Yash: ‘ದುಡ್ಡಿನ ಸಹಾಯ ಯಾರು ಬೇಕಾದರೂ ಮಾಡಬಹುದು, ಮನೆ ಮಗ ಬರ್ತಾನಾ?’ ಮೃತ ಕುಟುಂಬಗಳಿಗೆ ಯಶ್ ಸಾಂತ್ವನ
ಆ ಕುಟುಂಬಕ್ಕೆ ಏನು ಬೇಕೋ ಅದನ್ನು ಮಾಡೋಣ. ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ. ಅದನ್ನು ನಾನಿಲ್ಲಿ ಹೇಳುವ ಅವಶ್ಯಕತೆಯಿಲ್ಲ. ನಮ್ಮ ಮೇಲೆ ಪ್ರೀತಿ ಗೌರವ ಇದ್ದರೆ, ಜವಾಬ್ದಾರಿಯಿಂದ ನಡೆದುಕೊಳ್ಳಿ. ನಿಮಗೂ ಕುಟುಂಬಗಳಿವೆ- ಸೂರಣಗಿ ಗ್ರಾಮದ ಮೃತ ಅಭಿಮಾನಿಗಳ ಕುಟುಂಬಕ್ಕೆ ಭೇಟಿ ನೀಡಿದ ಬಳಿಕ ಯಶ್ ಮನವಿ ಮಾಡಿದ್ದಾರೆ.
Yash: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಅಭಿಮಾನಿಗಳ ಮನೆಗೆ ನಟ ಯಶ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರದ ಬಳಿಯ ಸೂರಣಗಿ ಗ್ರಾಮಕ್ಕೆ ತೆರಳಿ ಮೃತ ಮೂರೂ ಯುವಕರ ಮನೆಗಳಿಗೆ ತೆರಳಿ ಕಣ್ಣೀರ ಸಾಂತ್ವನ ಹೇಳಿದ್ದಾರೆ.
ಗೋವಾದಲ್ಲಿ ಟಾಕ್ಸಿಕ್ ಸಿನಿಮಾ ಶೂಟಿಂಗ್‌ನಲ್ಲಿದ್ದ ಯಶ್‌ಗೆ, ಈ ವಿಚಾರ ತಿಳಿಯುತ್ತಿದ್ದಂತೆ, ವಿಶೇಷ ವಿಮಾನದಲ್ಲಿ ಶೂಟಿಂಗ್ ಸ್ಥಗಿತಗೊಳಿಸಿ ಗದಗ ಬಳಿಯ ಸೂರಣಗಿಗೆ ಆಗಮಿಸಿದ್ದಾರೆ. ಯಶ್ ಬರ್ತಾರೆ ಎಂಬ ಸುದ್ದಿ ಮೊದಲೇ ತಿಳಿದಿದ್ದರಿಂದ, ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಜಮಾಯಿಸಿದ್ದರು.
ಮೃತ ಯುವಕರಾದ ನವೀನ್, ಹನುಮಂತ, ಮುರಳಿ ಮೂವರ ಮನೆಗೂ ತೆರಳಿದ ಯಶ್, ಮೂರೂ ಕುಟುಂಬದವರ ಜತೆಗೆ ಮಾತನಾಡಿ ಸಾಂತ್ವನ ಹೇಳಿದ್ದಾರೆ. ಮನೆ ಮಂದಿಯವರ ಜತೆಗೆ ತಾವೂ ಕಣ್ಣೀರು ಹಾಕಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಸಹ ನಿಯೋಜಿಸಲಾಗಿತ್ತು.
ಯಶ್ ಹೇಳಿದ್ದೇನು?
"ನಾವು ಯಾರೂ ಈ ಬರ್ತ್‌ಡೇ ಸೆಲೆಬ್ರೇಷನ್‌ಅನ್ನು ಇಷ್ಟಪಡಲ್ಲ. ಈ ಬರ್ತ್‌ಡೇ ಅಂದರೆನೇ ನನಗೆ ಭಯ ಆಗ್ತಿದೆ. ನಿಜವಾಗಲೂ ಈ ಬರ್ತ್‌ಡೇ ಆಚರಿಸದಿರಲೂ, ಇಂಥ ಘಟನೆಗಳೇ ಕಾರಣ. ನನ್ನ ಬರ್ತ್‌ಡೇಯಿಂದ ಯಾರಿಗೂ ತೊಂದರೆ ಆಗಬಾರದು. ದುಡ್ಡಿನ ಸಹಾಯ ಯಾರು ಬೇಕಾದರೂ ಮಾಡಬಹುದು, ಮನೆ ಮಗ ಬರ್ತಾನಾ? ಏನೇ ಕೊಟ್ಟರೂ ಮಗ ಬರ್ತಾನಾ?
