Soundarya Birthday: ಇಂದು ಚೆಲುವಿನ ಗಣಿ ಸೌಂದರ್ಯ 51ನೇ ಹುಟ್ಟುಹಬ್ಬ; ನಿಧನರಾದಾಗ ಗರ್ಭಿಣಿಯಾಗಿದ್ದ ಸೌಮ್ಯ ಸತ್ಯನಾರಾಯಣ
ಸೌಂದರ್ಯ ನಿಧನರಾದಾಗ ಆಕೆ ಗರ್ಭಿಣಿ ಆಗಿದ್ದರು ಎಂಬ ವಿಚಾರ ತಡವಾಗಿ ತಿಳಿದಿದೆ. ಸೌಂದರ್ಯ ಮದುವೆಗೂ ಮುನ್ನ ಸಾಕಷ್ಟು ಸಾಧಿಸಿದ್ದರು. ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದಿದ್ದರು. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಜಿ.ಎಸ್. ರಘು ಅವರನ್ನು 27 ಏಪ್ರಿಲ್ 2003 ರಂದು ಮದುವೆ ಆಗಿದ್ದರು.
ನಟಿ ಸೌಂದರ್ಯ ಅವರ ಮುದ್ದು ಮುಖವನ್ನು ಯಾರಿಗೆ ತಾನೇ ಮರೆಯಲು ಸಾಧ್ಯ? ಅವರು ಅಗಲಿ ಸುಮಾರು 19 ವರ್ಷಗಳಾದರೂ ಸಿನಿಮಾಭಿಮಾನಿಗಳು ಆಕೆಯನ್ನು ನೆನಪಿಸಿಕೊಳ್ಳದ ದಿನಗಳೇ ಇಲ್ಲ. ಇಂದು ಚೆಲುವಿನ ಗಣಿ ಸೌಂದರ್ಯ ಅವರ ಹುಟ್ಟುಹಬ್ಬ. ಅವರು ಬದುಕಿದ್ದರೆ ಅಭಿಮಾನಿಗಳೊಂದಿಗೆ 51ನೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.
'ಗಂಧರ್ವ' ಚಿತ್ರದ ಮೂಲಕ ಕರಿಯರ್ ಆರಂಭಿಸಿದ್ದ ಚೆಲುವೆ
ಸೌಂದರ್ಯ ಹುಟ್ಟಿದ್ದು 18 ಜುಲೈ 1976. ತಂದೆ ಸತ್ಯನಾರಾಯಣ ಚಿತ್ರರಂಗದಲ್ಲಿ ಬರಹಗಾರರಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಸೌಂದರ್ಯ ಡಾಕ್ಟರ್ ಆಗಬೇಕು ಎಂದುಕೊಂಡಿದ್ದವರು. ಆದರೆ ಸಿನಿಮಾಗಳಲ್ಲಿ ಉತ್ತಮ ಆಫರ್ ಅರಸಿ ಬಂದಿದ್ದರಿಂದ ಎಂಬಿಬಿಎಸ್ ಅರ್ಧದಲ್ಲೇ ಬಿಟ್ಟರು. ಚಿತ್ರಕ್ಕಾಗಿ ಸೌಮ್ಯ ಎಂಬ ತಮ್ಮ ಹೆಸರನ್ನು ಸೌಂದರ್ಯ ಎಂದು ಬದಲಿಸಿಕೊಂಡರು. ಕನ್ನಡದ 'ಗಂಧರ್ವ' ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ಈ ಸಹಜ ಸುಂದರಿ, ನಂತರ ತಮಿಳು, ತೆಲುಗು, ಮಲಯಾಳಂ ಹಿಂದಿ ಸಿನಿಮಾಗಳಲ್ಲಿ ಹೆಸರು ಮಾಡಿದರು. ಆ ಸಮಯದಲ್ಲಿ ನಾಯಕರಷ್ಟೇ ಸರಿ ಸಮಾನವಾಗಿ ಸಂಭಾವನೆ ಪಡೆಯುತ್ತಿದ್ದ ಏಕೈಕ ನಟಿ ಸೌಂದರ್ಯ.
'ಚಂದ್ರಮುಖಿ' ನಂತರ ನಟಿಸುವುದಿಲ್ಲ ಎಂದು ಹೇಳಿದ್ದ ಸೌಂದರ್ಯ
ಸೌಂದರ್ಯ ಅವರೊಂದಿಗೆ ಕನ್ನಡ ಚಿತ್ರರಂಗದ ನಟ, ನಟಿಯರಿಗೆ, ನಿರ್ಮಾಪಕ , ನಿರ್ದೇಶಕ, ತಂತ್ರಜ್ಞರಿಗೆ ಅನೇಕ ನೆನಪುಗಳಿವೆ. ಅವರು ನಿಧನರಾಗುವ ಹಿಂದಿನ ದಿನ ನಡೆದ ಘಟನೆಯೊಂದರನ್ನು ತಮಿಳು ಆರ್ ವಿ ಉದಯ್ ಕುಮಾರ್ ಮೂರು ವರ್ಷಗಳ ಹಿಂದೆ ಹೇಳಿಕೊಂಡಿದ್ದರು. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಸೌಂದರ್ಯ ಅಗಲುವ ಹಿಂದಿನ ದಿನ ಕರೆ ಮಾಡಿ 'ಚಂದ್ರಮುಖಿ' ಸಿನಿಮಾ ನಂತರ ನಾನು ಚಿತ್ರರಂಗದಿಂದ ದೂರ ಉಳಿಯುತ್ತೇನೆ ಎಂದು ಹೇಳಿದ್ದರಂತೆ. ''ಆದರೆ ಹೀಗೆ ಮಾತನಾಡಿದ ಮರು ದಿನವೇ ಸೌಂದರ್ಯ ಅವರ ಸಾವಿನ ಸುದ್ದಿ ನನಗೆ ಬರಸಿಡಿಲಿನಂತೆ ಬಂದು ಅಪ್ಪಳಿಸಿತು'' ಎಂದು ಉದಯ್ ಕುಮಾರ್ ಹೇಳಿಕೊಂಡಿದ್ದಾರೆ.
