Baby Indira: ‘ನಾನ್ಯಾರು ಅನ್ನೋ ಅರಿವಿಲ್ಲದ ವಯಸ್ಸಲ್ಲೇ 40 ಸಿನಿಮಾಗಳಲ್ಲಿ ನಟಿಸಿದ್ದೆ’; ಅಂದಿನ ಬೇಬಿ ಇಂದಿರಾ ಈಗ ಏನ್ ಮಾಡ್ತಿದ್ದಾರೆ?
ಸಿಂಹದ ಮರಿ ಸೈನ್ಯ, ಚಿನ್ನಾ ನಿನ್ನ ಮುದ್ದಾಡುವೆ, ಪುಟಾಣಿ ಏಜೆಂಟ್ 123, ಮಕ್ಕಳ ಭಾಗ್ಯ, ರಾಮ ಲಕ್ಷ್ಮಣ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಬೇಬಿ ಇಂದಿರಾ ಅವರ ವಯಸ್ಸೀಗ 50 ಪ್ಲಸ್. ಈ ನಡುವೆ ಮದುವೆ, ಮಕ್ಕಳು, ಪತಿ ಶ್ರೀಧರನ್ ನಿಧನ ಹೀಗೆ ಜೀವನದಲ್ಲಿ ಒಂದಷ್ಟು ಏರಿಳಿತ ಕಂಡ ಇದೇ ನಟಿ, ಸದ್ಯ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ.

Baby Indira: ಕನ್ನಡ ಮಾತ್ರವಲ್ಲದೆ ಸೌತ್‌ನ ಸಾಕಷ್ಟು ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ನಟಿಸಿ, ತಮ್ಮ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಿಕೊಂಡವರ ಸಾಲಿನಲ್ಲಿ ಬೇಬಿ ಇಂದಿರಾ ಅವರೂ ಒಬ್ಬರು. ಕನ್ನಡದಲ್ಲಿ ತಮ್ಮ ನಟನೆಯ ಮೂಲಕವೇ ನೋಡುಗರ ಎದೆಯಲ್ಲಿ ಇಂದಿಗೂ ಹಸಿರಾಗಿ ಉಳಿದಿದ್ದಾರೆ ಬೇಬಿ ಇಂದಿರಾ. ಬಾಲನಟಿಯಾಗಿ ಶುರುವಾದ ಇವರ ಜರ್ನಿ, ನಾಯಕಿಯಾಗಿಯೂ ನಟಿಸಿ ಸೈ ಎನಿಸಿಕೊಂಡರು. ತೆಲುಗು, ತಮಿಳು, ಕನ್ನಡ, ಮಲಯಾಳಂನ 100ಕ್ಕೂ ಅಧಿಕ ಸಿನಿಮಾಗಳಲ್ಲೂ ಮಿಂಚಿದರು.
ಸಿಂಹದ ಮರಿ ಸೈನ್ಯ, ಚಿನ್ನಾ ನಿನ್ನ ಮುದ್ದಾಡುವೆ, ಪುಟಾಣಿ ಏಜೆಂಟ್ 123, ಮಕ್ಕಳ ಭಾಗ್ಯ, ರಾಮ ಲಕ್ಷ್ಮಣ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಬೇಬಿ ಇಂದಿರಾ ಅವರ ವಯಸ್ಸೀಗ 50 ಪ್ಲಸ್. ಈ ನಡುವೆ ಮದುವೆ, ಮಕ್ಕಳು, ಪತಿ ಶ್ರೀಧರನ್ ನಿಧನ ಹೀಗೆ ಜೀವನದಲ್ಲಿ ಒಂದಷ್ಟು ಏರಿಳಿತ ಕಂಡ ಇದೇ ನಟಿ, ಸದ್ಯ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಚೆನ್ನೈನಲ್ಲಿಯೇ ಪ್ರಶಾಂತ್ ಮತ್ತು ರಕ್ಷಿತ್ ಎಂಬಿಬ್ಬರು ಮಕ್ಕಳ ಜತೆಗೆ ಸುಖಿ ಜೀವನ ನಡೆಸುತ್ತಿದ್ದಾರೆ.
