೆ ಇದೇ ನವೆಂಬರ್ 27ರಂದು ಹೊಂಬಾಳೆ ಫಿಲ್ಮ್ಸ್ ಮುಹೂರ್ತ ನಿಗದಿಪಡಿಸಲಾಗಿದೆ. ಇದೇ ಸಮಯದಲ್ಲಿ ಕಾಡುಬೆಟ್ಟ ಶಿವನಾಗಿ ರಿಷನ್ ಶೆಟ್ಟಿ ನಟಿಸಲಿರುವ ಈ ಸಿನಿಮಾ ಹೇಗಿರಲಿದೆ ಎಂಬ ಕಾತರವೂ ಹೆಚ್ಚಾಗಿದೆ.
ಬೆಂಗಳೂರು: ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ, ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ 2 ಪ್ರೀಕ್ವೆಲ್‌ಗೆ ನವೆಂಬರ್ 27ರಂದು ಅದ್ಧೂರಿ ಮುಹೂರ್ತ ನಿಗದಿಪಡಿಸಲಾಗಿದೆ. ಉಡುಪಿಯಲ್ಲೇ ಕಾಂತಾರ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಈ ಪೂರ್ವ ಕಾಂತಾರದ ಕಥೆ, ಚಿತ್ರಕಥೆ, ಸೆಟ್ ಇತ್ಯಾದಿಗಳ ಕುರಿತು ತಯಾರಿ ನಡೆಸುತ್ತಿರುವ ಚಿತ್ರತಂಡವು ಅಂದು ಈ ಸಿನಿಮಾವನ್ನು ಅಧಿಕೃತವಾಗಿ ಆರಂಭಿಸಲಿದೆ. ಈ ಮುಹೂರ್ತದ ಸುದ್ದಿಯೊಂದಿಗೆ ಕಾಂತಾರ ಪ್ರಿಕ್ವೆಲ್‌ನ ಕಥೆ ಮತ್ತು ಇತರೆ ವಿಷಯಗಳ ಕುರಿತೂ ಚರ್ಚೆಯಾಗುತ್ತಿದೆ.
ಕಾಂತಾರ ಪ್ರಿಕ್ವೇಲ್ ಕಥೆ ಏನಿರಬಹುದು?
ಇದೀಗ ಪಿಂಕ್‌ವಿಲ್ ಸಿನಿಮಾ ವೆಬ್ ತಾಣ ವರದಿ ಮಾಡಿದ ಪ್ರಕಾರ ಕಾಂತಾರ 2ನಲ್ಲಿ ತುಳುನಾಡಿನ ದೈವದ ಮೂಲ ಕಥೆ ಇರಲಿದೆಯಂತೆ. ಕ್ರಿಶ 301-400 ಕಾಲದ ಕಥೆ ಇರಲಿದೆಯಂತೆ. ಇತಿಹಾಸದ ಪುಟಗಳನ್ನು ಆಧಾರವಾಗಿಟ್ಟುಕೊಂಡು ನೈಜತೆಗೆ ಧಕ್ಕೆಯಾಗದಂತೆ ಕಾಲ್ಪನಿಕ ಕಥೆಯೊಂದನ್ನು ಕಟ್ಟುವ ಕೆಲಸದಲ್ಲಿ ರಿಷಬ್ ಶೆಟ್ಟಿ ನಿರತರಾಗಿದ್ದಾರೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ಕಾಂತಾರ 2 ತೆರೆಗೆ ಬರುವ ನಿರೀಕ್ಷೆಯಿದೆ. ತುಳುನಾಡಿನ ಇತಿಹಾಸದ ಕಥೆ, ಪಂಜುರ್ಲಿ ದೈವದ ಮೂಲದ ಕಥೆ ಹೇಳುವಾಗ, ಕ್ರಿಶ 301-400ರ ಕಥೆಯನ್ನು ಕಾಂತಾರ ಒಳಗೊಂಡಿದ್ದರೆ ಈ ಸಿನಿಮಾದ ದೃಶ್ಯಗಳು ಬೇರೆ ರೀತಿಯೇ ಇರಬೇಕಾಗುತ್ತದೆ. ಇದು ವೀಕ್ಷಕರಿಗೆ ಹೊಸ ಅನುಭವ ನೀಡುವುದೇ ಕಾದು ನೋಡಬೇಕಿದೆ.