ಅವರೆಲ್ಲರಿಗೂ ಈಗಿನ್ನು 20 ವರ್ಷ. ಹಾಗಾಗಿ ನಾನು ಎಲ್ಲರಿಗೂ ಹೇಳುವುದೇನೆಂದರೆ, ಈ ಬೈಕ್ ಚೇಸ್ ಮಾಡುವುದು, ಈ ಅಭಿಮಾನ ಜೀವಕ್ಕೆ ಹಾನಿ ಆಗಬಾರದು. ನಿಜವಾದ ಪ್ರೀತಿ ತೋರಿಸಬೇಕಿದ್ದರೆ, ಒಳ್ಳೆಯ ಕೆಲಸ ಮಾಡಿ. ಅವರೂ ಬೆಳೀಬೇಕು. ಅವರ ಖುಷಿಯೇ ನಮಗೆ ಅಭಿಮಾನ.
ಆ ಕುಟುಂಬಕ್ಕೆ ಏನು ಬೇಕೋ ಅದನ್ನು ಮಾಡೋಣ. ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ. ಅದನ್ನು ನಾನಿಲ್ಲಿ ಹೇಳುವ ಅವಶ್ಯಕತೆಯಿಲ್ಲ. ನಮ್ಮ ಮೇಲೆ ಪ್ರೀತಿ ಗೌರವ ಇದ್ದರೆ, ಜವಾಬ್ದಾರಿಯಿಂದ ನಡೆದುಕೊಳ್ಳಿ. ನಿಮಗೂ ಕುಟುಂಬಗಳಿವೆ" ಎಂದಿದ್ದಾರೆ ಯಶ್.
ಮೂವರ ಸಾವು, ಮೂವರಿಗೆ ತೀವ್ರ ಗಾಯ
ಭಾನುವಾರ ರಾತ್ರಿ ಸೂರಣಗಿ ಗ್ರಾಮದಲ್ಲಿ ಯಶ್ ಬರ್ತ್‌ಡೇ ನಿಮಿತ್ತ ಕೆಲವು ಯುವಕರು ಬ್ಯಾನರ್ ಕಟ್ಟುತ್ತಿದ್ದರು. ಬ್ಯಾನರ್ ಕಟ್ಟುವ ವೇಳೆ, ವಿದ್ಯುತ್ ತಂತಿ ತಗುಲಿದೆ. ಪರಿಣಾಮ ಆರು ಜನರ ಪೈಕಿ ಮೂವರು ಮೃತಪಟ್ಟರೆ, ಇನ್ನೂ ಮೂವರಿಗೆ ತೀವ್ರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಯುವಕರನ್ನು ಹನುಮಂತ ಹರಿಜನ (21), ಮುರಳಿ ನಡುವಿನಮನಿ (20) ಮತ್ತು ನವೀನ್ ಗಾಜಿ (19) ಎಂದು ಗುರುತಿಸಲಾಗಿದೆ. ಈ ದುರಂತದಲ್ಲಿ ಇನ್ನೂ ಮೂವರಿಗೆ ಗಾಯಗಳಾಗಿವೆ. ಭಾನುವಾರ ರಾತ್ರಿಯೇ ಈ ಘಟನೆ ನಡೆದಿದ್ದು, ವಿದ್ಯುತ್ ಪ್ರವಹಿಸುತ್ತಿದ್ದಂತೆ, ಎಲ್ಲರನ್ನೂ ಲಕ್ಷ್ಮೇಶ್ವರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಪೈಕಿ ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ, ಮಂಜುನಾಥ್ ಹರಿಜನ, ದೀಪಕ್ ಹರಿಜನ, ಪ್ರಕಾಶ್ ಮ್ಯಾಗೇರಿ ಎಂಬುವವರು ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.
ಭೇಟಿ ನೀಡುವಂತೆ ಒತ್ತಾಯ
ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ಯಶ್ ಅವರ ಫ್ಯಾನ್ಸ್ ಜತೆಗೆ ನೆಟ್ಟಿಗರು, ಈ ಕೂಡಲೇ ಯಶ್ ಮೃತರ ಮನೆಗಳಿಗೆ ಭೇಟಿ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ನಟ ಯಶ್ ಈ ಕೂಡಲೇ ನಮ್ಮೂರಿಗೆ ಬರಬೇಕು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಬೇಕು ಎಂದು ಆಗ್ರಹಿಸಿದ್ದರು. ಅದರಂತೆ, ಈ ವಿಚಾರ ಯಶ್ ಗಮನಕ್ಕೂ ಬಂದಿದ್ದು, ಗ್ರಾಮಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಸರ್ಕಾರದಿಂದ ಪರಿಹಾರ ಘೋಷಣೆ
ಇನ್ನು ಈ ಅವಘಡ ಸಂಭವಿಸುತ್ತಿದ್ದಂತೆ, ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ಪರಿಹಾರ ಮತ್ತು ಮೂವರು ಗಾಯಾಳುಗಳಿಗೆ ತಲಾ 50 ಸಾವಿರ ಮೊತ್ತವನ್ನು ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ ಎಂದು ಗದಗ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ. ಈ ನಡುವೆ ಯಶ್ ಅವರಿಂದಲೂ ಮೃತರ ಕುಟುಂಬಗಳಿಗೆ ಹಣಕಾಸಿನ ಸಹಾಯ ಆಗಲಿದೆ ಎಂದೂ ಕೆಲ ಮೂಲಗಳು ತಿಳಿಸಿವೆ.