ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಚಿತ್ರ ವಿಮರ್ಶೆ ಮಾಡಿದ ಕಿಚ್ಚ ಸುದೀಪ್‌; ಇದು ನಿಜಕ್ಕೂ ಮೇರುಕೃತಿ, ಕತ್ತೆ ಅಂದ್ರು ಅಭಿನಯ ಚಕ್ರವರ್ತಿ
ಕನ್ನಡ ಸುದ್ದಿ  /  ಮನರಂಜನೆ  /  ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಚಿತ್ರ ವಿಮರ್ಶೆ ಮಾಡಿದ ಕಿಚ್ಚ ಸುದೀಪ್‌; ಇದು ನಿಜಕ್ಕೂ ಮೇರುಕೃತಿ, ಕತ್ತೆ ಅಂದ್ರು ಅಭಿನಯ ಚಕ್ರವರ್ತಿ

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಚಿತ್ರ ವಿಮರ್ಶೆ ಮಾಡಿದ ಕಿಚ್ಚ ಸುದೀಪ್‌; ಇದು ನಿಜಕ್ಕೂ ಮೇರುಕೃತಿ, ಕತ್ತೆ ಅಂದ್ರು ಅಭಿನಯ ಚಕ್ರವರ್ತಿ

Sapta sagaradaache ello – side b: ರಕ್ಷಿತ್‌ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಕುರಿತು ಎಲ್ಲೆಡೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಇದೀಗ ಈ ಸಿನಿಮಾವನ್ನು ನಟ ಕಿಚ್ಚ ಸುದೀಪ್‌ ಕೂಡ ವೀಕ್ಷಿಸಿದ್ದು, ಈ ಸಿನಿಮಾವನ್ನು ಹಾಡಿಹೊಗಳಿದ್ದಾರೆ. ಈ ಚಿತ್ರದ ಕುರಿತು ತಮ್ಮ ಪ್ರಾಮಾಣಿಕ ಅಭಿಪ್ರಾಯ ನೀಡಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಚಿತ್ರ ವಿಮರ್ಶೆ ಮಾಡಿದ ಕಿಚ್ಚ ಸುದೀಪ್‌
ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಚಿತ್ರ ವಿಮರ್ಶೆ ಮಾಡಿದ ಕಿಚ್ಚ ಸುದೀಪ್‌

ಬೆಂಗಳೂರು: ಈಗಾಗಲೇ ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಕುರಿತು ಸಾಕಷ್ಟು ಜನರು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಿತ್‌ ಶೆಟ್ಟಿ- ರುಕ್ಮಿಣಿ ನಟನೆಯ ಪ್ರೇಮಕಾವ್ಯ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಚಿತ್ರವನ್ನು ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನೋಡಿದ್ದು, ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನಿಜಕ್ಕೂ ಇದೊಂದು ಮಾಸ್ಟರ್‌ಪೀಸ್‌ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಓದಿ: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ B: ಫೇಸ್‌ಬುಕ್‌ ಗೋಡೆಮೇಲೆ ಮೂಡಿದ ಪಾಸಿಟಿವ್‌ ಬರಹಗಳು

