Sanju weds Geetha 2 ಚಿತ್ರದ ಒಂದು ಹಾಡಿನ ಶೂಟಿಂಗ್ಗೆ ಬರೋಬ್ಬರಿ 50 ಲಕ್ಷ ಸುರಿದ ನಿರ್ಮಾಪಕರು!
ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ ಚಿತ್ರದ ಹಾಡಿನ ಶೂಟಿಂಗ್ ಅನ್ನು ರಿಚ್ ಆಗಿಯೇ ಚಿತ್ರೀಕರಿಸುತ್ತಿದೆ ಚಿತ್ರತಂಡ. ಅದ್ಯಾವ ಮಟ್ಟಿಗೆ ಎಂದರೆ ಒಂದೇ ಹಾಡಿಗೆ ಬರೋಬ್ಬರಿ 50 ಲಕ್ಷ ಖರ್ಚು ಮಾಡಿದ್ದಾರೆ ನಿರ್ಮಾಪಕರು.
Sanju weds Geetha 2: ಒಂದು ಪ್ರೇಮಕಥೆ ಎಂದರೆ ಅಲ್ಲಿ ಖುಷಿ, ತ್ಯಾಗದ ಜೊತೆಗೆ ಕಾಡುವ ಕಥೆ ಇರಬೇಕು. ಈ ಎಳೆಯ ಸಿನಿಮಾಗಳನ್ನು ಮಾಡಿ ಗಮನ ಸೆಳೆದವರು ನಿರ್ದೇಶಕ ನಾಗಶೇಖರ್. ಈಗಾಗಲೇ ಅವರ ಬತ್ತಳಿಕೆಯಿಂದ ಅದಕ್ಕೆ ಉದಾಹರಣೆ ಎಂಬಂತೆ ತೆರೆಕಂಡು ಹಿಟ್ ಆಗಿವೆ, ಮೈನಾ, ಸಂಜು ವೆಡ್ಸ್ ಗೀತಾ ಮತ್ತು ಅಮರ್ ಸಿನಿಮಾಗಳು. ಈಗ ಹೊಸ ಸಂಜು ಹಾಗೂ ಗೀತಾರ ನವೀನ ಪ್ರೇಮಕಥೆಯನ್ನು ನಾಗಶೇಖರ್ ಹೇಳಹೊರಟಿದ್ದಾರೆ. ಶ್ರೀನಗರ ಕಿಟ್ಟಿ ಜೊತೆ ರಮ್ಯಾ ಬದಲು ರಚಿತಾರಾಮ್ ಬಂದಿದ್ದಾರೆ.
ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ನಮ್ಮ ಮಣ್ಣಿನ ಪ್ರೇಮಿಗಳ ಅದ್ಭುತ ಪ್ರೇಮಕಾವ್ಯವಿದು. ಸದ್ಯ ಚಿತ್ರದ ಬಹುತೇಕ ಚಿತ್ರೀಕರಣ, ಎಡಿಟಿಂಗ್ ಮುಗಿದಿದ್ದು ಲೂಪ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ನಡೆದಿದೆ. ಈ ಹಿಂದೆಯೇ ಸರಿಸುಮಾರು 15 ದಿನಗಳ ಕಾಲ ಸ್ವಿಟರ್ಜರ್ಲೆಂಡ್ನಲ್ಲಿ ಅಲ್ಲಿನ 11 ಬಗೆಬಗೆಯ ಲೊಕೇಷನ್ಗಳಲ್ಲಿ ಮೂರನೇ ಹಂತದ ಶೂಟಿಂಗ್ ಮುಗಿಸಿ, ಈಗ 4ನೇ ಶೆಡ್ಯೂಲ್ ಶುರುವಾಗಿದೆ. ಕುಣಿಗಲ್ ಬಳಿ ಅದ್ದೂರಿ ಹಾಡೊಂದರ ಶೂಟಿಂಗ್ ನಡೆದಿದೆ.
ಕುಣಿಗಲ್ ಬಳಿ ಅದ್ಧೂರಿ ಸೆಟ್
ಈ ಹಾಡು, ಚಿತ್ರದ ಕುರಿತಂತೆ ಮಾತನಾಡಿದ ನಿರ್ಮಾಪಕ ಛಲವಾದಿ ಕುಮಾರ್, ಕುಣಿಗಲ್ ಬಳಿಕ ಯುಬಿ ಸ್ಟೆಡ್ ಫಾರಂ (ಕುದುರೆ ಫಾರಂ) ನಲ್ಲಿ ಸುಮಾರು 5 ದಿನಗಳ ಕಾಲ ಕಲರ್ ಫುಲ್ ಹಾಡಿನ ಚಿತ್ರೀಕರಣ ನಡೆಸಲಾಯಿತು. ತುಂಬಾ ಅದ್ದೂರಿಯಾಗಿ ಮೂಡಿ ಬಂದಿರುವ ಈ ಹಾಡಿಗೆ ಸುಮಾರು 45 ರಿಂದ 50 ಲಕ್ಷ ರೂ. ವರೆಗೆ ಖರ್ಚು ಮಾಡಲಾಗಿದೆ. ಇದಲ್ಲದೆ ಉಳಿದ ಹಾಡುಗಳನ್ನೂ ಸಹ ಇನ್ನೂ ಅದ್ದೂರಿಯಾಗಿ ಆಗಿ ಚಿತ್ರೀಕರಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಚಿತ್ರ ಅದ್ಧೂರಿಯಾಗಿ ಮೂಡಿಬರಬೇಕು, ನೋಡುಗರಿಗೆ ಸಂಜು ವೆಡ್ಸ್ ಗೀತಾ ಒಂದೊಳ್ಳೆಯ ದೃಶ್ಯ ವೈಭವದಂತಿರಬೇಕು. ಅದೇ ನಮ್ಮ ಉದ್ದೇಶ ಎಂದಿದ್ದಾರೆ ನಿರ್ಮಾಪಕರು.
ಪವಿತರ ಇಂಟರ್ನ್ಯಾಷನಲ್ ಮೂವೀಮೇಕರ್ಸ್ ಬ್ಯಾನರ್ನಲ್ಲಿ ಛಲವಾದಿ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ ಶ್ರೀಧರ ವಿ. ಸಂಭ್ರಮ 5 ಸುಂದರವಾದ ಹಾಡುಗಳನ್ನು ಮಾಡಿದ್ದು, ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ದನಿಯಾಗಿದ್ದಾರೆ.
ರಾಗಿಣಿ ದ್ವಿವೇದಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ , ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್ ಕುಮಾರ್ ಸೇರಿದಂತೆ ಹೆಸರಾಂತ ಕಲಾವಿದರ ತಾರಾಗಣ ಈ ಚಿತ್ರಕ್ಕಿದೆ. A 24 ಕ್ರಿಯೇಶನ್ಸ್ ಥ್ರೂ ಗೋಕುಲ್ ಫಿಲಂಸ್ ಈ ಚಿತ್ರವನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡುತ್ತಿದೆ.