Darshan: ಮಿಸ್ ಮಾಡ್ತಿದ್ದೀವಿ ಅಣ್ಣಾ... ರಕ್ಷಾ ಬಂಧನದಂದು ನಟ ದರ್ಶನ್ ನೆನಪಿನಲ್ಲಿ ತರುಣ್ ಸುಧೀರ್ ಪತ್ನಿ ಸೋನಲ್ ಭಾವುಕ ಪೋಸ್ಟ್
Kannada Actor Darshan News: ಇತ್ತೀಚೆಗೆ ನಿರ್ದೇಶಕ ತರುಣ್ ಸುಧೀರ ಜತೆ ವಿವಾಹವಾದ ಸ್ಯಾಂಡಲ್‌ವುಡ್ ನಟಿ ಸೋನಲ್ ಮೊಂಥೆರೋ ಅವರು ಜೈಲಿನಲ್ಲಿರುವ ಕಾಂಟೇರ ನಟ ದರ್ಶನ್‌ಗೆ ರಕ್ಷಾ ಬಂಧನದ ಶುಭಾಶಯ ಕೋರಿದ್ದಾರೆ. ಈ ಸಮಯದಲ್ಲಿ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ದರ್ಶನ್ ಆಪ್ತರು, ಸ್ನೇಹಿತರು ಅವರಿಲ್ಲದೆಯೇ ಬೇಸರದಲ್ಲಿದ್ದಾರೆ. ರಕ್ಷಾ ಬಂಧನವಾದ ಇಂದು ಇತ್ತೀಚೆಗೆ ತರುಣ್ ಸುಧೀರ್ ಜತೆ ವಿವಾಹವಾದ ನಟಿ ಸೋನಲ್ ಮೊಂಥೆರೋ ದರ್ಶನ್‌ಗೆ ಶುಭಾಶಯ ಕೋರಿದ್ದಾರೆ. ರಕ್ಷಾ ಬಂಧನದ ಸಮಯದಲ್ಲಿ ಅಣ್ಣನ ನೆನಪಿನಲ್ಲಿ ಭಾವುಕ ಪೋಸ್ಟ್ ಬರೆದಿದ್ದಾರೆ.
ಭಾವುಕ ಪೋಸ್ಟ್ ಹಂಚಿಕೊಂಡ ಸೋನಲ್
ಕನ್ನಡ ನಟ ದರ್ಶನ್, ತರುಣ್ ಸುಧೀರ್ ಮುಂತಾದವರೆಲ್ಲರೂ ಮೊದಲಿನಿಂದಲೂ ಆಪ್ತರು. ತರುಣ್ ಜತೆ ಸೋನಲ್ ಮೊಂಥೆರೋ ವಿವಾಹಕ್ಕೆ ದರ್ಶನ್ ಬೆಂಬಲ ನೀಡಿದ್ದರು. ಆದರೆ, ಇತ್ತೀಚೆಗೆ ನಡೆದ ಕೆಲವು ಘಟನೆಗಳಿಂದ ದರ್ಶನ್ ನ್ಯಾಯಾಂಗ ಬಂಧನಕ್ಕೆ ಒಳಗಾಗಬೇಕಾಯಿತು. ಇದೇ ಸಮಯದಲ್ಲಿ ಅನಿವಾರ್ಯವಾಗಿ ದರ್ಶನ್ ಅನುಪಸ್ಥಿತಿಯಲ್ಲಿ ಕಾಟೇರ ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಾಲ್ ಮದುವೆಯಾಗಿದ್ದರು. ಇದಾಗಿ ಕೆಲವು ದಿನಗಳ ಬಳಿಕ ಇಂದು ರಕ್ಷಾ ಬಂಧನದಂದು ಸೋನಾಲ್ ತನ್ನ ಆತ್ಮೀಯ ಅಣ್ಣನಿಗೆ ರಕ್ಷಾ ಬಂಧನದ ಶುಭಾಶಯ ಹೇಳಿದ್ದಾರೆ.
"ಈ ವಿಶೇಷ ದಿನದಂದು ನಾವು ಜತೆಗೆ ಇಲ್ಲದೆ ಇದ್ದರೂ, ನಮ್ಮಿಬ್ಬರ ಆತ್ಮೀಯತೆ ಎಂದೂ ಮಂಕಾಗದು. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಾವು ನಿಮ್ಮನ್ನು ಪ್ರೀತಿಸುತ್ತೇವೆ ಸಹೋದರ" ಎಂದು ಸೋನಲ್ ಮೊಂಥೆರೋ ಪೋಸ್ಟ್ ಮಾಡಿದ್ದಾರೆ.