ಸೌಂದರ್ಯ ಜೊತೆಗಿನ ಒಡನಾಟ ನೆನೆದ ತಮಿಳು ನಿರ್ದೇಶಕ
ಮಲಯಾಳಂನ 'ಮಣಿಚಿತ್ರತಾಳು' ಸಿನಿಮಾ ರೀಮೇಕ್ ಕನ್ನಡದಲ್ಲಿ 'ಆಪ್ತಮಿತ್ರ' ಹೆಸರಿನಲ್ಲಿ ಹಿಟ್ ಆಗುತ್ತಿದ್ದಂತೆ ಅದನ್ನು ತಮಿಳಿನಲ್ಲಿ 'ಚಂದ್ರಮುಖಿ' ಹೆಸರಿನಲ್ಲಿ ರೀಮೇಕ್ ಮಾಡಲು ನಿರ್ಧರಿಸಲಾಯ್ತು. ಈ ಸಿನಿಮಾದಲ್ಲಿ ಕೂಡಾ ಸೌಂದರ್ಯ ನಟಿಸಬೇಕಾಯ್ತು. ತಮಿಳಿನಲ್ಲಿ ಪಿ ವಾಸು ಅವರೇ ಸಿನಿಮಾ ನಿರ್ದೇಶಿಸಿದ್ದರು. ಆರ್ವಿ ಉದಯ್ ಕುಮಾರ್ ಅವರನ್ನು ಅಣ್ಣ ಎಂದೇ ಕರೆಯುತ್ತಿದ್ದ ಸೌಂದರ್ಯ, ಅವರಿಗೆ ಕರೆ ಮಾಡಿ ''ಚಂದ್ರಮುಖಿ ಸಿನಿಮಾ ನಂತರ ನಾನು ಇನ್ನು ನಟಿಸುವುದಿಲ್ಲ'' ಎಂದು ಹೇಳಿದ್ದರಂತೆ. ಹಾಗೇ ಹೇಳಿದ ಮರುದಿನವೇ ಆಕೆ ನಿಧನರಾಗಿದ್ದಾರೆ. ಸೌಂದರ್ಯ ಆ ರೀತಿ ಏಕೆ ಹೇಳಿದರು ಎಂದು ಉದಯ್ ಕುಮಾರ್ ಅವರಿಗೆ ನಂತರವಷ್ಟೇ ತಿಳಿದದ್ದು.
ನಿಧನರಾದಾಗ ಗರ್ಭಿಣಿ ಆಗಿದ್ದರು ಸೌಂದರ್ಯ
ಸೌಂದರ್ಯ ನಿಧನರಾದಾಗ ಆಕೆ ಗರ್ಭಿಣಿ ಆಗಿದ್ದರು ಎಂಬ ವಿಚಾರ ತಡವಾಗಿ ತಿಳಿದಿದೆ. ಸೌಂದರ್ಯ ಮದುವೆಗೂ ಮುನ್ನ ಸಾಕಷ್ಟು ಸಾಧಿಸಿದ್ದರು. ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದಿದ್ದರು. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಜಿ.ಎಸ್. ರಘು ಅವರನ್ನು 27 ಏಪ್ರಿಲ್ 2003 ರಂದು ಮದುವೆ ಆಗಿದ್ದರು. ಇನ್ನು ಸಿನಿಮಾ ಬಿಟ್ಟು ಪರ್ಸನಲ್ ಲೈಫ್ ಕಡೆಗೆ ಗಮನ ನೀಡಬೇಕು ಎಂದು ಸೌಂದರ್ಯ ಕನಸು ಕಂಡಿದ್ದರು. ಅಣ್ಣ ಅಮರ್ನಾಥ್ ಜೊತೆ 17 ಏಪ್ರಿಲ್ 2004 ರಂದು ಬಿಜೆಪಿ ಪರ ಚುನಾವಣಾ ಪ್ರಚಾರಕ್ಕಾಗಿ ಕರೀಂನಗರಕ್ಕೆ ತೆರಳುವಾಗ ಏರ್ಕ್ರಾಫ್ಟ್ ಅಪಘಾತದಲ್ಲಿ ಸೌಂದರ್ಯ ನಿಧನರಾದರು. ಅದಾದ ನಂತರ 'ಚಂದ್ರಮುಖಿ' ಚಿತ್ರದಲ್ಲಿ ಸೌಂದರ್ಯ ಬದಲಿಗೆ ಜ್ಯೋತಿಕಾ ನಟಿಸಿದರು.