ಕನ್ನಡ ಸುದ್ದಿ  /  Entertainment  /  Sandalwood News Surprises For Dodmane Fans Yuva Karataka Damanaka Jackie Movies Are Going To Release In March Mnk

ಮಾರ್ಚ್‌ ಬಂದೇ ಬಿಡ್ತು; ಅಪ್ಪು ಬರ್ತ್‌ಡೇ, ಯುವ ಹವಾ ಸೇರಿ ದೊಡ್ಮನೆ ಅಭಿಮಾನಿಗಳಿಗೆ ಬ್ಯಾಕ್‌ ಟು ಬ್ಯಾಕ್‌ ಸರ್ಪ್ರೈಸ್‌

ಈ ಸಲದ ಮಾರ್ಚ್‌ ತಿಂಗಳು ಡಾ. ರಾಜ್‌ಕುಮಾರ್‌ ಕುಟುಂಬದ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಪುನೀತ್‌ ರಾಜ್‌ಕುಮಾರ್‌ ಬರ್ತ್‌ಡೇ ಒಂದೆಡೆಯಾದರೆ, ಜಾಕಿ ಸಿನಿಮಾ ಮರು ಬಿಡುಗಡೆಯಾಗುತ್ತಿದೆ. ಯುವ ರಾಜ್‌ಕುಮಾರ್‌ ಚೊಚ್ಚಲ ಚಿತ್ರವೂ ಇದೇ ತಿಂಗಳಲ್ಲಿ ರಿಲೀಸ್‌ ಆಗಲಿದೆ. ಶಿವಣ್ಣನ ಕರಟಕ ದಮನಕ ಚಿತ್ರವೂ ಇನ್ನೇನು ಮಾ. 8ರಂದು ಬಿಡುಗಡೆ ಆಗಲಿದೆ.

ಮಾರ್ಚ್‌ ಬಂದೇ ಬಿಡ್ತು; ಅಪ್ಪು ಬರ್ತ್‌ಡೇ, ಯುವ ಹವಾ ಸೇರಿ ದೊಡ್ಮನೆ ಅಭಿಮಾನಿಗಳಿಗೆ ಬ್ಯಾಕ್‌ ಟು ಬ್ಯಾಕ್‌ ಸರ್ಪ್ರೈಸ್‌
ಮಾರ್ಚ್‌ ಬಂದೇ ಬಿಡ್ತು; ಅಪ್ಪು ಬರ್ತ್‌ಡೇ, ಯುವ ಹವಾ ಸೇರಿ ದೊಡ್ಮನೆ ಅಭಿಮಾನಿಗಳಿಗೆ ಬ್ಯಾಕ್‌ ಟು ಬ್ಯಾಕ್‌ ಸರ್ಪ್ರೈಸ್‌

Puneeth Rajkumar Birthday: ನಿಜಕ್ಕೂ ಈ ಸಲದ ಮಾರ್ಚ್‌ ತಿಂಗಳು ಯಾರಿಗೆಲ್ಲ ಪ್ರಿಯವೋ ಗೊತ್ತಿಲ್ಲ. ಆದರೆ, ದೊಡ್ಮನೆ ಅಭಿಮಾನಿಗಳಿಗೆ ಈ ಸಲದ ಮಾರ್ಚ್‌ ಮಾತ್ರ ಪವರ್‌ ಪ್ಯಾಕ್ಡ್‌! ಅಂದರೆ, ಸಾಲು ಸಾಲು ಅಪ್‌ಡೇಟ್ಸ್‌ಗಳ ಜತೆಗೆ ಯುವ ಪವರ್‌ ಸಹ ಇದೇ ಮಾರ್ಚ್‌ನಲ್ಲಿಯೇ ಹೊರಬೀಳಲಿದೆ. ಶಿವಣ್ಣನ ಚಿತ್ರವೂ ಇದೇ ತಿಂಗಳಲ್ಲಿ ಬಿಡುಗಡೆ ಆಗುತ್ತಿರುವುದು ಒಂದೆಡೆಯಾದರೆ, ಪುನೀತ್‌ ರಾಜ್‌ಕುಮಾರ್‌ ಬರ್ತ್‌ಡೇಗೂ ದಿನಗಣನೆ ಆರಂಭವಾಗಿದೆ. ಹಾಗಾಗಿ ಈ ಸಲದ ಮಾರ್ಚ್‌ ರಾಜ್‌ಕುಮಾರ್‌ ಅಭಿಮಾನಿಗಳಿಗೆ ಸ್ಪೇಷಲ್.

