ಸಿನಿಮಾ ಯಶಸ್ಸನ್ನು ನಿಭಾಯಿಸಲಾಗದೆ ನಿಜ ಜೀವನದಲ್ಲೂ ಮಚ್ಚು-ಲಾಂಗು ಹಿಡಿದನೇನೊ; ಪತ್ರಕರ್ತ ಸಂಗಮೇಶ್‌ ಮೆಣಸಿನಕಾಯಿ ಬರಹ
ಕನ್ನಡ ಸುದ್ದಿ  /  ಮನರಂಜನೆ  /  ಸಿನಿಮಾ ಯಶಸ್ಸನ್ನು ನಿಭಾಯಿಸಲಾಗದೆ ನಿಜ ಜೀವನದಲ್ಲೂ ಮಚ್ಚು-ಲಾಂಗು ಹಿಡಿದನೇನೊ; ಪತ್ರಕರ್ತ ಸಂಗಮೇಶ್‌ ಮೆಣಸಿನಕಾಯಿ ಬರಹ

ಸಿನಿಮಾ ಯಶಸ್ಸನ್ನು ನಿಭಾಯಿಸಲಾಗದೆ ನಿಜ ಜೀವನದಲ್ಲೂ ಮಚ್ಚು-ಲಾಂಗು ಹಿಡಿದನೇನೊ; ಪತ್ರಕರ್ತ ಸಂಗಮೇಶ್‌ ಮೆಣಸಿನಕಾಯಿ ಬರಹ

Darshan Thoogudeepa: ಚಿತ್ರದುರ್ಗದ ವ್ಯಕ್ತಿ ರೇಣುಕಾಸ್ವಾಮಿ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ ನಟ ದರ್ಶನ್‌ ವಿಚಾರಣೆ ಎದುರಿಸುತ್ತಿದ್ದಾರೆ. ದರ್ಶನ್‌, ಪವಿತ್ರಾಗೌಡ ಸೇರಿದಂತೆ 10 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದರ್ಶನ್‌ ಕೊಲೆ ಕೇಸ್‌ನಲ್ಲಿ ಸಿಲುಕಿರುವುದು ಅಭಿಮಾನಿಗಳಿಗೆ ಶಾಕ್‌ ಆಗಿದೆ.

ಸಿನಿಮಾ ಯಶಸ್ಸನ್ನು ನಿಭಾಯಿಸಲಾಗದೆ ನಿಜ ಜೀವನದಲ್ಲೂ ಮಚ್ಚು-ಲಾಂಗು ಹಿಡಿದನೇನೊ; ಪತ್ರಕರ್ತ ಸಂಗಮೇಶ್‌ ಮೆಣಸಿನಕಾಯಿ ಬರಹ
ಸಿನಿಮಾ ಯಶಸ್ಸನ್ನು ನಿಭಾಯಿಸಲಾಗದೆ ನಿಜ ಜೀವನದಲ್ಲೂ ಮಚ್ಚು-ಲಾಂಗು ಹಿಡಿದನೇನೊ; ಪತ್ರಕರ್ತ ಸಂಗಮೇಶ್‌ ಮೆಣಸಿನಕಾಯಿ ಬರಹ (PC: Facebook)

ಕಳೆದ ಕೆಲವು ದಿನಗಳಿಂದ ಸ್ಯಾಂಡಲ್‌ವುಡ್‌ಗೆ ಗ್ರಹಣ ಹಿಡಿದಿರುವಂತೆ ಒಂದರ ಹಿಂದೊಂದರಂತೆ ಬೇಸರದ ಸುದ್ದಿಗಳೇ ಕೇಳಿ ಬರುತ್ತಿದೆ. ಚಂದನ್‌ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್‌ ಬೆನ್ನಲ್ಲೇ ರಾಘವೇಂದ್ರ ರಾಜ್‌ಕುಮಾರ್‌ ಪುತ್ರ ಯುವ ಹಾಗೂ ಶ್ರೀದೇವಿ ವಿಚ್ಛೇದನ ಪ್ರಕರಣ ಸದ್ದು ಮಾಡಿತ್ತು. ಇದರ ಬೆನ್ನ ಹಿಂದೆಯೇ ರೇಣುಕಾಸ್ವಾಮಿ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ ನಟ ದರ್ಶನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಹಾಗೂ ಸಹಚರರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ಕೇಸ್‌ನಲ್ಲಿ ದರ್ಶನ್‌ ಹೆಸರು ಕೇಳಿ ಬಂದಿರುವುದು ಅಭಿಮಾನಿಗಳಿಗೆ ಶಾಕ್‌ ಆಗಿದೆ. ಸೋಷಿಯಲ್‌ ಮೀಡಿಯಾದ್ಯಂತ ದರ್ಶನ್‌ ಹೆಸರೇ ಕೇಳಿಬರುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಸಂಗಮೇಶ್‌ ಮೆಣಸಿನಕಾಯಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಅವಕಾಶಕ್ಕಾಗಿ ಗಾಂಧಿನಗರ ಸುತ್ತಾಡಿದ್ದ ನಟ

‘’ಅವನೊಬ್ಬ ಸಿನಿಮಾ ನಟನ ಮಗ. ಹಾಗಂತ ಅಪ್ಪನ ಹೆಸರಿನಲ್ಲಿ ಮೆರೆಯುವಷ್ಟು, ಮೈಮರೆಯುವಷ್ಟು ಸಂಪತ್ತೇನೂ ಇರಲಿಲ್ಲ. ಇವನಿಗೆ ಸಿನಿಮಾ ರಂಗ ಸೇರುವ ಅಭಿಲಾಷೆಯೂ ಇರಲಿಲ್ಲ, ಅಪ್ಪನಿಗೂ ಇವ ಸಿನಿಮಾ ಸೇರುವುದು ಬೇಕಿರಲಿಲ್ಲ. ಆದರೆ ಇವನಿಗೆ ನಾಟಕಗಳಲ್ಲಿ ಅಭಿನಯಿಸುವ ಆಸಕ್ತಿ ಇತ್ತು. ನೀನಾಸಂ ಸೇರಿದ. ಅಲ್ಲಿ ಅಪ್ಪನ ಹೆಸರು ಹೇಳದೇ ತಾನೊಬ್ಬ ಪ್ರತಿಭಾವಂತ ನಟ ಎಂಬಂತೆ ಬೆಳೆಯುತ್ತಿದ್ದ.

ಅದೊಂದು ದಿನ ಅಪ್ಪ ಸತ್ತ ತಾರ್ ಬಂತು. ಇವನು ಹೆಗ್ಗೋಡಿನಿಂದ ಸಾಗರಕ್ಕೆ ಬಂದ. ಸಾಗರದಿಂದ ಮೈಸೂರು ಕಡೆ ಹೋಗುವ ಬಸ್‌ಗಾಗಿ ಹುಡುಕಿದ. ಅಲ್ಲೊಂದು ಟೆಂಪೊ ಇತ್ತು. ಮೈಸೂರಿಗೇನೂ ಹೊರಟಿರಲಿಲ್ಲ, ಆದರೆ ಮೈಸೂರು ದಾರಿಗೆ ಹೊರಟಿತ್ತು. ಅಷ್ಟೊತ್ತಿಗಾಗಲೇ ಮಧ್ಯಾಹ್ನ 1.10. ಆಕಾಶವಾಣಿ ವಾರ್ತೆಯಲ್ಲಿ ಇವನ ಅಪ್ಪ ನಿಧನರಾದ ಸುದ್ದಿ ಬಂತು. ಈ ಹುಡುಗ ಅಳುತ್ತಿದ್ದ. ಟೆಂಪೊದವನಿಗೆ ಗೊತ್ತಾತು-ಇವನು ಆ ನಟನ ಮಗನೇ ಅಂತ. ಟೆಂಪೊ, ಇವನಿಗೂ ಹೇಳದೇ ಸೀದಾ ಮೈಸೂರಿಗೆ ಪ್ರಯಾಣ ಬೆಳೆಸಿತು. ಇವನನ್ನು ಮನೆ ಮುಂದೆ ಇಳಿಸಿತು. ಇವನು ತನ್ನ ಬಳಿ ಇದ್ದ ಬಸ್ ಚಾರ್ಜ್‌ ಹಣವನ್ನು ಟೆಂಪೊದವನಿಗೆ ಕೊಡಲು ಮುಂದಾದ.

ಟೆಂಪೊದವನು ಕೈಮುಗಿದು ಹೇಳಿದ-"ಇಂಥ ಮಹಾನ್ ನಟನಿಗೆ ಇದು ನನ್ನ ಅಳಿಲು ಸೇವೆ. ನನಗೆ ಹಣ ಕೊಡಬೇಡಿ. ಅಪ್ಪನ ಅಂತ್ಯಕ್ರಿಯೆಗೆ ಬಳಸಿ".ಇವನಲ್ಲಿ ಆ ಟೆಂಪೊದವನ ಸೇವೆ ಬಹುಕಾಲ ನೆನಪಿತ್ತು. ಇಂಥ ಹಲವು ಋಣಗಳು ಅಪ್ಪನಿಂದಾಗಿ ದೊರೆತ ಬಗ್ಗೆ ಅವನಲ್ಲಿ ಕೃತಜ್ಞತೆ ಇತ್ತು. ಕ್ರಮೇಣ ಸಿನಿಮಾ ಕಡೆ ಹೋದ. ಗಾಂಧಿ ನಗರದಲ್ಲಿ ಅಲೆದ. ಅಪ್ಪನನ್ನು ಹೊಗಳುತ್ತಿದ್ದವರೂ ಇವನಿಗೆ ಅವಕಾಶ ಕೊಡಲಿಲ್ಲ, ಇವನು ಸೈಕಲ್ ತುಳಿಯೋದು ಬಿಡಲಿಲ್ಲ.

ದರ್ಶನ್‌ ರಕ್ಷಣೆಗೆ ಮುಂದಾದ ರಾಜಕಾರಣಿಗಳು

ನಟನಾಗಿ ಬೆಳೆಯತೊಡಗಿದ. ನಾಯಕ ನಟನಾದ. ಸ್ಟಾರ್‌ಗಿರಿ ತಲೆಗೇರಿತು. ಮಚ್ಚು ಝಳಪಿಸಿದ-ಸಿನಿಮಾದಲ್ಲಿ. ಯಶಸ್ಸು ಮಿತಿ ಮೀರಿತು, ಅಥವಾ ಅವನು ನಿಭಾಯಿಸುವಲ್ಲಿ ವಿಫಲನಾಗಿರಬೇಕು. ನಿಜ ಜೀವನದಲ್ಲೂ ಮಚ್ಚು-ಲಾಂಗು ಹಿಡಿದನೇನೊ? ಅವನ ನಿಜರೂಪ ಇನ್ನಷ್ಟೇ ಹೊರ ಬೀಳಬೇಕು. ಬೆಳಕಿನ ಸಿನಿ ಮಾಧ್ಯಮದ ಹಿಂದೆ ಕರಾಳತೆ ತುಂಬಿ ತುಳುಕುತ್ತಿದೆ ಎಂಬ ಮಾತಿಗೆ ಬಹಿರಂಗ ಸಾಕ್ಷಿಯಂತೂ ಆಗಿದ್ದಾನೆ.

ಇನ್ನು ಇವನಿಂದ ಚುನಾವಣೆ ವೇಳೆ ಪ್ರಚಾರದ ನೆರವು ಪಡೆದಿದ್ದ ತಾರಾಮಣಿಗಳು-ಪುಢಾರಿಗಳು ಏನೇನು ಕಸರತ್ತು ಮಾಡಿ ಇವನನ್ನು ರಕ್ಷಿಸುತ್ತಾರೋ ಕಾದು ನೋಡಬೇಕಾದ ದಾರಿಯೊಂದೇ ಇವನ ಅಭಿಮಾನಿಗಳಿಗಿರೋದು. ಅಭಿಮಾನಿಗಳು ದಾರಿ ತಪ್ಪಿದಾಗ ಅವರಿಗೆ ತಿಳಿಹೇಳೋದು ನಟನ ಕರ್ತವ್ಯ; ನಟ ದಾರಿ ತಪ್ಪಿದಾಗ ಅವನ ಕಿವಿ ಹಿಂಡೋದು ಅಭಿಮಾನಿಗಳ ಹಕ್ಕು. ಸದ್ಯ ಕನ್ನಡ ಚಿತ್ರರಂಗದಲ್ಲಿ ಎರಡೂ ಕ್ರಿಯೆಗಳು ನಾಪತ್ತೆ.‘’

Whats_app_banner