ಈ ನಡುವೆ ಸೋಷಿಯಲ್ ಮೀಡಿಯಾದಿಂದ, ಬಣ್ಣದ ಲೋಕದಿಂದಲೇ ದೂರವೇ ಉಳಿದಿದ್ದ ಇದೇ ಹಿರಿಯ ನಟಿಯನ್ನು ನಟ, ನಿರ್ದೇಶಕ ರಘುರಾಮ್ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅವರನ್ನು ಸಂದರ್ಶನ ಮಾಡಿದ್ದಾರೆ. ಈ ಅವಧಿಯಲ್ಲಿ ಹಳೇ ವಿಚಾರಗಳನ್ನು ಬೇಬಿ ಇಂದಿರಾ ನೆನಪು ಮಾಡಿಕೊಂಡಿದ್ದಾರೆ. ಬಾಲ್ಯದ ದಿನಗಳ ಜತೆಗೆ, ತಿಳಿವಳಿಕೆ ಇಲ್ಲದ ಸಮಯದಲ್ಲಿ ಸಿನಿಮಾರಂಗಕ್ಕೆ ಬಂದಿದ್ದರ ಬಗ್ಗೆಯೂ ಹೇಳಿಕೊಂಡಿದ್ದಾರೆ.
ಇದು ಬೇರೆ ರೀತಿ ಅಪಹರಣ!
"ಅಪ್ಪ ಕೆಲಸಕ್ಕೆ ಹೋಗಿದ್ದರು. ಮರಳಿ ಮನೆಗೆ ಬರ್ತಿದ್ದಂತೆ, ನಾನು ಮನೆಯಲ್ಲಿಲ್ಲ. ಎಲ್ಲಿ ಮಗಳು ಎಂದು ಕೇಳಿದಾಗ, ನಿಮ್ಮ ಫ್ರೆಂಡ್ ಬಂದು ಕರೆದುಕೊಂಡು ಹೋದ್ರು ಎಂದು ಅಮ್ಮ ಹೇಳಿದ್ಲು. ನೀವೇ ಹೇಳಿದ್ದಕ್ಕೆ ಕರೆದಿಕೊಂಡು ಹೋದ್ರು ಅಂದ್ರು. ತುಂಬ ಭಯದಲ್ಲಿಯೇ ಎಲ್ಲ ಕಡೆ ಹುಡುಕಾಡಿದರು. ಟೆನ್ಷನ್ ಆಯ್ತು. ಈ ನಡುವೆ ಮಗಳನ್ನು ಸಿನಿಮಾಕ್ಕೆ ಕಳಿಸಿ ಎಂದು ಕೆಲವರು ಕೇಳಿದ್ದರು. ಆ ನೆಪದಲ್ಲಿಯೇ ಎಲ್ಲ ಸ್ಟುಡಿಯೋ ಹುಡುಕಾಡಿದ್ದಾರೆ. ಆಗ ನಾನು ಚೆನ್ನೈನ ಸ್ಟುಡಿಯೋದಲ್ಲಿದ್ದೆ.
"ಶಾರದಾ ಸ್ಟುಡಿಯೋದಲ್ಲಿ, ನವವಧು ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದೆ. ಶಾರದಮ್ಮ ಜತೆ ನಟಿಸುತ್ತಿದ್ದೆ. ಎರಡು ಸೀನ್‌ನಲ್ಲೂ ನಟಿಸಿದ್ದೆ. ಅಷ್ಟೊತ್ತಿಗೆ ಅಪ್ಪ ಬಂದರು. ನನ್ನನ್ನು ನೋಡಿ ನಿಟ್ಟುಸಿರು ಬಿಟ್ಟರು. 1971-72 ರಲ್ಲಿ ನಡೆದ ಘಟನೆಯಿದು. ನನ್ನ ನಟನೆ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ರು. ಅಪ್ಪನಿಗೂ ಅಲ್ಲಿನವರು ಮನವೊಲಿಸಲು ಯತ್ನಿಸಿದ್ದರು. ಅದು ಆಗಲಿಲ್ಲ. ಕೊನೆಗೆ ಇದೊಂದು ಸಿನಿಮಾದಲ್ಲಿ ನಟಿಸಲಿ ಎಂದು ಹೇಳಿ ಕನ್ವಿನ್ಸ್ ಮಾಡಿದರು"
ಅರಿವಿಲ್ಲದ ವಯಸ್ಸಿಲ್ಲಿ 30 ಸಿನಿಮಾ ಮಾಡಿದ್ದೆ..
