‘ಉಗ್ರಂ ಸಿನಿಮಾ ಬಿಡುಗಡೆ ಆಗಿದ್ದೇ ದರ್ಶನ್, ದಿನಕರ್ ತೂಗುದೀಪ ಅವ್ರಿಂದ!’ ಕಷ್ಟದ ದಿನಗಳಲ್ಲಿ ಕೈ ಹಿಡಿದವ್ರನ್ನು ನೆನೆದ ಪ್ರಶಾಂತ್ ನೀಲ್
ಸಲಾರ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನೆಲ್‌ಗೆ ಪ್ರಶಾಂತ್ ನೀಲ್ ವಿಶೇಷ ಸಂದರ್ಶನ ನೀಡಿದ್ದಾರೆ. 1 ಗಂಟೆಯ ಈ ಸುದೀರ್ಘ ಮಾತುಕತೆಯಲ್ಲಿ ಉಗ್ರಂ ಸಿನಿಮಾ ಸಮಯದಲ್ಲಿ ಎದುರಾದ ಸಮಸ್ಯೆಗಳನ್ನು ಮೆಲುಕು ಹಾಕಿದ್ದಾರೆ. ಆಗ ಕೈ ಹಿಡಿದವರ ಬಗ್ಗೆಯೂ ಮಾತನಾಡಿದ್ದಾರೆ.
Prashanth Neel about Darshan: ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಸಲಾರ್ ಸಿನಿಮಾ ನಾಳೆ (ಡಿ. 22) ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಕಾನ್ಸಾರಾ ಅನ್ನೋ ಕಾಲ್ಪನಿಕ ಲೋಕದಲ್ಲಿ ಮೈ ನವಿರೇಳಿಸುವ ಸಾಹಸಗಳನ್ನೇ ನೋಡುಗರ ಮುಂದಿಡಲು ಆಗಮಿಸುತ್ತಿದ್ದಾರೆ ನಿರ್ದೇಶಕರು. ಈಗಾಗಲೇ ಟ್ರೇಲರ್‌ನಿಂದಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ಸಲಾರ್ ಸಿನಿಮಾ, ಮುಂಗಡ ಟಿಕೆಟ್ ಬುಕಿಂಗ್‌ನಲ್ಲೂ ದಾಖಲೆ ಬರೆಯುತ್ತಿದೆ. ಸರಣಿ ಸೋಲುಗಳನ್ನುಂಡ ಪ್ರಭಾಸ್‌ಗೂ ಈ ಗೆಲುವು ಅಷ್ಟೇ ಜರೂರು.
ಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ಮಾಣ ಸಂಸ್ಥೆ ಹೊಂಬಾಳೆ, ಇದೀಗ ಕೆಜಿಎಫ್‌ಗೂ ಮಿಗಿಲಾದ ಹೊಸ ಲೋಕ ಸೃಷ್ಟಿಸಿದೆ. ಕಪ್ಪು ಕಪ್ಪು ಥೀಮ್‌ನಲ್ಲಿಯೇ, ರಕ್ತದ ಹೊಳೆ ಹರಿದಿದೆ. ಸೌತ್ ಸಿನಿಮಾರಂಗದ ಅದರಲ್ಲೂ ಬಹುತೇಕ ಕನ್ನಡದವರೇ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ಸಲಾರ್ ಸಿನಿಮಾಗಾಗಿ, ಕೇವಲ ಸೌತ್ ಚಿತ್ರೋದ್ಯಮ ಮಾತ್ರವಲ್ಲದೆ, ಇಡೀ ಭಾರತವೇ ಕಾಯುತ್ತಿದೆ. ಆ ಮಟ್ಟದ ಕ್ರೇಜ್ ಸೃಷ್ಟಿಯಾಗಿದೆ. ಹೀಗಿರುವಾಗಲೇ ಇದೇ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಹಳೇ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಸಲಾರ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲಂಸ್ ಯ್ಯೂಟ್ಯೂಬ್ ಚಾನೆಲ್‌ಗೆ ಪ್ರಶಾಂತ್ ನೀಲ್ ವಿಶೇಷ ಸಂದರ್ಶನ ನೀಡಿದ್ದಾರೆ. 1 ಗಂಟೆಯ ಈ ಸುದೀರ್ಘ ಮಾತುಕತೆಯಲ್ಲಿ ಉಗ್ರಂ ಸಿನಿಮಾ ಸಮಯದಲ್ಲಿ ಎದುರಾದ ಸಮಸ್ಯೆಗಳನ್ನು ಮೆಲುಕು ಹಾಕಿದ್ದಾರೆ.
ಉಗ್ರಂ ಸಿನಿಮಾ ಕೈ ಹಿಡಿಯಿತು..