ಸಪ್ತಸಾಗರದಾಚೆ ಎಲ್ಲೋ- ಸುದೀಪ್‌ ವಿಮರ್ಶೆ

ಧನ್ಯವಾದಗಳು ರಕ್ಷಿತ್‌ ಶೆಟ್ಟಿ, ಈ ಚಿತ್ರ ನೋಡಿದೆ. ಇದೊಂದು ಮೇರುಕೃತಿ. ಇಂತಹ ಒಂದು ಗಮನಾರ್ಹ ಸಿನಿಮಾ ಅನುಭವಿಸಲು ಅವಕಾಶ ದೊರಕಿರುವುದರಿಂದ ನಿಜಕ್ಕೂ ತುಂಬಾ ಸಂತೋಷವಾಗಿದೆ. ನಿಮಗೆಲ್ಲರಿಗೂ ಚಿಯರ್ಸ್‌ ಎಂದು ಟಿಪ್ಪಣಿ ಬರೆದಿರುವ ಕಿಚ್ಚ ಸುದೀಪ್‌ ಈ ಚಿತ್ರದ ವಿಮರ್ಶೆ ಅಥವಾ ತಮ್ಮ ಅಭಿಪ್ರಾಯವನ್ನು ಈ ಮುಂದಿನಂತೆ ನೀಡಿದ್ದಾರೆ. ಇದನ್ನೂ ಓದಿ: Movie Review: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಟ್ವಿಟ್ಟರ್‌ ವಿಮರ್ಶೆ, ಈ ದಶಕದ ಅದ್ಭುತ ಪ್ರೇಮಕಥೆ, ಭಾವುಕ ರೋಚಕ ಎಂದ ಸಿನಿಪ್ರೇಕ್ಷಕ

"ಹೆವಿ ಲವ್ವು- ಅಗಾಧ ಪ್ರೀತಿ, ಎಕ್ಸಲೆಂಟ್‌ ಪರ್ಫಾಮೆನ್ಸ್‌- ಕಲಾವಿದರ ಅತ್ಯುತ್ತಮ ನಟನೆ, ಎಕ್ಸಲೆಂಟ್‌ ಡೈರೆಕ್ಷನ್‌- ಹೇಮಂತ್‌ ರಾವ್‌ ಅವರ ಅದ್ಭುತ ನಿರ್ದೇಶನ, ಎಕ್ಸಲೆಂಟ್‌ ಸಿನಿಮಾಟ್ರೊಗ್ರಫಿ" ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

"ಈ ರೀತಿಯ ಸಿನಿಮಾ ಮಾಡುವ ಧೈರ್ಯ ತೋರಿರುವುದಕ್ಕೆ ನಿಮಗೆ ಅಪಾರ ಗೌರವ ಸೂಚಿಸುವೆ. ಯಾವುದೇ ಖಚಿತ ಭರವಸೆ ಇಲ್ಲದೆ ಇಂತಹ ನಂಬಿಕೆಯ ಹಿಂದೆ ಹೋಗಲು ಸಾಕಷ್ಟು ಭರವಸೆ ಬೇಕಾಗುತ್ತದೆ. ಹೇಮಂತ್‌ ಒಬ್ಬ ಅದ್ಭುತ ತಂತ್ರಜ್ಞ. ಇದು ಇವರ ಅದ್ಭುತ ಸೃಷ್ಟಿ. ಕ್ಯಾಪ್ಟನ್‌ ಸೀಟಿನಲ್ಲಿ ಕುಳಿತುಕೊಳ್ಳಲು ನಿಜಕ್ಕೂ ಸಮರ್ಥ. ನಿಮಗೆ ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು" ಎಂದು ಬರೆದ ಕಿಚ್ಚ ಸುದೀಪ್‌ ಬ್ರಾಕೆಟ್‌ನಲ್ಲಿ ಲವ್‌ ಇಮೋಜಿ ಜತೆಗೆ ಕತ್ತೆ ಎಂದು ಬರೆದು ಈ ಸಿನಿಮಾದ ಕುರಿತು ಪ್ರೀತಿ ವ್ಯಕ್ತಪಡಿಸಿದ್ದಾರೆ.

