ಸರಿಗಮಪ ಖ್ಯಾತಿಯ ತನುಶ್ರೀ ಕಂಠಸಿರಿಯಲ್ಲಿ ‘ಸನಾತನ ಅಯೋಧ್ಯಾ ಕಾ ರಾಮ್’ ಹಾಡು
ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸರಿಗಮಪ ಖ್ಯಾತಿಯ ಗಾಯಕಿ ತನುಶ್ರೀ, ಸನಾತನ ಅಯೋಧ್ಯಾ ಕಾ ರಾಮ್ ಎಂಬ ಹಾಡಿಗೆ ತಾವೇ ಸಂಗೀತ ಸಂಯೋಜನೆ ಮಾಡಿ, ಅವರೇ ಹಾಡಿದ್ದಾರೆ. ಲಹರಿ ಮ್ಯೂಸಿಕ್‌ನಲ್ಲಿಈ ಹಾಡು ಬಿಡುಗಡೆ ಆಗಿದೆ.
Sanathan Ayodhya ka Ram: ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆ. ಈ ಶುಭ ಸಂದರ್ಭದಲ್ಲಿ ಸರಿಗಮಪ ಖ್ಯಾತಿಯ ಮೈಸೂರಿನ ತನುಶ್ರೀ ಆರ್, ಸನಾತನ ಅಯೋಧ್ಯಾ ಕಾ ರಾಮ್ ಎಂಬ ಹಾಡಿಗೆ ಅವರೇ ಸಂಗೀತ ನೀಡಿ ಕಂಠದಾನವನ್ನೂ ಮಾಡಿದ್ದಾರೆ. ಲಹರಿ ಮ್ಯೂಸಿಕ್‌ನಲ್ಲಿ ಈ ಹಾಡು ಬಿಡುಗಡೆ ಆಗಿದೆ.
ಈ ಹಾಡಿನ ಬಗ್ಗೆ ಮಾತನಾಡಿದ ಲಹರಿ ಮ್ಯೂಸಿಕ್‌ನ ವೇಲು, ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಟಾಪನೆ ಆಗುತ್ತಿರುವ ಈ ಸಂದರ್ಭದಲ್ಲಿ ಮೈಸೂರಿನ ತನುಶ್ರೀ ತಾವೇ ಸಂಗೀತ ನೀಡಿ, ಹಾಡಿರುವ ಈ ಹಾಡು ಅದ್ಭುತವಾಗಿ ಮೂಡಿಬಂದಿದೆ. ಲಹರಿ ಮ್ಯೂಸಿಕ್ ಮೂಲಕ ಈವರೆಗೂ ಲಕ್ಷಾಂತರ ಹಾಡುಗಳನ್ನು ಬಿಡುಗಡೆ ಮಾಡಿದ್ದೇವೆ. ಆದರೆ ಕೇಳಿದ ತಕ್ಷಣ ಮೈರೋಮಾಂಚನವಾಗುವ ಈ ರಾಮನ ಹಾಡನ್ನು ಬಿಡುಗಡೆ ಮಾಡುತ್ತಿರುವುದು ನನಗೆ ನಿಜಕ್ಕೂ ಬಹಳ ಖುಷಿಯಾಗಿದೆ. ಹಾಡು ಕೇಳಿದ ನನ್ನ ಅನೇಕ ಸ್ನೇಹಿತರು ತುಂಬಾ ಚೆನ್ನಾಗಿದೆ ಎಂದು ತಿಳಿಸುತ್ತಿದ್ದಾರೆ. ತನುಶ್ರೀ ಅವರಿಗೆ ಮುಂದೆ ಸಂಗೀತ ಕ್ಷೇತ್ರದಲ್ಲಿ ಒಳ್ಳೆಯ ಭವಿಷ್ಯವಿದೆ ಎಂದು ಲಹರಿ ವೇಲು ಹಾರೈಸಿದರು.
ಕೇವಲ ಅರ್ಧ ಗಂಟೆಯಲ್ಲಿ ಸಿದ್ದವಾದ ಹಾಡಿದು ಎಂದು ಮಾತು ಆರಂಭಿಸಿದ ಗಾಯಕಿ ತನುಶ್ರೀ, ನನಗೆ ಸಂಗೀತದಲ್ಲಿ ಆಸಕ್ತಿ ಬರಲು ನಮ್ಮ ತಾಯಿ ಪ್ರಸಿದ್ದ ಜನಪದ ಗಾಯಕಿ ಶುಭ ರಾಘವೇಂದ್ರ ಕಾರಣ. ಇನ್ನು ಶ್ರೀರಾಮನ ಕುರಿತಾದ ಸನಾತನ ಅಯೋಧ್ಯಾ ಕಾ ರಾಮ್ ಹಾಡನ್ನು ಹಿಂದಿಯಲ್ಲಿ ಹಾಡಿದ್ದೇನೆ. ನಾನೇ ಸ್ವರ ಸಂಯೋಜನೆ ಮಾಡಿದ್ದೇನೆ. ನನ್ನ ತಂದೆ ಡಿ.ಎನ್ ರಾಘವೇಂದ್ರ ಸಾಹಿತ್ಯ ಬರೆದಿದ್ದಾರೆ. ನಿರ್ಮಾಣ ಹಾಗೂ ನಿರ್ದೇಶನವನ್ನು ನನ್ನ ತಂದೆಯವರೆ ಮಾಡಿದ್ದಾರೆ. ಏಸೆನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಪೂಜಾ ಹಾಗೂ ಮನೋಜ್ ಅವರು ಈ ಹಾಡನ್ನು ಪ್ರಸ್ತುತ ಪಡಿಸಿದ್ದಾರೆ. ಸದ್ಯದಲ್ಲೇ ಕನ್ನಡ ಸೇರಿದಂತೆ ಹತ್ತು ಭಾಷೆಗಳಲ್ಲಿ ಈ ಹಾಡು ಬರಲಿದೆ ಎಂದು ತಿಳಿಸಿದರು.
ಈಗಾಗಲೇ ನನ್ನ ಮಗಳು ಸರಿಗಮಪ ಮೂಲಕ ಎಲ್ಲರಿಗೂ ಪರಿಚಿತಳಾಗಿದ್ದಾಳೆ. ಅನೇಕ ಟ್ರ್ಯಾಕ್‌ಗಳನ್ನು ಹಾಡಿದ್ದಾಳೆ. ಭಗವಾನ್ ಶ್ರೀರಾಮನ ಕುರಿತಾದ ಈ ಹಾಡನ್ನು ನಾನು ಬರೆದಿದ್ದೇನೆ. ತನುಶ್ರೀ ಈ ಹಾಡನ್ನು ಸುಶ್ರಾವ್ಯವಾಗಿ ಹಾಡುವುದರ ಜೊತೆಗೆ ಮೊದಲ ಬಾರಿಗೆ ಸ್ವರ ಸಂಯೋಜನೆಯನ್ನು ಮಾಡಿದ್ದಾಳೆ. ಹಾಡು ಬರೆಯುವುದರೊಂದಿಗೆ ನಿರ್ದೇಶನ ಹಾಗೂ ನಿರ್ಮಾಣವನ್ನು ತಾವೇ ಮಾಡಿರುವುದಾಗಿ ತನುಶ್ರೀ ತಂದೆ ಡಿ.ಎನ್ ರಾಘವೇಂದ್ರ ತಿಳಿಸಿದರು.