'ಸಂಜು ವೆಡ್ಸ್ ಗೀತಾ 2' ಬಿಡುಗಡೆಗಿದ್ದ ತಡೆಯಾಜ್ಞೆ ತೆರವು; ಸದ್ಯದಲ್ಲೇ ಹೊಸ ರಿಲೀಸ್ ದಿನಾಂಕ ಘೋಷಣೆ
‘ಸಂಜು ವೆಡ್ಸ್ ಗೀತಾ 2’ ಚಿತ್ರದ ಬಿಡುಗಡೆಗೆ ಇದ್ದ ತಡೆಯಾಜ್ಞೆ ರದ್ದಾಗಿದ್ದು, ನ್ಯಾಯಾಲಯದಿಂದ ಚಿತ್ರದ ಬಿಡುಗಡೆಗೆ ಅನುಮತಿ ಸಿಕ್ಕಿದೆ. ಸದ್ಯದಲ್ಲೇ ಚಿತ್ರದ ಬಿಡುಗಡೆಗೆ ಹೊಸ ದಿನಾಂಕ ಘೋಷಣೆಯಾಗಲಿದೆ. (ವರದಿ: ಚೇತನ್ ನಾಡಿಗೇರ್)
ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಬಿಡುಗಡೆ ಮೇಲೆ ಇದ್ದ ತಡೆಯಾಜ್ಞೆ ಇದೀಗ ರದ್ದಾಗಿದೆ. ನ್ಯಾಯಾಲಯದಿಂದ ಚಿತ್ರದ ಬಿಡುಗಡೆಗೆ ಅನುಮತಿ ಸಿಕ್ಕಿದ್ದು, ಸದ್ಯದಲ್ಲೇ ಚಿತ್ರದ ಹೊಸ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ ಎಂದು ನಿರ್ಮಾಪಕ ಛಲವಾದಿ ಕುಮಾರ್ ತಿಳಿಸಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ‘ಸಂಜು ವೆಡ್ಸ್ ಗೀತಾ 2’ ಚಿತ್ರವು ಶುಕ್ರವಾರ (ಜನವರಿ 10) ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದ ಬಿಡುಗಡೆಗೆ ಹೈದರಾಬಾದ್‍ನ ವ್ಯಕ್ತಿಯೊಬ್ಬರು ತಡೆಯಾಜ್ಞೆ ತಂದಿದ್ದರು. ಹಾಗಾಗಿ, ಚಿತ್ರವನ್ನು ಬಿಡುಗಡೆ ಮಾಡದಿರುವ ಪರಿಸ್ಥಿತಿ ನಿರ್ಮಾಣವಾಗಿತ್ತು.
‘ಸಂಜು ವೆಡ್ಸ್ ಗೀತಾ 2’ ಚಿತ್ರವು ಅಂದುಕೊಂಡಂತೆ ಬಿಡುಗಡೆಯಾಗುತ್ತಿಲ್ಲ ಎಂಬ ಸುದ್ದಿಯ ಬುಧವಾರ ರಾತ್ರಿಯೇ ಕೇಳಿಬಂದಿತ್ತು. ನಿರ್ಮಾಪಕರು ಹೈದರಾಬಾದ್ ಮೂಲದ ವ್ಯಕ್ತಿಯಿಂದ ಹಣ ಪಡೆದಿದ್ದು, ಅದನ್ನು ಬಿಡುಗಡೆಗೂ ಮುನ್ನ ತೀರಿಸದಿದ್ದರಿಂದ ಅವರು ತಡೆಯಾಜ್ಞೆ ತಂದಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಚಿತ್ರದ ಬಿಡುಗಡೆ ನಿಂತಿರುವುದಕ್ಕೆ ಕಾರಣವೇನು ಎಂದು ನಿರ್ಮಾಪಕ ಛಲವಾದಿ ಕುಮಾರ್ ಆಗಲಿ, ನಿರ್ದೇಶಕ ನಾಗಶೇಖರ್ ಆಗಲಿ ಮಾತನಾಡಿರಲಿಲ್ಲ.