"ನಾನು ಆ ಸಿನಿಮಾ ಪೂರ್ಣಗೊಳಿಸಿದೆ. ಯಾಕೆಂದರೆ, ನನಗೆ ಆ ಸಿನಿಮಾದಲ್ಲಿ ನಟಿಸಿದ್ದೂ ನೆನಪಿಲ್ಲ. ಯಾರೋ ಬಂದು ಕರೆದುಕೊಂಡು ಹೋದರು ನಾನೂ ಹೋದೆ ಅಷ್ಟೇ. ಚಾಕಲೇಟ್ ಕೊಟ್ಟು ಕರೆದುಕೊಂಡು ಹೋದರು. ಸಿನಿಮಾ ಚೆನ್ನಾಗಿ ಮೂಡಿಬಂತು. ಅಪ್ಪನೂ ಕೂಲ್ ಆದರು. ನಾವು ಮನುಷ್ಯರಾಗಿ ಹುಟ್ಟುತ್ತೇವೆ. ನಾವು ಮನುಷ್ಯರು ಅಂತ ನಮಗೆ ಅರ್ಥ ಆಗೋದಕ್ಕೆ, ನಮಗೂ ಒಂದಷ್ಟು ಸಮಯ ಬೇಕು. ಐದು ವರ್ಷ, ಆರು ವರ್ಷ ಸಮಯ ಬೇಕು. ನಾನ್ಯಾರು ಅನ್ನೋ ಅರಿವಿಲ್ಲದ ಸಮಯದಲ್ಲಿಯೇ ನಾನು 30- 40 ಸಿನಿಮಾಗಳಲ್ಲಿ ನಟಿಸಿದ್ದೆ" ಎಂದಿದ್ದಾರೆ ಬೇಬಿ ಇಂದಿರಾ.
ಅಪ್ಪನ ಮನವೊಲಿಕೆ ಯಶಸ್ವಿಯಾಯ್ತು…
"ಆಗಿನ ಸಮಯದಲ್ಲಿ ಬಾಲ ಕಲಾವಿದರ ಕೊರತೆ ಇತ್ತು. ಅಪ್ಪನಿಗೂ ನನ್ನ ನಟನೆ ನೋಡಿ ಖುಷಿಯಾಯ್ತು. ಅವರೂ ಸಹ ಕಲಾವಿದರೇ ಆಗಿರುವುದರಿಂದ, ಮಗಳ ಬಗ್ಗೆ ಹೊರಗಿನ ಸ್ನೇಹಿತರೂ ಮೆಚ್ಚುಗೆ ಮಾತುಗಳನ್ನಾಡಿದರು. ಸಿನಿಮಾ ರಂಗಕ್ಕೆ ಕಳಿಸು ಎಂದರು. ಐದು ವರ್ಷದ ವರೆಗೂ ಮಾಡಲಿ, ಅದಾದ ಬಳಿಕ ಶಾಲೆಗೆ ಕಳುಹಿಸಿದರಾಯ್ತು ಎಂದು ನಿರ್ಧಾರ ಮಾಡಿದರು. ಒಂದಾದ ಮೇಲೋಂದು ಸಿನಿಮಾ ಒಪ್ಪಿಕೊಳ್ಳಲು ಶುರು ಮಾಡಿದರು" ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
