ಒಂದು ಬಿಂದುವಿನಲ್ಲಿ ಸಂಧಿಸುವ 5 ಕಥೆಗಳು, ಸೀಸ್ ಕಡ್ಡಿ ಚಿತ್ರದ ಟ್ರೈಲರ್ ಬಿಡುಗಡೆ; ಜೂನ್ 6ರಂದು ಸಿನಿಮಾ ರಿಲೀಸ್‌
ಕನ್ನಡ ಸುದ್ದಿ  /  ಮನರಂಜನೆ  /  ಒಂದು ಬಿಂದುವಿನಲ್ಲಿ ಸಂಧಿಸುವ 5 ಕಥೆಗಳು, ಸೀಸ್ ಕಡ್ಡಿ ಚಿತ್ರದ ಟ್ರೈಲರ್ ಬಿಡುಗಡೆ; ಜೂನ್ 6ರಂದು ಸಿನಿಮಾ ರಿಲೀಸ್‌

ಒಂದು ಬಿಂದುವಿನಲ್ಲಿ ಸಂಧಿಸುವ 5 ಕಥೆಗಳು, ಸೀಸ್ ಕಡ್ಡಿ ಚಿತ್ರದ ಟ್ರೈಲರ್ ಬಿಡುಗಡೆ; ಜೂನ್ 6ರಂದು ಸಿನಿಮಾ ರಿಲೀಸ್‌

ರತನ್ ಗಂಗಾಧರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸೀಸ್ ಕಡ್ಡಿ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಈ ಚಿತ್ರ ಜೂನ್ 6ರಂದು ತೆರೆಗಾಣಲಿದೆ. ಟ್ರೈಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಐವರು ಪ್ರತಿಭಾನ್ವಿತ ನಿರ್ದೇಶಕರು ಅತಿಥಿಗಳಾಗಿ ಆಗಮಿಸಿದ್ದರು.

ಒಂದು ಬಿಂದುವಿನಲ್ಲಿ ಸಂಧಿಸುವ 5 ಕಥೆಗಳು, ಸೀಸ್ ಕಡ್ಡಿ ಚಿತ್ರದ ಟ್ರೈಲರ್ ಬಿಡುಗಡೆ
ಒಂದು ಬಿಂದುವಿನಲ್ಲಿ ಸಂಧಿಸುವ 5 ಕಥೆಗಳು, ಸೀಸ್ ಕಡ್ಡಿ ಚಿತ್ರದ ಟ್ರೈಲರ್ ಬಿಡುಗಡೆ

ಬೆಂಗಳೂರು: ರತನ್ ಗಂಗಾಧರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸೀಸ್ ಕಡ್ಡಿ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಈ ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಸಿನಿಮಾ ಬಗೆಗಿನ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದೆ. ಐವರು ಪ್ರತಿಭಾನ್ವಿತ ನಿರ್ದೇಶಕರು ಅತಿಥಿಗಳಾಗಿ ಆಗಮಿಸಿದ್ದು ವಿಶೇಷ. ಬೀರ್ ಬಲ್ ಖ್ಯಾತಿಯ ಶ್ರೀನಿ, ಮಹಿರಾ ಖ್ಯಾತಿಯ ನಿರ್ದೇಶಕ ಮಹೇಶ್ ಗೌಡ, ಡೊಳ್ಳು ಖ್ಯಾತಿಯ ನಿರ್ದೇಶಕ ಸಾಗರ್ ಪುರಾಣಿಕ್, ಆಯುಷ್ ಮಲ್ಲಿ, ಚೆಲುವರಾಜ್ ಮುಂತಾದವರು ಈ ಪತ್ರಿಕಾಗೋಷ್ಠಿಯಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಐದು ಕಥೆಗಳು- ಐದು ಪಾತ್ರಗಳು

ಈ ಸಿನಿಮಾ ಕಥೆಗೆ ಸ್ಫೂರ್ತಿಯಾದ ವಿಚಾರವನ್ನು ನಿರ್ದೇಶಕ ರತನ್ ಗಂಗಾಧರ್ ತಿಳಿಸಿದ್ದಾರೆ. "ಪುಸ್ತಕವೊಂದನ್ನು ಓದಿದಾಗ ಅದರಲ್ಲಿ ಪೆನ್ಸಿಲ್‌ನ ನಾನಾ ಸೂಕ್ಷ್ಮಗಳ ವಿವರವಿತ್ತು. ಅದನ್ನು ಐದು ಪಾತ್ರಗಳನ್ನಾಗಿಸಿ, ಅದಕ್ಕೆ ಹೊಂದಿಕೊಂಡಂತೆ ಐದು ಕಥೆಗಳನ್ನು ಸೃಷ್ಟಿಸಿ, ಆ ಕಥೆಗಳೆಲ್ಲ ಒಂದು ಬಿಂದುವಿನಲ್ಲಿ ಸಂಧಿಸುವ ಅಚ್ಚರಿಯ ಸಾರವೇ ಸೀಸ್ ಕಡ್ಡಿಯ ಆತ್ಮ" ಎಂದು ಅವರು ಹೇಳಿದ್ದಾರೆ.

ಈ ಚಿತ್ರದಲ್ಲಿ ಬೇರೆ ಬೇರೆ ಬಗೆಯ ಕನ್ನಡ ಭಾಷಾ ಶೈಲಿಯೂ ಮಿಳಿತವಾಗಿದೆ. ಬೆಂಗಳೂರು ಕನ್ನಡ, ಹವ್ಯಕ ಕನ್ನಡ, ತುಮಕೂರು ಭಾಗದ ಹಳ್ಳಿಗಾಡಿನ ಶೈಲಿಯ ಕನ್ನಡ ಹಾಗೂ ಮೈಸೂರು ಸೀಮೆಯ ಕನ್ನಡದ ಬಳಕೆ ಕೂಡಾ ಪ್ರೇಕ್ಷಕರಿಗೆ ಹೊಸಾ ಅನುಭೂತಿ ನೀಡಲಿದೆ ಎಂದು ಅವರು ಹೇಳಿದ್ದಾರೆ.