ಶುಕ್ರವಾರ ನಿರ್ಮಾಪಕ ಕುಮಾರ್ ತಮ್ಮ ವಕೀಲರೊಂದಿಗೆ ಹೈದರಾಬಾದ್‍ಗೆ ಹೋಗಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದ ಬಿಡುಗಡೆ ಮೇಲಿದ್ದ ತಡೆಯಾಜ್ಞೆಯನ್ನು ನ್ಯಾಯಾಲಯವು ತೆರವು ಮಾಡಿದೆ.
ನ್ಯಾಯಾಲಯ ತಡೆಯಾಜ್ಞೆ ವಿಧಿಸಿದ್ದು ಯಾಕೆ?
ಈ ಕುರಿತು ಮಾತನಾಡಿರುವ ಕುಮಾರ್, ‘ನಾಗಶೇಖರ್ ಈ ಹಿಂದೆ ತೆಲುಗಿನಲ್ಲಿ ತಮನ್ನಾ ಭಾಟಿಯಾ ಅಭಿನಯದಲ್ಲಿ ‘ಗುರ್ತುಂಡ ಸೀತಾಕಲಂ’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಚಿತ್ರಕ್ಕೆ ಪಾಲುದಾರರಾಗಿದ್ದರು. ಆದರೆ, ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಆ ಸಂದರ್ಭದಲ್ಲಿ ಇನ್ನೊಂದು ಚಿತ್ರ ಮಾಡಿಕೊಡುವುದಾಗಿ ಅವರು ಸಹನಿರ್ಮಾಪಕ ರಾಮರಾವ್ ಚಿಂತಪಲ್ಲಿ ಎನ್ನುವವರಿಗೆ ಪತ್ರ ಬರೆದುಕೊಟ್ಟಿದ್ದರಂತೆ. ಆದರೆ, ಆ ನಂತರ ಅವರು ಕನ್ನಡದಲ್ಲಿ ಎರಡು ಚಿತ್ರಗಳನ್ನು ಮಾಡಿದ್ದಾರೆ. ತಮಗೆ ಚಿತ್ರ ಮಾಡಿಕೊಡುವುದಾಗಿ ಹೇಳಿ, ನಾಗಶೇಖರ್ ಮಾತು ತಪ್ಪಿದ್ದಾರೆ ಎಂದು ರಾಮರಾವ್ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆಯನ್ನು ತಂದಿದ್ದರು.ಆದರೆ, ನಾಗಶೇಖರ್ ನಮ್ಮ ಚಿತ್ರದ ನಿರ್ದೇಶಕರಷ್ಟೇ. ಅವರು ಚಿತ್ರಕ್ಕೆ ಹಣ ಹೂಡಿಲ್ಲ. ಇದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಾಗ, ತಡೆಯಾಜ್ಞೆಯನ್ನು ತೆರವು ಮಾಡಲಾಗಿದೆ.
ಹೊಸ ದಿನಾಂಕ ಘೋಷಣೆ
ಸದ್ಯದಲ್ಲೇ ಬೆಂಗಳೂರಿನಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ಮಾಡಿ, ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುತ್ತೇವೆ’ ಎಂದು ಹೇಳಿದ್ದಾರೆ. ಅಲ್ಲಿಗೆ ಚಿತ್ರಕ್ಕೆ ಇದ್ದ ಸಮಸ್ಯೆ ನಿವಾರಣೆಯಾಗಿದ್ದು, ಸದ್ಯದಲ್ಲೇ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ.
‘ಸಂಜು ವೆಡ್ಸ್ ಗೀತಾ 2’ ಚಿತ್ರವನ್ನು ಪವಿತ್ರ ಇಂಟರ್ ನ್ಯಾಷನಲ್ ಮೂವೀ ಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ವರದಿ: ಚೇತನ್ ನಾಡಿಗೇರ್
ಇದನ್ನೂ ಓದಿ | ‘ಸಂಜು ವೆಡ್ಸ್ ಗೀತಾ 2’ ಜ 10ರಂದು ಬಿಡುಗಡೆಯಾಗೋದು ಅನುಮಾನ; ಶ್ರೀನಗರ ಕಿಟ್ಟಿ, ರಚಿತಾ ರಾಮ್ ನಟನೆಯ ಸಿನಿಮಾಕ್ಕೆ ಸಂಕಷ್ಟ