ಶಿವರಾತ್ರಿಗೆ ಸಿನಿಮಾ ಹಬ್ಬ: ಶಿವರಾಜ್‌ಕುಮಾರ್ ಪ್ರಭುದೇವ್ ಜತೆಯಾಟ, ಕರಟಕ ದಮನಕ ಮಾರ್ಚ್ 8ರಂದು ಬಿಡುಗಡೆ
ಮಾರ್ಚ್ 8ರಂದು ಶಿವರಾತ್ರಿ. ಅಂದು, ಕನ್ನಡ ಸಿನಿಮಾ ಅಭಿಮಾನಿಗಳಿಗೂ ಮನರಂಜನೆ ಖಾತ್ರಿ. ಶಿವರಾಜ್ ಕುಮಾರ್ ಮತ್ತು ಪ್ರಭುದೇವ್ ಜತೆಯಾಗಿ ನಟಿಸಿರುವ, ಯೋಗರಾಜ್ ಭಟ್ ನಿರ್ದೇಶನದ ಕರಟಕ ದಮನಕ ಸಿನಿಮಾ ಈ ಶುಕ್ರವಾರ ಬಿಡುಗಡೆಯಾಗುತ್ತಿದೆ.
ಬೆಂಗಳೂರು: ಈ ಶಿವರಾತ್ರಿ ಹಬ್ಬದ ವೇಳೆಗೆ ಕನ್ನಡ ಸಿನಿಮಾ ಪ್ರೇಮಿಗಳೂ ಖುಷಿಯಲ್ಲಿದ್ದಾರೆ. ಈ ವಾರ ಹಲವು ಬಹುನಿರೀಕ್ಷಿತ ಸಿನಿಮಾಗಳು ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾಗುತ್ತಿವೆ. ಶಿವಣ್ಣ ಅಭಿಮಾನಿಗಳಂತೂ ಶಿವರಾಜ್‌ಕುಮಾರ್ ಕರಿಯರ್‌ನಲ್ಲಿ ವಿನೂತನವಾದ ಕರಟಕ ದಮನಕ ಎಂಬ ಚಿತ್ರಕ್ಕೆ ಕಾಯುತ್ತಿದ್ದಾರೆ. ಕರಟಕ ದಮನಕ ಎನ್ನುವುದು ಪಂಚತಂತ್ರದ ಕಥೆಯಲ್ಲಿ ಬರುವ ಎರಡು ನರಿಗಳ ಹೆಸರು. ಇದೇ ಹೆಸರನ್ನು ಇಟ್ಟು ವಿಶೇಷ ಸಿನಿಮಾವಾಗಿ ಯೋಗರಾಜ್ ಭಟ್ ಕಟ್ಟಿಕೊಟ್ಟಿರುವ ನಿರೀಕ್ಷೆಯಿದೆ. ಕರಟಕ ಮತ್ತು ದಮನಕ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜತೆ ಪ್ರಭುದೇವ್ ಕೂಟ ನಟಿಸಿದ್ದಾರೆ. ಇವರಿಬ್ಬರ ಜತೆಯಾಟ ನೋಡಲು ಎಲ್ಲರೂ ಕಾಯುತ್ತಿದ್ದಾರೆ.
ಐದು ಭಾಷೆಗಳಲ್ಲಿ ಬಿಡುಗಡೆ
ಈಗ ಶಿವಣ್ಣ ಕೇವಲ ಕನ್ನಡ ನಟರಲ್ಲ. ಅವರಿಗೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಕರಟಕ ದಮನಕದಲ್ಲಿ ಪ್ರಭುದೇವ ಕೂಡ ಇದ್ದಾರೆ. ಕರಟಕ ದಮನಕವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ರಾಕ್‌ಲೈನ್ ಪ್ಲಾನ್ ಮಾಡಿದ್ದರು. ಈ ಸಿನಿಮಾ ಭಾರತದ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಪ್ರಭುದೇವ್ ಮತ್ತು ಶಿವಣ್ಣ ಜತೆಯಾಟ
ಕರಟಕ ದಮನಕ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮತ್ತು ಪ್ರಭುದೇವ್ ಜತೆಯಾಗಿ ನಟಿಸುತ್ತಿದ್ದಾರೆ. ಒಬ್ಬರು ಕರಟಕ,ಇನ್ನೊಬ್ಬರು ದಮನಕ. ಈಗಾಗಲೇ ಇವರಿಬ್ಬರ ವಿವಿಧ ಅವತಾರಗಳನ್ನು ಚಿತ್ರತಂಡ ಯೂಟ್ಯೂಬ್ ವಿಡಿಯೋಗಳಲ್ಲಿ ತೋರಿಸಿದೆ. ಶಿವರಾಜ್ ಕುಮಾರ್ ಮತ್ತು ಪ್ರಭುದೇವರಿಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಮತ್ತು ಪ್ರಿಯಾ ಆನಂದ್ ನಟಿಸುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ, ರಂಗಾಯಣ ರಘು, ರವಿ ಶಂಕರ್, ಭರಣಿ ಮುಂತಾದ ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಆರು ಹಾಡುಗಳಿರುವ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ.
