ಕನ್ನಡ ಸುದ್ದಿ  /  ಮನರಂಜನೆ  /  ಸೋನಾಲ್‌ ಮೊಂತೆರೋ ನಿಮ್ಮನೆಗೆ ಸೊಸೆಯಾಗಿ ಬರ್ತಾ ಇದ್ದಾರ? ತರುಣ್‌ ಸುಧೀರ್‌ ಅಮ್ಮ ಮಾಲತಿ ಸುಧೀರ್‌ ಹೇಳಿದ್ದಿಷ್ಟು

ಸೋನಾಲ್‌ ಮೊಂತೆರೋ ನಿಮ್ಮನೆಗೆ ಸೊಸೆಯಾಗಿ ಬರ್ತಾ ಇದ್ದಾರ? ತರುಣ್‌ ಸುಧೀರ್‌ ಅಮ್ಮ ಮಾಲತಿ ಸುಧೀರ್‌ ಹೇಳಿದ್ದಿಷ್ಟು

Sonal Monteiro Marriage: ಕನ್ನಡ ಸಿನಿಮಾದ ಜನಪ್ರಿಯ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ಜನಪ್ರಿಯ ನಟಿ ಸೋನಾಲ್‌ ಮೊಂತೆರೋ ವಿವಾಹಕ್ಕೆ ಸಂಬಂಧಪಟ್ಟ ವದಂತಿಗೆ ತರುಣ್‌ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಆಷಾಢ ಮಾಸ ಕಳೆದ ಬಳಿಕ ಆಕೆಯ ಕುಟುಂಬದವರ ಜತೆಗೆ ಮಾತನಾಡಬೇಕಿದೆ ಎಂದಿದ್ದಾರೆ.

ಸೋನಾಲ್‌ ಮೊಂತೆರೋ ಮತ್ತು ತರುಣ್‌ ಕಿಶೋರ್‌ ಸುಧೀರ್‌ ವಿವಾಹ ವದಂತಿ
ಸೋನಾಲ್‌ ಮೊಂತೆರೋ ಮತ್ತು ತರುಣ್‌ ಕಿಶೋರ್‌ ಸುಧೀರ್‌ ವಿವಾಹ ವದಂತಿ

ಬೆಂಗಳೂರು: ನನ್ನ ದೇವ್ರು ಸೀರಿಯಲ್‌ನಲ್ಲಿ ನಟಿಸುತ್ತಿರುವ ಮಾಲತಿ ಸುಧೀರ್‌ ತಮ್ಮ ಮಗ ತರುಣ್‌ ಸುಧೀರ್‌ ಶುಭವಿವಾಹದ ಕುರಿತಾದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ನನ್ನ ದೇವ್ರು ಸೀರಿಯಲ್‌ನ ಪ್ರೆಸ್‌ ಮೀಟ್‌ ಸಂದರ್ಭದಲ್ಲಿ ಮದುವೆ ವಿಚಾರ ಮಾತನಾಡಿದ್ದಾರೆ. ಮಗ ಮದುವೆಯಾಗ್ತಾ ಇದ್ದಾನೆ ಅನ್ನೋ ಖುಷಿಯಲ್ಲಿರುವ ಮಾಲತಿ ಸುಧೀರ್‌ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ಮೂಲಕ ಸೋನಾಲ್‌ ಮಂಥೆರೋ ಅವರನ್ನು ತರುಣ್‌ ಸುಧೀರ್‌ ವಿವಾಹವಾಗುವ ವದಂತಿಗೆ ಒಂದಿಷ್ಟು ಸ್ಪಷ್ಟನೆಯೂ ದೊರಕಿದೆ. (ಗಮನಿಸಿ: ಸೋನಾಲ್‌ ಮೊಂತೆರೋ ಹೆಸರನ್ನು ಸೋನಾಲ್‌ ಮಂಥೆರೊ, ಸೋನಾಲ್‌ ಮೊಂಥೆರೋ ಎಂದೂ ಬರೆಯಲಾಗುತ್ತದೆ.)