ಈ ಹಿಂದೆ ರಿಷಬ್ ಶೆಟ್ಟಿ ಮಾಹಿತಿ ನೀಡಿದ ಪ್ರಕಾರ ಕಾಂತಾರ ಚಿತ್ರದ ಚಿತ್ರಿಕರಣದ ವೇಳೆಯೇ ಈ ಸಿನಿಮಾದ ಪ್ರೀಕ್ವೆಲ್ ಕಲ್ಪನೆ ಅವರಿಗೆ ಹೊಳೆಯಿತ್ತಂತೆ. ವರದಿಗಳ ಪ್ರಕಾರ ಕೃಷಿ, ಊಳಿಗಮಾನ್ಯ ಪದ್ಧತಿ, ಭೂಮಿಯ ಒತ್ತುವರಿ, ಪರಿಸರ ರಕ್ಷಣೆ, ಮನುಷ್ಯ ಮತ್ತು ಪ್ರಕೃತಿ ಸಂಘರ್ಷ ಹೀಗೆ ಹಲವು ಅಂಶಗಳ ಕುರಿತು ಮಾತನಾಡಲಿದೆ ಎಂದಿದ್ದರು. ಕಾಂತಾರ ಚಿತ್ರದ ಕಾಡುಬೆಟ್ಟು ಶಿವನ ಪಾತ್ರಕ್ಕೆ ಈ ಚಿತ್ರದಲ್ಲಿ ವಿಶೇಷ ಮಹತ್ವ ಇರಲಿದೆ ಎಂಬ ಸುಳಿವನ್ನು ಅವರು ಈ ಹಿಂದೆ ನೀಡಿದ್ದರು. ಹೀಗಾಗಿ, ಕಾಡುಬೆಟ್ಟು ಶಿವನಾಗಿ ರಿಷಬ್ ಶೆಟ್ಟಿ ಹೇಗೆ ಕಾಣಿಸಲಿದ್ದಾರೆ ಎಂಬ ಕಾತರವೂ ಸಿನಿ ಪ್ರೇಕ್ಷಕರಲ್ಲಿದೆ. ಈ ಪಾತ್ರದ ಜತೆ ಬೇರೆ ಗೆಟಪ್ ಅಥವಾ ಪಾತ್ರಗಳಲ್ಲಿಯೂ ರಿಷಬ್ ಶೆಟ್ಟಿ ಕಾಣಿಸಿಕೊಳ್ಳಬಹುದು. ಪೂರ್ವ ಕಾಂತಾರದಲ್ಲಿ ಹಿಂದಿನ ಕಥೆ ಮಾತ್ರ ಇರುತ್ತದೆಯೋ ಈ ಹಿಂದೆ ಬಿಡುಗಡೆಯಾದ ಕಾಂತಾರದ ಮುಂದಿನ ಅಧ್ಯಾಯಗಳೂ ಕಾಣಸುತ್ತವೆಯೋ ಎನ್ನುವ ಕುತೂಹಲವೂ ಇದೆ.
ಕಾಂತಾರ 2ನಲ್ಲಿ ಹೊಸ ನಟ-ನಟಿಯರು ಇದ್ದಾರೆಯೇ?
ಕಾಂತಾರ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕರು ಕಾಂತಾರ 2ನಲ್ಲಿಯೂ ಇರಲಿದ್ದಾರೆ ಎನ್ನಲಾಗಿದೆ. ಇದೇ ಸಮಯದಲ್ಲಿ ಹೊಸ ಚಿತ್ರದ ಅವಶ್ಯಕತೆಗೆ ತಕ್ಕಂತೆ ಹೊಸ ಮುಖಗಳನ್ನೂ ಪರಿಚಯಿಸಲಿದೆ. ಜತೆಗೆ, ಈ ಕಾಂತಾರ ಪ್ರೀಕ್ವೆಲ್‌ನ ಬಜೆಟ್ ಕೂಡ ಹೆಚ್ಚಿಸಲಾಗುತ್ತಿದೆ. ಎಲ್ಲಾದರೂ ಬಜೆಟ್ ಹೆಚ್ಚಿದೆ ಎಂದು ಗ್ರಾಫಿಕ್ಸ್, ತಂತ್ರಜ್ಞಾನಗಳ ಥಳಕುಬಳಕು ಹೆಚ್ಚಿಸಿದರೂ ಕಾಂತಾರದ ಸಹಜ ಸೆಳೆತಕ್ಕೆ ಅಪಾಯವಾಗುವ ಸಾಧ್ಯತೆಯಿದೆ ಎಂಬ ಅಭಿಪ್ರಾಯವೂ ಇದೆ. ಯಾವುದೇ ಸಿನಿಮಾದ ಭಾಗ 2 ಶೂಟಿಂಗ್ ಮಾಡುವಾಗ ಚಿತ್ರತಂಡದ ಮುಂದೆ ಅನೇಕ ಸವಾಲುಗಳು ಇರುತ್ತವೆ. ಚಿತ್ರದ ಕಥೆಯ ಬಗ್ಗೆ, ಶೂಟಿಂಗ್ ದೃಶ್ಯಗಳ ಬಗ್ಗೆ ರಹಸ್ಯ ಕಾಪಾಡುವುದೇ ದೊಡ್ಡ ಸವಾಲು ಆಗಿರುತ್ತದೆ. ಸಿನಿಮಾದ ಮೊದಲ ಭಾಗ ಹುಟ್ಟುಹಾಕಿದ ಕುತೂಹಲವನ್ನು ಕಾಪಾಡಿಕೊಂಡು ಎರಡನೇ ಸಿನಿಮಾವನ್ನು ನಿರ್ಮಿಸಬೇಕಾಗುತ್ತದೆ.
ಕಾಂತಾರ ಮೊದಲ ಭಾಗಕ್ಕಿಂತ ಹೆಚ್ಚು ಅದ್ಧೂರಿಯಾಗಿ, ಹೆಚ್ಚು ಸಾಹಸ ದೃಶ್ಯಗಳನ್ನು ಇದು ಹೊಂದಿರಲಿದೆ. ಈ ಸಿನಿಮಾವನ್ನು ಒಟ್ಟು ಮೂರು ಹಂತಗಳಲ್ಲಿ ಶೂಟಿಂಗ್ ಮಾಡುವ ಯೋಜನೆಯಿದೆ. ಸಿನಿಮಾದ ಶೂಟಿಂಗ್ ಆಗಸ್ಟ್ 2024ರಲ್ಲಿ ಮುಗಿಯುವ ನಿರೀಕ್ಷೆಯಿದೆ.