ಶಿವಣ್ಣನ ಕರಟಕ ದಮನಕ ರಿಲೀಸ್‌

ಯೋಗರಾಜ್‌ ಭಟ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಕರಟಕ ದಮನಕ ಸಿನಿಮಾ ಈಗಾಗಲೇ ಹಾಡುಗಳಿಂದಲೇ ಗಮನ ಸೆಳೆದಿದೆ. ರಾಕ್‌ಲೈನ್‌ ವೆಂಕಟೇಶ್‌ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮೊದಲ ಸಲ ನಟ ಹಾಗೂ ಡಾನ್ಸರ್‌ ಪ್ರಭುದೇವ ಮತ್ತು ಶಿವಣ್ಣ ಈ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಮಾರ್ಚ್‌ 8ರಂದು ಶಿವರಾತ್ರಿ ಪ್ರಯುಕ್ತ ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೇ ಇದೇ ಕರಟಕ ದಮನಕ ಚಿತ್ರದ ಕ್ಯಾರೆಕ್ಟರ್ ಟೀಸರ್‌ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಶೀಘ್ರದಲ್ಲಿ ಟ್ರೇಲರ್‌ ಸಹ ಹೊರಬರಲಿದೆ.

ಪುನೀತ್‌ ರಾಜ್‌ಕುಮಾರ್‌ ಬರ್ತ್‌ಡೇ

ಸ್ಯಾಂಡಲ್‌ವುಡ್‌ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಇಲ್ಲವಾಗಿ ಎರಡೂವರೆ ವರ್ಷಗಳೇ ಕಳೆದಿವೆ. ಇಂದಿಗೂ ಅವರಿಲ್ಲ ಅನ್ನೋ ಭಾವ ಯಾರಲ್ಲೂ ಕಾಡಿಲ್ಲ. ಕಾರಣ; ಇಂದಿಗೂ ಅವರು ನಟಿಸಿರುವ ಸಿನಿಮಾಗಳು, ಹಾಡುಗಳು ಎಲ್ಲರ ಮನದಲ್ಲಿವೆ. ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಅಪ್ಪುವಿನ ಮುಖದರ್ಶನ ಆಗಿಯೇ ಆಗುತ್ತದೆ. ಇದೀಗ ಮಾರ್ಚ್‌ ತಿಂಗಳು ಬಂತು. ಅಂದರೆ, ಇದೇ ಮಾರ್ಚ್‌ 17ಕ್ಕೆ ಪುನೀತ್‌ ರಾಜ್‌ಕುಮಾರ್‌ ಬರ್ತ್‌ಡೇ. ಈ ನಿಮಿತ್ತ ಅವರ ಅಭಿಮಾನಿ ಬಳಗದಿಂದ ತಯಾರಿ ಕೆಲಸಗಳು ನಡೆಯುತ್ತಿವೆ.