"ಮಗನಿಗೆ ವಿವಾಹ ಆಗಲಿದೆ. ಮದುವೆ ದಿನಾಂಕ ಇನ್ನೂ ಖಚಿತವಾಗಿಲ್ಲ. ಹುಡುಗಿಯನ್ನ ಹುಡುಕುತ್ತಾ ಇದ್ದೇವೆ" ಎಂದು ಮಾಲತಿ ಸುಧೀರ್‌ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸೋನಾಲ್‌ ಮೊಂತೆರೋ ಕುರಿತು ಮಾಧ್ಯಮಗಳು ಪ್ರಶ್ನಿಸಿವೆ. "ಆಕೆಯ ಕುಟುಂಬದವರು ದುಬೈನಿಂದ ಬರಬೇಕಿದೆ. ಎಲ್ಲರೂ ಕುಳಿತು ಮಾತನಾಡಬೇಕು. ಇದೆಲ್ಲ ಆದ ಬಳಿಕ ಫೈನಲ್‌ ಮಾಡಲಾಗುವುದು" ಎಂದು ಸೋನಾಲ್‌ ಮೊಂತೆರೋ ಅವರ ಜತೆ ತರುಣ್‌ ವಿವಾಹ ಎನ್ನುವುದನ್ನು ಸೂಚ್ಯವಾಗಿ ಖಚಿತಗೊಳಿಸಿದ್ದಾರೆ.

ಆಷಾಢ ಕಳೆದ ಬಳಿಕ ಮಾತುಕತೆ

"ಈಗ ಆಷಾಢ ಸಮಯ. ಈ ಸಂದರ್ಭದಲ್ಲಿ ಮದುವೆ ಮಾತುಕತೆ ನಡೆಸಲು ಸಾಧ್ಯವಿಲ್ಲ. ಆಷಾಢ ಮಾಸ ಮುಗಿದ ಬಳಿಕ ಮಾತನಾಡಬೇಕು" ಎಂದು ಮಾಲತಿ ಸುಧೀರ್‌ ಹೇಳಿದ್ದಾರೆ. "ಆಗಸ್ಟ್‌ ತಿಂಗಳಲ್ಲಿ ಮದುವೆ ಎಂಬ ವಿಚಾರ ಮಾಧ್ಯಮಗಳಲ್ಲಿ ಓದಿದೆ. ಆದರೆ, ಅದು ಸುಳ್ಳು. ಮದುವೆ ದಿನಾಂಕ ಇನ್ನೂ ನಿಗದಿಪಡಿಸಿಲ್ಲ" ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇತ್ತೀಚೆಗೆ ಸೋನಾಲ್‌ ಮೊಂತೆರೋ ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ನಾಚಿ ನೀರಾಗಿ ಏನೂ ಉತ್ತರಿಸದೆ ಹೋಗಿದ್ದರು. ಅವರ ನಾಚಿಕೆಯೇ "ತರುಣ್‌ ಜತೆಗೆ ಮದುವೆ ಕನ್‌ಫರ್ಮ್‌" ಅನ್ನೋ ಥರ ಇತ್ತು. ಆದರೆ, ಇದೀಗ ಈ ವಿಷಯದಲ್ಲಿ ತರುಣ್‌ ಸುಧೀರ್‌ ಅವರ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ನಿರ್ದೇಶನದಲ್ಲಿ ನಟಿಸಿದ್ದ ನಟಿಯನ್ನೇ ತರುಣ್‌ ಸುಧೀರ್‌ ವಿವಾಹವಾಗುವುದು ಪಕ್ಕಾ ಆಗಿದೆ.