ಸೀಸ್ ಕಡ್ಡಿ ಚಿತ್ರದ ಟ್ರೈಲರ್

ಗ್ರಹಣ ಪ್ರೊಡಕ್ಷನ್ ಮೂಲಕ ರತನ್ ಗಂಗಾಧರ್, ಸಂಪತ್ ಶಿವಶಂಕರ್, ಕೃತಿ ನಾಣಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಾಲ್ಯ ಸ್ನೇಹಿತರಾದ ಇವರೆಲ್ಲರೂ ಒಟ್ಟಿಗೆ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. "ಮಕ್ಕಳ ಮುಗ್ಧತೆಯನ್ನು ತಾಜಾತನದಿಂದ ಸೆರೆ ಹಿಡಿದು ದೃಶ್ಯವಾಗಿಸೋದೇ ನಿರ್ದೇಶನದ ನಿಜವಾದ ಸವಾಲು. ಅದನ್ನು ಈ ಚಿತ್ರದಲ್ಲಿ ಸಮರ್ಥವಾಗಿ ಮಾಡಲಾಗಿದೆ. ಈ ಸಿನಿಮಾ ಗೆಲ್ಲಬೇಕು. ಕಮರ್ಶಿಯಲ್ಲಾಗಿಯೇ ಇಂಥಾ ಸಿನಿಮಾಗಳ ಯಶ ಕಾಣಬೇಕು" ಎಂದು ನಿರ್ದೇಶಕ ಶ್ರೀನಿ ಹಾರೈಸಿದ್ದಾರೆ.

ಇತ್ತೀಚೆಗಷ್ಟೇ ತೆರೆಗಂಡು ಯಶಸ್ವೀ ಪ್ರದರ್ಶನ ಕಾಣುತ್ತಿರೋ ಪಪ್ಪಿ ಚಿತ್ರದ ನಿರ್ದೇಶಕ ಆಯುಶ್ ಮಲ್ಲಿ ಮಾತನಾಡಿ, ತಮ್ಮ ಸಿನಿಮಾಕ್ಕೆ ನೀಡಿದಂಥಾದ್ದೇ ಪ್ರೋತ್ಸಾಹವನ್ನು ಸೀಸ್ ಕಡ್ಡಿ ಚಿತ್ರಕ್ಕೂ ಕೊಡುವಂತೆ ಅರಿಕೆ ಮಾಡಿಕೊಂಡರು. ಐದು ಕಥೆ, ಐದು ಕನ್ನಡದ ಉಪಭಾಷೆ ಮತ್ತು ಐದು ಪ್ರದೇಶಗಳ ಸಮಾಗಮದೊಂದಿಗೆ ಇಲ್ಲಿನ ಕಥೆ ಗರಿಬಿಚ್ಚಿಕೊಂಡಿದೆ ಎಂದು ಚಿತ್ರತಂಡ ತಿಳಿಸಿದೆ.

ಸೀಸ್‌ ಕಡ್ಡಿ ತಂಡ

ಗ್ರಹಣ ಎಲ್ ಎಲ್ ಪಿ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಸುನಿಲ್ ನರಸಿಂಹಮೂರ್ತಿ ಛಾಯಾಗ್ರಹಣ, ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನ, ಅನಿರುದ್ಧ್ ಹರ್ಷವರ್ಧನ್ ಸಂಕಲನ, ಆಶಾ ಥಾಮಸ್ ವಸ್ತ್ರ ವಿನ್ಯಾಸವಿದೆ. ಸಿತಿನ್ ಅಪ್ಪಯ್ಯ, ಬಿ ಎಸ್ ರಾಮಮೂರ್ತಿ, ಮಾನ್ವಿ ಬಳಗಾರ್, ನೊಣವಿನಕೆರೆ ರಾಮಕೃಷ್ಣಯ್ಯ, ಪ್ರಥಮ್ ರಾಜೇ ಅರಸ್, ಸಂತೋಷ್ ಕರ್ಕಿ, ಅನುಷ್ಕಾ ಟಕ್ಕಲಕಿ, ಸಂಜಯ್ ಗೌಡ, ಶ್ರೇಷ್ಠ್ ಜಪ್ತಿಮಠ್, ಮಹೇಂದ್ರ ಗೌಡ, ದೀಪಿಕಾ ಅಡ್ತಲೆ, ರಾಘವೇಂದ್ರ ಭಟ್, ನಾಗರಾಜ್ ರಾವ್, ರೇಖಾ ಕೂಡ್ಲಿಗಿ, ಉದಾತ್, ಜಯಂತ್ ವೆಂಕಟ್, ಅಮೋಘವರ್ಷ, ಅನೂಪ್ ಬಿ ಆರ್, ಶರ್ಮಿಳಾ ಕಾರ್ತಿಕ್, ಅಭಿಲಾಶ್ ಗೌಡ, ಗಂಗಾಧರ್, ಅಭಿಷೇಕ್, ಅಕುಲ್ ಮುಂತಾದವರ ತಾರಾಗಣವಿದೆ. ಸೀಸ್‌ ಕಡ್ಡಿ ಸಿನಿಮಾ ಜೂನ್ 6ರಂದು ಚಿತ್ರಮಂದಿರಗಳಲ್ಲಿ ತೆರೆಗಾಣಲಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in