Yash Movie: ರಾಕಿಂಗ್ ಸ್ಟಾರ್ ಯಶ್ ನಟನೆಯ ರಾಜಾ ಹುಲಿ ಸಿನಿಮಾ 11 ವರ್ಷಗಳ ಬಳಿಕ ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ
Rocking Star Yash Movie: ಯಶ್ ನಟನೆಯ ರಾಜಾ ಹುಲಿ ಸಿನಿಮಾ ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಲಿದೆ. ಡ್ರಾಮಾ, ಗೂಗ್ಲಿ ಬಳಿಕ ಯಶ್ ನಟನೆಯ ರಾಜಾ ಹುಲಿ ಕೂಡ ಹಿಟ್ ಚಿತ್ರಗಳ ಸಾಲಿಗೆ ಸೇರಿತ್ತು.

ಬೆಂಗಳೂರು: ಯಶ್ ನಟನೆಯ ರಾಜಾ ಹುಲಿ ಸಿನಿಮಾ ಒಂದಾನೊಂದು ಕಾಲದಲ್ಲಿ ಕರ್ನಾಟಕದ ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಯಶ್ ಅಭಿಮಾನಿಗಳಿಗೆ ಈಗ ಮತ್ತೆ ಶುಭ ಸುದ್ದಿಯೊಂದು ಬಂದಿದೆ. ಈ ರಾಜಾ ಹುಲಿಯನ್ನು ಮತ್ತೆ ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ದೊರಕಿದೆ. ಈ ವಾರ ಚಿತ್ರಮಂದಿರಗಳಲ್ಲಿ ಕನ್ನಡದಲ್ಲಿ ಕೆಂಡ, ರೂಪಾಂತರ, ಫ್ಯಾಮಿಲಿ ಡ್ರಾಮಾ, ರಕ್ತಾಕ್ಷ ಸಿನಿಮಾಗಳು ರಿಲೀಸ್ ಆಗಲಿವೆ. ಸ್ಟಾರ್ ನಟರ ಪ್ರಮುಖ ಸಿನಿಮಾಗಳ ಬಿಡುಗಡೆ ಇಲ್ಲದೆ ಇರುವ ಕಾರಣ ಯಶ್ ನಟನೆಯ ರಾಜಾ ಹುಲಿ ಸಿನಿಮಾವೂ ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಲಿದೆ.
ಡ್ರಾಮಾ, ಗೂಗ್ಲಿ ಬಳಿಕ ಯಶ್ ನಟನೆಯ ರಾಜಾ ಹುಲಿ ಕೂಡ ಹಿಟ್ ಚಿತ್ರಗಳ ಸಾಲಿಗೆ ಸೇರಿತ್ತು. ಗ್ರಾಮೀಣ ಭಾಗದ ಯುವಕರ ಕಥೆ, ಸ್ನೇಹ, ಪ್ರೀತಿಯ ಸುತ್ತ ರಾಜಾ ಹುಲಿ ಸಿನಿಮಾದ ಕಥೆ ಇದೆ. ತಮಿಳಿನ ಸೂಪರ್ಹಿಟ್ ಸಿನಿಮಾ ಸುಂದರಪಾಂಡ್ಯನ್ ಚಿತ್ರದ ಕನ್ನಡ ಆವೃತ್ತಿಯಾಗಿ ರಾಜಾ ಹುಲಿಯನ್ನು ಗುರು ದೇಶಪಾಂಡೆ ನಿರ್ದೇಶಿಸಿದ್ದರು. ಇದಕ್ಕೂ ಮೊದಲು ಯಶ್ ಹಳ್ಳಿ ಯುವಕನ ಪಾತ್ರದಲ್ಲಿ ಮಿಂಚಿದ್ದರು. ಆದರೆ, ರಾಜಾ ಹುಲಿಯಲ್ಲಿ ದೊಡ್ಡ ಮೀಸೆ, ಸಿಲ್ಕ್ ಶರ್ಟ್ ಮತ್ತು ವೈಟ್ ಪಂಚೆ ಮೂಲಕ ಕಾಣಿಸಿಕೊಂಡಿದ್ದರು.