ಕನ್ನಡ ಸಿನಿಮಾ ಉದ್ಯಮದ ಮೋಸ್ಟ್‌ ಬ್ಯಾಚುಲರ್‌ ಪೈಕಿ ನಿರ್ದೇಶಕ ತರುಣ್‌ ಸುಧೀರ್‌ ಕೂಡಾ ಒಬ್ಬರು. ವಯಸ್ಸು 38 ವರ್ಷವಾದರೂ ಇನ್ನೂ ಸಿಂಗಲ್‌ ಆಗಿಯೇ ಇದ್ದಾರೆ. ಇದೀಗ ಇವರ ಮದುವೆ ಸುದ್ದಿ ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ. ಕಾಟೇರ ನಿರ್ದೇಶಕನ ಮದುವೆಯ ಕುರಿತು ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಸದ್ಯ ತರುಣ್‌ ಸುಧೀರ್‌ ಮಹಾನಟಿ ರಿಯಾಲಿಟಿ ಶೋನ ಜಡ್ಜ್‌ ಸೀಟ್‌ನಲ್ಲಿ ಕುಳಿತು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ತರುಣ್‌ ಸುಧೀರ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ ರಾಬರ್ಟ್‌ ಸಿನಿಮಾದಲ್ಲಿ ಸೋನಾಲ್‌ ನಟಿಸಿದ್ದರು. ಸ್ಯಾಂಡಲ್‌ವುಡ್‌ ಸೇರಿ ತುಳು ಸಿನಿಮಾರಂಗದಲ್ಲಿಯೂ ಹೆಸರು ಮಾಡಿರುವ ಸೋನಾಲ್‌ ಮೊಂತೆರೋ ವಿವಾಹ ಮುಂದಿನ ಎರಡು ತಿಂಗಳಲ್ಲಿ ನಡೆಯದೆ ಇದ್ದರೂ ಈ ವರ್ಷವೇ ನಡೆಯುವ ಸೂಚನೆ ಇದೆ.

ಸೋನಾಲ್‌ ಮೊಂತೆರೋ ಅವರು ಯೋಗರಾಜ್‌ ಭಟ್‌ ನಿರ್ದೇಶನದ ಪಂಚತಂತ್ರ ಸಿನಿಮಾದಲ್ಲಿ ನಟಿಸಿ ಗಾಂಧಿನಗರದಲ್ಲಿ ಗಮನ ಸೆಳೆದಿದ್ದರು. ಇದಾದ ಬಳಿಕ ಯೋಗರಾಜ್‌ ಭಟ್‌ ನಿರ್ದೇಶನದ ಗರಡಿ ಸಿನಿಮಾದಲ್ಲಿ ನಟಿಸಿದ್ದರು. ಬನಾರಸ್‌ ಸಿನಿಮಾದಲ್ಲಿ ಝೈದ್‌ ಖಾನ್‌ ಜತೆ ನಟಿಸಿದ್ದರು. ಗರಡಿಯಲ್ಲಿ ಯಶಸ್‌ ಸೂರ್ಯನ ಜತೆ ನಟಿಸಿದ್ದರು. ಗರಡಿ ಬಳಿಕ ರೋಲೆಕ್ಸ್‌, ಬುದ್ಧಿವಂತ 2, ಶುಗರ್‌ ಫ್ಯಾಕ್ಟರಿ, ಮಾದೇವ, ಮಿ. ನಟವರ್‌ ಲಾಲ್‌, ಸರೋಜಿನಿ, ತಲ್ವಾರ್‌ ಪೇಟೆ, ಭಗವಾನ್‌ ಶ್ರೀ ಕೃಷ್ಣ ಪರಮಾತ್ಮ, ಮಾರ್ಗರೇಟ್‌ ಲವರ್‌ ಆಫ್‌ ರಾಮಚಾರಿ ಮುಂತಾದ ಸಿನಿಮಾಗಳಿಗೆ ಸಹಿಹಾಕಿದ್ದರು. ಇವುಗಳಲ್ಲಿ ಕೆಲವು ಸಿನಿಮಾಗಳು ಈಗಾಗಲೇ ಬಿಡುಗಡೆಯಾಗಿವೆ.