Rummy Aata Movie: ಆನ್‌ಲೈನ್ ಗೇಮ್ ಕುರಿತು ಎಚ್ಚರಿಸುವ ರಮ್ಮಿ ಆಟ ಸಿನಿಮಾ ಮುಂದಿನ ತಿಂಗಳು ರಿಲೀಸ್, ಕನ್ನಡ ಸುದ್ದಿ ನಿರೂಪಕ ಈಗ ಹೀರೋ
Rummy Aata Kannada Movie: ಆನ್‌ಲೈನ್ ರಮ್ಮಿ ಗೇಮ್ ಕುರಿತು ಜನರಿಗೆ ಎಚ್ಚರಿಕೆ ನೀಡುವಂತಹ ಸಿನಿಮಾವೊಂದು ಮುಂದಿನ ತಿಂಗಳು ತೆರೆಕಾಣಲಿದೆ. ಕನ್ನಡ ಸುದ್ದಿ ನಿರೂಪಕರಾಗಿದ್ದವರೊಬ್ಬರು ಈಗ ಈ ಸಿನಿಮಾದಲ್ಲಿ ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ.
ಬೆಂಗಳೂರು: ಆನ್‌ಲೈನ್ ರಮ್ಮಿ ಆಟವನ್ನು ನಂಬಿ ಸಾಕಷ್ಟು ಜನರು ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಪ್ರತಿಯೊಬ್ಬರು ಮೊಬೈಲ್ ಬಳಸುತ್ತಾರೆ. ಆ ಸಮಯದಲ್ಲಿ ಲಕ್ಷ ಕೋಟಿ ಗಳಿಸಿ ಎಂಬ ಆಮೀಷದ ರಮ್ಮಿ ಜಾಹೀರಾತುಗಳು ಜನಸಾಮಾನ್ಯರನ್ನು ಸೆಳೆಯುತ್ತವೆ. ಅಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಆಟ ಆಡಿ ಕೊನೆಗೆ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಾರೆ. ಇದೇ ಕಾರಣದಿಂದ ಸಾಕಷ್ಟು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣದಾಸೆಯಿಂದ ಸೋಷಿಯಲ್ ಮೀಡಿಯಾದಲ್ಲಿ ರಮ್ಮಿ ಗೇಮ್‌ಗಳನ್ನು ಪ್ರಮೋಟ್ ಮಾಡುವವರೂ ಸಾಕಷ್ಟು ಜನರು ಇದ್ದಾರೆ.
ಮನರಂಜನೆಗಾಗಿ ಆಡುವ ಆನ್ ಲೈನ್ ಗೇಮ್ ಕೆಲವರ ಜೀವನವನ್ನೇ ಸರ್ವನಾಶ ಮಾಡುತ್ತಿದೆ. ರಮ್ಮಿ ಆಟ ಇತ್ತೀಚೆಗೆ ತುಂಬಾ ಫೇಮಸ್ ಆಗಿದೆ. ಇದಕ್ಕೆ ಒಮ್ಮೆ ಅಡಿಕ್ಟ್ ಆದಮೇಲೆ ಅದನ್ನು ಬಿಡಲು ಸಾಧ್ಯವೇ ಆಗದು. ಈ ಆಟ ಆಡುವುದರಿಂದ ಕೆಲವೊಮ್ಮೆ ತುಂಬಾ ಲಾಭ ಆಗಬಹುದು. ಜೊತೆಗೆ ಕೆಟ್ಟದ್ದೂ ಆಗಬಹುದು. ಈ ಆಟಕ್ಕೆ ಸರಕಾರವೇ ಅನುಮತಿ ನೀಡಿದೆ. ಸೆಲೆಬ್ರಿಟಿಗಳು ಇದರ ಜಾಹೀರಾತು ಮಾಡುವುದರಿಂದ ಅಭಿಮಾನಿಗಳೂ ಅದನ್ನೇ ಅನುಸರಿಸುತ್ತಾರೆ.
