ಯಾವ ಸಮುದಾಯಕ್ಕೂ ಅವಮಾನ ಮಾಡೋ ಉದ್ದೇಶ ನಮ್ಮದಲ್ಲ; ಲಂಗೋಟಿ ಮ್ಯಾನ್‌ ಶೀರ್ಷಿಕೆ ಬಗ್ಗೆ ನಿರ್ದೇಶಕಿ ಸಂಜೋತಾ ಸ್ಪಷ್ಟನೆ-sandalwood news sanjotha bhandari directorial langoti man trailer out movie releasing on 20th september mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಯಾವ ಸಮುದಾಯಕ್ಕೂ ಅವಮಾನ ಮಾಡೋ ಉದ್ದೇಶ ನಮ್ಮದಲ್ಲ; ಲಂಗೋಟಿ ಮ್ಯಾನ್‌ ಶೀರ್ಷಿಕೆ ಬಗ್ಗೆ ನಿರ್ದೇಶಕಿ ಸಂಜೋತಾ ಸ್ಪಷ್ಟನೆ

ಯಾವ ಸಮುದಾಯಕ್ಕೂ ಅವಮಾನ ಮಾಡೋ ಉದ್ದೇಶ ನಮ್ಮದಲ್ಲ; ಲಂಗೋಟಿ ಮ್ಯಾನ್‌ ಶೀರ್ಷಿಕೆ ಬಗ್ಗೆ ನಿರ್ದೇಶಕಿ ಸಂಜೋತಾ ಸ್ಪಷ್ಟನೆ

Langoti Man Trailer: ಶೀರ್ಷಿಕೆ ಮೂಲಕ ಗಮನ ಸೆಳೆದ ಲಂಗೋಟಿ ಮ್ಯಾನ್‌ ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗಷ್ಟೇ ಟ್ರೇಲರ್‌ ಹೊರತಂದಿರುವ ಈ ಸಿನಿಮಾಕ್ಕೆ ಒಂದು ಸಮುದಾಯದಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಅದಕ್ಕೆ ನಿರ್ದೇಶಕಿ ಸಂಜೋತಾ ಭಂಡಾರಿ ಉತ್ತರಿಸಿದ್ದಾರೆ.

ಲಂಗೋಟಿ ಮ್ಯಾನ್‌ ಶೀರ್ಷಿಕೆ ಬಗ್ಗೆ ನಿರ್ದೇಶಕಿ ಸಂಜೋತಾ ಸ್ಪಷ್ಟನೆ
ಲಂಗೋಟಿ ಮ್ಯಾನ್‌ ಶೀರ್ಷಿಕೆ ಬಗ್ಗೆ ನಿರ್ದೇಶಕಿ ಸಂಜೋತಾ ಸ್ಪಷ್ಟನೆ

Langoti Man Movie: ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಶೀರ್ಷಿಕೆ ಮೂಲಕವೇ ಗಮನ ಸೆಳೆದ ಸಿನಿಮಾಗಳಲ್ಲಿ ಲಂಗೋಟಿ ಮ್ಯಾನ್‌ ಸಿನಿಮಾ ಸಹ ಒಂದು. ತನು ಟಾಕೀಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ನಿರ್ದೇಶಕಿ ಸಂಜೋತ ಭಂಡಾರಿ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಲಂಗೋಟಿ ಮ್ಯಾನ್ ಚಿತ್ರದ ಟ್ರೇಲರ್ ಬಿಡುಗಡೆ, ಹಾಡಿನ ಪ್ರದರ್ಶನ ನಡೆಯಿತು. ಜತೆಗೆ ಸಿನಿಮಾ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ಘೋಷಣೆ ಮಾಡಿತು.

ಯಾವ ಸಮುದಾಯಕ್ಕೂ ಅವಮಾನ ಮಾಡಿಲ್ಲ..

ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್‌ ಬಿಡುಗಡೆ ಆದಾಗ, ಒಂದು ಸಮುದಾಯದ ಜನ ಲಂಗೋಟಿ ಮ್ಯಾನ್‌ ಸಿನಿಮಾವನ್ನು ಬ್ಯಾನ್‌ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು. ಇದಕ್ಕೆ ಇದೀಗ ಚಿತ್ರತಂಡವೂ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಮಾತನಾಡಿರುವ ನಿರ್ದೇಶಕಿ ಸಂಜೋತ ಭಂಡಾರಿ, 'ಲಂಗೋಟಿ ಮ್ಯಾನ್' ಚಿತ್ರ ಅನಗತ್ಯ ಕಾರಣಕ್ಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಚಿತ್ರ ನೋಡಿದ ಮೇಲೆ ಶೀರ್ಷಿಕೆ ಸೂಕ್ತ ಅಂತ ಗೊತ್ತಾಗಲಿದೆ. ಯಾವ ಸಮಯದಾಯವನ್ನು ಅವಮಾನ ಮಾಡುವ ಮತ್ತು ನೋಯಿಸುವ ಉದ್ದೇಶ ಹೊಂದಿಲ್ಲ. ಸೆಪ್ಟೆಂಬರ್ 20 ರಂದು ಚಿತ್ರ ಬಿಡುಗಡೆಯಾಗಲಿದೆ. ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿದರು.

ಪಾತ್ರಧಾರಿಗಳು ಹೇಳಿದ್ದೇನು?

ತಾತ ಮೊಮ್ಮಗನ ಸುತ್ತ ನಡೆಯುವ ಕಥೆ ಇದು. ತಾತನಿಗೆ ಮೊಮ್ಮಗ ಲಂಗೋಟಿ ಹಾಕಿಕೊಳ್ಳಬೇಕು‌ ಎಂಬ ಬಯಕೆ. ಮೊಮ್ಮಗನಿಗೆ ಅಂಡರ್‌ವೇರ್ ಹಾಕಿಕೊಳ್ಳುವ ಆಸೆ. ತಾತಾ ಇರುವವರೆಗೂ ಅಂಡರ್‌ವೇರ್ ಹಾಕಲು ಬಿಡಲ್ಲ. ಅವರು ಸಾಯುತ್ತಿಲ್ಲ. ನಾನು ಅಂಡರ್‌ವೇರ್ ಹಾಕಲು ಆಗುತ್ತಿಲ್ಲ‌ ಎಂಬುದು ಮೊಮ್ಮಗನ ಕೊರಗು. ಈ ರೀತಿಯ ಕಥೆಯನ್ನು ಹಾಸ್ಯ ರೂಪದಲ್ಲಿ ತೆರೆಗೆ ತರಲಾಗುತ್ತಿದೆ ಎಂದರು ನಟ ಆಕಾಶ್ ರಾಂಬೋ.

"ಲಂಗೋಟಿ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ತಾತನಿಗೆ ಸಂಪ್ರದಾಯ ಆಚಾರ ವಿಚಾರ ಪಾಲಿಸಬೇಕು ಎನ್ನುವ ನಂಬಿಕೆ. ಸಂಪ್ರದಾಯ ಹೇರಿಕೆಯಿಂದ ನಾಯಕ ರೆಬೆಲ್ ಆಗುತ್ತಾನೆ. ಕಥೆ ಆಸಕ್ತಿಕರವಾಗಿದೆ. ಇದೊಂದು ಉತ್ತಮ ಕೌಟುಂಬಿಕ ಚಿತ್ರ ಎಂದರು ನಟ ಧರ್ಮೇಂದ್ರ.

