Sudeep: ಸುದೀಪ್ ವೃತ್ತಿ ಜೀವನದಲ್ಲಿ ಬಹಳ ಮುಖ್ಯವಾದ ಘಟ್ಟ; ಹುಚ್ಚ ಚಿತ್ರಕ್ಕೆ 22 ವರ್ಷಗಳು, ತೆಲುಗಿನ ಈಗ ಸಿನಿಮಾಗೆ 11 ವರ್ಷಗಳ ಸಂಭ್ರಮ
ಹುಚ್ಚ ಚಿತ್ರದ ಹಾಡುಗಳು ಸಂಗೀತ ಪ್ರಿಯರ ಮನ ಗೆದ್ದಿದ್ದು. ರಾಜೇಶ್ ರಾಮನಾಥ್ ಸಂಗೀತ ನೀಡಿದ ಹುಚ್ಚ ಚಿತ್ರದ ಹಾಡುಗಳು ಇಂದಿಗೂ ಬಹಳ ಫೇಮಸ್. ಅದರಲ್ಲೂ ರಾಜೇಶ್ ಕೃಷ್ಣನ್ ಹಾಡಿರುವ ಉಸಿರೇ ಉಸಿರೇ ಅಂತೂ ಎಲ್ಲರ ಮನ ಗೆದ್ದ ಹಾಡು.
ಪ್ರತಿ ಕಲಾವಿದರಿಗೂ ತಾವು ನಟಿಸಿರುವ ಎಲ್ಲಾ ಸಿನಿಮಾಗಳು ಬಹಳ ವಿಶೇಷ. ಅದರಲ್ಲೂ ತಮ್ಮ ವೃತ್ತಿ ಜೀವನಕ್ಕೆ ಬ್ರೇಕ್ ನೀಡಿದ ಸಿನಿಮಾಗಳು ಎಂದರೆ ಒಂದು ಪಟ್ಟು ಹೆಚ್ಚಿನ ಪ್ರೀತಿ. ಕನ್ನಡ ಚಿತ್ರರಂಗದ ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಅನೇಕ ಹಿಟ್ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ್ದಾರೆ.
ಹುಚ್ಚ ಚಿತ್ರಕ್ಕೆ 22ರ ಸಂಭ್ರಮ
ಸುದೀಪ್ ಚಿತ್ರರಂಗಕ್ಕೆ ಬಂದಿದ್ದು ತಾಯವ್ವ ಸಿನಿಮಾ ಮೂಲಕ. ನಂತರ ಅವರು ಸ್ಪರ್ಶ ಸಿನಿಮಾದಲ್ಲಿ ನಟಿಸಿದರೂ ಅವರಿಗೆ ಒಂದೊಳ್ಳೆ ಬ್ರೇಕ್ ನೀಡಿದ ಸಿನಿಮಾ ಹುಚ್ಚ. ಸುದೀಪ್ ಚಿತ್ರರಂಗ ಪ್ರವೇಶಿಸಿ 26 ವರ್ಷ ಕಳೆದಿದೆ. ಈ ಪಯಣದಲ್ಲಿ ಏಳು ಬೀಳು ಕಂಡಿರುವ ಕೋಟಿಗೊಬ್ಬನಿಗೆ ಜುಲೈ 6 ಬಹಳ ವಿಶೇಷ ದಿನ. ಕಿಚ್ಚನ ಸಿನಿ ಕರಿಯರ್‌ಗೆ ದೊಡ್ಡ ಯಶಸ್ಸು ನೀಡಿದ ‘ಹುಚ್ಚ’ಸಿನಿಮಾ ಬಿಡುಗಡೆಯಾಗಿ ಗುರುವಾರಕ್ಕೆ (ಜುಲೈ 6ಕ್ಕೆ) 22 ವರ್ಷಗಳು ತುಂಬಿದೆ. 6 ಜುಲೈ 2001 ರಂದು ಹುಚ್ಚ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿತ್ತು. ವಿಭಿನ್ನವಾದ ಶೀರ್ಷಿಕೆ ಜೊತೆಗೆ ಪೋಸ್ಟರ್‌ಗಳಲ್ಲಿ ಸುದೀಪ್ ಕಾಣಿಸಿಕೊಂಡ ರೀತಿಗೆ ಜನರು ಫಿದಾ ಆಗಿದ್ದರು. ಸಿನಿಮಾ ನೋಡಿದ ನಂತರವಂತೂ ಸುದೀಪ್ ನಟನೆ ಜನರ ಮನಸ್ಸಿನಲ್ಲಿ ಅಚ್ಚು ಮೂಡಿತ್ತು. ಅದರ ಜೊತೆಗೆ ಆ ಚಿತ್ರದ ಹಾಡುಗಳು ಸಂಗೀತ ಪ್ರಿಯರ ಮನ ಗೆದ್ದಿದ್ದು. ರಾಜೇಶ್ ರಾಮನಾಥ್ ಸಂಗೀತ ನೀಡಿದ ಹುಚ್ಚ ಚಿತ್ರದ ಹಾಡುಗಳು ಇಂದಿಗೂ ಬಹಳ ಫೇಮಸ್. ಅದರಲ್ಲೂ ರಾಜೇಶ್ ಕೃಷ್ಣನ್ ಹಾಡಿರುವ ಉಸಿರೇ ಉಸಿರೇ ಅಂತೂ ಎಲ್ಲರ ಮನ ಗೆದ್ದ ಹಾಡು.
