Prakash Heggodu Death: ಡೇನಿಯಲ್ ಬಾಲಾಜಿ ಬಳಿಕ ಕನ್ನಡದ ಮತ್ತೋರ್ವ ಖಳನಟ ಪ್ರಕಾಶ್ ಹೆಗ್ಗೋಡು ನಿಧನ
ಸ್ಯಾಂಡಲ್‌ವುಡ್‌ನಲ್ಲಿ ಖಳನಟನಾಗಿ ಗುರುತಿಸಿಕೊಂಡಿದ್ದ ನಟ, ಸಾಮಾಜಿಕ ಹೋರಾಟಗಾರ, ರಂಗಕರ್ಮಿ ಪ್ರಕಾಶ್ ಹೆಗ್ಗೋಡು ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ನಿಧನರಾಗಿದ್ದಾರೆ. ಕನ್ನಡದಲ್ಲಿ ಹತ್ತಾರು ಸಿನಿಮಾಗಳಲ್ಲಿ ನಟಿಸಿದ ಪ್ರಕಾಶ್, ಅವರ ಸಾವಿಗೆ ಚಿತ್ರರಂಗದ ಗಣ್ಯರು, ಆಪ್ತರು ಕಂಬನಿ ಮಿಡಿದ್ದಾರೆ.
Prakash Heggodu Death: ಬಹುಭಾಷಾ ನಟ, ವಿಲನ್ ಆಗಿಯೇ ಮಿಂಚಿದ ಖಡಕ್ ಖಳ ಡೇನಿಯಲ್ ಬಾಲಾಜಿ ಹೃದಯಾಘಾತದಿಂದ ಸಾವನ್ನಪ್ಪಿದ ಒಂದೇ ದಿನದ ಬಳಿಕ ಕನ್ನಡದ ಮತ್ತೋರ್ವ ಖಳನಟ ಪ್ರಕಾಶ್ ಹೆಗ್ಗೋಡು ನಿಧನರಾಗಿದ್ದಾರೆ. ಕನ್ನಡದ ಹಲವು ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿದ ಪ್ರಕಾಶ್, ಅನಾರೋಗ್ಯ ಹಿನ್ನೆಲೆಯಲ್ಲಿ ತಮ್ಮ 58ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯ ಹಿನ್ನಲೆಯಲ್ಲಿ ಕಳೆದ ಕೆಲ ದಿನಗಳಿಂದ ಪ್ರಕಾಶ್ ಹೆಗ್ಗೋಡು ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಾ. 30ರ ಶನಿವಾರದಂದು ನಿಧನರಾಗಿದ್ದಾರೆ. ನಟನ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವರು ಮತ್ತು ರಂಗಭೂಮಿ ಆಪ್ತರು ಕಂಬನಿ ಮಿಡಿದಿದ್ದಾರೆ.
ಮೂಲತಃ ಶಿವಮೊಗ್ಗದ ಸಾಗರ ತಾಲೂಕಿನ ಪುರಪ್ಪೆಮನೆಯ ಏಸು ಪ್ರಕಾಶ್, ಚಿತ್ರರಂಗದಲ್ಲಿ ಪ್ರಕಾಶ್ ಹೆಗ್ಗೋಡು ಎಂದೇ ಗುರುತಿಸಿಕೊಂಡಿದ್ದರು. ನಟನೆ ಮಾತ್ರವಲ್ಲದೆ ಸಾಮಾಜಿಕ ಹೋರಾಟಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇದೀಗ ಇವರ ಅಂತಿಮ ವಿಧಿ ವಿಧಾನಗಳೂ ಸ್ವಗೃಹ ಪುರಪ್ಪೆಮನೆಯಲ್ಲಿ ಇಂದು (ಮಾ. 31) ನೆರವೇರಿಸಲಾಗುತ್ತಿದೆ. ಗ್ರಾಮಸ್ಥರು, ಆಪ್ತ ಸಿನಿಮಾ ಮಂದಿ ಅಂತಿಮ ದರ್ಶನ ಪಡೆಯಲಿದ್ದಾರೆ.
ಕನ್ನಡದಲ್ಲಿ ಹತ್ತಾರು ಸಿನಿಮಾಗಳಲ್ಲಿ ಪ್ರಕಾಶ್ ಹೆಗ್ಗೋಡು ಬಣ್ಣ ಹಚ್ಚಿದ್ದಾರೆ. ರಂಗಭೂಮಿಯಲ್ಲಿಯೂ ಸಕ್ರಿಯರಾಗಿದ್ದರು. ಜತೆಗೆ ನಟಿಸಿದ ಸಿನಿಮಾಗಳ ಪೈಕಿ ಬಹುತೇಕರಲ್ಲಿ ಖಳನಾಗಿ, ನೆಗೆಟಿವ್ ಶೇಡ್‌ನಲ್ಲಿಯೇ ಮಿಂಚಿದ್ದರು. ಅವರು ನಟಿಸಿದ ಕೆಲವು ಸಿನಿಮಾಗಳನ್ನು ನೋಡುವುದಾದರೆ, ಶಿವರಾಜ್‌ಕುಮಾರ್ ಜತೆಗೆ ಸಂತ, ಭಾಗ್ಯದ ಬಳೆಗಾರ, ಉಪೇಂದ್ರ ಅಭಿನಯದ ಕಲ್ಪನಾ 2 ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಅದೇ ರೀತಿ ರಾಜಾಹುಲಿ, ಕಲಾಸಿಪಾಳ್ಯ, ವೀರು, ಮಾಡರ್ನ್ ಮಹಾಭಾರತ ಸಿನಿಮಾಗಳಲ್ಲೂ ನಟಿಸಿದ್ದರು.