ಮುಂದಿನ ಜನ್ಮ ಅಂತ ಇದ್ದರೆ ನಾನೂ ನಿಮ್ಮ ಸಮುದಾಯದಲ್ಲಿ ಹುಟ್ಟಿ ದೈವದ ಸೇವೆ ಮಾಡುತ್ತೇನೆ: ರಿಷಬ್ ಶೆಟ್ಟಿ
ಮುಂದಿನ ಜನ್ಮ ಅಂತ ಇದ್ದರೆ ನಿಮ್ಮ ಸಮುದಾಯದಲ್ಲೇ ಹುಟ್ಟಿ ಆ ದೈವಕ್ಕೆ ಚಾಕರಿ ಮಾಡುವ ಅವಕಾಶ ಸಿಗುವಂತಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ರಿಷಬ್ ಶೆಟ್ಟಿ ಪಾಣರ ಸಮುದಾಯದಲ್ಲಿ ಹುಟ್ಟಬೇಕೆಂಬ ಮನದಾಸೆ ಹೇಳಿಕೊಂಡರು.
'ಕಾಂತಾರ' ಸಿನಿಮಾ ನಂತರ ರಿಷಬ್ ಶೆಟ್ಟಿ ಇಮೇಜ್ ಬಹಳ ಬದಲಾಗಿದೆ. ದಕ್ಷಿಣ ಕನ್ನಡದಲ್ಲಿ ಏನೇ ಪ್ರಮುಖ ಕಾರ್ಯಕ್ರಮಗಳಿದ್ದರೂ ಅಲ್ಲಿ ರಿಷಬ್ ಅವರಿಗೆ ಆಹ್ವಾನ ಇರುತ್ತದೆ. ಭಾನುವಾರವಷ್ಟೇ ಅನಂತ್‌ನಾಗ್ ಅವರ 75ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅದಕ್ಕೂ ಮುನ್ನ ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಉಡುಪಿಯ ಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮ
ಭಾನುವಾರ ಬೆಳಗ್ಗೆ ಉಡುಪಿಯ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಪಾಣರ ನಲಿಕೆ ಸಮುದಾಯ ಸಮಾವೇಶದಲ್ಲಿ ಭಾಗವಹಿಸಿ ರಿಷಬ್ ಶೆಟ್ಟಿ ಮಾತಾಡಿದರು. ''ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದು, ನಿಮ್ಮೆಲ್ಲರನ್ನು ಭೇಟಿ ಆಗಿದ್ದು, ನನಗೆ ಬಹಳ ಖುಷಿ ಆಯ್ತು. ದೈವ ಸೇವೆ ಅನ್ನೋದು ಈ ಕಾಲಘಟ್ಟದಲ್ಲಿ ಇಡೀ ಪ್ರಪಂಚಕ್ಕೆ ತಲುಪಬೇಕು ಎನ್ನುವುದು ನನ್ನ ಅಭಿಪ್ರಾಯ. 'ಕಾಂತಾರ' ಸಿನಿಮಾ ದೈವ ಪ್ರೇರಣೆಯಿಂದ ಆದ ಸಿನಿಮಾವೇ ಹೊರತು ನಾನು ಉದ್ಧೇಶಪೂರ್ವಕವಾಗಿ ಮಾಡಿದ ಸಿನಿಮಾ ಅಲ್ಲ.''
ಮುಂದಿನ ಜನ್ಮದಲ್ಲಿ ಪಾಣರ ಸಮುದಾಯದಲ್ಲಿ ಹುಟ್ಟುತ್ತೇನೆ
''ಅಮೆರಿಕದ ಒಂದು ಮ್ಯೂಸಿಯಂನಲ್ಲಿ ದೈವದ ಮೊಗ ಇರಿಸಿದ್ದಾರೆ. ದಕ್ಷಿಣ ಕನ್ನಡದ ಅವಿಭಾಜ್ಯ ಅಂಗವಾದ ದೈವದ ಶಕ್ತಿ ಎಷ್ಟಿದೆ ಎಂದು ನೀವೇ ಊಹಿಸಿ. ಅಲ್ಲಿನ ಕೆಲವರು ನನಗೆ ಫೋಟೋ ಕಳಿಸಿದ್ದಾರೆ. ಪಂಜುರ್ಲಿಯ ಮೊಗ ಎಷ್ಟು ಚೆಂದ ಎಂದರೆ ಅದನ್ನು ನಿಮಗೆ ಕಳಿಸುತ್ತೇನೆ, ನೀವು ಅದನ್ನು ಸಮುದಾಯದವರಿಗೆಲ್ಲಾ ಕಳಿಸಿ. ಸಿನಿಮಾ ಮೂಲಕ ನಾನು ದೈವದ ಸೇವೆ ಮಾಡಿದ್ದೇನೆ, ಆದ್ದರಿಂದ ನಾನೂ ನಿಮ್ಮ ಸಮುದಾಯದವನೇ ಆಗಿದ್ದೇನೆ. ಮುಂದಿನ ಜನ್ಮ ಅಂತ ಇದ್ದರೆ ನಿಮ್ಮ ಸಮುದಾಯದಲ್ಲೇ ಹುಟ್ಟಿ ಆ ದೈವಕ್ಕೆ ಚಾಕರಿ ಮಾಡುವ ಅವಕಾಶ ಸಿಗುವಂತಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ'' ಎಂದು ರಿಷಬ್ ಶೆಟ್ಟಿ ಮನದಾಸೆ ಹೇಳಿಕೊಂಡರು.
ಕಾಂತಾರ ಪ್ರೀಕ್ವೆಲ್‌ನಲ್ಲಿ ಬ್ಯುಸಿ
2022 ಸೆಪ್ಟೆಂಬರ್ 30 ರಂದು 'ಕಾಂತಾರ' ಸಿನಿಮಾ ರಿಲೀಸ್ ಆಗಿತ್ತು. ಹೆಚ್ಚಿನ ಪ್ರಮೋಷನ್ ಇಲ್ಲದೆ ಚಿತ್ರವನ್ನು ಸೈಲೆಂಟ್ ಆಗಿ ರಿಲೀಸ್ ಮಾಡಲಾಗಿತ್ತು. ನಂತರ ಆಗಿದ್ದೇ ಮ್ಯಾಜಿಕ್, ರಿಷಬ್ ಶೆಟ್ಟಿ ಹೇಳಿದಂತೆ ಸಿನಿಮಾಗೆ ದೈವದ ಆಶೀರ್ವಾದ ಇದ್ದಿದ್ದರಿಂದ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. 15 ಕೋಟಿ ಖರ್ಚು ಮಾಡಿ ತಯಾರಾಗಿದ್ದ ಸಿನಿಮಾ 400 ಕೋಟಿ ಲಾಭ ಮಾಡಿತು. ಸದ್ಯಕ್ಕೆ ರಿಷಬ್ ಕಾಂತಾರ ಪ್ರೀಕ್ವೆಲ್‌ನಲ್ಲಿ ಬ್ಯುಸಿ ಇದ್ದಾರೆ. ಸ್ಕ್ರಿಪ್ಟ್ ಕೆಲಸಗಳು ಮುಗಿದಿವೆ. ಆದಷ್ಟು ಬೇಗ ಸಿನಿಮಾ ಸೆಟ್ಟೇರಲಿದೆ. ಪ್ರೀಕ್ವೆಲ್ ಬಗ್ಗೆ ಮಾಹಿತಿ ತಿಳಿಯಲು ಸಿನಿಪ್ರಿಯರು ಕೂಡಾ ಕಾಯುತ್ತಿದ್ದಾರೆ.