ಸೋನಲ್ ಮೊಂತೆರೋ ಅವರು ರಾಬರ್ಟ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ದರ್ಶನ್ ನಾಯಕ ನಟನಾಗಿದ್ದರು. ಅಂದಿನ ಪರಿಚಯ ಈಗಲೂ ಉತ್ತಮವಾಗಿಯೇ ಇದೆ. ಇವರಿಬ್ಬರ ನಡುವೆ ಸಹೋದರ ಸಹೋದರಿ ಸಂಬಂಧವಿದೆ. ಇದೀಗ ರಕ್ಷಾ ಬಂಧನದ ಶುಭ ಸಮಯದಲ್ಲಿ ತನ್ನ ಸಹೋದರ ಸ್ಥಾನದಲ್ಲಿರುವ ದರ್ಶನ್‌ಗೆ ರಾಕಿ ಹಬ್ಬದ ಶುಭಾಶಯ ಕೋರಿದ್ದಾರೆ. ಪ್ರತಿವರ್ಷ ದರ್ಶನ್ ಮನೆಗೆ ತೆರಳಿ ಸೋನಲ್ ರಾಕಿ ಕಟ್ಟುತ್ತಿದ್ದರು.
ಕಾಟೇರ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ಮೊಂತೆರೋ ಜೋಡಿಯ ಮದುವೆ ಕಾರ್ಯಕ್ರಮವು ಆಗಸ್ಟ್ 11ರಂದು ನಡೆದಿತ್ತು. ಕುಟುಂಬಸ್ತರು, ಸ್ಯಾಂಡಲ್‌ವುಡ್‌ನ ಆಪ್ತರ ಸಮ್ಮುಖದಲ್ಲಿ ಸೋನಲ್ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದ್ದರು ತರುಣ್. ಈ ಸಮಯದಲ್ಲಿ ಕಾರ್ಯಕ್ರಮದಲ್ಲಿ ಕಾಟೇರ ನಟ ದರ್ಶನ್ ಅನುಪಸ್ಥಿತಿ ಕಾಡಿತ್ತು. "ನಮ್ಮ ಪ್ರೀತಿ ಮದುವೆ ವರೆಗೂ ಬರಲು ದರ್ಶನ್ ಅಣ್ಣನೇ ಕಾರಣ" ಎಂದು ತರುಣ್ ಸುಧೀರ್ ಈ ಹಿಂದೆ ಹೇಳಿದ್ದರು. ರಾಬರ್ಟ್ ಸಿನಿಮಾ ಸಮಯದಿಂದಲೇ ಸೋನಲ್ ಮತ್ತು ತರುಣ್ ನಡುವೆ ಏನೋ ನಡೀತಿದೆ ಎಂಬ ಮಾತು ಕೇಳಿಬಂದಿತ್ತು. ಶೂಟಿಂಗ್ ಸೆಟ್‌ನಲ್ಲಿ ದರ್ಶನ್ ಅವರೇ ಬೇಕು ಅಂತ ತರುಣ್ ಅವರನ್ನು ರೇಗಿಸ್ತಿದ್ರಂತೆ.
"ತಮಾಷೆಯಾಗಿಯೇ ಮದ್ವೆ ಆಗ್ತಿಯಾ ಅಂತೆಲ್ಲ ಕೇಳ್ತಿದ್ರು. ಸೆಟ್‌ನ ಇತರೆ ಕಲಾವಿದರಿಗೂ ಈ ವಿಚಾರ ಗೊತ್ತಾಗಿತ್ತು. ಹರಿದಾಡಿದ ವದಂತಿಗಳ ಬಗ್ಗೆ ನಾವಿಬ್ಬರೂ ಮಾತನಾಡಿದ್ವಿ. ನಿಧಾನಕ್ಕೆ ನಮ್ಮ ನಡುವಿನ ಸಂಬಂಧ ಗಟ್ಟಿಯಾಗ್ತಾ ಹೋಯಿತು. ಸ್ನೇಹ ಪ್ರೀತಿಯಾಗಿ ತಿರುಗಿತು. ಕಾಟೇರ ಸಿನಿಮಾ ರಿಲೀಸ್ ಆಗಲಿ, ಆ ಸಿನಿಮಾ ನನ್ನ ಕೆರಿಯರ್‌ಗೆ ತುಂಬ ಮಹತ್ವದ್ದು ಎಂದು ಒಂದಷ್ಟು ಟೈಮ್ ತೆಗೊಂಡಿದ್ದೆ. ಸಿನಿಮಾಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಖುಷಿಯಾಯ್ತು. ದರ್ಶನ್ ಅವರೇ ಸೋನಲ್ ಮನೆಯಲ್ಲಿ ಮಾತನಾಡಿದ್ರು" ಎಂದು ತರುಣ್ ಸುಧೀರ್ ಈ ಹಿಂದೆ ಮಾಹಿತಿ ನೀಡಿದ್ದರು. ಆದರೆ, ಅನಿವಾರ್ಯ ಕಾರಣದಿಂದ ದರ್ಶನ್ ಅನುಪಸ್ಥಿತಿಯಲ್ಲಿ ಸೋನಲ್ ಜತೆ ವಿವಾಹವಾಗಬೇಕಾಯಿತು.