Saramsha Trailer: ಸಾರಾಂಶ ಸಿನಿಮಾ ಟ್ರೇಲರ್ ಮೆಚ್ಚಿದ ಸಪ್ತ ಸಾಗರದಾಚೆ ಎಲ್ಲೋ ನಿರ್ದೇಶಕ ಹೇಮಂತ್ ರಾವ್
Saramsha Kannada movie trailer: ಸೂರ್ಯ ವಸಿಷ್ಠ ನಿರ್ದೇಶನದ ಸಾರಾಂಶ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಸಪ್ತಸಾಗರದಾಚೆ ಎಲ್ಲೋ ಸಿನಿಮಾ ನಿರ್ದೇಶಕ ಹೇಮಂತ್ ಎಂ ರಾವ್ ಈ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಶ್ರುತಿ ಹರಿಹರನ್, ದೀಪಕ್ ಸುಬ್ರಹ್ಮಣ್ಯ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿದ್ದಾರೆ.

Saramsha Trailer: ಈಗಾಗಲೇ ಒಂದಷ್ಟು ಕಾರಣಕ್ಕೆ ಕುತೂಹಲ ಮೂಡಿಸಿದೆ ಸೂರ್ಯ ವಸಿಷ್ಠ ನಿರ್ದೇಶನದ ಸಾರಾಂಶ ಸಿನಿಮಾ. ಶೂಟಿಂಗ್ ಮುಗಿಸಿ, ಬಿಡುಗಡೆಯ ಹೊಸ್ತಿಲಿಗೆ ಬಂದಿರುವ ಈ ಸಿನಿಮಾತಂಡ ಟ್ರೇಲರ್ ಹೊರತರುವ ಮೂಲಕ, ಚಿತ್ರದಲ್ಲಿ ನಾವೇನು ಹೇಳಲು ಹೊರಟಿದ್ದೇವೆ ಎಂಬುದನ್ನೂ ತಿಳಿಸಿದೆ. ಅದರಂತೆ, ಕಳೆದ ವರ್ಷ ಬಿಡುಗಡೆಯಾಗಿ ವ್ಯಾಪಕ ಮೆಚ್ಚುಗೆ ಪಡೆದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ನಿರ್ದೇಶಕ ಹೇಮಂತ್ ಎಂ. ರಾವ್ ಸಾರಾಂಶ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿ ಹರಸಿದ್ದಾರೆ.
ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಸಲುವಾಗಿಯೇ ಇಡೀ ತಂಡ ಒಂದೆಡೆ ಸೇರಿತ್ತು. ಟ್ರೇಲರ್ ಬಗ್ಗೆ ಹೇಳಿಕೊಳ್ಳುತ್ತ ಬಿಡುಗಡೆ ದಿನಾಂಕವನ್ನೂ ಸಿನಿಮಾ ತಂಡ ಘೋಷಿಸಿಕೊಂಡಿದೆ. ಈ ಮೂಲಕ ಫೆ. 15ರಂದು ಸಾರಾಂಶ ಸಿನಿಮಾ ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ. ಅಚ್ಚರಿಯ ವಿಚಾರ ಏನೆಂದರೆ, ಹತ್ತಾರು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ, ಇಂದಿಗೂ ಎಲ್ಲರೊಳಗೆ ಹಸಿರಾಗೇ ಉಳಿಸಿಕೊಂಡಿರುವ ಲೂಸಿಯಾ ಸಿನಿಮಾದ ಬಹುತೇಕರು ವೇದಿಕೆ ಮೇಲಿದ್ದರು. ಶ್ರುತಿ ಹರಿಹರನ್, ಹೇಮಂತ್ ರಾವ್ ಮಾತ್ರವಲ್ಲದೇ ಈ ಚಿತ್ರದ ನಿರ್ದೇಶಕರಾದ ಸೂರ್ಯ ವಸಿಷ್ಠ ಕೂಡಾ ಲೂಸಿಯಾ ಚಿತ್ರದ ಭಾಗವಾಗಿದ್ದರು. ಇವರೆಲ್ಲರ ಸಮ್ಮುಖದಲ್ಲಿ ಸಾರಾಂಶ ಟ್ರೇಲರ್ ರಿಲೀಸ ಆಗಿದೆ.
ಸಾರಾಂಶ ಸಿನಿಮಾ ಈ ದಿನಮಾನಕ್ಕೆ ಅತ್ಯಂತ ಅಪರೂಪ ಎನಿಸುವ ಗುಣಹೊಂದಿರುವ ಚಿತ್ರ. ನಿರ್ದೇಶಕ ಸೂರ್ಯ ವಸಿಷ್ಠ ಅವರೇ ಪ್ರಧಾನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಕ್ ಸುಬ್ರಮಣ್ಯ ವಿಶಿಷ್ಟ ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಶ್ರುತಿ ಹರಿಹರನ್ ಮಾಯಾ ಎಂಬ ಪಾತ್ರದಲ್ಲಿ ಎದುರಾಗಿದ್ದಾರೆ. ಈ ಎಲ್ಲ ಪಾತ್ರಗಳ ಝಲಕ್ ಟ್ರೇಲರ್‌ನಲ್ಲಿದೆ.
ಇನ್ನುಳಿದಂತೆ ಶ್ವೇತಾ ಗುಪ್ತ ಕನ್ನಡೇತರ ಬುಕ್ ಪಬ್ಲಿಷರ್ ಪಾತ್ರದಲ್ಲಿದ್ದಾರೆ. ಎರಡು ಬೊಂಬೆ ಪಾತ್ರಗಳು ನೋಡುಗರನ್ನು ಸೆಳೆದುಕೊಂಡಿವೆ. ಅದನ್ನು ರಾಮ್ ಪ್ರಸಾದ್ ಬಾಣಾವರ ಮತ್ತು ಸತೀಶ್ ಕುಮಾರ್ ನಿರ್ವಹಿಸಿದ್ದಾರೆ. ಈ ಪತ್ರಿಕಾ ಗೋಷ್ಠಿಯಲ್ಲಿ ಶ್ರುತಿ ಹರಿಹರನ್, ದೀಪಕ್ ಸುಬ್ಮಣ್ಯ, ಸೂರ್ಯ ವಸಿಷ್ಠ, ಸಂಗೀತ ನಿರ್ದೇಶಕ ಉದಿತ್ ಹರಿತಾಸ್, ರವಿ ಭಟ್, ಶ್ವೇತಾ ಗುಪ್ತ ಮುಂತಾದವರು ಹಾಜರಿದ್ದರು.
ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪ್ರೊಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣದಲ್ಲಿದ್ದಾರೆ. ಉದಿತ್ ಹರಿತಾಸ್ ಸಂಗೀತ ನಿರ್ದೇಶನ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ಅನಂತ್ ಭಾರದ್ವಾಜ್ ಛಾಯಾಗ್ರಾಹಕರಾಗಿದ್ದಾರೆ.