Spandana Vijay: ತಂದೆ ಬಿಕೆ ಶಿವರಾಮ್ ನಿವಾಸದ ಬಳಿ ಸ್ಪಂದನಾ ಅಂತಿಮ ದರ್ಶನಕ್ಕೆ ವ್ಯವಸ್ಥೆ: ಸಂಜೆ ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಕ್ರಿಯೆ
ಕಸ್ಟಮ್ಸ್ ಅಧಿಕಾರಿಗಳು ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಿದ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ನಂತರ ಆಂಬುಲೆನ್ಸ್ ಮೂಲಕ ಸ್ಪಂದನಾ ಮೃತದೇಹವನ್ನು ಅವರ ತಂದೆ ಬಿಕೆ ಶಿವರಾಮ್ ಅವರ ಮಲ್ಲೇಶ್ವರಂ ನಿವಾಸದ ಬಳಿ ಕೊಂಡೊಯ್ಯಲಾಯ್ತು.
ಸೋಮವಾರ ಬ್ಯಾಂಕಾಕ್ನಲ್ಲಿ ನಿಧನರಾದ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಮೃತದೇಹವನ್ನು ಬೆಂಗಳೂರಿಗೆ ತರಲಾಗಿದೆ. ವಿದೇಶದಲ್ಲಿನ ನಿಯಮಗಳನ್ನು ಅನುಸರಿಸಿ ಕಾರ್ಗೋ ವಿಮಾನದಲ್ಲಿ ಸ್ಪಂದನಾ ಪಾರ್ಥಿವ ಶರೀರವನ್ನು ಮಂಗಳವಾರ ರಾತ್ರಿ ಬೆಂಗಳೂರಿಗೆ ತರಲಾಗಿದೆ. ವಿಜಯ ರಾಘವೇಂದ್ರ ಅವರನ್ನು ನೋಡಲು ರಾತ್ರಿ, ವಿಮಾನ ನಿಲ್ದಾಣದ ಬಳಿ ಸಾವಿರಾರು ಜನರು ಜಮಾಯಿಸಿದ್ದರು.
ಕಸ್ಟಮ್ಸ್ ಕ್ಲಿಯರೆನ್ಸ್ ನಂತರ ಮೃತದೇಹ ಹಸ್ತಾಂತರ
ಶ್ರೀಮುರಳಿ, ನಿರ್ಮಾಪಕ ಮುನಿರತ್ನ, ಸ್ಪಂದನಾ ಚಿಕ್ಕಪ್ಪ ಬಿಕೆ ಹರಿಪ್ರಸಾದ್ ಹಾಗೂ ವಿಜಯ ರಾಘವೇಂದ್ರ ಕುಟುಂಬದ ಇತರ ಸದಸ್ಯರು ಕೂಡಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಕಸ್ಟಮ್ಸ್ ಅಧಿಕಾರಿಗಳು ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಿದ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ನಂತರ ಆಂಬುಲೆನ್ಸ್ ಮೂಲಕ ಸ್ಪಂದನಾ ಮೃತದೇಹವನ್ನು ಅವರ ತಂದೆ ಬಿಕೆ ಶಿವರಾಮ್ ಅವರ ಮಲ್ಲೇಶ್ವರಂ ನಿವಾಸದ ಬಳಿ ಕೊಂಡೊಯ್ಯಲಾಯ್ತು. ಅದಕ್ಕೂ ಮುನ್ನ ಮಾವ ಶಿವರಾಮ್ ನಿವಾಸದ ಬಳಿಗೆ ಕಾರಿನಲ್ಲಿ ತೆರಳಿದ ವಿಜಯ ರಾಘವೇಂದ್ರ ಮಗ ಶೌರ್ಯನನ್ನು ಕೈ ಹಿಡಿದು ಮನೆ ಒಳಗೆ ಕರೆದೊಯ್ದ ದೃಶ್ಯ ಎಂತವರನ್ನೂ ಮನ ಕಲಕುವಂತೆ ಇತ್ತು.
ಬಿಕೆ ಶಿವರಾಮ್ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಸ್ಪಂದನಾ ತಂದೆ, ನಿವೃತ್ತ ಪೊಲೀಸ್ ಅಧಿಕಾರಿ ಬಿಕೆ ಶಿವರಾಮ್ ಮಲ್ಲೇಶ್ವರಂ ನಿವಾಸದ ಬಳಿ ಸ್ಪಂದನಾ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ( ಬುಧವಾರ) ಮಧ್ಯಾಹ್ನ 2 ಗಂಟೆವರೆಗೂ ಗಣ್ಯರು ಹಾಗೂ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶವಿದೆ. ನಂತರ ಹರಿಶ್ಚಂದ್ರ ಘಾಟ್ ರುದ್ರಭೂಮಿಯಲ್ಲಿ ಸ್ಪಂದನಾ ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ನಡೆದಿದೆ. ಮಂಗಳವಾರ ರಾತ್ರಿಯಿಂದಲೇ ಅನೇಕ ಗಣ್ಯರು ಶಿವರಾಮ್ ನಿವಾಸದ ಬಳಿ ಬಂದು ಸ್ಪಂದನಾ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.
ಭಾನುವಾರ ರಾತ್ರಿ ಸ್ಪಂದನಾಗೆ ಹೃದಯಾಘಾತ
ವಾರದ ಹಿಂದೆ ಆಪ್ತರೊಂದಿಗೆ ಬ್ಯಾಂಕಾಕ್ ತೆರಳಿದ್ದ ಸ್ಪಂದನಾ ಭಾನುವಾರ ರಾತ್ರಿ ಶಾಪಿಂಗ್ ಮುಗಿಸಿದ ಬಳಿಕ ಹೋಟೆಲ್ ರೂಮ್ಗೆ ತೆರಳಿದ್ದಾರೆ. ರಾತ್ರಿ ಮಲಗಿದ್ದಲ್ಲೇ ಅವರಿಗೆ ಹೃದಯಾಘಾತವಾಗಿದೆ ಎಂದು ಸ್ಪಂದನಾ ಜೊತೆಗೆ ಇದ್ದವರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ವಿಜಯ ರಾಘವೇಂದ್ರ, ಸ್ಪಂದನಾ ಚಿಕ್ಕಪ್ಪ ಬಿಕೆ ಹರಿಪ್ರಸಾದ್ ಹಾಗೂ ಸಹೋದರ ರಕ್ಷಿತ್ ಶಿವರಾಂ ಬ್ಯಾಂಕಾಕ್ ತೆರಳಿದ್ದರು. ಅಲ್ಲಿ ಮರಣೋತ್ತರ ಪರೀಕ್ಷೆ ನಂತರ ವಿಮಾನದ ಮೂಲಕ ಸ್ಪಂದನಾ ಮೃತದೇಹವನ್ನು ಬೆಂಗಳೂರಿಗೆ ತರಲಾಗಿದೆ.
ನಟ ಶಿವರಾಜ್ಕುಮಾರ್ ಹೈದರಾಬಾದ್ನಲ್ಲಿ ಭೈರತಿ ರಣಗಲ್ ಸಿನಿಮಾ ಶೂಟಿಂಗ್ ಕ್ಯಾನ್ಸಲ್ ಮಾಡಿ ಬೆಂಗಳೂರಿಗೆ ಆಗಮಿಸಿ ವಿಜಯ ರಾಘವೇಂದ್ರ ಕುಟುಂಬದ ದುಃಖದಲ್ಲಿ ಭಾಗಿಯಾಗಿದ್ದಾರೆ.