ಕನ್ನಡ ಸುದ್ದಿ  /  Entertainment  /  Sandalwood News Shivaraj Kumar Geetha Shivarajkumar Dcm Dk Shivakumar Visit Actress Leelavathi Home Pcp

Leelavathi Health: ಲೀಲಾವತಿ ಅಮ್ಮ ನನ್ನ ಧ್ವನಿ ಗುರುತಿಸಿದರು, ಅವರ ಪ್ರೀತಿ ಮರೆಯಲು ಸಾಧ್ಯವಿಲ್ಲ ಎಂದ ಡಾ. ಶಿವರಾಜ್‌ ಕುಮಾರ್‌

Leelavathi health condition: ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಅಭಿನೇತ್ರಿ ಲೀಲಾವತಿಯವರ ಆರೋಗ್ಯ ವಿಚಾರಿಸಲು ಇಂದು ಶಿವರಾಜ್‌ ಕುಮಾರ್‌ ದಂಪತಿ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಆಗಮಿಸಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ಅಭಿನೇತ್ರಿ ಲೀಲಾವತಿಯವರ ಆರೋಗ್ಯ ವಿಚಾರಿಸಿದ ಡಾ. ಶಿವರಾಜ್‌ ಕುಮಾರ್‌ ದಂಪತಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌
ಅಭಿನೇತ್ರಿ ಲೀಲಾವತಿಯವರ ಆರೋಗ್ಯ ವಿಚಾರಿಸಿದ ಡಾ. ಶಿವರಾಜ್‌ ಕುಮಾರ್‌ ದಂಪತಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌

ಬೆಂಗಳೂರು: ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಹಿರಿಯ ನಟಿ ಲೀಲಾವತಿ ನಿರ್ಮಿಸಿದ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟಿಸಿದ ಬಳಿಕ ಶಿವರಾಜ್‌ ಕುಮಾರ್‌ ದಂಪತಿ, ಡಿಕೆ ಶಿವಕುಮಾರ್‌ ಸೇರಿದಂತೆ ಹಲವು ಗಣ್ಯರು ಲೀಲಾವತಿ ಆರೋಗ್ಯ ವಿಚಾರಿಸಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಮೇರುನಟಿಯ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಈ ಸಂದರ್ಭದಲ್ಲಿ ಶಿವರಾಜ್‌ ಕುಮಾರ್‌ ಅವರು ವಿನೋದ್‌ ರಾಜ್‌ ಮತ್ತು ಲೀಲಾವತಿ ಅಮ್ಮನ ಕುರಿತು ಪ್ರೀತಿಯ ಮಾತುಗಳನ್ನು ಆಡಿದ್ದಾರೆ.

"ವಿನೋದ್‌ ರಾಜ್‌ಗೂ ನನಗೂ ಇರುವ ಆತ್ಮೀಯತೆ, ಪ್ರೀತಿ ನಮ್ಮಿಬ್ಬರಿಗೆ ಮಾತ್ರ ಗೊತ್ತಿರುವಂತಹ ವಿಚಾರ. ನನ್ನ ಮಗ ಚೆನ್ನಾಗಿರಬೇಕು ಎನ್ನುವುದು ಲೀಲಾವತಿಯವರ ಆಸೆ. ವಿನೋದ್‌ ಈ ಸಂದರ್ಭದಲ್ಲಿ ಧೈರ್ಯವಾಗಿ ಇರಬೇಕು. ನಾನು ಭೇಟಿ ಮಾಡಿದಾಗ ಲೀಲಾವತಿ ಅಮ್ಮ ನನ್ನ ಧ್ವನಿ ಗುರುತಿಸಿದ್ದಾರೆ. ಅವರ ಪ್ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂದು ಶಿವರಾಜ್‌ ಕುಮಾರ್‌ ಹೇಳಿದ್ದಾರೆ.

"ಈಗ ಅವರು ಇರುವ ಸ್ಥಿತಿ ನೋಡಿದಾಗ ಬೇಜಾರಾಗುತ್ತಿದೆ. ದೇವರ ಆಶೀರ್ವಾದ, ಜನರ ಪ್ರೀತಿಯಿಂದ ಅವರು ಬೇಗ ಗುಣಮುಖರಾಗಲಿ. ಲೀಲಾವತಿ ಹೆಸರಿನಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಇಂದು ಉದ್ಘಾಟನೆಗೊಂಡಿದೆ" ಎಂದು ಶಿವರಾಜ್‌ ಕುಮಾರ್‌ ಹೇಳಿದ್ದಾರೆ.