ಈಗ ಸಿನಿಮಾ ರಿಲೀಸ್ ಆಗಿ 11 ವರ್ಷಗಳು
ಹಾಗೇ ಕಿಚ್ಚನ ಜೀವನದಲ್ಲಿ ಮತ್ತೊಂದು ಮೈಲಿಗಲ್ಲಾದ ಸಿನಿಮಾ ಎಂದರೆ ಅದು ತೆಲುಗಿನ ಈಗ ಚಿತ್ರ. ಈ ಸಿನಿಮಾಗೆ ತೆಲುಗು ಸ್ಟಾರ್ ನಿರ್ದೇಶಕ ರಾಜಮೌಳಿ ಆಕ್ಷನ್ ಕಟ್ ಹೇಳಿದ್ದರು. ಚಿತ್ರದಲ್ಲಿ ಸುದೀಪ್ ನಾಣಿ ಎದುರು ವಿಲನ್ ಆಗಿ ಅಬ್ಬರಿಸಿದ್ದರು. ಕೊಲೆ ಆದ ನಾಯಕ ನೊಣವಾಗಿ ಬಂದು ತನ್ನನ್ನು ಸಾಯಿಸಿದ ವಿಲನ್ ಬೆನ್ನು ಬಿದ್ದು ಸೇಡು ತೀರಿಸಿಕೊಳ್ಳುವ ಕಥೆಯಲ್ಲಿ ಸುದೀಪ್ ಚೆನ್ನಾಗಿ ಅಭಿನಯಿಸಿದ್ದರು. ತೆಲುಗು ಮಾತ್ರವಲ್ಲದೆ, ತಮಿಳಿನಲ್ಲಿ ಕೂಡಾ ಈ ಸಿನಿಮಾ ಬಿಡುಗಡೆಯಾಗಿ ಜಯಭೇರಿ ಬಾರಿಸಿತ್ತು. ಸುದೀಪ್, ನಾಣಿ, ಸಮಂತಾ ಅಭಿನಯದ ‘ಈಗ’ಸಿನಿಮಾ ರಿಲೀಸ್ ಆಗಿದ್ದು ಕೂಡಾ ಜುಲೈ 6. ನಿನ್ನೆಗೆ ಈ ಸಿನಿಮಾ ತೆರೆ ಕಂಡು 11 ವರ್ಷಗಳಾಗಿವೆ. ಹೀಗಾಗಿ ಕಿಚ್ಚ ಸುದೀಪ್ ಪಾಲಿಗೆ ಜುಲೈ 6 ಬಹಳ ವಿಶೇಷ ಎನ್ನಬಹುದು. ಈ ಎರಡೂ ವಿಶೇಷಗಳನ್ನು ಸುದೀಪ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
46ನೇ ಚಿತ್ರದಲ್ಲಿ ಬ್ಯುಸಿ ಆದ ಕಿಚ್ಚ
ಕಿಚ್ಚ ಸುದೀಪ್ ಸದ್ಯಕ್ಕೆ 46ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಕಿಚ್ಚನ ಹೊಸ ಸಿನಿಮಾ ಟೀಸರ್ ರಿಲೀಸ್ ಆಗಿತ್ತು. ಚಿತ್ರದಲ್ಲಿ ಕಿಚ್ಚ ಹಿಂದೆಂದೂ ಕಾಣದಂತ ಶೇಡ್‌ನಲ್ಲಿ ನಟಿಸುತ್ತಿದ್ದಾರೆ. ಮುಹೂರ್ತ ಆಚರಿಸಿಕೊಂಡಿರುವ ಸಿನಿಮಾ ಚಿತ್ರೀಕರಣ ಜುಲೈ 15ರಿಂದ ಆರಂಭವಾಗಲಿದೆ. ಕಾಲಿವುಡ್‌ನಲ್ಲಿ ತುಪಾಕಿ, ಕಬಾಲಿ, ಕರ್ಣನ್, ಅಸುರನ್ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ವಿ ಕ್ರಿಯೆಷನ್ಸ್ ಬ್ಯಾನರ್ ಅಡಿ ಕಲೈಪುಲಿ ಎಸ್ ಧಾನು, ಸುದೀಪ್ ಅವರ 46ನೇ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ವಿಜಯ್ ಕಾರ್ತಿಕೇಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ವಿಭಾಗ