Kantara Song: ಕಾಂತಾರ ಹಾಡು ಮರುಸೃಷ್ಟಿಸಲು ಹೋಗಿ ಮಕ್ಕಳು ಸೇರಿದಂತೆ 5 ಜನರಿಗೆ ಗಾಯ; ಇಲ್ಲಿದೆ ವಿಡಿಯೋ
Rishab Shetty Kantara film Craze: ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಕಾಂತಾರ ಸಿನಿಮಾದ ವೃತ್ತಾಕಾರದ ಬೆಂಕಿಯ ನಡುವೆ ದೈವ ನರ್ತನ ಮಾಡುವ ದೃಶ್ಯವನ್ನು ಮರು ಸೃಷ್ಟಿಸಲು ಹೋಗಿ 5 ಜನರು ಗಾಯಗೊಂಡ ಘಟನೆಯೊಂದು ವರದಿಯಾಗಿದೆ. ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಕಾಂತಾರ ಸಿನಿಮಾದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಕಾಂತಾರ ಬಿಡುಗಡೆಯಾಗಿ ಭರ್ತಿ ಒಂದು ವರ್ಷ ಕಳೆದಿದ್ದು, ಇತ್ತೀಚೆಗಷ್ಟೇ ಸಿನಿಮಾ ತಂಡ ಕಾಂತಾರದ ವರಹಾ ರೂಪಂ ಹಾಡಿನ ಹೊಸ ವಿಡಿಯೋ ಬಿಡುಗಡೆ ಮಾಡಿತ್ತು. ಕಾಂತಾರ ಹಾಡನ್ನು ವಿವಿಧ ಕಾರ್ಯಕ್ರಮಗಳಲ್ಲಿ ಥೀಮ್ ಆಗಿ ಬಳಸುವುದನ್ನೂ ಜನರು ಮುಂದುವರೆಸಿದ್ದಾರೆ. ಇತ್ತೀಚೆಗೆ ಗಣೇಶ ವಿಸರ್ಜನೆ ವೇಳೆ ಕಾಂತಾರ ಹಾಡನ್ನು ಮರು ಸೃಷ್ಟಿಸಲು ಹೋಗಿ ಮಕ್ಕಳು ಸೇರಿದಂತೆ 5 ಜನರು ಗಾಯಗೊಂಡ ಘಟನೆ ನಡೆದಿದೆ.
ಟ್ರೆಂಡಿಂಗ್ ಸುದ್ದಿ
ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಸುತ್ತಲೂ ಜನರು ಸೇರಿರುವ ಸಂದರ್ಭದಲ್ಲಿ ನಡುವೆ ವೃತ್ತಾಕಾರದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ದೈವ ನರ್ತನ ಮಾಡುವ ಸಂದರ್ಭದಲ್ಲಿ ಬೆಂಕಿ ಆಕಸ್ಮಿಕ ನಡೆದಿದೆ. ಈ ಕುರಿತು ವಿಡಿಯೋವನ್ನು ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಕಾಂತಾರ ಹಾಡನ್ನು ಮರು ಸೃಷ್ಟಿಸಲು ಪ್ರಯತ್ನಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ವಿಡಿಯೋದಲ್ಲಿ ಏನಿದೆ?
ಪುಟ್ಟ ಗಲ್ಲಿಯಂತೆ ಕಾಣಿಸುವ ಪ್ರದೇಶದಲ್ಲಿ ಮಕ್ಕಳು ಸೇರಿದಂತೆ ಸಾಕಷ್ಟು ಜನರು ನೆರೆದಿದ್ದಾರೆ. ನಡುವೆ ಖಾಲಿ ಸ್ಥಳದಲ್ಲಿ ದೈವ ವೇಷಧಾರಿ ನಿಂತಿದ್ದಾರೆ. ದೈವದ ಸುತ್ತಲೂ ಪೆಟ್ರೋಲ್ ಸುರಿಯಲಾಗಿದೆ. ನಡುವೆ ಕಾಂತಾರ ಸಿನಿಮಾದ ದೈವ ವೇಷಧಾರಿ ಕುಣಿಯಲು ರೆಡಿಯಾಗಿದ್ದಾರೆ. ಈ ಸಂದರ್ಭದಲ್ಲಿ ವೃತ್ತಾಕಾರಕ್ಕೆ ಬೆಂಕಿ ಹಚ್ಚಲಾಗಿದೆ. ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾದಲ್ಲಿ ಇದೇ ರೀತಿಯ ದೃಶ್ಯವಾಗಿದೆ.
ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದರಿಂದ ಒಮ್ಮೆಗೆ ಧಗ್ಗನೆ ಬೆಂಕಿ ಹತ್ತಿಕೊಂಡಿದೆ. ಒಂದು ಬದಿಯಲ್ಲಿ ನಿಂತವರಿಗೆ ಬೆಂಕಿಯ ಕೆನ್ನಾಲಗೆ ತಾಗಿದೆ. ಬೆಂಕಿಯ ಕಾವಿಗೆ ಕೆಲವು ಮಕ್ಕಳು ಬೆಂಕಿಯ ವೃತ್ತದೊಳಗೆ ಬೀಳುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಯುವಕರು, ಮಕ್ಕಳು ಸೇರಿದಂತೆ ಐದು ಜನರು ಗಾಯಗೊಂಡಿದ್ದಾರೆ. ಕಡಪ ವೈಎಸ್‌ಆರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬೆಂಕಿಯ ಕೆನ್ನಾಲಗೆ, ಉರಿಗೆ ದೈವ ನರ್ತಕರಿಗೂ ನರ್ತಿಸಲು ಸಾಧ್ಯವಾಗಿಲ್ಲ. ಅವರೂ ಬೆಂಕಿಯಿಂದ ಪರಿತಪಿಸಿದ್ದಾರೆ.
ಆಂಧ್ರಪ್ರದೇಶದ ಕಡಪ ಜಿಲ್ಲೆಯ ಯೆರ್ರಾಗುಂಟಲಾದಲ್ಲಿ ಗಣೇಶ ವಿಸರ್ಜನೆ ವೇಳೆ ಈ ಘಟನೆ ನಡೆದಿದೆ. ವಿವಿಧ ಕಾರ್ಯಕ್ರಮಗಳಲ್ಲಿ ಸಿನಿಮಾ ದೃಶ್ಯಗಳನ್ನು ಅನುಕರಿಸುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ, ವಿಶೇಷವಾಗಿ ಬೆಂಕಿಯ ಜತೆ ಚೆಲ್ಲಾಟ ಆಡಬಾರದು. ಈ ವಿಡಿಯೋಗೆ ಹಲವು ಕಾಮೆಂಟ್‌ಗಳು ಬಂದಿವೆ. "ಜನರು ಇತ್ತೀಚೆಗೆ ಹುಚ್ಚರಾಗುತ್ತಿದ್ದಾರೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಏನಿದು ಮೂರ್ಖತನ, ಪೊಲೀಸರು ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಇನ್ನೊಬ್ಬರು ಎಕ್ಸ್ ಬಳಕೆದಾರರು ಟ್ವೀಟ್ ಮಾಡಿದ್ದಾರೆ.
ಕಾಂತಾರ ಹಾಡಿನ ಮರುಸೃಷ್ಟಿ: ಇಲ್ಲಿದೆ ವಿಡಿಯೋ
ಕಾಂತಾರ ಸಿನಿಮಾದ ವರಹಾ ರೂಪಂ ಹೊಸ ವಿಡಿಯೋ ಬಿಡುಗಡೆ
ಕಳೆದ ವರ್ಷದ ಸೆ. 30ರಂದು ಕಾಂತಾರ ಸಿನಿಮಾ ಕರ್ನಾಟಕದಲ್ಲಿ ಮಾತ್ರ ಬಿಡುಗಡೆ ಆಗಿತ್ತು. 16 ಕೋಟಿ ವೆಚ್ಚದಲ್ಲಿ ಸಿನಿಮಾ ಮೂಡಿಬಂದಿತ್ತು. ಆದರೆ, ಸಿನಿಮಾ ರಿಲೀಸ್ ಆದ ಬಳಿಕ, ಮುಂದಾಗಿದ್ದು ಮಾತ್ರ ಹೊಸ ಇತಿಹಾಸ! ಕಾಂತಾರ ಸಿನಿಮಾ ಬಿಡುಗಡೆಯಾಗಿ ಸೆ. 30ಕ್ಕೆ ಒಂದು ವರ್ಷವಾಯ್ತು. ಈ ಹಿನ್ನೆಲೆಯಲ್ಲಿ ವರಾಹ ರೂಪಂ ಹಾಡಿನ ಪೂರ್ತಿ ವಿಡಿಯೋ ಹಾಡನ್ನು ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಶೇರ್ ಮಾಡಿದೆ. ಈ ಕುರಿತ ವರದಿ ಇಲ್ಲಿದೆ.