ರಮ್ಮಿ ಆಟ ಸಿನಿಮಾ
ಈಗಿನ ಕಾಲದಲ್ಲಿ ಆನ್ ಲೈನ್ ರಮ್ಮಿ ಆಡುವುದರಿಂದ ಏನೆಲ್ಲ ತೊಂದರೆಗಳಾಗುತ್ತವೆ, ಜನ ಯಾವ ರೀತಿ ಮೋಸ ಹೋಗುತ್ತಾರೆ. ಈ ಆಟದಿಂದ ಏನೆಲ್ಲ ಪರಿಣಾಮಗಳಾಗುತ್ತವೆ ಎಂಬ ಕಥೆಯನ್ಬು ಇಟ್ಟುಕೊಂಡು "ರಮ್ಮಿ ಆಟ" ಎಂಬ ಚಿತ್ರಕ್ಕೆ ಉಮರ್ ಷರೀಫ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರೊಂದಿಗೆ ಚಿತ್ರದ ನಿರ್ಮಾಣ ಸಹ ಮಾಡಿದ್ದಾರೆ. ಒಂದಷ್ಟು ಡ್ರಾಮಾ ಕಥೆ ಬರೆದು ನಿರ್ದೇಶನ ಮಾಡಿರುವ ಉಮರ್ ಪರೀಫ್ ಅವರ ನಿರ್ದೇಶನದ ಮೊದಲ ಚಿತ್ರವಿದು.
ಈಗಾಗಲೇ ತನ್ನ ಶೂಟಿಂಗ್, ಪೋಸ್ಟ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿಕೊಂಡಿರುವ ರಮ್ಮಿ ಆಟ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಯು' ಸರ್ಟಿಫಿಕೇಟ್ ಸಿಕ್ಕಿದೆ. ಮುಂದಿನ ತಿಂಗಳು ಚಿತ್ರವನ್ನು ರಿಲೀಸ್ ಮಾಡುವ ಸಿದ್ದತೆ ನಡೆದಿದ್ದು, ನೆರಳು ಮೀಡಿಯಾ ಥ್ರೂ ಲಿಖಿತ್ ಫಿಲಂಸ್ ಮೂಲಕ ಚಿತ್ರ ಬಿಡುಗಡೆಯಾಗುತ್ತಿದೆ.
ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ಪ್ರಶಂಸೆ ಸಹ ಪಡೆದಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಎಯ್ಟ್ ಏಂಜಲ್ಸ್ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕಾರ್ತೀಕ್ ಎಸ್. ಅವರ ಛಾಯಾಗ್ರಹಣ, ಉಮರ್ ಅವರ ಸಂಭಾಷಣೆ, ಅಮೀರ್ ಅವರ ಸಾಹಸ, ಪ್ರಭು ಎಸ್.ಆರ್. ಅವರ ಸಂಗೀತ, ಗಣೇಶ್, ಮಾಧುರಿ, ಉಮರ್ ಷರೀಫ್ ಅವರ ಸಾಹಿತ್ಯ ಈ ಚಿತ್ರಕ್ಕಿದೆ.
ಸುದ್ದಿ ನಿರೂಪಕ ಈಗ ಹೀರೋ
ನ್ಯೂಸ್ ಚಾನೆಲ್ ನಲ್ಲಿ ಕೆಲಸ ಮಾಡಿರುವ ರಾಘವ ಸೂರ್ಯ ಅವರು ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ವಿನ್ಯಾ ಶೆಟ್ಟಿ, ಸ್ನೇಹರಾವ್, ಅಭಿಗೌಡ, ಶ್ರೀಕರ್, ರೋಷನ್ ಶ್ರೀನಿವಾಸ್, ಪಾವನ ಲಿಂಗಯ್ಯ, ಗಿರೀಶ, ನೋಹನ್ ಮುಂತಾದವರು ಉಳಿದ ತಾರಾಗಣದಲ್ಲಿದ್ದಾರೆ.