ಶಿವರಾಜ್ ಕುಮಾರ್, ಡಾಲಿ ನಟನೆಯ ಉತ್ತರಕಾಂಡ ಸಿನಿಮಾಕ್ಕೆ ಬಾಲಿವುಡ್‌ನ ಅಮಿತ್ ತ್ರಿವೇದಿ ಸಂಗೀತ; ಶೂಟಿಂಗ್ ಕುರಿತು ಇಲ್ಲಿದೆ ವಿವರ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಪ್ರಮುಖ ಪಾತ್ರಗಳಲ್ಲಿ ನಟಿಸುವ ಉತ್ತರಕಾಂಡ ಸಿನಿಮಾದ ಶೂಟಿಂಗ್ ಈ ತಿಂಗಳು ಆರಂಭವಾಗಲಿದೆ. ಈ ಸಿನಿಮಾಕ್ಕೆ ಬಾಲಿವುಡ್‌ನ ಗಾಯಕ, ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಬೆಂಗಳೂರು: ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಪ್ರಮುಖ ಪಾತ್ರಗಳಲ್ಲಿ ನಟಿಸುವ ಉತ್ತರಕಾಂಡ ಸಿನಿಮಾದ ಕುರಿತು ಒಂದಿಷ್ಟು ಹೊಸ ವಿಚಾರಗಳು ಬೆಳಕಿಗೆ ಬಂದಿವೆ. ಈ ಸಿನಿಮಾಕ್ಕೆ ಖ್ಯಾತ ಹಿಂದಿ ಗಾಯಕ, ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಉತ್ತರಕಾಂಡ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈ ಮೂಲಕ ಬಹು ನಿರೀಕ್ಷಿತ ಹಾಗೂ ತಾರಾಗಣದ ಚಿತ್ರ "ಉತ್ತರಕಾಂಡ" ಕುತೂಹಲ ಹೆಚ್ಚಿಸಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಮ್ಯೂಸಿಕ್ ಡೈರೆಕ್ಟರ್ ಅಮಿತ್ "ಉತ್ತರಕಾಂಡ"ಕ್ಕೆ ಸಂಗೀತ ಸಂಯೋಜನೆ ಮಾಡುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟುಗೊಳಿಸಿದೆ.
ಯಾರಿದು ಅಮಿತ್ ತ್ರಿವೇದಿ?
ಅಮಿತ್ ತ್ರಿವೇದಿ ಅವರು ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯ ಸಂಗೀತ ಸಂಯೋಜಕ ಹಾಗೂ ಗಾಯಕರಾಗಿದ್ದಾರೆ. ಕೇವಲ ಹಿಂದಿ ಚಿತ್ರಗಳಷ್ಟೇ ಅಲ್ಲದೆ, ತೆಲುಗು, ಮಲಯಾಳಂ ಚಿತ್ರಗಳಲ್ಲಿ ತಮ್ಮ ವಿಭಿನ್ನ ಸಂಗೀತ ಸಂಯೋಜನೆ ಶೈಲಿಯ ಮೂಲಕ ಛಾಪನ್ನು ಇವರು ಮೂಡಿಸಿದ್ದಾರೆ. ದೇವ್ ಡಿ, ಕ್ವೀನ್, ವೇಕ್ ಅಪ್ ಸಿಡ್, ಇಂಗ್ಲಿಷ್ ವಿಂಗ್ಲಿಷ್, ಕೈ ಪೋ ಚೆ, ಲೂಟೇರಾ, ಉಡ್ತಾ ಪಂಜಾಬ್, ಡಿಯರ್ ಜಿಂದಗಿ, ಸಿಕ್ರೆಟ್ ಸೂಪರ್ ಸ್ಟಾರ್, ಮನ್ಮರ್ಜಿಯಾನ್, ಅಂಧಾದುನ್, ಸೈ ರಾ ನರಸಿಂಹ ರೆಡ್ಡಿ, ಜೂಬಿಲಿ ಎಂಬ ವೆಬ್ ಸೀರಿಸ್ ಮತ್ತು ಇತ್ತೀಚಿನ ಶೈತಾನ್ ಸೇರಿದಂತೆ ಹಲವು ಸಿನಿಮಾ, ಸರಣಿಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
"ಉತ್ತರಕಾಂಡ" ಸಿನಿಮಾದ ಪ್ರೋಮೋಗೆ ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಪೂರ್ಣ ಚಿತ್ರಕ್ಕೆ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಲಿದ್ದಾರೆ. "ಉತ್ತರಕಾಂಡ ಚಿತ್ರದ ಮೂಲಕ ನಾವು ಉತ್ತರಕರ್ನಾಟಕದ ನಾಟಿ ಮತ್ತು ಹಳ್ಳಿಗಾಡಿನ ಕಥೆಯನ್ನು ಹೇಳಬಯಸುತ್ತೇವೆ. ಇಂತಹಾ ಸ್ಥಳೀಯ ಭಾವನೆಯನ್ನು ಉಂಟು ಮಾಡುವ ಕಥೆಗೆ ಅಮಿತ್ ತ್ರಿವೇದಿ ಅವರ ಸಂಗೀತ ಸಾಥ್ ನೀಡಲಿದೆ. ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವುದು ಚಿತ್ರದ ಮೆರುಗನ್ನು ಹೆಚ್ಚಿಸಲಿದೆ" ಎಂದು ಸಿನಿಮಾ ನಿರ್ಮಾಪಕ, ನಿರ್ದೇಶಕ ರೋಹಿತ್ ಪದಕಿ ಹೇಳಿದ್ದಾರೆ.
ಈ ಚಿತ್ರದ ಕಥಾವಸ್ತು ಮತ್ತು ಭಾವನೆ ನನಗೆ ಸಂಪೂರ್ಣವಾಗಿ ಅರ್ಥವಾಗಿದೆ. ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲು ಉತ್ಸುಕನಾಗಿದ್ದೇನೆ ಎಂದು ಅಮಿತ್ ತ್ರಿವೇದಿ ಮಾಹಿತಿ ನೀಡಿದ್ದಾರೆ. ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಮತ್ತು ನಟರಾಕ್ಷಸ ಡಾಲಿ ಧನಂಜಯ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರ ತಂಡ ಈಗಾಗಲೇ ಚಿತ್ರದ ನಾಯಕಿಯ ಹುಡುಕಾಟದಲ್ಲಿದೆ. ಇದೇ ಏಪ್ರಿಲ್ 15ರಿಂದ ಉತ್ತರಕಾಂಡದ ಚಿತ್ರೀಕರಣ ಆರಂಭಿಸಲಿದೆ.