ಜಾಕಿ ಸಿನಿಮಾ ಮರು ಬಿಡುಗಡೆ

ದುನಿಯಾ ಸೂರಿ ನಿರ್ದೇಶನದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಾಯಕನಾಗಿ ನಟಿಸಿದ ಜಾಕಿ ಸಿನಿಮಾ ಸ್ಯಾಂಡಲ್‌ವುಡ್‌ನ ಬ್ಲಾಕ್‌ ಬಸ್ಟರ್‌ ಸಿನಿಮಾ. 2010ರ ಅಕ್ಟೋಬರ್‌ 14ರಂದು ಈ ಸಿನಿಮಾ ಬಿಡುಗಡೆ ಆಗಿ 100 ದಿನ ಪೂರೈಸಿತ್ತು. ವಿ. ಹರಿಕೃಷ್ಣ ಸಂಗೀತ, ಯೋಗರಾಜ್‌ ಭಟ್‌ ಸಾಹಿತ್ಯದ ಹಾಡುಗಳು ಮೋಡಿ ಮಾಡಿದ್ದವು. ಈಗ ಸುದೀರ್ಘ 14 ವರ್ಷಗಳ ಬಳಿಕ, ಪುನೀತ್‌ ಬರ್ತ್‌ಡೇ ನಿಮಿತ್ತ ಮರು ಬಿಡುಗಡೆ ಆಗುತ್ತಿದೆ. ಮಾರ್ಚ್‌ 15ರಂದು ರಾಜ್ಯಾದ್ಯಂತ ಈ ಚಿತ್ರವನ್ನು ಬಿಡುಗಡೆಗಡೆ ಮಾಡುವ ಹೊಣೆ ಹೊತ್ತಿದೆ ಕೆಆರ್‌ಜಿ ಸ್ಟುಡಿಯೋ.

ಯುವ ಚಿತ್ರದ ಮೊದಲ ಹಾಡಿನ ಆಗಮನ

ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಯುವ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅದರಂತೆ ಹಾಡಿನ ಮೂಲಕ ಪ್ರಚಾರ ಕಾರ್ಯಕ್ಕೆ ಧುಮುಕಲು ಪ್ಲಾನ್‌ ಮಾಡಿದೆ ಚಿತ್ರತಂಡ. ಮಾರ್ಚ್‌ 2ರಂದು ಒಬ್ಬನೇ ಶಿವ, ಒಬ್ಬನೇ ಯುವ.. ಸಾಹಿತ್ಯವುಳ್ಳ ಹಾಡು ಬಿಡುಗಡೆ ಆಗಲಿದೆ. ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ, ಡಾ. ರಾಜ್‌ಕುಮಾರ್‌ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್‌ ಕಿರಿಯ ಪುತ್ರ ಯುವ ರಾಜ್‌ಕುಮಾರ್‌ ಅವರ ಚೊಚ್ಚಲ ಚಿತ್ರ.

ಮಾರ್ಚ್‌ 28ಕ್ಕೆ ಯುವ ಚಿತ್ರ ರಿಲೀಸ್

ಅದೇ ರೀತಿ ಈಗಾಗಲೇ ಯುವ ಚಿತ್ರದ ಬಿಡುಗಡೆ ದಿನಾಂಕವೂ ಘೋಷಣೆ ಆಗಿದ್ದು, ಇದೇ ಮಾರ್ಚ್‌ 28ರಂದು ಈ ಸಿನಿಮಾ ರಿಲೀಸ್‌ ಆಗಲಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಡಿಸೆಂಬರ್‌ 22ರಂದೇ ಯುವ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಆ ದಿನ ಸಲಾರ್‌ ಸಿನಿಮಾ ರಿಲೀಸ್‌ ಆಗಿ, ಯುವ ಮಾರ್ಚ್‌ 28ಕ್ಕೆ ಶಿಫ್ಟ್‌ ಆಗಿತ್ತು. ಇದೀಗ ಗ್ರ್ಯಾಂಡ್‌ ಆಗಿಯೇ ಯುವನನ್ನು ಕರುನಾಡ ಮಂದಿಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ ಹೊಂಬಾಳೆ ಫಿಲಂಸ್‌.

(You are reading this copy on "Hindustan Times Kannada". For latest updates on entertainment, OTT, Web series, Kannada film industry, Kannada serials, Reality shows visit kannada.hindustantimes.com/entertainment)

IPL_Entry_Point