2013ರಲ್ಲಿ ಈ ಚಿತ್ರ ಬಿಡುಗಡೆಯಾದ ಬಳಿಕ ಸೂಪರ್ಹಿಟ್ ಆಗಿತ್ತು. ಇದೀಗ ಮತ್ತೆ ಚಿತ್ರಮಂದಿರಕ್ಕೆ ಆಗಮಿಸುತ್ತಿದೆ. ಈ ಶುಕ್ರವಾರ ಕರ್ನಾಟಕದ ವಿವಿಧ ಚಿತ್ರಮಂದಿರಗಳಲ್ಲಿ ರಾಜಾ ಹುಲಿ ಪ್ರದರ್ಶನ ಕಾಣಲಿದೆ. ಯಶ್ ಅಭಿಮಾನಿಗಳು ದೊಡ್ಡ ಪರದೆಯಲ್ಲಿ ಮತ್ತೊಮ್ಮೆ ರಾಜಾ ಹುಲಿಯನ್ನು ಕಣ್ತುಂಬಿಕೊಳ್ಳಬಹುದು. ಈ ಸಿನಿಮಾಕ್ಕೆ ಹಂಸಲೇಖಾ ಸಂಗೀತವಿದೆ. ಯಶ್ಗೆ ನಾಯಕಿಯಾಗಿ ಮೇಘನಾ ರಾಜ್ ನಟಿಸಿದ್ದಾರೆ.
ರಾಜಾ ಹುಲಿಯಲ್ಲಿ ಯಶ್ ತಂದೆಯಾಗಿ ವಿಲನ್ ಪಾತ್ರದಲ್ಲಿ ಚರಣ್ ರಾಜ್ ಮಿಂಚಿದ್ದಾರೆ. ಚಿಕ್ಕಣ್ಣ, ವಸಿಷ್ಠ ಎನ್ ಸಿಂಹ, ಮಿತ್ರ, ಹರ್ಷ, ಮಂಜು ಮಾಂಡವ್ಯ ಮುಂತಾದವರು ನಟಿಸಿದ್ದಾರೆ. ಇವರೆಲ್ಲರೂ ಯಶ್ ಜತೆ ಈ ಸಿನಿಮಾದ ಬಹುಭಾಗ ಸ್ನೇಹಿತರಾಗಿ ಆವರಿಸಿಕೊಂಡಿದ್ದಾರೆ. ಇವರು ಮಾತ್ರವಲ್ಲದೆ ಸುಧಾ ಬೆಳವಾಡಿ, ಎಂಎನ್ ಲಕ್ಷ್ಮಿದೇವಿ, ಗಿರಿ ಶಿವಣ್ಣ, ಅರುಣಾ ಬಾಲ್ರಾಝ್, ರಾಜೇಂದ್ರ ರಾಓ, ಜಡೇಶ್ ಕುಮಾರ್, ಪ್ರಕಾಶ್ ಹೆಗ್ಗೋಡು ಮುಂತಾದವರು ನಟಿಸಿದ್ದಾರೆ. ಅಂದಹಾಗೆ, ಹನ್ನೊಂದು ವರ್ಷದ ಹಿಂದೆ ಸಲ್ಮಾನ್ ಖಾನ್ ನಟನೆಯ ಕೃಶ್ 3 ಸಿನಿಮಾದ ಜತೆಯೇ ಯಶ್ ನಟನೆಯ ರಾಜಾ ಹುಲಿ ಬಿಡುಗಡೆಯಾಗಿತ್ತು.
ಈ ವಾರ ಚಿತ್ರಮಂದಿರಗಳಲ್ಲಿ ಕನ್ನಡದಲ್ಲಿ ಕೆಂಡ, ರೂಪಾಂತರ, ಫ್ಯಾಮಿಲಿ ಡ್ರಾಮಾ, ರಕ್ತಾಕ್ಷ ಸಿನಿಮಾಗಳು ರಿಲೀಸ್ ಆಗಲಿವೆ. ಈ ಸಿನಿಮಾಗಳಲ್ಲಿ ಯಾವ ಸಿನಿಮಾ ಅನಿರೀಕ್ಷಿತವಾಗಿ ಸೂಪರ್ಹಿಟ್ ಆಗಿ ಅಚ್ಚರಿ ನೀಡುವುದು ಎಂದು ಕಾದು ನೋಡಬೇಕಿದೆ.
ರಾಜ್ ಬಿ ಶೆಟ್ಟಿ ನಟನೆಯ ರೂಪಾಂತರ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಟ್ರೇಲರ್ ಡಿಫರೆಂಟ್ ಆಗಿದ್ದು, ಕಂಟೆಂಟ್ ಆಧರಿತ ಸಿನಿಮಾವಾಗಿರುವ ಸೂಚನೆಯನ್ನು ನೀಡಿದೆ. ರಾಜ್ ಬಿ ಶೆಟ್ಟಿ ನಟನೆಯ ನಿರ್ದೇಶನದ ಒಂದು ಮೊಟ್ಟೆಯ ಕಥೆಯನ್ನು ಬೆಂಬಲಿಸಿದ ಸುಹಾನ್ ಪ್ರಸಾದ್ ಅವರ ಎರಡನೇ ನಿರ್ಮಾಣದ ಸಿನಿಮಾ ಇದಾಗಿದೆ. ಹೀಗಾಗಿ ಈ ಸಿನಿಮಾ ಈ ವಾರದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ.