Shiva Rajkumar: ಪೃಥ್ವಿರಾಜ್ ಸುಕುಮಾರನ್ ಜತೆ ಶಿವಣ್ಣನ ಮಲಯಾಳಂ ಸಿನಿಮಾ; ಟೈಸನ್ ಅಥವಾ ಎಂಪುರಾನ್?
ಜೈಲರ್ ಸಿನಿಮಾ ಮೂಲಕ ಹೆಚ್ಚು ಮುನ್ನೆಲೆಗೆ ಬಂದ ನಟ ಶಿವರಾಜ್‌ಕುಮಾರ್ ಶೀಘ್ರದಲ್ಲಿ ಮಲಯಾಳಂ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ನಾಯಕನಾಗಿ ನಟಿಸಲಿದ್ದಾರೆ.
Shiva Rajkumar: ಕನ್ನಡದ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಮುಂದಿನ ನಾಲ್ಕೈದು ವರ್ಷ ಬುಕ್ ಆಗಿದ್ದಾರೆ. ಸರಣಿ ಸಿನಿಮಾಗಳು ಲೈನ್ ಅಪ್ ಆಗಿರುವುದರಿಂದ ಅವರ ಕಾಲ್ ಶೀಟ್ ಪಡೆಯುವುದು ಅಷ್ಟು ಸುಲಭವಲ್ಲ. ಸದ್ಯ ತಮ್ಮದೇ ಹೋಮ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಭೈರತಿ ರಣಗಲ್ ಸಿನಿಮಾದ ಶೂಟಿಂಗ್‌ನಲ್ಲಿ ಶಿವರಾಜ್‌ಕುಮಾರ್ ಬಿಜಿಯಾಗಿದ್ದಾರೆ. 2017ರಲ್ಲಿನ ಬ್ಲಾಕ್ ಬಸ್ಟರ್ ಹಿಟ್ ಮಫ್ತಿ ಚಿತ್ರದ ಮುಂದುವರಿದ ಭಾಗ ಇದಾಗಿದೆ. ಇದರ ಜತೆಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜತೆಗೂ ಸಿನಿಮಾ ಮಾಡುತ್ತಿದ್ದಾರೆ.
ಹೀಗೆ ಸಾಲು ಸಾಲು ಸಿನಿಮಾಗಳ ಕೆಲಸಗಳ ನಡುವೆ ಇತ್ತೀಚೆಗಷ್ಟೇ ಬಿಡುಗಡೆಯಾದ ರಜಿನಿಕಾಂತ್ ಜತೆಗಿನ ಜೈಲರ್ ಸಿನಿಮಾ ಶಿವಣ್ಣನಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತು. ಜೈಲರ್‌ನಲ್ಲಿನ ಅವರ ಸಣ್ಣ ಕ್ಯಾಮಿಯೋ ತಮಿಳು, ತೆಲುಗು ಮತ್ತು ಮಲಯಾಳಿಗರ ಗಮನ ಸೆಳೆಯಿತು. ಹೊಸ ಅಭಿಮಾನಿಗಳೂ ಹುಟ್ಟಿಕೊಂಡರು. ಇದೀಗ ಇದೇ ಸ್ಟಾರ್ ನಟ ಮಲಯಾಳಂ ಇಂಡಸ್ಟ್ರಿಗೂ ಪದಾರ್ಪಣೆ ಮಾಡಲಿದ್ದಾರೆ ಎಂಬ ಮಾತು ಮುನ್ನೆಲೆಗೆ ಬಂದಿದೆ. ಅದೂ ಮಾಲಿವುಡ್ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಜತೆಗೆ ಎಂಬುದು ವಿಶೇಷ.
ಕೆಲ ದಿನಗಳ ಹಿಂದಷ್ಟೇ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಶಿವಣ್ಣನಿಗೆ, ನೀವು ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರೊಂದಿಗೆ ಚಿತ್ರ ಮಾಡುತ್ತಿದ್ದೀರಾ? ಎಂಬ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಅಷ್ಟೇ ನಯವಾಗಿ ಪ್ರತಿಕ್ರಿಯೆ ನೀಡಿದ್ದ ಶಿವರಾಜ್‌ಕುಮಾರ್, ಹೌದು ನಡೆಯುತ್ತಿದೆ ಎಂದಿದ್ದರು. “ನನಗೆ ಪೃಥ್ವಿರಾಜ್ ಎಂದರೆ ತುಂಬಾ ಇಷ್ಟ. ಆ ಚಿತ್ರದ ಹೆಸರು ನನಗೆ ಇನ್ನೂ ಗೊತ್ತಾಗಿಲ್ಲ, ಆದರೆ ಅದು ಖಂಡಿತವಾಗಿಯೂ ಆಗಲಿದೆ" ಎಂದು ಹೇಳಿದ್ದರು.
ಹೀಗೆ ಮಲಯಾಳಂನಲ್ಲಿ ಶಿವಣ್ಣ ನಟಿಸಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಬಗೆಬಗೆ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಹೊಂಬಾಳೆ ಫಿಲಂಸ್ ಜತೆಗೆ ಟೈಸನ್ ಸಿನಿಮಾ ಮಾಡುತ್ತಿದ್ದಾರೆ ಪೃಥ್ವಿರಾಜ್. ಇದೀಗ ಇದೇ ಚಿತ್ರದಲ್ಲಿ ಶಿವರಾಜ್‌ಕುಮಾರ್ ನಟಿಸಲಿದ್ದಾರಾ ಎಂಬಂಥ ಸುದ್ದಿ ಹರಿದಾಡುತ್ತಿವೆ.
ಇದಷ್ಟೇ ಅಲ್ಲ ಲೂಸಿಫರ್ ಚಿತ್ರದ ಸೀಕ್ವೆಲ್ ಸಹ ಪೃಥ್ವಿರಾಜ್ ಸುಕುಮಾರನ್ ಕೈಗೆತ್ತಿಕೊಂಡಿದ್ದಾರೆ. ಅದಕ್ಕೆ ಎಂಪುರಾನ್ ಎಂಬ ಶೀರ್ಷಿಕೆ ಇಡಲಾಗಿದೆ. ಮೂಲ ಚಿತ್ರದ ಮೋಹನ್ ಲಾಲ್ ಇಲ್ಲಿಯೂ ನಾಯಕನಾಗಿ ಮುಂದುವರಿಯಲಿದ್ದಾರೆ. ಇದೀಗ ಈ ಎರಡು ಸಿನಿಮಾಗಳ (ಟೈಸನ್, ಎಂಪುರಾನ್) ಪೈಕಿ ಯಾವ ಚಿತ್ರದಲ್ಲಿ ಶಿವಣ್ಣ ನಟಿಸಲಿದ್ದಾರೆ ಎಂಬುದು ಇನ್ನಷ್ಟೇ ಅಧಿಕೃತವಾಗಬೇಕಿದೆ.
ಘೋಸ್ಟ್ ಕೆಲಸಗಳಲ್ಲಿ ಬಿಜಿ
ಶಿವರಾಜ್‌ಕುಮಾರ್ ನಟನೆಯ ಎಂ.ಜಿ ಶ್ರೀನಿವಾಸ್ ನಿರ್ದೇಶನದ ಘೋಸ್ಟ್ ಚಿತ್ರದ ಶೂಟಿಂಗ್ ಕೆಲಸಗಳು ಮುಕ್ತಾಯವಾಗಿದೆ. ಇತ್ತ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿಯೂ ಚಿತ್ರತಂಡ ಬಿಜಿಯಾಗಿದೆ. ಸದ್ಯ ದಸರಾ ಹಬ್ಬದ ಪ್ರಯುಕ್ತ ಈ ಚಿತ್ರವನ್ನು ಸೌತ್‌ನ ಭಾಷೆಗಳಿಗೆ ಡಬ್ ಮಾಡಿ ದಸರಾ ವೇಳೆಗೆ ತೆರೆಗೆ ತರುವ ಯೋಜನೆ ಹಾಕಿದ್ದಾರೆ ನಿರ್ಮಾಪಕ ಸಂದೇಶ್ ನಾಗರಾಜ್.
ಮನರಂಜನಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