ಈ ಚಿತ್ರದಲ್ಲಿ ನನ್ನದು ಪೊಲೀಸ್ ಅಧಿಕಾರಿಯ ಪಾತ್ರ. ಜೊತೆಗೆ ಇನ್ನೊಂದು ಪ್ರಮುಖ ಪಾತ್ರ ಚಿತ್ರದಲ್ಲಿದೆ. ಅದು ಏನು ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು. ಚಿತ್ರ ನೋಡದೆ ಯಾರೂ ಕೂಡ ಅನಗತ್ಯವಾಗಿ ಹೇಳಿಕೆ ನೀಡುವುದು ಸರಿಯಲ್ಲ. ಚಿತ್ರ ನೋಡಿದ ಮೇಲೆ ಚಿತ್ರಕ್ಕೆ ಶೀರ್ಷಿಕೆ ಏಕೆ ಇಟ್ಟಿದ್ದೇವೆ ಎನ್ನುವುದು ತಿಳಿಯಲಿದೆ ಎಂದು ನಟಿ ಸಂಹಿತ ವಿನ್ಯಾ ತಿಳಿಸಿದರು.

ನಟ ಹುಲಿ ಕಾರ್ತಿಕ್ ಮಾತನಾಡಿ, 'ನೀನೇನು ಪುಟಗೋಸಿ ಮಾಡಿದ್ದೀಯಾ ಅಂತ ಯಾರು ಕೇಳುವ ಹಾಗಿಲ್ಲ. ಲಂಗೋಟಿ ಮ್ಯಾನ್ ಸಿನಿಮಾ ಮಾಡಿದ್ದೇನೆ ಎಂದು ದೈರ್ಯವಾಗಿ ಹೇಳುತ್ತೇನೆ. ಚಿತ್ರದಲ್ಲಿ ಪ್ರಮುಖ ಪಾತ್ರ ಸಿಕ್ಕಿದೆ. ಕಾಮಿಡಿಯಾಗಿ ಹಲವು ಗಂಭೀರವಾದ ವಿಷಯವನ್ನು ಚಿತ್ರದ ಮೂಲಕ ಹೇಳಿದ್ದೇವೆ. ಟೀಸರ್‌ನಲ್ಲಿ ನನ್ನ ದೃಶ್ಯಗಳು ಇಲ್ಲ. ಮೊದಲೇ ನಿರ್ದೇಶಕರು ಮಾತನಾಡಿ ಪಾತ್ರವನ್ನು ಜನರು ಸಿನಿಮಾದಲ್ಲಿ ಎಂಜಾಯ್ ಮಾಡಲಿ ಎನ್ನುವುದು' ನಮ್ಮ ಉದ್ದೇಶ ಎಂದರು.

ಹೀಗಿದೆ ತಾಂತ್ರಿಕವರ್ಗ ಹಾಗೂ ಪಾತ್ರವರ್ಗ

ಸುಮೇದ್‌ ಸಂಗೀತ ನೀಡಿರುವ ಈ ಸಿನಿಮಾಕ್ಕೆ, ರವಿವರ್ಮಾ ಅವರ ಛಾಯಾಗ್ರಹಣವಿದೆ. ಮನು ಮತ್ತು ಸ್ವರಾಕ್‌ ಪತ್ರಿಮಠ ಈ ಸಿನಿಮಾದ ಸಂಕಲನಕಾರರು. ಚಿತ್ರದಲ್ಲಿ ಆಕಾಶ್‌ ರ್ಯಾಂಬೋ, ಸ್ನೇಹಾ ಖುಷಿ, ಸಂಹಿತಾ ವಿನ್ಯಾ, ಧೀರೇಂದ್ರ, ಹುಲಿ ಕಾರ್ತಿಕ್‌, ಗಿಲ್ಲಿ ನಟ, ಸಾಯಿ ಪವನ್‌ ಕುಮಾರ್‌, ಪಲ್ಟಿ ಗೋವಿಂದ, ಮಹಾಲಕ್ಷ್ಮೀ ವಿ ಈ ಸಿನಿಮಾದ ತಾರಾಗಣದಲ್ಲಿದ್ದಾರೆ.

mysore-dasara_Entry_Point