ಯೋಗರಾಜ್ ಭಟ್ ಸಿನಿಮಾ
ಕರಟಕ ದಮನಕ ಸಿನಿಮಾವನ್ನು ಯೋಗರಾಜ್ ಭಟ್ ನಿರ್ದೇಶಿಸುತ್ತಿದ್ದಾರೆ. ಇಲ್ಲಿಯವರೆಗೆ ಶಿವಣ್ಣನ ಸಿನಿಮಾವೆಂದರೆ ಅಂಡರ್‌ವರ್ಲ್ಡ್, ಅಣ್ಣ ತಂಗಿ ಸೆಂಟಿಮೆಂಟ್, ಖಾಕಿ, ಮಚ್ಚು ಖದರ್ ಇತ್ಯಾದಿಗಳಿದ್ದವು. ಕರಟಕ ದಮನಕದಲ್ಲಿ ಭಿನ್ನ ಪಾತ್ರ ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಹಾಡು, ಟ್ರೇಲರ್ ನೋಡಿದಾಗ ಶಿವಣ್ಣ ಯೋಗರಾಜ್ ಭಟ್ ಅಣತಿಯಂತೆ ಬಿಂದಾಸ್ ಆಗಿ ನಟಿಸಿರುವುದು ಕಾಣಿಸುತ್ತದೆ. ಕರಟಕ ದಮನಕ ಎನ್ನುವುದು ಪಂಚತಂತ್ರದ ಎರಡು ನರಿಗಳ ಹೆಸರು. ಎರಡು ವಿಭಿನ್ನ ಸ್ವಭಾವದ ನರಿಗಳಿವು. ತಂತ್ರ ಮತ್ತು ಕುತಂತ್ರಕ್ಕೆ ಹೆಸರು ವಾಸಿ. ಇದೇ ಹೆಸರನ್ನು ಇಟ್ಟುಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಸುಂದರವಾದ ಸಿನಿಮಾ ಮಾಡಿದ್ದಾರೆ ಯೋಗರಾಜ್ ಭಟ್. ಈ ಸಿನೆಮಾದ ಕುರಿತು ಯೋಗರಾಜ್ ಭಟ್ ಅಂದೊಮ್ಮೆ ಹೀಗೆ ಹೇಳಿದ್ದರು. ಶಿವಣ್ಣ+ ಪ್ರಭುದೇವ+ ರಾಕ್‌ಲೈನ್+ ಯೋಗರಾಜ್= ಕರಟಕ ದಮನಕ ಎಂದು ವಿವರಣೆ ಮಾಡಿದ್ದಾರೆ. ಕರಟಕದ ಮುಂದೆ K, ದಮನಕದ ಮುಂದೆ D ಎಂದು ಇಂಗ್ಲೀಷ್ ಅಕ್ಷರಗಳನ್ನೂ ಜೋಡಿಸಿದ್ದಾರೆ. KD ಶಾರ್ಟ್ ಅರ್ಥವೂ ಈ ಸಿನಿಮಾಕ್ಕಿದೆ. ಈ ಸಿನಿಮಾ ಹೇಗಿರಲಿದೆ ಎನ್ನುವ ವಿವರ ಇದೇ ಶಿವರಾತ್ರಿಯ ಹಬ್ಬದಂದು ಗೊತ್ತಾಗಲಿದೆ.