ವಿನೋದ್‌ರನ್ನು ನೋಡಿದಾಗ ಅವರ ತಾಯಿಯನ್ನು ನೋಡಿದ ರೀತಿ ಆಗುತ್ತೆ. ಜನರ ಪ್ರೀತಿ ವಿನೋದ್‌ ರಾಜ್‌ ಕುಟುಂಬದ ಮೇಲೆ ಇದೆ. ಯಾರೇ ಬಂದರೂ ತಾಯಿ ಮೇಲೆ ಪ್ರೀತಿ ಯಾವತ್ತಿಗೂ ಕಡಿಮೆ ಆಗೋದಿಲ್ಲ. ನನ್ನ ಮಗಳ ಮದುವೆ ಆಮಂತ್ರಣ ನೀಡಲು ಅಂದು ವಿನೋದ್‌ ಮನೆಗೆ ಬಂದಿದ್ದೆ" ಎಂದು ಶಿವಣ್ಣ ನೆನಪಿಸಿಕೊಂಡಿದ್ದಾರೆ. ಇದನ್ನು ಓದಿ: ಹಿರಿಯ ನಟಿ ಲೀಲಾವತಿ ನಟಿಸಿದ 200+ ಸಿನಿಮಾಗಳು, ಭಕ್ತ ಪ್ರಹ್ಲಾದದಿಂದ ಯಾರದು ತನಕ ಇಲ್ಲಿದೆ ವಿವರ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಭೇಟಿ

ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ನೆಲಮಂಗಲ ಬಳಿ ಸೋಲದೇವನಹಳ್ಳಿಯಲ್ಲಿರುವ ಅಭಿನೇತ್ರಿ ಡಾ. ಲೀಲಾವತಿ ಅವರ ತೋಟದ ಮನೆಗೆ ಮಂಗಳವಾರ ತೆರಳಿ, ಅವರ ಅರೋಗ್ಯ ಸ್ಥಿತಿ ವಿಚಾರಿಸಿದರು. ಲೀಲಾವತಿ ಅವರ ಪುತ್ರ, ನಟ ವಿನೋದ್ ರಾಜ್, ಸ್ಥಳೀಯ ಶಾಸಕ ಎನ್ ಶ್ರೀನಿವಾಸ್, ಎಂಎಲ್ಸಿ ರವಿ ಮತ್ತಿತರರು ಇದ್ದರು. ಈ ಸಂದರ್ಭದಲ್ಲಿ ಲೀಲಾವತಿ ಅಮ್ಮನವರ ಜತೆ ಇವರು ಮಾತುಗಳನ್ನು ಆಡಲು ಪ್ರಯತ್ನಿಸಿದರು. "ನೀವು ಅವತ್ತು ಬಂದು ಕರೆದ್ರಿ ಅಲ್ವಾ, ಅದಕ್ಕೆ ಇಂದು ಬಂದಿದ್ದೇನೆ. ನಿಮ್ಮ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟಿಸಲು ಬಂದಿದ್ದೇನೆ" ಎಂದು ಹೇಳಿದ ಡಿಕೆ ಶಿವಕುಮಾರ್‌ ಲೀಲಾವತಿಯವರ ಕೈ ಮುಟ್ಟಿ ಆರೋಗ್ಯ ಸ್ಥಿತಿ ಗಮನಿಸಿದರು.

"ಲೀಲಾವತಿಯವರು ಈ ಹಿಂದೆ ಈ ಭಾಗದ ರೈತರಿಗೆ ಸಂಬಂಧಪಟ್ಟಂತೆ ಸಾಕಷ್ಟು ಮನವಿ ಮಾಡಿದ್ದಾರೆ. ಅದನ್ನು ಈಡೇರಿಸುವ ಕುರಿತು ಪರಿಶೀಲನೆ ಮಾಡುವೆ. ಆ ಫೈಲ್‌ಗಳನ್ನು ಪರಿಶೀಲನೆ ಮಾಡುತ್ತೇನೆ. ಕಲಾವಿದರಿಗೆ ಪೆನ್ಷನ್‌ ನೀಡಬೇಕೆಂಬ ಬೇಡಿಕೆ ಅವರದ್ದು. ಅದನ್ನು ಈಡೇರಿಸಲು ಪ್ರಯತ್ನಿಸುವೆ" ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಲೀಲಾವತಿ ಆರೋಗ್ಯವನ್ನು ವಿಚಾರಿಸಿಕೊಂಡು ಪ್ರತಿನಿತ್ಯ ಸಾಕಷ್ಟು ಜನರು ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗೆ ಅಭಿಷೇಕ್‌ ಅಂಬರೀಶ್‌ ಮತ್ತು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಲೀಲಾವತಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಲೀಲಾವತಿ ಅವರ ತೋಟದ ಮನೆಗೆ ಆಗಮಿಸಿದ ದರ್ಶನ್‌ ಮತ್ತು ಅವರ ಸಂಗಡಿಗರು, ವಿನೋದ್‌ ರಾಜ್‌ ಅವರನ್ನು ಭೇಟಿಯಾಗಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