2014ರಲ್ಲಿ ಶ್ರೀಮುರಳಿ ನಾಯಕನಾಗಿ ನಟಿಸಿದ ಉಗ್ರಂ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಹಿಟ್ ಪಟ್ಟಿಗೆ ಸೇರಿತ್ತು. ಸಾಲು ಸಾಲು ಸೋಲುಗಳಿಂದ ಸೋತಿದ್ದ ಶ್ರೀಮುರಳಿಗೂ ದೊಡ್ಡ ಗೆಲುವು ತಂದುಕೊಟ್ಟಿತ್ತು ಈ ಸಿನಿಮಾ. ಇದೇ ಚಿತ್ರದ ಮೂಲಕ ನಿರ್ದೇಶಕನಾಗಿಯೂ ಗುರುತಿಸಿಕೊಂಡವರು ಪ್ರಶಾಂತ್ ನೀಲ್. ಇದೀಗ ಇದೇ ಚಿತ್ರದ ಬಿಡುಗಡೆಗೆ ಎದುರಾಗಿದ್ದ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಆವತ್ತು ದರ್ಶನ್ ಸರ್ ಮತ್ತು ದಿನಕರ್ ತೂಗುದೀಪ ಇರಲಿಲ್ಲ ಎಂದಿದ್ದರೆ, ನಮ್ಮ ಉಗ್ರಂ ಚಿತ್ರವೇ ತೆರೆಕಾಣುತ್ತಿರಲಿಲ್ಲ ಎಂದಿದ್ದಾರೆ.
ಉಗ್ರಂ ಸಿನಿಮಾಕ್ಕೆ ನಾಲ್ಕು ವರ್ಷ ತಗೊಂಡೆ. ಬಿಡಲಿಲ್ಲ. ರೀ ಶೂಟ್ ಮಾಡಿದೆ. ಸಿನಿಮಾ ರೆಡಿಯಾಯ್ತು. ಅಲ್ಲಿಂದ ಮತ್ತೊಂದು ಸಮಸ್ಯೆ ಎದುರಾಯ್ತು. ಕನ್ನಡದ ಯಾವ ಡಿಸ್ಟ್ರಿಬ್ಯೂಟರ್‌ಗಳೂ ನನ್ನ ಸಿನಿಮಾ ತೆಗೆದುಕೊಳ್ಳಲಿಲ್ಲ. ನಾನೂ ತುಂಬ ಭಂಡ ಧೈರ್ಯ ಮಾಡಿದ್ದೆ. ಆಗ ನಮಗೆ ಜತೆಯಾದವ್ರು ದರ್ಶನ್ ಸರ್ ಮತ್ತು ದಿನಕರ್ ತೂಗುದೀಪ ಸರ್. ಅವರಿಬ್ಬರು ಬಂದಿದ್ದರಿಂದ ನಮ್ಮ ಸಿನಿಮಾ ರಿಲೀಸ್ ಆಯ್ತು. ಅದಾದ ಮೇಲೆ ಎಲ್ಲರಿಂದ ಮೆಚ್ಚುಗೆಯೂ ಸಿಕ್ತು ಎಂದಿದ್ದಾರೆ ಪ್ರಶಾಂತ್ ನೀಲ್.
ದಿನಕರ್ ತೂಗುದೀಪಗೆ ಕೈ ಜೋಡಿಸಿದ್ದ ವಿಜಯ್ ಕಿರಗಂದೂರು
ಈ ಹಿಂದೆ ಕೈವ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ನಟ, ನಿರ್ದೇಶಕ ದಿನಕರ್ ತೂಗುದೀಪ, ದರ್ಶನ್ ಮತ್ತು ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಅವರ ಬಗ್ಗೆ ಮಾತನಾಡಿದ್ದರು. ಜೊತೆ ಜೊತೆಯಲಿ ಸಿನಿಮಾ ಮಾಡುವಾಗ ಎದುರಾದ ಹಣಕಾಸಿನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು. "ಆರಂಭದಲ್ಲಿ ಜೊತೆ ಜೊತೆಯಲಿ ಚಿತ್ರವನ್ನು ಸಾಕಷ್ಟು ನಿರ್ಮಾಪಕರು ರಿಜೆಕ್ಟ್ ಮಾಡಿದ್ರು. ಕೊನೆಗೆ ನಾವೇ ಮಾಡೋಣ ಬಾ ಎಂದು ಕರೆದ್ರು ಅಮ್ಮ.
ದರ್ಶನ್ ಬಿಟ್ಟು ಸಿನಿಮಾ ಮಾಡೋಕೆ ಹೊರಟೆ. ಸಿನಿಮಾ ಹಿಟ್ ಆಯ್ತು. ನನ್ನನ್ನೂ ಒಬ್ಬ ನಿರ್ದೇಶಕ ಅಂತ ಬಾಚಿ ತಬ್ಬಿಕೊಂಡರು. ಆ ಸಿನಿಮಾದಲ್ಲಿ ದರ್ಶನ್ ಹಸ್ತಕ್ಷೇಪ ಇರಲಿಲ್ಲ. ಸಿನಿಮಾ ನಿರ್ಮಾಣಕ್ಕೆ ಫಂಡ್ಸ್ ಕಲೆಕ್ಟ್ ಮಾಡಲು ಹೊರಟಿದ್ದಾಗ, ಕರೆದು 10 ಲಕ್ಷ ಕೊಟ್ಟ. ಹೀಗಿರುವಾಗ ವಿಜಯ್ ಕಿರಗಂದೂರು ಅವರನ್ನು ಜೊತೆ ಜೊತೆಯಲಿ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕರೆದುಕೊಂಡು ಬಂದೆ. ಅವರೂ ನಮ್ಮ ಚಿತ್ರಕ್ಕೆ ಕೈ ಜೋಡಿಸಿದ್ದರು" ಎಂದು ದಿನಕರ್ ಈ ಹಿಂದೆ ನೆನಪಿಸಿಕೊಂಡಿದ್ದರು.
ವಿಭಾಗ