ಕಿಚ್ಚನ ಟ್ವೀಟ್‌ಗೆ ಸಾಕಷ್ಟು ಜನರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ನಟಿಸಿರುವ ಇನ್ನೊಬ್ಬರು ನಟಿ ಚೈತ್ರಾ ಆಚಾರ್‌ ಅವರು "ಧನ್ಯವಾದ ಸರ್"‌ ಎಂದಿದ್ದಾರೆ. "ಇವತ್ತು ಬೆಳಗ್ಗೆ ನಾನು ನೋಡಿದ ಎಷ್ಟು ಸುಂದರ ಟ್ವೀಟ್‌" ಎಂದು ಶ್ರೀಕಂಠ ಆರಾಧ್ಯ ಪ್ರತಿಕ್ರಿಯೆ ನೀಡಿದ್ದಾರೆ. "ಈ ರೀತಿ ಕನ್ನಡದ ಸಿನಿಮಾಗಳನ್ನು ಇತರೆ ಕಲಾವಿದರು ಪ್ರಶಂಸಿಸುವ ಗುಣ ಬೇಕಿದೆ. ಇದು ಖಂಡಿತವಾಗಿಯೂ ಕನ್ನಡ ಚಿತ್ರರಂಗಕ್ಕೆ ಅಗತ್ಯ" ಎಂದು ಕೆಲವರು ಟ್ವೀಟ್‌ ಮಾಡಿದ್ದಾರೆ. "ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ, ನಾನು ಶೀಘ್ರದಲ್ಲಿಯೇ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುವೆ" ಎಂದು ಹಲವು ಅಭಿಮಾನಿಗಳು ಬರೆದಿದ್ದಾರೆ. ಕಿಚ್ಚ ಸುದೀಪ್‌ ಕತ್ತೆ ಎಂದು ಬರೆದಿರುವುದು ಸಾಕಷ್ಟು ಜನರಿಗೆ ಇಷ್ಟವಾಗಿದೆ. ಕತ್ತೆ ಎನ್ನುವುದು ಪದವಲ್ಲ, ಅದೊಂದು ಭಾವನೆ ಎಂದು ಸಾಕಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಓದಿ: ಸಪ್ತ ಸಾಗರದಾಚೆ ಎಲ್ಲೋ ಪ್ರಚಾರದಲ್ಲಿ ಪ್ರಸ್ತಾಪವಾಯ್ತು ರಶ್ಮಿಕಾ ಮಂದಣ್ಣ ವಿಡಿಯೋ ವಿಚಾರ; ಮಾಜಿ ಪ್ರೇಮಿ ರಕ್ಷಿತ್‌ ಶೆಟ್ಟಿ ಕಠಿಣ ಪ್ರತಿಕ್ರಿಯೆ

ಸೋಷಿಯಲ್‌ ಮೀಡಿಯಾದಲ್ಲಿ ಗುಣಗಾಣ

ಈಗಾಗಲೇ ಸಪ್ತ ಸಾಗರದಾಚೆ ಸಿನಿಮಾದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಹೊಗಳಿಕೆಯ ವಿಮರ್ಶೆಗಳು ಕಾಣಸಿಗುತ್ತವೆ. ಈ ಸಿನಿಮಾ ನೋಡಿ ಸಾಕಷ್ಟು ಜನರು ಮೆಚ್ಚಿದ್ದಾರೆ. ನಿಸ್ಸಂಶಯವಾಗಿ ಸಪ್ತ ಸಾಗರದಾಚೆ ಸಿನಿಮಾವು ಈ ದಶಕದ ಅದ್ಭುತ ಪ್ರೇಮಕಥೆ. ಇದು ಸಿನಿಮಾವಲ್ಲ, ಒಂದು ಅನುಭವ. ಮನು ಮತ್ತು ಪ್ರಿಯ ಸಾವಿರ ಸಾಗರ ದಾಟುತ್ತಾರೆ ಎಂದು ಈ ಸೈಡ್‌ ಬಿ ಸಿನಿಮಾದ ಕುರಿತು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ದಯವಿಟ್ಟು ಈ ಸಿನಿಮಾದ ಕ್ಲೈಮ್ಯಾಕ್ಸ್‌ ಮತ್ತು ಬ್ಯಾಕ್‌ ಗ್ರೌಂಡ್‌ ಮ್ಯೂಸಿಕ್‌ ಮಿಸ್‌ ಮಾಡಿಕೊಳ್ಳಬೇಡಿ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

Whats_app_banner